ಸದ್ದಿಲ್ಲದೇ ಮದುವೆಯಾದ 'ಕ್ರಾಂತಿ' ನಟಿ ನಿಮಿಕಾ ರತ್ನಾಕರ್ ; 'ಪುಷ್ಪವತಿ'ಯ ಕೈ ಹಿಡಿದ ಹುಡುಗ ಯಾರು ?
ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ. ಬದುಕಿನ ಮಹತ್ವದ ಹಂತ. ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಇಂತಹ ಬಂಧನಕ್ಕೆ ಈ ವರ್ಷ ಹಲವು ತಾರೆಯರು ಒಳಗಾಗಿದ್ದಾರೆ.
ಈ ಸಾಲಿಗೆ ನಂದ ಗೋಕುಲದ ರಕ್ಷಾ.. ಗತ ವೈಭವದ ಹೀರೋ ದುಷ್ಯಂತ್ .. ಕನ್ನಡ ಕಿರುತೆರೆಯ ಜೋಡಿ ಹಕ್ಕಿ ತೇಜಸ್ವಿನಿ ಆಚಾರ್ ಮತ್ತು ವಿರಾಟ್ ವತ್ಸಲ್.. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ.. ಅಲ್ಲು ಶಿರೀಶ್ ಮತ್ತು ನಯನಿಕಾ ರೆಡ್ಡಿ.. ಹೀಗೆ ಹಲವರು ಸೇರಿಕೊಂಡಿದ್ಧಾರೆ. ಈಗ ನಿಮಿಕಾ ರತ್ನಾಕರ್ ಸರದಿ.

ಹೌದು, ನಿಮಿಕಾ ರತ್ನಾಕರ್.. ಚಂದನವನದ ಪುಷ್ಪವತಿ. ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಲೇ ರಾಮಧ್ಯಾನ ಚಿತ್ರದ ಮೂಲಕ 2018ರಲ್ಲಿ ಕನ್ನಡ ಚಿತ್ರರಂಗಕ್ಕೆ ಬಂದ ನಿಮಿಕಾ ''ಮಿಸ್ಟರ್ ಬ್ಯಾಚುಲರ್''... ''ಅಬ್ಬರ''.. ''ಫ್ಲರ್ಟ್''.. ''ತ್ರಿಶೂಲಂ''.. ಹೀಗೆ ಒಂದಾದ ಮೇಲೊಂದು ಸಿನಿಮಾಗಳನ್ನು ಮಾಡಿದರು.
ಆದರೆ ಇವರ ಹೆಸರು ಕರುನಾಡಿನೆಲ್ಲೆಡೆ ಜನಜನಿತವಾಗಿದ್ದು ದರ್ಶನ್ ಅಭಿನಯದ ''ಕ್ರಾಂತಿ'' ಚಿತ್ರದ ಮೂಲಕ. ಈ ಚಿತ್ರದಲ್ಲಿ ''ಶೇಕ್ ಇಟ್ ಪುಷ್ಪವತಿ'' ಹಾಡಿನಲ್ಲಿ ನಿಮಿಕಾ ಹೆಜ್ಜೆ ಹಾಕಿದ್ದೇ ಹಾಕಿದ್ದು ಹಲವರು ಇವರ ಅಭಿಮಾನಿಗಳಾದರು.
ಇಂಥಾ ನಿಮಿಕಾ ರತ್ನಾಕರ್ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಗಾಂಧಿನಗರದಲ್ಲಿ ಕೇಳಿ ಬರುತ್ತಿತ್ತು. ಈ ಸುದ್ದಿ ಇದೀಗ ನಿಜವಾಗಿದೆ. ಸದ್ದಿಲ್ಲದೇ ನಿಮಿಕಾ ರತ್ನಾಕರ್ ಸಪ್ತಪದಿಯನ್ನು ತುಳಿದಿದ್ದಾರೆ.
ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಇದು ಡೆಸ್ಟಿನೇಶನ್ ವೆಡ್ಡಿಂಗ್ ಕಾಲ. ತಮ್ಮ ಇಷ್ಟದ ಸ್ಥಳದಲ್ಲಿ, ದೇಶದಲ್ಲಿ ಮದುವೆಯಾಗುವ ಕಾಲ. ಪ್ರಿಯಾಂಕ ಚೋಪ್ರಾ ಅವರಿಂದ ಹಿಡಿದು ದೀಪಿಕಾ ಪಡುಕೋಣೆಯವರೆಗೆ, ಅನುಷ್ಕಾ ಶರ್ಮಾ ಅವರಿಂದ ಹಿಡಿದು ರಶ್ಮಿಕಾ ಮಂದಣ್ಣವರೆಗೆ ಅನೇಕರು ಈ ಪರಿಕಲ್ಪನೆಯಡಿಯಲ್ಲಿಯೇ ಮದುವೆಯಾಗಿದ್ದಾರೆ. ಇಂತಹ ಕಾಲದಲ್ಲಿ ನಿಮಿಕಾ ರತ್ನಾಕರ್ ತಾವು ಹುಟ್ಟಿ ಬೆಳೆದ ತಮ್ಮ ಊರು ಮಂಗಳೂರಿನಲ್ಲಿ ಮದುವೆಯ ಬಂಧನಕ್ಕೊಳಗಾಗಿದ್ದು ವಿಶೇಷ.

ನಿಮಿಕಾ ರತ್ನಾಕರ್ ಮದುವೆಯಾದ ಹುಡುಗನ ಹೆಸರು ಆಶಿಶ್. ಮುಂಬೈ ಮೂಲದ ಉದ್ಯಮಿ ಇವರು. ಆಶಿಶ್ ಮತ್ತು ನಿಮಿಕಾ ಪರಿಚಯವಾಗಿದ್ದು ಎಲ್ಲಿ ಮತ್ತು ಹೇಗೆ..? ಇವರಿಬ್ಬರದ್ದು ಲವ್ ಮ್ಯಾರೇಜಾ..? ಅರೆಂಜ್ ಮ್ಯಾರೇಜಾ..? ಎನ್ನುವ ಪ್ರಶ್ನೆಗೆ ಸದ್ಯ ಉತ್ತರವನ್ನು ನಿಮಿಕಾ ರತ್ನಾಕರ್ ಹೇಳಿಲ್ಲವಾದರೂ ಇಬ್ಬರದ್ದು ಲವ್ ಕಂ ಅರೆಂಜ್ ಮ್ಯಾರೇಜ್ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ.
ನಿಮಿಕಾ ರತ್ನಾಕರ್ ಅವರ ಈ ಅದ್ಧೂರಿ ಮದುವೆಯ ಫೋಟೊಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ''ಬಿಗ್ ಬಾಸ್'' ಖ್ಯಾತಿಯ ತನಿಷಾ ಕುಪ್ಪಂಡ.. ಕಾವ್ಯಾ ಶಾ.. ಬೃಂದಾ ಆಚಾರ್ಯ.. ಭರತ್ ಬೊಪಣ್ಣ.. ಗುರುಕಿರಣ್ ಅವರ ಪತ್ನಿ ಪಲ್ಲವಿ.. ಹೀಗೆ ಹಲವರು ನಿಮಿಕಾ ರತ್ನಾಕರ್ ಮತ್ತು ಆಶಿಶ್ ಅವರಿಗೆ ಶುಭ ಕೋರಿದ್ದಾರೆ. ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನುಳಿದಂತೆ ಸಾಮಾನ್ಯವಾಗಿ ಮದುವೆಯಾದ ನಂತರ ಚಿತ್ರರಂಗದಿಂದ ಹಲವು ನಾಯಕಿಯರು ದೂರ ಸರಿಯುತ್ತಾರೆ. ಗಂಡ, ಮನೆ, ಸಂಸಾರ ಎಂದು ತಲ್ಲೀನರಾಗುತ್ತಾರೆ. ನಿಮಿಕಾ ರತ್ನಾಕರ್ ಮದುವೆ ನಂತರವೂ ಚಿತ್ರರಂಗದಲ್ಲಿ ಮುಂದುವರೆಯುತ್ತಾರಾ..? ಅಥವಾ ಬ್ರೇಕ್ ಪಡೆಯುತ್ತಾರಾ..? ಅಥವಾ ತೆರೆ ಮರೆಗೆ ಸರಿಯುತ್ತಾರಾ..? ಎನ್ನುವ ಕುತೂಹಲ ಕೂಡ ಸದ್ಯ ಹಲವರಲ್ಲಿದೆ. ಈ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ. ಹೊಸ ಬದುಕಿಗೆ ಕಾಲಿಟ್ಟ ನಿಮಿಕಾ ರತ್ನಾಕರ್ ಅವರಿಗೆ ನಿಮ್ಮ ಶುಭ ಹಾರೈಕೆಯೂ ಇರಲಿ.


Click it and Unblock the Notifications










