ಕೊನೆಗೂ "ಸುದೀಪ್ ಸರ್" ಎಂದು ಸಂಭೋಧಿಸಿದ ಯಶ್; ಬಗೆ ಹರಿಯಿತು 7 ವರ್ಷಗಳ ಹಿಂದಿನ ವಿವಾದ!
ಚಿತ್ರರಂಗದಲ್ಲಿ ವಿವಾದಗಳಿಗೇನು ಕೊರತೆಯಿಲ್ಲ. ಕೆಲವೊಮ್ಮೆ ಕ್ಷುಲ್ಲಕ ಕಾರಣಗಳಿಗೆ ಭಾರೀ ಕಿರಿಕ್ ನಡೆದುಬಿಡುತ್ತದೆ. ಇದು ಸ್ಟಾರ್ ವಾರ್, ಫ್ಯಾನ್ಸ್ ವಾರ್‌ಗೆ ತುಪ್ಪ ಸುರಿದಂತೆ ಆಗುತ್ತದೆ. 7 ವರ್ಷಗಳ ಹಿಂದೆ ನಟ ಸುದೀಪ್ ಹಾಗೂ ನಟ ಯಶ್ ನಡುವೆ ಇಂತದ್ದೇ ವಿವಾದ ಭುಗಿಲೆದ್ದಿತ್ತು. ಸುದೀಪ್ ಅವರಿಗೆ 'ಸರ್' ಎಂದು ಯಶ್ ಗೌರವ ಕೊಟ್ಟಿಲ್ಲ ಎಂದು ಅಭಿಮಾನಿಗಳು ಬೇಸರಗೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ನಡೆದು ವಿವಾದ ಸೃಷ್ಟಿಯಾಗಿತ್ತು. ಬಳಿಕ ಆ ವಿಚಾರ ತಣ್ಣಗಾಗಿದ್ದು ಗೊತ್ತೇಯಿದೆ.
ಸುದೀಪ್ ಹಾಗೂ ಯಶ್ ನಡುವೆ ಆತ್ಮೀಯ ಒಡನಾಟವಿದೆ. ಅದರಲ್ಲಿ ದೂಸ್ರಾ ಮಾತಿಲ್ಲ. ಆದರೆ ಅಂದು ಯಶ್ ವೀಡಿಯೋ ಮಾಡಿ ಮಾತನಾಡುವ ಭರದಲ್ಲಿ ಸುದೀಪ್ ಸರ್ ಎಂದು ಕರೆದಿರಲಿಲ್ಲ. ಅದಕ್ಕೆ ಕಿಚ್ಚ ಕೂಡ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಸುದೀಪಿಯನ್ಸ್ ಸುಮ್ಮನಿರಲಿಲ್ಲ. ಬೇಸರದಿಂದ ಯಶ್ ವಿರುದ್ಧ ಆಕ್ರೋಶಗೊಂಡಿದ್ದರು. ಹಾಗಾಗಿ ಇದು ಫ್ಯಾನ್ಸ್ ವಾರ್ ಆಗಿ ಬದಲಾಗಿತ್ತು.

ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಟಾಕ್ಸಿಕ್' ಟೀಸರ್ ನೋಡಿ ಸುದೀಪ್ ಮೆಚ್ಚಿಕೊಂಡಿದ್ದಾರೆ. ಯಶ್ ಪ್ರಯತ್ನಕ್ಕೆ ಅಭಿನಂದನೆ ತಿಳಿಸಿ ಟ್ವೀಟ್ ಮಾಡಿದ್ದರು. ಅದಕ್ಕೆ ಇದೀಗ ಯಶ್ ರಿಪ್ಲೇ ಮಾಡಿದ್ದಾರೆ. "ಯಶ್‌ಗೆ ಶುಭಾಶಯ. ಅಲೆಗಳ ವಿರುದ್ಧ ಸಾಗಲು ಸಮಯ ಬೇಕಾಗುತ್ತದೆ. ಈ ಹೊಸ ಹೆಜ್ಜೆ ನಿಮ್ಮನ್ನು ಅದೃಷ್ಟದ ಬಳಿ ಕರೆದೊಯ್ಯಲಿ. ನೀವು ಅದರ ಮೇಲೆ ದೃಷ್ಟಿ ನೆಟ್ಟಿದ್ದೀರಿ. ಶುಭವಾಗಲಿ" ಸುದೀಪ್ ಟ್ವೀಟ್ ಮಾಡಿದ್ದರು.
ಸುದೀಪ್ ಟ್ವೀಟ್‌ಗೆ ಯಶ್ ರಿಪ್ಲೇ ಮಾಡಿ "ಧನ್ಯವಾದಗಳು, ಸರ್.. ನಿಮ್ಮನ್ನು ಸೇರಿ ನಾನು ನಮ್ಮ ಸೀನಿಯರ್ಸ್ ಇಂದ ಕಲಿತ ಒಂದು ವಿಷಯ ಅಂದರೆ ಒಳ್ಳೆ ಸಿನಿಮಾ ಮಾಡುವುದು. ಅದಕ್ಕಾಗಿ ಪ್ರಾಮಾಣಿಕವಾಗಿ ಮತ್ತು ಧೈರ್ಯದಿಂದ ಶ್ರಮಿಸುವುದು ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಅಂದು ಯಶ್ ಮಾಡಿದ್ದ ವೀಡಿಯೋವನ್ನು ಟ್ಯಾಗ್ ಮಾಡಿ ಟ್ರೋಲ್ ಮಾಡ್ತಿದ್ದಾರೆ. "ಸುದೀಪ್ ಸರ್" ಎಂದು ಕೊನೆಗೂ ಯಶ್ ಕರೆದುಬಿಟ್ರು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಏನದು ವಿವಾದ ಎಂದು ಕೆಲವರು ಮೆಲುಕು ಹಾಕುತ್ತಿದ್ದಾರೆ.
2018ರಲ್ಲಿ ಅಂದಿನ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಫಿಟ್ನೆಸ್ ಕುರಿತು ಅಭಿಯಾನ ಆರಂಭಿಸಿದ್ದರು. ತಾವು ಫಿಟ್ ಆಗಿ ಇರಲು ಮಾಡುವ ವರ್ಕ್ಔಟ್ ವೀಡಿಯೋ ಶೇರ್ ಮಾಡಿ ಬಳಿಕ ಅದೇ ರೀತಿ ತಮ್ಮ ಆಪ್ತರಿಗೆ 'ಹಮ್ ಫಿಟ್ ತೋ ಇಂಡಿಯಾ ಫಿಟ್' ಚಾಲೆಂಜ್ ಕೊಟ್ಟಿದ್ದರು. ಸಾಕಷ್ಟು ಜನ ಸೆಲೆಬ್ರೆಟಿಗಳು ಈ ಅಭಿಯಾನದಲ್ಲಿ ಭಾಗವಹಿಸಿದ್ದರು. ತಾವು ಚಾಲೆಂಜ್ ಸ್ವೀಕರಿಸಿ ಬಳಿಕ ಬೇರೆಯವರಿಗೆ ದಾಟಿಸಿದ್ದರು. ಇದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಕ್ರಿಕೆಟರ್ ವಿನಯ್ ಕುಮಾರ್ ಹಾಕಿದ್ದ ಚಾಲೆಂಜ್ ಅನ್ನು ನಟ ಸುದೀಪ್ ಸ್ವೀಕರಿಸಿ ಗೆದ್ದಿದ್ದರು. ಬಳಿಕ ರಿತೇಶ್ ದೇಶ್ಮುಖ್ , ಸೋಹಿಲ್ ಖಾನ್, ಪ್ರಿಯಾ ಸುದೀಪ್, ಯಶ್ ಹಾಗೂ ಶಿವಣ್ಣನಿಗೆ ಸುದೀಪ್ ಇದೇ ಚಾಲೆಂಜ್ ಕೊಟ್ಟಿದ್ದರು. ಚಾಲೆಂಜ್ ಸ್ವೀಕರಿಸಿ ಯಶ್ ಸಣ್ಣ ಟ್ವಿಸ್ಟ್ ಕೊಟ್ಟಿದ್ದರು. ತಾವು ವರ್ಕೌಟ್ ಮಾಡದೇ ತಮ್ಮ ಬಾಲ್ಯದ ಸ್ನೇಹಿತನಿಂದ ಮಾಡಿಸಿದ್ದರು. ಈ ಬಗ್ಗೆ ವೀಡಿಯೋ ಮಾಡಿ ಮಾತನಾಡಿದ್ದರು.
"ಹಾಯ್ ಸುದೀಪ್, ನೀವು ನನಗೆ ಒಂದು ಚಾಲೆಂಜ್ ಕೊಟ್ಟಿದ್ದೀರಾ.. ನಾವು ಕಲಾವಿದರು ಯಾವಾಗಲೂ ವರ್ಕ್ಔಟ್ ಮಾಡ್ತೀವಿ. ಆದರೆ ನಮ್ಮ ಸ್ನೇಹಿತ ಚೇತನ್ ಅಂತ ಇದ್ದಾನೆ. ಅವನು ಲೈಫ್ ಅಲ್ಲೇ ಫಿಟ್ ಆಗಿ ಇರೋಕೆ ಸಾಧ್ಯ ಇಲ್ಲ. ಅವನ ಕೈಯಲ್ಲಿ ಈ ಟಾಸ್ಕ್ ಮಾಡಿಸ್ತೀನಿ" ಎಂದು ಯಶ್ ಹೇಳಿದ್ದರು. ಎಲ್ಲಾ ಸರಿ ಆದರೆ ಯಶ್ ತಮಗಿಂತ ಚಿತ್ರರಂಗದಲ್ಲಿ ಹಿರಿಯರಾಗಿದ್ದ ಸುದೀಪ್ ಅವರಿಗೆ ಗೌರವ ಕೊಡಲಿಲ್ಲ, "ಹಾಯ್ ಸುದೀಪ್" ಎಂದು ಕರೆದಿದ್ದಾರೆ, 'ಸರ್' ಎಂದು ಕರೆಯಬೇಕಿತ್ತು, ನಿನ್ನೆ ಮೊನ್ನೆ ಬಂದ ನಟ ಯಶ್ ಹೀಗೆ ಮಾಡಬಹುದಾ? ಇದಕ್ಕೆ ಕ್ಷಮೆ ಕೇಳಲೇಬೇಕು ಎಂದು ಸುದೀಪ್ ಅಭಿಮಾನಿಗಳು ಪಟ್ಟು ಹಿಡಿದಿದ್ದರು. ಸುದೀಪ್ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ.
ಈ ಬಗ್ಗೆ ಇಬ್ಬರೂ ಮೌನ ವಹಿಸಿದ್ದು ಫ್ಯಾನ್ಸ್ ವಾರ್‌ಗೆ ಮತ್ತಷ್ಟು ಇಂಬು ಕೊಟ್ಟಂತೆ ಆಗಿತ್ತು. ಬಳಿಕ ಯಶ್ ಇದಕ್ಕೆ ಸ್ಪಷ್ಟನೆ ಕೊಟ್ಟು "ಸಾಮಾಜಿಕ ಜಾಲತಾಣದಲ್ಲಿ ಈಗ ನಡೆಯುತ್ತಿರೋ ಬೆಳವಣಿಗೆ ಒಳ್ಳೆಯದಲ್ಲ. ಘನತೆಯಿಂದ ವರ್ತಿಸಿ, ಇದನ್ನ ದೊಡ್ಡದು ಮಾಡ್ಬೇಡಿ. ನಾನು ಸಾರ್ ಅಂತ ಕರೆದರೆ ಮಾತ್ರ ಅವರಿಗೆ ಗೌರವ ಕೊಟ್ಟ ಹಾಗಲ್ಲ. ಅಥವಾ ನಾನು ಸಾರ್ ಅಂತ ಕರೆಯದೇ ಇದ್ರೂ ಅವರ ಮೇಲಿನ ಗೌರವ ಕಮ್ಮಿಯಾಗಲ್ಲ. ದಯವಿಟ್ಟು ಇದನ್ನ ಇಲ್ಲಿಗೆ ಬಿಡಿ" ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು.


Click it and Unblock the Notifications











