ಜೈಲಿನಲ್ಲಿ ಪ್ರಾಣಾಯಾಮ, ಶವಾಸನ ; ಪರಪ್ಪನ ಅಗ್ರಹಾರದಲ್ಲಿ ಯೋಗ ಮಾಡಿದ ದರ್ಶನ್
ಹಣದ ಅಮಲು .. ಅಳತೆಗೂ ಮೀರಿದ ಜನಪ್ರಿಯತೆ .. ಸುತ್ತಲು ಮೊಳಗುವ ಜೈಕಾರದ ನಶೆ .. ನಾನೇನೂ ಮಾಡಿದರು ಬಚಾವ್ ಆಗ್ಬಿಡ್ತೀನಿ ಎನ್ನುವ ಅಹಂಕಾರ.. ಇವೆಲ್ಲವನ್ನೂ ನೆತ್ತಿಗೇರಿಸಿಕೊಂಡರೆ ಏನಾಗುತ್ತೆ ಅಂತ ಯಾರಾದರೂ ಪ್ರಶ್ನೆ ಕೇಳಿದರೆ ಅದಕ್ಕೆ ಉತ್ತರದಂತೆ ಕಣ್ಮುಂದೆ ನಿಲ್ಲುವುದು ದರ್ಶನ್ ಎಂಬ ಆರಡಿ ನಾಯಕನ ಬದುಕು.
ಹೌದು, ಹೆಚ್ಚೇನು ಇಲ್ಲ. ಮೂರು ನಾಲ್ಕು ವರ್ಷದ ಹಿಂದೆ ಚಿತ್ರರಂಗದಲ್ಲಿ ರಾಜನಂತೆ ಮೆರೆದವರು ದರ್ಶನ್. ಹೋದಲ್ಲಿ.. ಬಂದಲ್ಲಿ.. ಜನ ಸಾಗರ. ಅಭಿಮಾನದ ಜಾತ್ರೆ.. ಆನೆ ನಡೆದಿದ್ದೇ ದಾರಿ ಎಂಬಂತೆ ದರ್ಶನ್ ಇದ್ದರು. ಇಡೀ ಕನ್ನಡ ಚಿತ್ರರಂಗ ಒಂದು ಕಡೆಯಾದರೆ ಮತ್ತೊಂದು ಕಡೆ ತಮ್ಮದೇ ಲೋಕದಲ್ಲಿ ತೇಲುತ್ತಿದ್ದ ದರ್ಶನ್ ಒಂದಾದ ಮೇಲೊಂದು ಚಿತ್ರಗಳನ್ನು ಮಾಡುತ್ತಾ ಬ್ಯುಸಿಯಾಗಿದ್ದರು. ಇದ್ದರೆ ನೆಮ್ಮದಿಯಾಗ್ ಇರಬೇಕು ಎಂದು ಇದ್ದರು.

ಆದರೆ.. ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಆದರೆ ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಈ ಮಾತುಗಳಿಗೆ ಜ್ವಲಂತ ಉದಾಹರಣೆಯಂತೆ ಇರುವ ದರ್ಶನ್ ಮತ್ತೊಮ್ಮೆ ಪರಪ್ಪನ ಅಗ್ರಹಾರದ ಪಾಲಾಗಿ ಇಂದಿಗೆ 311 ದಿನಗಳಾಗಿವೆ.
ಈ ವನವಾಸ ಸೆರೆವಾಸ ಅದ್ಯಾವ ಕಾಲಕ್ಕೆ ಮುಕ್ತಾಯವಾಗುತ್ತೆ ಎನ್ನುವುದಕ್ಕೆ ಉತ್ತರ ಕಾಲವೇ ನೀಡಲಿದೆಯಾದರೂ ಸದ್ಯ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಯೋಗ ಮಾಡಿದ್ದಾರೆ. ಸದ್ಯ ಇವರ ಯೋಗಾಯೋಗದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು, ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ, ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಇಂದು (ಜೂನ್21) ಯೋಗಾಭ್ಯಾಸದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಾಧ್ಯಮಗಳ ವರದಿಯ ಪ್ರಕಾರ ಆರಂಭದಲ್ಲಿ ದರ್ಶನ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಿಂದೇಟು ಹಾಕಿದ್ದರು. ಬೆನ್ನು ನೋವಿನ ಕಾರಣವನ್ನು ಹೇಳಿದ್ದರು.
ಆದರೆ. ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿ ಅಲೋಕ್ ಕುಮಾರ್ ದರ್ಶನ್ ಮನವೊಲಿಸಿದರು. ಬೆನ್ನು ನೋವಿಗೆ ಯೋಗವೇ ಅತ್ಯುತ್ತಮ ಮದ್ದು ಎಂದು ಹೇಳಿದರು. ಅಲೋಕ್ ಕುಮಾರ್ ಅವರಾಡಿದ ಮಾತುಗಳಿಗೆ ಕನ್ವಿನ್ಸ್ ಆದ ದರ್ಶನ್ ಆ ನಂತರ ಯೋಗ ಮಾಡಲು ಮುಂದಾದರು. ಆದರೆ. ಸಾಮೂಹಿಕ ಕಾರ್ಯಕ್ರಮಕ್ಕೆ ದರ್ಶನ್ ಬರಲಿಲ್ಲ. ಬದಲಿಗೆ ತಮ್ಮ ಬ್ಯಾರಕ್‌ನ ಕಾರಿಡಾರ್‌ನಲ್ಲಿಯೇ ಸಹ-ಆರೋಪಿಗಳೊಂದಿಗೆ ಯೋಗಾಭ್ಯಾಸ ನಡೆಸಿದರು.

ಈ ಯೋಗ ಶಿಬಿರ ಸುಮಾರು ಒಂದು ಗಂಟೆ ನಡೆದಿದ್ದು, ಪ್ರಾಣಾಯಾಮ, ದೀರ್ಘದಂಡ ನಮಸ್ಕಾರ ಹಾಗೂ ಶವಾಸನ ಭಂಗಿಗಳನ್ನು ದರ್ಶನ್ ಮಾಡಿದರು ಎಂದು ಮಾಧ್ಯಮಗಳ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ನೋ ಡೌಟ್ .. ಪರಪ್ಪನ ಅಗ್ರಹಾರದ ಪಾಲಾಗಿರುವ ದರ್ಶನ್ ದಣಿದಿದ್ದಾರೆ. ಜೈಲಿನ ಚಿತ್ರ ಹಿಂಸೆ ಅನುಭವಿಸಲಾಗದೇ ಹೈರಾಣಾಗಿದ್ದಾರೆ. ಮನೆಯ ತುಂಬಾ ನಾಯಿಗಳ ಜೊತೆ ದಿಕ್ಕು ತಪ್ಪಿಸುವ ನರಿಗಳನ್ನೂ ಕೂಡ ಸಾಕಿ ಕಳೆದ ವರ್ಷ ಅಕ್ಷರಶಃ ನರಕ ಯಾತನೆಯನ್ನು ಅನುಭವಿಸುತ್ತಿದ್ದಾರೆ. ಇದಕ್ಕೆ ವೈರಲ್ ಆದ ಫೋಟೊದಲ್ಲಿ ಕಾಣಿಸುವ ಇವರ ನಿಸ್ತೇಜವಾದ ಮುಖ ಮತ್ತು ಸೊರಗಿದ ದೇಹವೇ ಕೈಗನ್ನಡಿ.
ಇನ್ನು ಕೇವಲ ದರ್ಶನ್ ಮಾತ್ರವಲ್ಲ, ದರ್ಶನ್ ಅವರನ್ನು ಜೈಲಿನವರೆಗೆ ಕರೆದೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ ಪವಿತ್ರಾ ಗೌಡ ಕೂಡ ಯೋಗ ಮಾಡಿದ್ದಾರೆ. ಜೈಲಿನ ಇತರ ಮಹಿಳಾ ಕೈದಿಗಳ ಜೊತೆ ಸಾಲಿನಲ್ಲಿ ಕುಳಿತು ಪವಿತ್ರಾ ಗೌಡ ಯೋಗ ಮತ್ತು ಧ್ಯಾನ ಮಾಡಿದ್ದು, ಸದ್ಯ ಪರಪ್ಪನ ಅಗ್ರಹಾರದಿಂದ ತೂರಿಕೊಂಡು ಬಂದಿರುವ ಈ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಕನ್ನಡದ ಮಾಸ್ ಹೀರೊನ ಈ ದಯನೀಯ ಸ್ಥಿತಿ ಕಂಡು ಹಲವರು ಮರಗುತ್ತಿದ್ದಾರೆ.


Click it and Unblock the Notifications