ಅಪ್ಪ, ಅಮ್ಮನ ಜೊತೆ ಕೂತು ನೋಡಲು ಮುಜುಗರ ಆಗುವಂತಹ ದೃಶ್ಯಗಳಲ್ಲಿ ನಟಿಸಲ್ಲ ಎಂದಿದ್ದ ಯಶ್
ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಹಾಲಿವುಡ್ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದೆ. ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಮತ್ತೊಂದು ಸಣ್ಣ ಟೀಸರ್ ರಿಲೀಸ್ ಆಗಿದೆ. ಕಥೆಯ ಬಗ್ಗೆ ಯಾವುದೇ ಸುಳಿವು ಕೊಡದೇ ಚಿತ್ರದಲ್ಲಿ ರಾಯ(ಯಶ್) ಎಂಬ ಪಾತ್ರವನ್ನು ಪರಿಚಯಿಸುವ ಸಣ್ಣ ಝಲಕ್ ಇದು.
'ರಾಯ' ಎನ್ನುವ ಖಡಕ್ ಪಾತ್ರದಲ್ಲಿ ಯಶ್ ನಟಿಸುತ್ತಿದ್ದಾರೆ. ಪ್ಲೇ ಬಾಯ್ ಆಗಿ ಎದುರಾಳಿಗಳಿಗೆ ದುಃಸ್ವಪ್ನವಾಗಿ ಕಾಡುವ ಪಾತ್ರ ಇದು ಅಂತ ಟೀಸರ್ ನೋಡಿದರೆ ಅರ್ಥವಾಗುತ್ತಿದೆ. ಹಾಲಿವುಡ್ ಸಿನಿಮಾಗಳನ್ನು ನೆನಪಿಸುವಂತೆ 'ಟಾಕ್ಸಿಕ್' ಸಿನಿಮಾ ಮೇಕಿಂಗ್ ನೋಡಬಹುದು. 'KGF' ಚಿತ್ರದ ರಾಕಿ ಭಾಯ್‌ಗಿಂತ ರಾಯ ಸಿಕ್ಕಾಪಟ್ಟ ಟೆರರ್ ಎನ್ನುವುದು ಟೀಸರ್ ನೋಡಿದರೆ ಗೊತ್ತಾಗ್ತಿದೆ. ಇನ್ನು ಟೀಸರ್‌ನಲ್ಲಿರುವ ಹಸಿಬಿಸಿ ದೃಶ್ಯದ ಬಗ್ಗೆ ಭಾರೀ ಚರ್ಚೆ ನಡೀತಿದೆ.

ಸ್ಮಶಾನದ ಎದುರು ಯಶ್ ಯುವತಿ ಜೊತೆ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವುದನ್ನು ನೋಡಬಹುದು. ರಾಯನ 'ಶಕ್ತಿ' ಪ್ರದರ್ಶನಕ್ಕೆ ಇಂತಹ ದೃಶ್ಯ ತೋರಿಸಿರುವುದು ಬಹಳ ವಿಚಿತ್ರವಾಗಿದೆ. ಕಳೆದ ವರ್ಷ ಯಶ್ ಹುಟ್ಟುಹಬ್ಬಕ್ಕೆ ಬಂದಿದ್ದ ಟೀಸರ್‌ನಲ್ಲಿ ಕೂಡ ಇಂತಹ ದೃಶ್ಯಗಳಿದ್ದವು. ಪಬ್‌ನಲ್ಲಿ ಹಸಿಬಿಸಿ ದೃಶ್ಯಗಳನ್ನು ತೋರಿಸಲಾಗಿತ್ತು. 'ಟಾಕ್ಸಿಕ್' ಚಿತ್ರದ ಟೈಟಲ್‌ಗೆ "ಎ ಫೇರಿ ಟೇಲ್ ಆಫ್ ಗ್ರೋನ್ ಅಪ್ಸ್" ಎನ್ನುವ ಅಡಿಬರಹ ಇದೆ. ಅದಕ್ಕೆ ತಕ್ಕಂತೆ "ಇದು ದೊಡ್ಡವರ ಕತೆ" ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಸಿನಿಮಾದಿಂದ ಸಿನಿಮಾಗೆ ಯಶ್ ಬೆಳೆಯುತ್ತಾ ಬಂದಿದ್ದಾರೆ. ಕನ್ನಡ ಸಿನಿಮಾಗಳನ್ನು ದೊಡ್ಡಮಟ್ಟಕ್ಕೆ ತೆಗೆದುಕೊಂಡು ಹೋಗುವುದಾಗಿ ಹೇಳುತ್ತಾ ಬರ್ತಿದ್ದಾರೆ. ಅದಕ್ಕೆ ತಕ್ಕಂತೆ 'KGF' ಸರಣಿ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆದ್ದಿದ್ದರು. 'ಟಾಕ್ಸಿಕ್' ಚಿತ್ರದಲ್ಲಿ ಇದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಮುಂದಾಗಿದ್ದಾರೆ. ಬಣ್ಣದಲೋಕಕ್ಕೆ ಬಂದ ಆರಂಭದಲ್ಲಿ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸೋಕೆ ಯಶ್ ಬಹಳ ಕಷ್ಟಪಡುತ್ತಿದ್ದರು. ಈ ವಿಚಾರವನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿದ್ದರು. ಸದ್ಯ 'ಟಾಕ್ಸಿಕ್' ಚಿತ್ರದ ಟೀಸರ್‌ನಲ್ಲಿರೋ ಹಸಿಬಿಸಿ ದೃಶ್ಯ ನೋಡಿದವರು ಹುಬ್ಬೇರಿಸುತ್ತಿದ್ದಾರೆ.
'ಟಾಕ್ಸಿಕ್' ಟೀಸರ್ ನೋಡಿದ ಬಳಿಕ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸೋ ಬಗ್ಗೆ ಯಶ್ ಆಡಿದ್ದ ಮಾತುಗಳನ್ನು ಕೆಲವರು ನೆನಪಿಸಿಕೊಳ್ಳುತ್ತಿದ್ದಾರೆ. 'ನಂದ ಗೋಕುಲ' ಧಾರಾವಾಹಿಯಲ್ಲಿ ರೊಮ್ಯಾಂಟಿಕ್ ದೃಶ್ಯದಲ್ಲಿ ನಟಿಸೋಕೆ ಯಶ್ ನರ್ವಸ್ ಆಗಿದ್ದೆ ಎಂದು ಶೃತಿ ನಾಯ್ಡು ನೆನಪಿಸಿಕೊಂಡಿದ್ದರು. ನೀನು ಈಗ ರಾಧಿಕಾ, ಅಮೂಲ್ಯ ಎಲ್ಲರ ಜೊತೆ ರೊಮ್ಯಾಂಟಿಕ್ ದೃಶ್ಯದಲ್ಲಿ ನಟಿಸಿದ್ದೀಯಾ. ಅದಕ್ಕೆ ನನಗೆ ಕ್ರೆಡಿಟ್ ಕೊಡಬೇಕು ಎಂದು ತಮಾಷೆ ಮಾಡಿದ್ದರು.
ಬಳಿಕ ಮಾತನಾಡಿದ್ದ ಯಶ್ "ನನಗೆ ಆಶ್ವರ್ಯ ಆಗುತ್ತೆ ನಾನು ರೊಮ್ಯಾಂಟಿಕ್ ದೃಶ್ಯಗಳಲ್ಲಿ ಚೆನ್ನಾಗಿ ನಟಿಸ್ತೀನಿ ಅಂತ ಹೇಳೋದು ಕೇಳಿ, ಆದರೆ ಆಗ ಅದೇ ನನಗೆ ಬಹಲ ಕಷ್ಟವಾಗಿತ್ತು. ಇವತ್ತಿಗೂ ಅಪ್ಪ, ಅಮ್ಮನ ಜೊತೆ ಕೂತು ನೋಡುವಾಗ ಮುಜುಗರ ಆಗುವಂತಹ ದೃಶ್ಯಗಳಲ್ಲಿ ನಟಿಸಲ್ಲ. ನಿನಗೆ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸೋಕೆ ಬರಲ್ಲ ಅಂತ ನಮ್ಮ ತಾಯಿ ಕೂಡ ರೇಗಿಸುತ್ತಿದ್ರು. ಹುಡುಗಿಯನ್ನು ಪ್ರೀತಿಯಿಂದ ನೋಡಲ್ಲ, ಗುರಾಯಿಸ್ತೀಯಾ ಅನ್ನುತ್ತಿದ್ರು" ಎಂದು ನೆನಪಿಸಿಕೊಂಡಿದ್ದರು. ಆ ವೀಡಿಯೋ ಈಗ ವೈರಲ್ ಆಗ್ತಿದೆ.
ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸೋದನ್ನು ಕಲಿಯಲು ಯಶ್ ಪಾರ್ಕ್‌ಗಳಿಗೆ ಹೋಗಿ ಜೋಡಿಗಳನ್ನು ನೋಡುತ್ತಿದ್ದರಂತೆ. ಆ ವಿಚಾರವನ್ನು ತಮಾಷೆಯಾಗಿ ಹೇಳಿಕೊಂಡಿದ್ದರು. "ಹೆಲ್ಮೆಟ್ ಹಾಕಿಕೊಂಡು ಪಾರ್ಕ್‌ಗಳಿಗೆ ಹೋಗಿ ಕೂರುತ್ತಿದ್ದೆ. ಹುಡುಗ ಹುಡುಗಿ ಹೇಗೆ ಕೂರುತ್ತಾರೆ, ಹೇಗೆ ಮಾತನಾಡುತ್ತಾರೆ ಅಂತ ಗಮನಿಸುತ್ತಿದ್ದೆ. ನಮ್ಮ ಅಮ್ಮ ಫಸ್ಟ್ ಹೀರೊಯಿನ್ ನನಗೆ. ಅವರೊಟ್ಟಿಗೆ ಡ್ಯಾನ್ಸ್ ಮಾಡುವುದನ್ನು ಅಭ್ಯಾಸ ಮಾಡುತ್ತಿದ್ದೆ" ಎಂದು ತಿಳಿಸಿದ್ದರು.


Click it and Unblock the Notifications











