ಫೆಬ್ರವರಿ ಕೊನೆ ವಾರ ಬಿಡುಗಡೆ ಆಗುತ್ತಿರುವ ಕನ್ನಡ ಚಿತ್ರಗಳ ಪಟ್ಟಿ ಇಲ್ಲಿದೆ ನೋಡಿ
ಕನ್ನಡ ಚಿತ್ರರಂಗದ ದೊಡ್ಡ ಸಿನಿಮಾಗಳ ಬರ ಎದುರಿಸುತ್ತಿದೆ. ಪ್ರೇಕ್ಷಕರ ಚಿತ್ರಮಂದಿರಕ್ಕೆ ಬಾರದೇ ಕೆಲ ದಿನಗಳ ಕಾಲ ಬಾಗಿಲು ಬಂದ್ ಮಾಡುವ ಬಗ್ಗೆ ಪ್ರದರ್ಶಕರು ಚಿಂತಿಸುತ್ತಿದ್ದಾರೆ. ಕಳೆದ ವಾರ ಏಳೆಂಟು ಚಿತ್ರಗಳು ತೆರೆಗೆ ಬಂದಿದ್ದವು. ಶ್ರೇಯಸ್ ಹಾಗೂ ಪ್ರಿಯಾ ಪ್ರಕಾಶ್ ನಟನೆಯ 'ವಿಷ್ಣು ಪ್ರಿಯ' ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.
ಇದೀಗ ಮತ್ತೊಂದು ವಾರ ಶುರುವಾಗಿದೆ. ಮತ್ತೊಂದು ವೀಕೆಂಡ್ ಹತ್ತಿರವಾಗುತ್ತಿದೆ. ನಡುವೆ ಶಿವರಾತ್ರಿ ಹಬ್ಬದ ರಜೆ ಕೂಡ ಇದೆ. ಆದರೆ ದೊಡ್ಡ ಕನ್ನಡ ಸಿನಿಮಾ ಮಾತ್ರ ಚಿತ್ರಮಂದಿರಗಳಲ್ಲಿ ಇಲ್ಲ. ಪರಭಾಷಾ ಚಿತ್ರಗಳ ಆರ್ಭಟವೇ ಜೋರಾಗಿದೆ.

ಫೆಬ್ರವರಿ ಕೊನೆ ವಾರದಲ್ಲಿ ಐದಾರು ಕನ್ನಡ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಕಳೆದ ತಿಂಗಳ ಕೊನೆವಾರ ಪ್ರಜ್ವಲ್ ದೇವರಾಜ್ ನಟನೆಯ 'ಗಣ' ಸಿನಿಮಾ ತೆರೆಗೆ ಬಂದಿತ್ತು. ಈ ತಿಂಗಳ ಕೊನೆ ವಾರ ರಾಕ್ಷಸ ಸಿನಿಮಾ ಬಿಡುಗಡೆ ಆಗುತ್ತಿದೆ.
1. ರಾಕ್ಷಸ
ಪ್ರಜ್ವಲ್ ದೇವರಾಜ್ ನಟನೆಯ ನಾಲ್ಕೈದು ಸಿನಿಮಾಗಳು ಬಿಡುಗಡೆಗೆ ಸಿದ್ಧವಿದೆ. ಆದರೆ ಕಾರಣಾಂತರಗಳಿಂದ ಸರಿಯಾದ ಪ್ರಚಾರ ಇಲ್ಲದೇ ಸಿನಿಮಾಗಳು ತೆರೆಗೆ ಬರ್ತಿವೆ. ಕಳೆದ ತಿಂಗಳ 'ಗಣ' ಸಿನಿಮಾ ಬಂದು ಹೋಗಿದ್ದು ಗೊತ್ತಾಗಲಿಲ್ಲ. ಈ ವಾರ ಬರ್ತಿರೋ 'ರಾಕ್ಷಸ' ಚಿತ್ರ ಕುತೂಹಲ ಮೂಡಿಸಿದೆ. ಲೋಹಿತ್ ಎಚ್ ನಿರ್ದೇಶನದಲ್ಲಿ ಟೈಮ್ ಲೂಪ್ ಹಾರರ್ ಚಿತ್ರ ಇದು. ಬಹಳ ವಿಭಿನ್ನವಾದ ಪಾತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಕಾಣಿಸಿಕೊಂಡಿದ್ದಾರೆ. ಶಾನ್ವಿ ಎಂಟರ್‌ಪ್ರೈಸಸ್ ಅಡಿಯಲ್ಲಿ ದೀಪು ಬಿಎಸ್, ನವೀನ್ ಗೌಡ ಮತ್ತು ಮಾನಸ ಚಿತ್ರಕ್ಕೆ ಹಣ ಹೂಡಿದ್ದಾರೆ. ನೋಬಿನ್ ಪಾಲ್ ಸಂಗೀತ ಮತ್ತು ಜೇಬಿನ್ ಪಿ ಜಾಕೋಬ್ ಛಾಯಾಗ್ರಹಣ ಚಿತ್ರಕ್ಕಿದೆ.

2. FIR 6 to 6
ಥ್ರಿಲ್ಲರ್ ಸಿನಿಮಾಗಳು ವಿಜಯ್ ರಾಘವೇಂದ್ರ ಕೈ ಹಿಡಿಯುತ್ತಿದೆ. ಈ ವಾರ ಅವರ 'FIR 6 to 6' ಸಿನಿಮಾ ಬಿಡುಗಡೆ ಆಗ್ತಿದೆ. ಕೆ.ವಿ.ರಮಣರಾಜ್ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಟೈಟಲ್ ಹೇಳುವಂತೆ ಸಂಜೆ 6 ಗಂಟೆಯಿಂದ ಬೆಳಗಿನ ಜಾನ 6 ಗಂಟೆಯವರೆಗೂ ನಡೆಯುವ ಕಥೆಯಿದೆ. ಸಮಸ್ಯೆಯೊಂದರಲ್ಲಿ ಸಿಲುಕಿದ ಯುವ ಅದರಿಂದ ಹೇಗೆ ಹೊರಗೆ ಬರ್ತಾನೆ ಎನ್ನುವ ಕಥೆ ಚಿತ್ರದಲ್ಲಿದೆ.
3. 1990's
ಮನಸ್ಸು ಮಲ್ಲಿಗೆ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ '1990's ಕನ್ನಡ ಸಿನಿಮಾ ಕೂಡ ಈ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ನಂದಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅರುಣ್ - ರಾಣಿ ವರದ್ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.
4. ಶಬ್ಧಂ
ತಮಿಳಿನ ಹಾರರ್ ಥ್ರಿಲ್ಲರ್ 'ಶಬ್ಧಂ' ಸಿನಿಮಾ ಕನ್ನಡಕ್ಕೆ ಡಬ್ ಆಗಿ ಈ ವಾರ ತೆರೆಗೆ ಬರ್ತಿದೆ. ಚಿತ್ರದಲ್ಲಿ ಆದಿ ಜೊತೆ ಲಕ್ಷ್ಮಿ ಮೆನನ್ ನಾಯಕಿಯಾಗಿ ನಟಿಸಿದ್ದಾರೆ. ಅರಿವಳಗನ್ ನಿರ್ದೇಶನದ ಚಿತ್ರವನ್ನು 7ಜಿ ಶಿವ ನಿರ್ಮಾಣ ಮಾಡಿದ್ದಾರೆ. ರಾಜ್ಯಾದ್ಯಂತ ತೆಲುಗು, ತಮಿಳು, ಕನ್ನಡ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.
5. ಶಭಾಷ್ ಬಡ್ಡಿ ಮಗ್ನೆ
80ರ ದಶಕದಲ್ಲಿ ನಡೆದ ನೈಜ ಘಟನೆ ಆಧರಿಸಿದ ಸಿನಿಮಾ 'ಶಭಾಷ್ ಬಡ್ಡಿ ಮಗ್ನೆ'. ಬಿ.ಎಸ್ ರಾಜಶೇಖರ್ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಪ್ರಮೋದ್ ಜೊತೆ ಆದ್ಯ ಪ್ರಿಯಾ, ಸಾಮ್ರಾಟ್ ಶೆಟ್ಟಿ, ಕಾವ್ಯಾ ರಮೇಶ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚೈತ್ರಾ ಪ್ರಕಾಶ್ ಚಿತ್ರಕ್ಕೆ ಹಣ ಹೂಡಿದ್ದಾರೆ.
ಈ 5 ಚಿತ್ರಗಳ ಜೊತೆಗೆ 'ಅಪಾಯವಿದೆ ಎಚ್ಚರಿಕೆ', 'ಮಾಂಕ್ ದಿ ಯಂಗ್', 'ವಿರಾಮದ ನಂತರ', 'ಪ್ರತ್ಯರ್ಥ', 'ನಾಗವಲ್ಲಿ ಬಂಗಲೆ', 'ಲೈಫ್ ಈಸ್ ಬ್ಯೂಟಿಫುಲ್' ಹೀಗೆ ಹಲವು ಚಿತ್ರಗಳು ಈ ವಾರ ತೆರೆಗೆ ಬರ್ತಿದೆ. ಪ್ರಜ್ವಲ್ ದೇವರಾಜ್ ನಟನೆಯ ರಾಕ್ಷಸ, ವಿಜಯ್ ರಾಘವೇಂದ್ರ 'FIR' ಚಿತ್ರಗಳು ಕೊಂಚ ನಿರೀಕ್ಷೆ ಮೂಡಿಸಿರುವುದು ಸುಳ್ಳಲ್ಲ.


Click it and Unblock the Notifications











