'ಆಪರೇಷನ್ ಸಿಂಧೂರ್' ಬಗ್ಗೆ ಮೌನ ವಹಿಸಿದ ತಾರೆಯರು ಯಾರ‍್ಯಾರು? ಅಭಿಮಾನಿಗಳ ಅಸಮಾಧಾನ
ಉಗ್ರರು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆಸಿದ ಅಟ್ಟಹಾಸಕ್ಕೆ ಭಾರತ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ಭಾರತ ಹಾಗೂ ಪಾಕ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ. ಭಾರತ ಸೇನೆ ನಡೆಸಿದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಗೆ ಪ್ರತಿಯಾಗಿ ಪಾಕ್ ಪ್ರತಿದಾಳಿಗೆ ಮುಂದಾಗಿದೆ. ಅದನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸುತ್ತಿದೆ.
ಭಾರತ- ಪಾಕ್ ನಡುವೆ ಯುದ್ಧ ಆರಂಭವಾದಂತಾಗಿದೆ. ಭಾರತೀಯ ಸೇನೆಯ ದಿಟ್ಟ ಹೋರಾಟದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪಾಕ್ ಉಗ್ರರ ಅಡುಗುತಾಣಗಳನ್ನು ಗುರಿಯಾಗಿಸಿಕೊಂಡು ನಡೆಸಿದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯನ್ನು ಜಗತ್ತಿನಾದ್ಯಂತ ಸ್ವಾಗತಿಸಲಾಗಿದೆ. ಭಾರತದಲ್ಲಿ ಕೆಲವು ಕಡೆ ಸಂಭ್ರಮಾರಚರಣೆ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೀತಿದ್ದು ಭಾರತ ಸೇನೆ ಹಾಗೂ ಸರ್ಕಾರದ ನಡೆಗೆ ಬಹುಪರಾಕ್ ಹೇಳುತ್ತಿದ್ದಾರೆ.

ಸಿನಿಮಾ ತಾರೆಯರು ಕೂಡ 'ಆಪರೇಷನ್ ಸಿಂಧೂರ್' ಬಗ್ಗೆ ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸೇನೆಯ ಜೊತೆಗೆ ನಾವೆಲ್ಲರೂ ಇದ್ದೇವೆ ಎಂದು ಬೆಂಬಲ ಸೂಚಿಸುತ್ತಿದ್ದಾರೆ. ಪಾಕ್ ಕುತಂತ್ರಕ್ಕೆ ತಕ್ಕ ಬೆಲೆ ತೆತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಕೆಲ ತಾರೆಯರು 'ಆಪರೇಷನ್ ಸಿಂಧೂರ್' ಬಗ್ಗೆ ಚಕಾರ ಎತ್ತಿರುವುದು ಇದೆ. ಇನ್ನು ಪಾಕಿಸ್ತಾನದ ತಾರೆಯರು ಇದೊಂದು ಹೇಡಿತನದ ಕೃತ್ಯ ಎಂದು ಖಂಡಿಸಿದ್ದಾರೆ.
'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ಬಗ್ಗೆ ಕೆಲ ಖ್ಯಾತ ಕಲಾವಿದರು ಮೌನ ವಹಿಸಿರುವುದರ ಬಗ್ಗೆ ಬೇಸರ ವ್ಯಕ್ತವಾಗುತ್ತಿದೆ. ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಸೈಫ್ ಅಲಿಖಾನ್ ಸೇರಿದಂತೆ ಹಲವರು ಇಂತಹ ಸಮಯದಲ್ಲಿ ಸುಮ್ಮನಿರುವುದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. ತಿಂದಿದ್ದು ಕುಡಿದಿದ್ದು ಎಲ್ಲದರ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ತಾರೆಯರು ಇಂತಹ ಸಮಯದಲ್ಲಿ ಏನೂ ಗೊತ್ತಿಲ್ಲದಂತೆ ಸುಮ್ಮನಿರುವುದು ಯಾಕೆ? ಎಂದು ಟ್ರೋಲ್ ಮಾಡುತ್ತಿದ್ದಾರೆ.

ಆಮೀರ್ ಖಾನ್ ಸೋಶಿಯಲ್ ಮೀಡಿಯಾದಿಂದ ದೂರ ಉಳಿದಿದ್ದಾರೆ. ಶಾರುಖ್ ಖಾನ್ ತಮ್ಮ ಸಿನಿಮಾಗಳ ಪ್ರಚಾರದ ಸಮಯದಲ್ಲಿ ಟ್ವಿಟರ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುತ್ತಾರೆ, ಯಾವುದಾದರೂ ಜಾಹೀರಾತು ಬಗ್ಗೆ ಪ್ರಚಾರ ಮಾಡಲು ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ಇಂತಹ ಸಮಯದಲ್ಲಿ ಯಾಕೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಭಾರೀ ದೇಶಪ್ರೇಮದ ಸಿನಿಮಾಗಳಲ್ಲಿ ನಟಿಸುವ ಇಂತಹ ಕಲಾವಿದರು ಈಗ ಯಾಕೆ ಸುಮ್ಮನಿದ್ದಾರೆ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.
ಬೇರೆ ವಿಚಾರಗಳ ಬಗ್ಗೆ ಮಧ್ಯರಾತ್ರಿ ಕೂಡ ಅಮಿತಾಬ್ ಬಚ್ಚನ್ ಟ್ವೀಟ್ ಮಾಡುತ್ತಾರೆ. ಆದರೆ ಇಂತಹ ಸಮಯದಲ್ಲಿ ಸುಮ್ಮನಿರುವುದು ಯಾಕೆ? ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ವಿರಾಟ್ ಕೊಹ್ಲಿ, ಆಲಿಯಾ ಭಟ್, ರಣ್‌ವೀರ್ ಸಿಂಗ್, ಅಜಯ್ ದೇವಗನ್ ಸೇರಿದಂತೆ ಹಲವರು
'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ. ಹಿಂದಿ ನಟ ಅವಿನಾಶ್ ಮಿಶ್ರಾ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಇಂತಹ ಸಮಯದಲ್ಲಿ ಕೆಲ ತಾರೆಯರು ಮೌನವಾಗಿರುವುದು ಹೇಡಿತನ ಎಂದು ಬರೆದಿಕೊಂಡಿದ್ದಾರೆ.
ಕನ್ನಡ ನಟರಾದ ಯಶ್, ಉಪೇಂದ್ರ ಸೇರಿದಂತೆ ಕೆಲವರು 'ಆಪರೇಷನ್ ಸಿಂಧೂರ್' ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಜನಿಕಾಂತ್, ಸುದೀಪ್, ಕಮಲ್ ಹಾಸನ್, ಜ್ಯೂ. ಎನ್‌ಟಿಆರ್, ಧನುಷ್, ಅಲ್ಲು ಅರ್ಜುನ್, ಧ್ರುವ ಸರ್ಜಾ ಸೇರಿದಂತೆ ಖ್ಯಾತ ನಾಮರು ಟ್ವೀಟ್ ಮಾಡಿ ಭಾರತೀಯ ಸೇನೆ ನಡೆಯನ್ನು ಸ್ವಾಗತಿಸಿದ್ದಾರೆ.
ರಜನಿಕಾಂತ್, ಸುದೀಪ್, ಧ್ರುವ ಸರ್ಜಾ ಕೊಂಚ ಸ್ಟ್ರಾಂಗ್ ಆಗಿಯೇ 'ಆಪರೇಷನ್ ಸಿಂಧೂರ್' ಬಗ್ಗೆ ಪೋಸ್ಟ್ ಮಾಡಿದ್ದಾರೆ. ಯಾವುದೇ ಪೋಸ್ಟ್ ಮಾಡಿಲ್ಲ ಎಂದ ಮಾತ್ರಕ್ಕೆ ದೇಶಾಭಿಮಾನ ಇಲ್ಲ ಎನ್ನುವುದು ಸರಿಯಲ್ಲ, ಇಂತಹ ಸಮಯದಲ್ಲಿ ಪ್ರತಿಕ್ರಿಯಿಸುವುದು, ಬಿಡುವುದು ಅವರವರ ವೈಯಕ್ತಿಕ ಎಂದು ಕೆಲವರು ಹೇಳುತ್ತಿದ್ದಾರೆ. ಒಟ್ಟಾರೆ ಸೋಶಿಯಲ್ ಮೀಡಿಯಾ ತುಂಬಾ ಈಗ ಭಾರತ-ಪಾಕ್ ಯುದ್ಧದ ಬಗ್ಗೆಯೇ ಹೆಚ್ಚು ಚರ್ಚೆ ನಡೀತಿದೆ.


Click it and Unblock the Notifications











