ಪ್ಯಾರಿಸ್‌ನಿಂದ ಗುಡ್ ನ್ಯೂಸ್ ಕೊಟ್ಟ ಹರ್ಷಿಕಾ ಪೂಣಚ್ಚ- ಭುವನ್ ; ಮತ್ತೆ ತಾಯಿಯಾಗುತ್ತಿದ್ದಾರೆ ಕೊಡಗಿನ ಬೆಡಗಿ
ಸಾಮಾನ್ಯವಾಗಿ ಮದುವೆಯ ನಂತರ ನಾಯಕಿಯರು ಚಿತ್ರರಂಗದಿಂದ ದೂರವಾಗುತ್ತಾರೆ. ಅದೆಷ್ಟೇ ಎತ್ತರಕ್ಕೆ ಬೆಳೆದಿದ್ದರು ಕೂಡ ಮದುವೆಯಾದ ನಂತರ ಹೊಸ ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿಯೇ ಮಗ್ನರಾಗಿ ಬಿಡುತ್ತಾರೆ. ಇನ್ನು, ಬಣ್ಣದ ಲೋಕ ಕೂಡ ಅಷ್ಟೇ. ಮದುವೆಯಾದರೆ ನಾಯಕಿಯರಿಗೆ ಕೊಡುವ ಗೌರವವೇ ಬೇರೆ.
ಅದರಲ್ಲಿಯೂ ಮಕ್ಕಳಾದರೆ ಮುಗೀತು ಅವಕಾಶಗಳ ಬಾಗಿಲು ಸಂಪೂರ್ಣ ಮುಚ್ಚಿ ಹೋದಂತೆಯೇ. ಚಿತ್ರರಂಗ ಸಂಪೂರ್ಣವಾಗಿ ಮರೆತೇ ಹೋಗುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವಾರು ನಾಯಕಿಯರು ಮದುವೆಯಾದ ನಂತರ ಕಣ್ಮರೆಯಾದ ಉದಾಹರಣೆಗಳಿವೆ. ಆ ಪೈಕಿ ಹರ್ಷಿಕಾ ಪೂಣಚ್ಚ ಕೂಡ ಒಬ್ಬರು.

ಹೌದು, ಹರ್ಷಿಕಾ ಪೊಣಚ್ಚ.. ''ಪಿಯುಸಿ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಕೊಡಗಿನ ಕಿನ್ನರಿ. ''ಜಾಕಿ''.. ''ತಮಸ್ಸು''.. ''ಮುರಳಿ ಮೀಟ್ಸ್ ಮೀರಾ''.. ಇವರ ಕೆಲ ಜನಪ್ರಿಯ ಸಿನಿಮಾಗಳು.
''ಬಿಗ್ ಬಾಸ್'' ಕನ್ನಡ ಎರಡನೇ ಸೀಸನ್‌ನಲ್ಲಿ ಕೂಡ ಭಾಗವಹಿಸಿದ್ದ ಹರ್ಷಿಕಾ 2023ರಲ್ಲಿ ತಮ್ಮ ಬಹುಕಾಲದ ಗೆಳೆಯ ಮತ್ತು ನಟ ಭುವನ್ ಪೊನ್ನಣ್ಣ ಅವರನ್ನು ಮದುವೆಯಾಗಿದ್ದರು. ಮದುವೆಯಾದ ಒಂದೇ ವರ್ಷಕ್ಕೆ ಮುದ್ದಾದ ಮಗಳಿಗೆ ಜನ್ಮ ನೀಡಿದರು.
ಅಕ್ಟೋಬರ್ ತಿಂಗಳು ನವರಾತ್ರಿಯ ಮೊದಲ ದಿನವೇ ಹೆಣ್ಣು ಮಗುವನ್ನು ತಮ್ಮ ಪ್ರಪಂಚಕ್ಕೆ ಈ ದಂಪತಿ ಸ್ವಾಗತಿಸಿದ್ದರು. ಅಂತಹ ಶ್ರೇಷ್ಠ ದಿನದಂದೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರಿಂದ ಮಗಳಿಗೆ ಹೆಸರನ್ನು ಕೂಡ ದೇವಿಯ ಹೆಸರಲ್ಲೇ ಇಡಬೇಕು ಎಂದು ತೀರ್ಮಾನಿಸಿದ್ದರು. ಅದ್ರಂತೆ ಮಗಳಿಗೆ ತ್ರಿದೇವಿ ಎಂದು ನಾಮಕರಣವನ್ನು ಮಾಡಿದರು.
ಹಿಂದುತ್ವದ ಪ್ರಕಾರ, ಮೂವರು ಪ್ರಮುಖ ದೇವಿಗಳನ್ನು 'ತ್ರಿದೇವಿ' ಎಂದು ಕರೆಯುತ್ತಾರೆ. ಸರಸ್ವತಿ, ಲಕ್ಷ್ಮಿ ಹಾಗೂ ಪಾರ್ವತಿ (ದುರ್ಗಾ) ಇವರಿಗೆ ತ್ರಿದೇವಿ ಎನ್ನುತ್ತಾರೆ. ಹಾಗೆಯೇ ಇವರು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಹಾಗೂ ಶಿವನ ಪತ್ನಿಯರು. ಇವರು ಜ್ಞಾನ, ಸಂಪತ್ತು ಹಾಗೂ ಪ್ರೀತಿಯನ್ನು ಪ್ರತಿನಿಧಿಸುತ್ತಾರೆ ಎಂದು ತಮ್ಮ ಮಗಳ ಹೆಸರಿನ ಹಿಂದಿನ ರಹಸ್ಯವನ್ನು ಹೇಳಿದ್ದರು.

ಈಗ ಹರ್ಷಿಕಾ ಪೊಣಚ್ಚ ಮತ್ತು ಭುವನ್ ಪೊನ್ನಣ್ಣ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ವಿಶೇಷ ಅಂದರೆ ಈ ಖುಷಿಯ ವಿಚಾರವನ್ನು ಇಬ್ಬರು ದೂರದ ಪ್ಯಾರಿಸ್‌ದಿಂದ ಹಂಚಿಕೊಂಡಿದ್ದಾರೆ. ನಮ್ಮ ಸಂಸಾರ ಎಂಬ ಸಿನಿಮಾಗೆ ಇದೇ ಸೆಪ್ಟೆಂಬರ್‌ನಲ್ಲಿ ಪುಟ್ಟ ಪುಟಾಣಿ ಸ್ಟಾರ್ ಎಂಟ್ರಿ ಕೊಡಲಿದೆ ಅನ್ನೋದನ್ನ ಹೇಳಲು ನಮಗೆ ತುಂಬಾನೇ ಖುಷಿಯಾಗ್ತಿದೆ . ನಮ್ಮ ಕನಸಿನ ಕಥೆಗೆ ಈಗ ಪರ್ಫೆಕ್ಟ್ ಆದಂತಾಗಿದೆ.. ಥ್ಯಾಂಕ್ ಯು ಯೂನಿವರ್ಸ್. ನಿಮ್ಮ ಪ್ರೀತಿ ಹೀಗೆಯೇ ಇರಲಿ - ನಿಮ್ಮ ಹರ್ಷಿಕಾ & ಭುವನ್ ಎಂದು ಬರೆದುಕೊಂಡಿದ್ಧಾರೆ.
ಸದ್ಯ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಅವರಿಗೆ ಹಲವರು ಶುಭಾಶಯ ಕೋರುತ್ತಿದ್ಧಾರೆ. ಅನು ಪ್ರಭಾಕರ್, ಶಾನ್ವಿ ಶ್ರೀವಾತ್ಸವ್, ರಾಧಿಕಾ ನಾರಾಯಣ್, ಹೀಗೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ. ಇನ್ನುಳಿದಂತೆ ಸದ್ಯ ಭುವನ್ ಪೊನಣ್ಣ ಚಿತ್ರವೊಂದನ್ನು ಮಾಡುತ್ತಿದ್ದಾರೆ. ವಿಶೇಷ ಅಂದರೆ ಯೋಗರಾಜ್ ಭಟ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು ''ಹಲೋ 123'' ಎಂದು ಹೆಸರಿಡಲಾಗಿದೆ. ಆರು ವರ್ಷದ ನಂತರ ಭುವನ್ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಮರಳುತ್ತಿರುವುದು ಮತ್ತೊಂದು ವಿಶೇಷ. ಮಡಿಕೇರಿ, ಮೈಸೂರು, ಚಿತ್ರದುರ್ಗ, ಬೆಂಗಳೂರು ಸೇರಿದಂತೆ ಹಲವು ಕಡೆ ಇದರ ಚಿತ್ರೀಕರಣ ನಡೆಯಲಿದೆ.
ಮತ್ತೊಂದು ಕಡೆ ಹರ್ಷಿಕಾ ನಿರ್ದೇಶನಕ್ಕಿಳಿದಿದ್ಧಾರೆ. ಈಗಾಗಲೇ ಸಿನಿಮಾ ಟೈಟಲ್ ಹಾಗೂ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದು, ತಮ್ಮ ಚಿತ್ರಕ್ಕೆ ಅದುವೇ ''ಚಿ: ಸೌಜನ್ಯ - ಒಂದು ಹೆಣ್ಣಿನ ಕಥೆ'' ಎಂಬ ಶೀರ್ಷಿಕೆಯನ್ನಿಟ್ಟಿದ್ದಾರೆ.ಕಿಶೋರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಉಗ್ರಂ ಮಂಜು, ಕಾಕ್ರೋಚ್ ಅಲಿಯಾಸ್ ಸುಧಿ ಈ ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೂ ಮತ್ತು ಧರ್ಮಸ್ಥಳದ ಸೌಜನ್ಯ ಪ್ರಕರಣಕ್ಕೂ ಸಂಬಂಧ ಇರಬಹುದು ಎನ್ನುವ ಅನುಮಾನ ಹಲವರಲ್ಲಿದೆ.


Click it and Unblock the Notifications











