₹500 ಕೋಟಿಗೂ ಹೆಚ್ಚು ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್ ವರ್ಲ್ಡ್ ಸಿನಿಮಾಗಳಿವು
ಯಾವುದೇ ಚಿತ್ರಕ್ಕೆ ಬಜೆಟ್ ಬಹಳ ಮುಖ್ಯ. ಅದೇ ಚಿತ್ರದ ಮೂಲ ಇಂಧನ. 2 ಕೋಟಿ ರೂ. ಬಜೆಟ್‌ನಲ್ಲಿ ಕೂಡ ಒಂದೊಳ್ಳೆ ಸಿನಿಮಾ ನಿರ್ಮಾಣ ಮಾಡಬಹುದು. ಕಥೆಯೇ ಮುಖ್ಯ ಎನ್ನುವವರು ಇದ್ದಾರೆ. ಆದರೆ ಆ ಕಥೆಯನ್ನು ದೃಶ್ಯರೂಪಕ್ಕಿಳಿಸಲು ಹಣ ಬೇಕೇಬೇಕು.
ದಶಕಗಳ ಹಿಂದೆ ಸಾವಿರಾರು ರೂಪಾಯಿ ವೆಚ್ಚದಲ್ಲಿ ಸಿನಿಮಾಗಳು ನಿರ್ಮಾಣವಾಗುತ್ತಿದ್ದವು. ಕಾಲ ಬದಲಾದಂತೆ ಲಕ್ಷ ಲಕ್ಷ ಬಂಡವಾಳ ಹಾಕಿ ಸಿನಿಮಾ ಮಾಡುವ ಪ್ರಯತ್ನ ಆರಂಭವಾಯಿತು. ಸಿನಿಮಾ ಬಜೆಟ್ ಕೋಟಿ ದಾಟಿ ಬಹಳ ವರ್ಷಗಳೇ ಆಯಿತು. ಈಗ ಹತ್ತಿಪ್ಪತ್ತು ಕೋಟಿ ರೂ. ಲೆಕ್ಕ ಹೋಗಿದೆ ನೂರಾರು ಕೋಟಿ ರೂ. ಬಜೆಟ್, ಕಲೆಕ್ಷನ್ ಲೆಕ್ಕಾಚಾರ ನಡೀತಿದೆ.

ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ದಿಢೀರನೆ ಸಿನಿಮಾ ಬಜೆಟ್ ಹೆಚ್ಚಾಯಿತು. ಎಷ್ಟೇ ಖರ್ಚು ಮಾಡಿದರೂ ವಾಪಸ್ ಬರುತ್ತದೆ ಎನ್ನುವ ಚರ್ಚೆ ಶುರುವಾಯಿತು. ಪರಿಣಾಮ ಈಗ ಸೂಪರ್ ಸ್ಟಾರ್‌ಗಳ ಸಿನಿಮಾ ಬಜೆಟ್ ಲೆಕ್ಕ ಶುರುವಾಗುವುದೇ 100 ಕೋಟಿ ರೂ. ಬಳಿಕ. ಕನ್ನಡದಲ್ಲಿ ಕೂಡ ಈಗ ನೂರಾರು ಕೋಟಿ ಸುರಿದು ಸಿನಿಮಾ ಮಾಡುವ ಧೈರ್ಯ ಮಾಡಲಾಗುತ್ತಿದೆ.
'KGF' ಸರಣಿ ಗೆಲುವು ಕನ್ನಡ ಚಿತ್ರ ಕೂಡ 300 ಕೋಟಿ ರೂ. 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಬಹುದು ಎನ್ನುವುದನ್ನು ಸಾಬೀತು ಮಾಡಿ ತೋರಿಸಿತ್ತು. ಸದ್ಯ 'ಕಾಂತಾರ'-1, 'ಟಾಕ್ಸಿಕ್', '45', 'ಡೆವಿಲ್' ಹಾಗೂ 'ಬಿಲ್ಲ ರಂಗ ಬಾಷ' ಸಿನಿಮಾಗಳ ಬಜೆಟ್ ಹೆಚ್ಚಾಗಿದೆ. 500 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಈಗ ಭಾರತದಲ್ಲಿ ಸಿನಿಮಾ ನಿರ್ಮಾಣ ಪ್ರಯತ್ನ ನಡೀತಿದೆ. ಅಧಿಕೃತವಾಗಿ ಸಿನಿಮಾಗಳ ಬಜೆಟ್ ಬಗ್ಗೆ ಮಾಹಿತಿ ಸಿಗದಿದ್ದರೂ ಈ ಬಗ್ಗೆ ಚರ್ಚೆ ಅಂತೂ ನಡೆಯುತ್ತಲೇ ಇದೆ.
ಬಾಲಿವುಡ್‌ನಲ್ಲಿ 300 ಕೋಟಿ ರೂ.ಗೂ ಹೆಚ್ಚು ಬಜೆಟ್‌ನಲ್ಲಿ ಕೆಲ ಸಿನಿಮಾಗಳು ನಿರ್ಮಾಣ ಆಗಿವೆ. ಪ್ರಭಾಸ್ ನಟನೆಯ 'ಆದಿಪುರುಷ್' ಚಿತ್ರವನ್ನು 500 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು ಎನ್ನಉವ ಊಹಾಪಹ ಇತ್ತು. 'ಬ್ರಹ್ಮಾಸ್ತ್ರ' ಚಿತ್ರದ ಬಜೆಟ್ 300 ಕೋಟಿ ರೂ. ದಾಟಿದ್ದು ಭಾರೀ ಸುದ್ದಿ ಆಗಿತ್ತು. ಮಲ್ಟಿಸ್ಟಾರರ್ 'ಸಿಂಗಂ ಅಗೇನ್' ಸಿನಿಮಾ ಬಜೆಟ್ ಕೂಡ 350 ಕೋಟಿ ರೂ. ದಾಟಿದ್ದಾಗಿ ಸುದ್ದಿ ಆಗಿತ್ತು.

'ಬಡೇಮಿಯಾ ಚೋಟೆಮಿಯಾ', 'ಟೈಗರ್-3' ಹಾಗೂ 'ಜವಾನ್' ಸಿನಿಮಾಗಳ ಬಜೆಟ್ 300 ಕೋಟಿ ರೂ. ಮೀರಿತ್ತು. 'ಪಠಾಣ್', 'ಮೈದಾನ್' ಹಾಗೂ 'ಫೈಟರ್' ಚಿತ್ರಗಳನ್ನು 200 ಕೋಟಿ ರೂ.ಗ ಅಧಿಕ ಬಂಡವಾಳ ಹಾಕಿ ನಿರ್ಮಾಣ ಮಾಡಿದ್ದಾಗಿ ವರದಿಯಾಗಿತ್ತು. ದಕ್ಷಿಣದಲ್ಲಿ 'ಬಾಹುಬಲಿ' ಸರಣಿ, 'ಪುಷ್ಪ'-2, 'ಪೊನ್ನಿಯಿನ್ ಸೆಲ್ವನ್' ಸರಣಿ ಹಾಗೂ 'KGF'-2 ಚಿತ್ರಗಳ ಬಜೆಟ್ 200 ಕೋಟಿ ರೂ. ಗಡಿ ದಾಟಿತ್ತು.
ಮೌಳಿ- ಮಹೇಶ್ ಚಿತ್ರದ ಬಜೆಟ್
ಎಸ್. ಎಸ್ ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು ನಟನೆಯ 'SSMB29' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಸಹ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಒರಿಸ್ಸಾದಲ್ಲಿ ಒಂದು ಶೆಡ್ಯೂಲ್ ಚಿತ್ರೀಕರಣ ಕೂಡ ಮುಕ್ತಾಯವಾಗಿದೆ. ವಿಜಯೇಂದ್ರ ಪ್ರಸಾದ್ ಚಿತ್ರಕ್ಕೆ ಕಥೆ ಬರೆದಿದ್ದು ಬಹುತೇಕ ರಾಜಮೌಳಿ ತಂಡ ಈ ಚಿತ್ರಕ್ಕೂ ಕೆಲಸ ಮಾಡುತ್ತಿದೆ.
ಎರಡು ಭಾಗಗಳಾಗಿ 'SSMB29' ಚಿತ್ರ ಕಟ್ಟಿಕೊಡುವ ಪ್ರಯತ್ನ ನಡೀತಿದೆ. ತೆಲುಗು ಜೊತೆಗೆ ಇಂಗ್ಲೀಷ್‌ನಲ್ಲಿ ಕೂಡ ಸಿನಿಮಾ ನಿರ್ಮಾಣವಾಗುತ್ತಿದೆ ಎನ್ನಲಾಗ್ತಿದೆ. ಇನ್ನು 2 ಭಾಗಗಳಿಗೆ ಸೇರಿ ಸಿನಿಮಾ ಬಜೆಟ್ 1000 ಕೋಟಿ ರೂ. ಎಂದು ಹೇಳಲಾಗುತ್ತಿದೆ. ಕೆಲವರಿಗೆ ಇದು ಅಚ್ಚರಿ ಮೂಡಿಸಿದೆ. ಮೌಳಿ ನಿರ್ದೇಶನದ 'RRR' ಸಿನಿಮಾ ಹಾಲಿವುಡ್‌ನಲ್ಲಿ ಕೂಡ ಸದ್ದು ಮಾಡಿತ್ತು. ಹಾಗಾಗಿ ಈ ಬಾರಿ ಹಾಲಿವುಡ್ ತಂತ್ರಜ್ಞರನ್ನು ಕೂಡ ಟಾರ್ಗೆಟ್ ಮಾಡಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ.
ರಾಮಾಯಣ
ನಿತೇಶ್ ತಿವಾರಿ ರಾಮಾಯಣ ಕಾವ್ಯವನ್ನು ಮತ್ತೆ ತೆರೆಗೆ ತರುವ ಸಾಹಸಕ್ಕೆ ಕೈ ಹಾಕಿದ್ದಾರೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್ ಹಾಗೂ ಸೀತಾಮಾತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಎರಡು ಭಾಗಗಳಾಗಿ ಸಿನಿಮಾ ತೆರೆಗೆ ಬರ್ತಿದ್ದು ಬಜೆಟ್ 900 ಕೋಟಿ ರೂ.ಗೂ ಅಧಿಕ ಎನ್ನಲಾಗುತ್ತಿದೆ. ರಾವಣನ ಪಾತ್ರದಲ್ಲಿ ನಟ ಯಶ್ ಬಣ್ಣ ಹಚ್ಚಿದ್ದಾರೆ. ಮುಂದಿನ ವರ್ಷ ದೀಪಾವಳಿಗೆ ಪಾರ್ಟ್-1 ತೆರೆಗೆ ಬರಲಿದೆ.
ನಿಮಿತ್ ಮಲ್ಹೋತ್ರಾ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಯಶ್ ಕೂಡ ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ ಎನ್ನಲಾಗ್ತಿದೆ. ಇವತ್ತಿನ ಆಧುನಿಕ ತಂತ್ರಜ್ಞಾನ ಬಳಸಿ ಬಹಳ ಅದ್ಧೂರಿಯಾಗಿ ಸಿನಿಮಾ ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಬಜೆಟ್ ಹೆಚ್ಚಾಗುತ್ತಿದೆ. ಇನ್ನು ಕಲಾವಿದರಿಗೂ ಕೂಡ ಭರ್ಜರಿ ಸಂಭಾವನೆ ಸಿಗುತ್ತಿದೆ.
ಅಲ್ಲು- ಅಟ್ಲಿ ಸಿನಿಮಾ
'ಪುಷ್ಪ'-2 ಬಳಿಕ ಅಲ್ಲು ಅರ್ಜುನ್ ಮುಂದಿನ ಸಿನಿಮಾ ಯಾವುದು ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿತ್ತು. ಅದಕ್ಕೆ ಇದೀಗ ಉತ್ತರ ಸಿಕ್ಕಿದೆ. ಅಟ್ಲಿ ನಿರ್ದೇಶನದಲ್ಲಿ ಬನ್ನಿ ಮುಂದಿನ ಸಿನಿಮಾ ಘೋಷಣೆ ಆಗಿದೆ. ಸನ್ ಪಿಕ್ಚರ್ಸ್ ಸಂಸ್ಥೆ ಚಿತ್ರಕ್ಕೆ ಹಣ ಹೂಡುತ್ತಿದೆ. ಗ್ರಾಫಿಕ್ಸ್ ಬಳಸಿ ಹೊಸ ರೀತಿಯಲ್ಲಿ ಸಿನಿಮಾ ಮಾಡುವ ಪ್ರಯತ್ನ ನಡೀತಿದೆ. ಅಲ್ಲು ಅರ್ಜುನ್ ಹುಟ್ಟುಹಬ್ಬದ ದಿನ ಸ್ಪೆಷಲ್ ಪ್ರೋಮೊ ಮೂಲಕ ಸಿನಿಮಾ ಘೋಷಣೆ ಆಗಿತ್ತು.
AA22 X A6 ಚಿತ್ರವನ್ನು ಅಂದಾಜು 800 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡುತ್ತಾರೆ ಎನ್ನಲಾಗ್ತಿದೆ. ಇದೊಂದು ಸೈನ್ಸ್ ಫಿಕ್ಷನ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ. ಲಾಸ್ ಏಂಜಲೀಸ್‌ನಲ್ಲಿರುವ ವಿಎಫ್‌ಎಕ್ಸ್ ಸ್ಟುಡಿಯೋಗೆ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಅಟ್ಲಿ ಭೇಟಿ ಕೊಟ್ಟು ಸಿನಿಮಾ ಬಗ್ಗೆ ಚರ್ಚೆ ನಡೆಸಿರುವುದನ್ನು ಪ್ರೋಮೊದಲ್ಲಿ ನೋಡಬಹುದು. ಮುಂದಿನ ವರ್ಷ ಈ ಸಿನಿಮಾ ತೆರೆಗೆ ಬರಲಿದೆ.
ಟಾಕ್ಸಿಕ್
ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಮುಂದಿನ ವರ್ಷ ಮಾರ್ಚ್ 19ಕ್ಕೆ ವಿಶ್ವದಾದ್ಯಂತ ಸಿನಿಮಾ ತೆರೆಗೆ ಬರಲಿದೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಸ್ವತಃ ಯಶ್ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಆದರೆ ಚಿತ್ರದ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗುತ್ತಿಲ್ಲ.
ನಯನತಾರ, ಕಿಯಾರಾ ಅದ್ವಾನಿ ಸೇರಿದಂತೆ ಘಟಾನುಘಟಿ ಕಲಾವಿದರು 'ಟಾಕ್ಸಿಕ್' ಚಿತ್ರದಲ್ಲಿ ನಟಿಸಿದ್ದಾರೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೂಡ ಕೆಲಸ ಮಾಡುತ್ತಿದ್ದಾರೆ. ಅಂದಾಜು 270 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ ಎನ್ನುವ ಚರ್ಚೆ ನಡೆದಿತ್ತು. ಆದರೆ ಬಜೆಟ್ ಮತ್ತಷ್ಟು ಹೆಚ್ಚು ನಿರೀಕ್ಷೆಯಿದೆ. ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗುತ್ತಿದೆ. ಈ ಚಿತ್ರದ ಬಜೆಟ್ 400 ರಿಂದ 500 ಕೋಟಿ ರೂ. ಆಗುತ್ತಿದೆ ಎಂದು ನಿರ್ಮಾಪಕ ಕೆ. ಮಂಜು ಸಂದರ್ಶನವೊಂದರಲ್ಲಿ ಹೇಳಿದ್ದರು.


Click it and Unblock the Notifications











