ಯಶ್ ಅಭಿನಯದ ರಾಕಿ ಚಿತ್ರದ ನಿರ್ದೇಶಕ ನಾಗೇಂದ್ರ ಅರಸ್ ಹೊಸ ಪ್ರಯತ್ನ, 'ಅಕಾಲ'ದ ಕಥೆ ಹೇಗಿರಲಿದೆ..?
ಸೋಲು-ಗೆಲುವಿನಾಚೆ ಕನ್ನಡ ಚಿತ್ರರಂಗದಲ್ಲಿ ಹಲವಾರು ಪ್ರಯತ್ನಗಳಾಗುತ್ತಿವೆ. ಪ್ರಯೋಗಗಳಾಗುತ್ತಿವೆ. ಕ್ರಿಯಾಶೀಲತೆಯಿಂದ ಕೆಲಸ ಮಾಡುವ ಹಲವರು ಈ ಪ್ಯಾನ್ ಇಂಡಿಯಾ ಎಂಬ ಭ್ರಮೆಯಲ್ಲಿ ತೇಲದೇ ತಮ್ಮ ಕಲ್ಪನೆಗೆ ಅನುಗುಣವಾಗಿ ಚಿತ್ರಗಳನ್ನು ಮಾಡುತ್ತಿದ್ದಾರೆ. ಗೆಲ್ಲಲೇಬೇಕೆಂಬ ಪ್ರಾಮಾಣಿಕ ಪ್ರಯತ್ನವನ್ನು ಕೂಡ ಮಾಡುತ್ತಿದ್ದಾರೆ. ಇದಕ್ಕೆ ಒಂದು ಉದಾಹರಣೆಯಂತೆ ಇರುವ ''ಅಕಾಲ'' ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಶ್ರೀ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ನೆರವೇರಿದೆ.
ವಿಶೇಷ ಅಂದರೆ ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಪ್ರಖ್ಯಾತ ಸುಂದರ್ ಕೃಷ್ಣ ಅರಸ್ ಅವರ ಮಗ ನಾಗೇಂದ್ರ ಅರಸ್ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇವತ್ತು ಭಾರತದೆಲ್ಲೆಡೆ ''ರಾಕಿ''ಎಂದು ಹೆಸರು ಮಾಡಿರುವ ನಿಮ್ಮ ಯಶ್‌ಗೆ ಅವತ್ತು ''ರಾಕಿ'' ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದು ಇದೇ ನಾಗೇಂದ್ರ ಅರಸ್ ಎನ್ನುವುದು ವಿಶೇಷ.

ನಾಗೇಂದ್ರ ಅರಸ್ ಅವರ ಜೊತೆ ಈ ಚಿತ್ರದಲ್ಲಿ ಲಕ್ಕಿರಾಮ್, ಪ್ರಿಯಾಂಕ, ವರ್ಧನ್, ಬಲ ರಾಜವಾಡಿ, ಮೋಹನ್ ರಾಜ್ ಕೂಡ ಇದ್ದಾರೆ. ಇನ್ನು ಪ್ರಮುಖ ಪಾತ್ರವನ್ನು ನಿರ್ವಹಿಸುವುದಲ್ಲದೇ ಚಿತ್ರದ ಸಂಕಲನದ ಜವಾಬ್ಧಾರಿಯನ್ನು ಕೂಡ ನಾಗೇಂದ್ರ ಅರಸ್ ಅವರೇ ವಹಿಸಿಕೊಂಡಿದ್ದು ಮಾಚಯ್ಯ ಭವನ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಇನ್ನು ''ಅಕಾಲ'' ಎನ್ನುವುದು ಕೆಟ್ಟಘಳಿಗೆ, ಈ ಘಳಿಗೆಯಲ್ಲಿ ವ್ಯಕ್ತಿಯೊಬ್ಬ ಏನೆಲ್ಲಾ ಮಾಡುತ್ತಾನೆ ಎನ್ನುವುದೇ ಚಿತ್ರ ಕಥಾ ಹಂದರ ಎಂದು ಹೇಳಿರುವ ನಿರ್ದೇಶಕ ಮಾಚಯ್ಯ ಭವನ್ ''ಅಕಾಲ'' ಪಾತ್ರದಲ್ಲಿ ನಾಗೇಂದ್ರ ಅರಸ್ ಕಾಣಿಸಿಕೊಳ್ಳಲಿದ್ದಾರೆ ಎಂದು ಮುಹೂರ್ತ ಸಮಾರಂಭದಲ್ಲಿ ಮಾಹಿತಿಯನ್ನು ನೀಡಿದ್ದಾರೆ.
ಮುಂದುವರೆದು 2016ರಿಂದ 2019ರವರೆಗೆ ನಡೆಯುವ ಕಥೆ ಇದು, ಮೈಸೂರಿನಿಂದ ಶುರುವಾಗಿ ಗದಗವರೆಗೆ ಕಥೆ ಸಾಗುತ್ತೆ ಎಂದು ಹೇಳಿರುವ ನಿರ್ದೇಶಕ ಮಾಚಯ್ಯ ಭವನ್ ಸುಮಾರು 60 ದಿನಗಳ ಕಾಲ 4 ಹಂತಗಳಲ್ಲಿ ಶೂಟಿಂಗ್ ನಡೆಸುವ ಪ್ಲಾನ್ ಮಾಡಿದ್ದೇವೆ ಎಂದು ಹೇಳಿದ್ದಾರೆ. ಕಥೆಯ ಮೇಲೆ ಮತ್ತು ನನ್ನ ನಂಬಿಕೆ ಇಟ್ಟು ಚಿತ್ರಕ್ಕೆ ಹಣ ಹೂಡುತ್ತಿರುವ ನಿರ್ಮಾಪಕ ಅಣ್ಣಯ್ಯ ಅವರಿಗೆ ಧನ್ಯವಾದವನ್ನು ಹೇಳಿದ್ದಾರೆ.
ಇದೇ ಸಮಯದಲ್ಲಿ ಮಾತನಾಡಿದ ನಿರ್ಮಾಪಕ ಅಣ್ಣಯ್ಯ, ನನಗೆ ಮೊದಲಿಂದಲೂ ಸಿನಿಮಾ ಬಗ್ಗೆ ಆಸಕ್ತಿ. ಈ ಕಥೆ ಕೇಳಿದಾಗ ತುಂಬಾ ಇಷ್ಟವಾಯ್ತು. ನಾವೇ ಏಕೆ ನಿರ್ಮಾಣ ಮಾಡಬಾರದು ಅಂತ ಯೋಚಿಸಿ ಬಂಡವಾಳ ಹಾಕಲು ಒಪ್ಪಿದೆ. ಬಜೆಟ್ ಬಗ್ಗೆ ಇನ್ನೂ ಯೋಚಿಸಿಲ್ಲ. ನಾರ್ಮಲ್ ಬಜೆಟ್ನಲ್ಲಿ ಮಾಡೋ ಪ್ಲಾನಿದೆ ಎಂದು ಹೇಳಿದ್ದಾರೆ.

ಇನ್ನೂ ಚಿತ್ರದ ಕುರಿತು ತಮ್ಮ ಪಾತ್ರದ ಕುರಿತು ನಾಗೇಂದ್ರ ಅರಸ್ ಕೂಡ ಮಾಹಿತಿಯನ್ನು ನೀಡಿದ್ದು, ನಿರ್ದೇಶಕರು ಒಂದು ಕಾಮಿಡಿ ಸಬ್ಜೆಕ್ಟ್ ಮಾಡಲು ನನ್ನ ಬಳಿ ಬಂದಿದ್ದರು. ಅದು ಹೋಗಿ ಈ ಸಿನಿಮಾಗೆ ನಾಂದಿಯಾಯಿತು. ಅವರು ಕಥೆ ಹೇಳುವ ವೈಖರಿಯೇ ವಿಭಿನ್ನವಾಗಿದೆ ಎಂದು ಹೇಳಿದ್ದಾರೆ. ಚಿತ್ರದ ಸಂಕಲನ ಕೂಡ ನಾನೇ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಕನ್ನಡಿಗರಿಗೆ ಈ ಚಿತ್ರ ಇಷ್ಟವಾಗುತ್ತೆ ಎನ್ನುವ ಭರವಸೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಪ್ರದೀಪ್ ಈ ಚಿತ್ರದ ಛಾಯಾಗ್ರಹಣದ ಜವಾಬ್ಧಾರಿ ವಹಿಸಿಕೊಂಡಿದ್ದಾರೆ.
.


Click it and Unblock the Notifications











