'ಕಾಟೇರ'ನಿಗಾಗಿ ಒಂದಾಗ್ತಿದೆ ಸ್ಯಾಂಡಲ್‌ವುಡ್: ಸೆಲೆಬ್ರೆಟಿ ಶೋಗೆ ಯಾರೆಲ್ಲಾ ಬರ್ತಿದ್ದಾರೆ?
ಸ್ಯಾಂಡಲ್‌ವುಡ್‌ನಲ್ಲಿ 'ಕಾಟೇರ'ನ ದರ್ಬಾರ್ ಇನ್ನು ಕಮ್ಮಿ ಆಗಿಲ್ಲ. ದೊಡ್ಡಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇನ್ನೆರಡು ದಿನಗಳಲ್ಲಿ ಸಿನಿಮಾ ಗಳಿಕೆ (ಗ್ರಾಸ್) 100 ಕೋಟಿ ರೂ. ತಲುಪುವ ಸುಳಿವು ಸಿಗುತ್ತಿದೆ. ಸೋಮವಾರ, ಮಂಗಳವಾರವೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಇದೀಗ 'ಕಾಟೇರ'ನಿಗಾಗಿ ಚಂದನವನದ ತಾರೆಯರು ಒಂದಾಗುತ್ತಿದ್ದಾರೆ.
ಹೌದು 'ಕಾಟೇರ' ಚಿತ್ರದ ಗ್ರ್ಯಾಂಡ್ ಸೆಲೆಬ್ರೆಟಿ ಶೋಗೆ ವೇದಿಕೆ ಸಿದ್ಧವಾಗಿದೆ. ನಗರದ ಒರಾಯನ್ ಮಾಲ್‌ನಲ್ಲಿ ಇಂದು ಸಂಜೆ(ಜನವರಿ 3) 6 ಗಂಟೆಗೆ ಸ್ಪೆಷಲ್ ಸ್ಕ್ರೀನಿಂಗ್ ಆಯೋಜಿಸಲಾಗಿದೆ. ಚಿತ್ರರಂಗದ ಹಲವರನ್ನು ಸಿನಿಮಾ ವೀಕ್ಷಿಸಲು ಆಹ್ವಾನಿಸಲಾಗಿದೆ. ಖುದ್ದು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕನ್ನಡ ಚಿತ್ರರಂಗದ ನಟ, ನಟಿಯರು ಹಾಗೂ ತಂತ್ರಜ್ಞರನ್ನು ಆಹ್ವಾನಿಸಿದ್ದಾರೆ.

'ಕಾಟೇರ'ನ ಆರ್ಭಟವನ್ನು ಕಣ್ತುಂಬಿಕೊಳ್ಳಲು ಹಲವರು ಉತ್ಸುಕರಾಗಿದ್ದು ಸಿನಿಮಾ ನೋಡಲು ಬರುವುದಾಗಿ ಹೇಳಿದ್ದಾರೆ. ಕೆಲವರು ಅನಿವಾರ್ಯ ಕಾರಣಗಳಿಂದ ಬರಲು ಸಾಧ್ಯವಾಗುತ್ತಿಲ್ಲ, ಚಿತ್ರಕ್ಕೆ ಶುಭವಾಗಲಿ ಎಂದು ತಿಳಿಸಿರುವುದಾಗಿ ಹೇಳಲಾಗ್ತಿದೆ. ಕ್ರೇಜಿಸ್ಟಾರ್ ವಿ. ರವಿಚಂದ್ರನ್, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ಸಂಸದೆ ಸುಮಲತಾ ಅಂಬರೀಶ್, ಗೋಲ್ಡನ್ ಸ್ಟಾರ್ ಗಣೇಶ್, ದುನಿಯಾ ವಿಜಯ್, ರಚಿತಾ ರಾಮ್, ಅಜಯ್ ರಾವ್, ನಿಶ್ವಿಕಾ ನಾಯ್ಡು, ವಿನಯ್ ರಾಜ್‌ಕುಮಾರ್, ಯುವ ರಾಜ್‌ಕುಮಾರ್ ಸೇರಿದಂತೆ ಹಲವರಿಗೆ ಸೆಲೆಬ್ರೆಟಿ ಶೋಗೆ ಆಹ್ವಾನ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ.
ಚೆನ್ನೈನಲ್ಲಿ ಸಂಜೆ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಆಡಿಯೋ ಹಾಗೂ ಟ್ರೈಲರ್ ಲಾಂಚ್ ಕಾರ್ಯಕ್ರಮವಿದೆ. ಶಿವಣ್ಣ ಕೂಡ ಚಿತ್ರದಲ್ಲಿ ನಟಿಸಿರುವುದರಿಂದ ಆ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ. ಹಾಗಾಗಿ ಅವರು 'ಕಾಟೇರ' ಸಿನಿಮಾ ನೋಡಲು ಸಾಧ್ಯವಾಗುತ್ತಿಲ್ಲ. ಇನ್ನುಳಿದಂತೆ ರವಿಚಂದ್ರನ್, ಗಣೇಶ್, ದುನಿಯಾ ವಿಜಯ್ ಎಲ್ಲರೂ ಸಿನಿಮಾ ನೋಡಲು ಬರುವುದಾಗಿ ಹೇಳಿದ್ದಾರೆ ಎನ್ನಲಾಗ್ತಿದೆ.
ಡಾಲಿ ಧನಂಜಯ್, ಶರಣ್, ಸಿಂಪಲ್ ಸುನಿ, ಮಂಸೋರೆ ಸೇರಿದಂತೆ ಕೆಲವರು ಈಗಾಗಲೇ 'ಕಾಟೇರ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದೀಗ ಕನ್ನಡ ಸಿನಿಮಾ ತೆರೆಯರಲ್ಲಾ ಒಂದೆಡೆ ಸೇರಿ ಸಿನಿಮಾ ನೋಡಲು ಮುಂದಾಗಿದ್ದಾರೆ. ಯಾರೆಲ್ಲಾ ಈ ಚಿತ್ರೋತ್ಸವದಲ್ಲಿ ಭಾಗಿ ಆಗುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ. ಇನ್ನು ನಟ ದರ್ಶನ್ ಸೇರಿದಂತೆ ಇಡೀ 'ಕಾಟೇರ' ಚಿತ್ರತಂಡ ಸೆಲೆಬ್ರೆಟಿ ಶೋ ವೇಳೆ ಹಾಜರಿರುತ್ತದೆ.

ಮತ್ತೊಂದು ಕಡೆ 'ಕಾಟೇರ' ಸಿನಿಮಾ 5 ದಿನಕ್ಕೆ 86 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಫಸ್ಟ್ ವೀಕೆಂಡ್‌ನಲ್ಲೇ ಸಿನಿಮಾ 50 ಕೋಟಿ ರೂ.ಗೂ ಹೆಚ್ಚು ಗಳಿಕೆ ಕಂಡಿತ್ತು. ದರ್ಶನ್ ನಟನೆ, ತರುಣ್ ನಿರ್ದೇಶನ, ಮಾಸ್ತಿ ಸಂಭಾಷಣೆ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಕಂಟೆಂಟ್ ಜೊತೆಗೆ ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಬರೆಸಿ ಒಂದೊಳ್ಳೆ ಸಿನಿಮಾ ಮಾಡಿ ಚಿತ್ರತಂಡ ಸಕ್ಸಸ್ ಕಂಡಿದೆ. ಉತ್ತಮ ಸಂದೇಶ ಕೂಡ ಚಿತ್ರದಲ್ಲಿದೆ.
ಹೊರ ದೇಶಗಳಲ್ಲಿ ಪರಭಾಷೆಗಳಲ್ಲಿ 'ಕಾಟೇರ' ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ. ಶೀಘ್ರದಲ್ಲೇ ತಮಿಳು, ತೆಲುಗಿಗೆ ಸಿನಿಮಾ ಡಬ್ ಆಗಿ ರಿಲೀಸ್ ಆಗಲಿದೆ. ಈ ವಾರವೇ ಹೊರ ದೇಶಗಳಲ್ಲಿ 'ಕಾಟೇರ'ನ ದರ್ಬಾರ್ ಆರಂಭವಾಗಲಿದೆ. ಈ ಚಿತ್ರದ ಮೂಲಕ ಮಾಲಾಶ್ರೀ ಪುತ್ರಿ ಆರಾಧನಾ ಚಂದನವನಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.
ಜಗಪತಿ ಬಾಬು, ಬಿರಾದಾರ್, ಶ್ರುತಿ, ಕುಮಾರ್ ಗೋವಿಂದ್, ವಿನೋದ್ ಆಳ್ವ ಸೇರಿದಂತೆ ದೊಡ್ಡ ತಾರಗಣ 'ಕಾಟೇರ' ಚಿತ್ರದಲ್ಲಿದೆ. ವಿ. ಹರಿಕೃಷ್ಣ ಸಂಗೀತ, ಸುಧಾಕರ್ ಛಾಯಾಗ್ರಹಣ ಚಿತ್ರಕ್ಕೆ ಪ್ಲಸ್ ಆಗಿದೆ. ಎಲ್ಲಾ ವಿಭಾಗಗಳಲ್ಲೂ ಸಿನಿಮಾ ಅದ್ಭುತ ಎನಿಸಿಕೊಂಡಿದೆ. ಸಿನಿಮಾ ಈ ವಾರಾಂತ್ಯದಲ್ಲೇ 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ.


Click it and Unblock the Notifications











