ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿರುವ ಚಿತ್ರಗಳ ಪಟ್ಟಿ
ಮತ್ತೊಂದು ವೀಕೆಂಡ್ ಹತ್ತಿರವಾಗುತ್ತಿದೆ. ಒಂದಷ್ಟು ಸಿನಿಮಾಗಳು ಪ್ರೇಕ್ಷಕರಿಗೆ ಮನರಂಜನೆ ರಸದೌತಣ ಹೊತ್ತು ತರುತ್ತಿದೆ. ಕನ್ನಡದಲ್ಲಿ ಈ ವಾರ ಎರಡು ಸಿನಿಮಾ ಬಿಡುಗಡೆ ಆಗುತ್ತಿದೆ. ಇನ್ನುಳಿದಂತೆ ತೆಲುಗು, ತಮಿಳಿ, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ.
ಯೋಗರಾಜ್ ಭಟ್ ಕಥೆ ಬರೆದು ರಾಮ್ ನಾರಾಯಣ್ ನಿರ್ದೇಶನದ 'ಕುಲದಲ್ಲಿ ಕೀಳ್ಯಾವುದೋ' ಸಿನಿಮಾ ಈ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ಚಿತ್ರದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮಂಜು ಹೀರೊ ಆಗಿ ನಟಿಸಿದ್ದಾರೆ. ಕಿರುತೆರೆ ನಟಿ ಮೌನ ಗುಡ್ಡೆಮನೆ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ.

ಸಂತೋಷ್ ಕುಮಾರ್ ಹಾಗೂ ವಿದ್ಯಾ ಚಿತ್ರಕ್ಕೆ ಹಣ ಹೂಡಿದ್ದಾರೆ. ಶರತ್ ಲೋಹಿತಾಶ್ವ, ಕರಿಸುಬ್ಬು, ಕಾಮಿಡಿ ಕಿಲಾಡಿಗಳು ನಯನಾ, ಸೋನಲ್ ಮಂಥೆರೊ ಜೊತೆಗೆ ನಿರ್ದೇಶಕ ಯೋಗರಾಜ್ ಭಟ್, ಭೀಮ ಚಿತ್ರದಲ್ಲಿ ಅಬ್ಬರಿಸಿದ್ದ ಡ್ರ್ಯಾಗನ್ ಮಂಜು ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಮನೋಮೂರ್ತಿ ಸಂಗೀತ ಚಿತ್ರಕ್ಕಿದ್ದು ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಸಾಹಿತ್ಯ ಗೀಚಿದ್ದಾರೆ.
ಅಣ್ಣಾವ್ರ 'ಸತ್ಯಹರಿಶ್ಚಂದ್ರ' ಚಿತ್ರದ ಜನಪ್ರಿಯ ಹಾಡಿನ ಮೊದಲ ಎರಡು ಪದಗಳನ್ನೇ ಚಿತ್ರಕ್ಕೆ ಟೈಟಲ್ ಆಗಿ ಇಟ್ಟಿದ್ದಾರೆ. ಇದೇ ಟೈಟಲ್‌ನಲ್ಲಿ ಹಿಂದೆ ಶಿವಣ್ಣ- ಪ್ರಭುದೇವ ಸಿನಿಮಾ ಮಾಡಲು ಯೋಗರಾಜ್ ಭಟ್ ಮುಂದಾಗಿದ್ದರು. ಬಳಿಕ ಆ ಚಿತ್ರಕ್ಕೆ 'ಕರಟಕ ದಮನಕ' ಎಂದು ಟೈಟಲ್ ಬದಲಿಸಿದ್ದರು. ಶಿವಣ್ಣನ ಬಳಿಕ ಅನುಮತಿ ಪಡೆದು ಈ ಚಿತ್ರಕ್ಕೆ ಟೈಟಲ್ ಬದಲಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ.
ಹಳ್ಳಿ ಹಿನ್ನಲೆಯ ಕಥೆ 'ಕುಲದಲ್ಲಿ ಕೀಳ್ಯಾವುದೋ' ಚಿತ್ರದಲ್ಲಿದೆ. ಸಾಕಷ್ಟು ಟ್ವಿಸ್ಟ್ ಹಾಗೂ ಟರ್ನ್‌ಗಳನ್ನು ಇಟ್ಟು ಚಿತ್ರವನ್ನು ಕಟ್ಟಿಕೊಡಲಾಗಿದೆ. ಕಂಟೆಂಟ್ ಇರುವ ಸಿನಿಮಾ ನಮ್ಮದು ಎಂದು ಚಿತ್ರತಂಡ ಹೇಳುತ್ತಾ ಬರ್ತಿದೆ. ಈ ಚಿತ್ರದ ಜೊತೆಗೆ 'ಕಿರಿಕ್' ಹಾಗೂ 'ಮಂಕುತಿಮ್ಮನ ಕಗ್ಗ' ಎನ್ನುವ ಮತ್ತೆರಡು ಕನ್ನಡ ಸಿನಿಮಾಗಳು ಈ ವಾರ ತೆರೆಗೆ ಬರ್ತಿದೆ.
ತಮಿಳಿನಲ್ಲಿ ಒಟ್ಟು 5 ಸಿನಿಮಾಗಳು ಬಿಡುಗಡೆ ಆಗುತ್ತಿದೆ. ಅದರಲ್ಲಿ ವಿಜಯ್ ಸೇತುಪತಿ ಹಾಗೂ ರುಕ್ಮಿಣಿ ವಸಂತ್ ನಟನೆಯ 'ಏಸ್' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಇನ್ನುಳಿದಂತೆ ಮದ್ರಾಸ್ 'ಮ್ಯಾಟ್ನಿ', 'ಪಡೈ ತಲೈವನ್', 'ಸ್ಕೂಲ್' ಹಾಗೂ 'ವೆಂಬು' ಎಂಬ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿದೆ.

ಅತ್ತ ಬಾಲಿವುಡ್ ಅಂಗಳದಲ್ಲಿ ಬಹುತೇಕ ಹೊಸಬರ ಸಿನಿಮಾಗಳೇ ತೆರೆಗೆ ಬರಲು ಸಜ್ಜಾಗಿವೆ. ರಾಜ್‌ಕುಮಾರ್ ರಾವ್ ನಟನೆಯ 'ಭೂಲ್ ಚುಕ್ ಮಾಫ್' ಜೊತೆಗೆ 'ಕಪ್‌ಕಪ್ಪಿ', 'ಪುಣೆ ಹೈವೆ', 'ಕೇಸರಿ ವೀರ್' ಸೇರಿ ಒಂದಷ್ಟು ಸಿನಿಮಾಗಳು ತೆರೆಗೆ ಬರ್ತಿವೆ.
ಇನ್ನು ತೆಲುಗಿನಲ್ಲಿ ಕೂಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗ್ತಿಲ್ಲ. 'ಒಕ ಬೃಂದಾವನಂ' ಹಾಗೂ 'ವೈಭವಂ' ಎಂಬ ಎರಡು ಹೊಸಬರ ಸಿನಿಮಾಗಳು ಪ್ರೇಕ್ಷಕರ ರಂಜಿಸಲು ಸಜ್ಜಾಗಿವೆ.


Click it and Unblock the Notifications











