ಫೆಬ್ರವರಿಯಲ್ಲಿ ಯಾವೆಲ್ಲಾ ಕನ್ನಡ ಚಿತ್ರಗಳು ಬಿಡುಗಡೆ ಆಗ್ತಿವೆ, ಇಲ್ಲಿದೆ ಲಿಸ್ಟ್
ವರ್ಷದ ಮೊದಲ ತಿಂಗಳು ಕಳೆದೇ ಹೋಯ್ತು. ಕಳೆದ ಒಂದು ತಿಂಗಳಲ್ಲಿ ಕನ್ನಡ ಚಿತ್ರರಂಗದ ಸಾಧನೆ ಹೇಳಿಕೊಳ್ಳುವಂತಿಲ್ಲ. ಇದ್ದಿದ್ದರಲ್ಲಿ 'ಛೂ ಮಂತರ್' ಸಿನಿಮಾ ತಕ್ಕ ಮಟ್ಟಿಗೆ ಸದ್ದು ಮಾಡಿತ್ತು. ಫಾರೆಸ್ಟ್, ನಿಮ್ಮ ವಸ್ತುಗಳಿಗೆ 'ನೀವೇ ಜವಾಬ್ದಾರರು' ಹಾಗೂ 'ನೋಡಿದವರು ಏನಂತಾರೆ' ಚಿತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು. ಆದರೆ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಚಿತ್ರಮಂದಿರಕ್ಕೆ ಬರಲಿಲ್ಲ.
ದೊಡ್ಡ ಸಿನಿಮಾಗಳು ಇಲ್ಲದೇ ಚಿತ್ರಮಂದಿರ ಮಾಲೀಕರು ಕಂಗೆಟ್ಟಿದ್ದಾರೆ. ಮತ್ತೆ ಚಿತ್ರಮಂದಿರಗಳನ್ನು ಕೆಲ ದಿನಗಳ ಕಾಲ ಮುಚ್ಚಬೇಕು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಅದೆಲ್ಲದರ ನಡುವೆ ಫೆಬ್ರವರಿಯಲ್ಲಿ ಯಾವೆಲ್ಲಾ ಕನ್ನಡ ಸಿನಿಮಾಗಳು ತೆರೆಗೆ ಬರ್ತಿವೆ. ಯಾವ ಸಿನಿಮಾ ನಿರೀಕ್ಷೆ ಹುಟ್ಟಿಸಿದೆ ಎನ್ನುವ ಚರ್ಚೆ ಶುರುವಾಗಿದೆ. ಈ ತಿಂಗಳು ಬಿಡುಗಡೆ ಆಗುವ ಕನ್ನಡ ಸಿನಿಮಾಗಳ ಪಟ್ಟಿ ಮುಂದೆ ಇದೆ ಓದಿ.

ಈ ವಾರ 5 ಚಿತ್ರಗಳು
ಜನವರಿ 31ರಂದು 7ರಿಂದ 8 ಕನ್ನಡ ಸಿನಿಮಾಗಳು ತೆರೆಗೆ ಬಂದಿದ್ದವು. ಈ ವಾರ ಕೂಡ 5 ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಕಿಶೋರ್ ನಟನೆಯ 'ಅನಾಮಧೇಯ ಅಶೋಕ್ ಕುಮಾರ್', ರೂಪೇಶ್ ಶೆಟ್ಟಿ ಅಭಿನಯದ 'ಅಧಿಪತ್ರ', ರಾಜವರ್ಧನ್ ನಟನೆಯ 'ಗಜರಾಮ', ಕಿರುತೆರೆ ನಟ ದೀಪಕ್ ಸುಬ್ರಮಣ್ಯ ಲೇಡಿ ಗೆಟಪ್ ಹಾಕಿರುವ 'ಮಿಸ್ಟರ್ ರಾಣಿ' ಹಾಗೂ ಮಿಲಿಂದ್ ನಟನೆಯ 'ಅನ್‌ಲಾಕ್ ರಾಘವ' ತೆರೆಗೆ ಬರ್ತಿದೆ.
'ನಮ್ಮ ಪ್ರೀತಿಯ ರಾಮು' ರೀ-ರಿಲೀಸ್
ವ್ಯಾಲೆಂಟೈನ್ಸ್ ಡೇ ಸಂಭ್ರಮದಲ್ಲಿ ಕೂಡ 4 ಚಿತ್ರಗಳು ಬಿಡುಗಡೆ ಆಗಲಿದೆ. ಅದರಲ್ಲಿ ದರ್ಶನ್ ನಟನೆಯ 'ನಮ್ಮ ಪ್ರೀತಿಯ ರಾಮು' ಸಿನಿಮಾ ದೊಡ್ಡಮಟ್ಟದಲ್ಲಿ ರೀ-ರಿಲೀಸ್ ಆಗಲಿದೆ. 2003ರಲ್ಲಿ ಬಂದಿದ್ದ ಈ ಸಿನಿಮಾ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಫೆಬ್ರವರಿ 16ಕ್ಕೆ ದರ್ಶನ್ ಹುಟ್ಟುಹಬ್ಬ. ಅದಕ್ಕಿಂತ ಎರಡು ದಿನ ಮುನ್ನ ಈ ಸಿನಿಮಾ ತೆರೆಗೆ ತರುವ ತಯಾರಿ ನಡೀತಿದೆ. ಈಗಾಗಲೇ ಪೋಸ್ಟರ್‌ಗಳು ಬಿಡುಗಡೆ ಆಗುತ್ತಿದೆ. ಟ್ರೈಲರ್ ಕಟ್ ಮಾಡಲಾಗಿದೆ. 5Dಯಲ್ಲಿ ಡಿಟಿಎಸ್ ಸೌಂಡ್ ಜೊತೆಗೆ ಸಿನಿಮಾ ಹೊರ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.
'ರಾಮು' ಜೊತೆ 3 ಸಿನಿಮಾ
'ನಮ್ಮ ಪ್ರೀತಿಯ ರಾಮು' ಜೊತೆ ಇನ್ನು 3 ಸಿನಿಮಾಗಳು ಫೆಬ್ರವರಿ 14ಕ್ಕೆ ತೆರೆಗೆ ಬರಲಿದೆ. ಬಹಳ ಹಿಂದೆ ಶುರುವಾಗಿದ್ದ 'ರಾಜು ಜೇಮ್ಸ್ ಬಾಂಡ್' ಸಿನಿಮಾ ಅಂದೇ ಬಿಡುಗಡೆ ಆಗುತ್ತಿದೆ. 'ಭುವನಂ ಗಗನಂ' ಹಾಗೂ 'ನಿಮಿತ್ತ ಮಾತ್ರ' ಸಿನಿಮಾ ಕೂಡ ಲಿಸ್ಟ್‌ನಲ್ಲಿದೆ. ಒಟ್ಟು ನಾಲ್ಕು ಚಿತ್ರಗಳು ವ್ಯಾಲಂಟೈನ್ಸ್ ಡೇಗೆ ಬರಲಿದೆ.

ಫೆ. 21ಕ್ಕೆ 3 ಚಿತ್ರಗಳು
ಬಹಳ ಹಿಂದೆ ಶುರುವಾಗಿದ್ದ 'ವಿಷ್ಣುಪ್ರಿಯ' ಚಿತ್ರಕ್ಕೆ ಅಂತೂ ಇಂತೂ ಇದೇ ತಿಂಗಳು ಬಿಡುಗಡೆ ಭಾಗ್ಯ ಸಿಗಲಿದೆ. ಈ ಚಿತ್ರದಲ್ಲಿ ಕೆ. ಮಂಜು ಪುತ್ರ ಶ್ರೇಯಸ್ ಜೊತೆ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ಗಮನ ಸೆಳೆದಿದೆ. ಫೆಬ್ರವರಿ 21ಕ್ಕೆ 'ಭಾವ ತೀರ ಯಾನ' ಹಾಗೂ 'ಅಪಾಯವಿದೆ ಎಚ್ಚರಿಕೆ' ಎಂಬ ಮತ್ತೆರಡು ಚಿತ್ರಗಳು ತೆರೆಗೆ ಬರ್ತಿದೆ.
ಶಿವರಾತ್ರಿಗೆ 'ರಾಕ್ಷಸ'
ತಿಂಗಳ ಕೊನೆಗೆ ಶಿವರಾತ್ರಿ ಸಂಭ್ರಮದಲ್ಲಿ ಪ್ರಜ್ವಲ್ ದೇವರಾಜ್ ನಟನೆಯ 'ರಾಕ್ಷಸ' ಸಿನಿಮಾ ರಿಲೀಸ್ ಆಗಲಿದೆ. ಪ್ರಜ್ವಲ್ ನಟನೆಯ 6 ಚಿತ್ರಗಳು ಇದೇ ವರ್ಷ ತೆರೆಗೆ ಬರುವ ಸಾಧ್ಯತೆಯಿದೆ. ಕಳೆದ ವಾರ 'ಗಣ' ಎಂಬ ಸಿನಿಮಾ ಬಂದಿತ್ತು. ಆದರೆ ಸರಿಯಾದ ಪ್ರಚಾರ ಇಲ್ಲದೇ ಆ ಸಿನಿಮಾ ಬಂದು ಹೋಗಿದ್ದು ಯಾರಿಗೂ ಗೊತ್ತಾಗಲಿಲ್ಲ. ಪ್ರಜ್ವಲ್ ಸುಖಾಸುಮ್ಮನೆ ಯಾಕೆ ಸಿನಿಮಾಗಳಲ್ಲಿ ನಟಿಸುತ್ತಾರೆ? ಪ್ರಚಾರ ಯಾಕೆ? ಮಾಡಲ್ಲ ಎಂದು ಕೇಳುವವರು ಇದ್ದಾರೆ.


Click it and Unblock the Notifications











