ಪುಟಾಣಿಗಳ ಅಚ್ಚು ಮೆಚ್ಚಿನ ಸ್ಟಾರ್ ; ತಂದೆಯೂ ಸಾಧಿಸದೇ ಇದ್ದಿದ್ದನ್ನ ಸಾಧಿಸಿ ತೋರಿಸಿದ್ದರು ಅಪ್ಪು..!
ಪುನೀತ್ ಅಂದ್ರೆ ಇವತ್ತಿನ ಚಿಣ್ಣರಿಗೆ ಎಷ್ಟು ಇಷ್ಟಾನೋ ಆವತ್ತಿನ ಮಕ್ಕಳ ಪಾಲಿಗೂ ಅವರು ಫೆವರೀಟ್ ಸ್ಟಾರ್. ಯಾಕಂದ್ರೆ ಅಪ್ಪು ಬಾಲನಟನಾಗಿ ಹತ್ತಕ್ಕೂ ಅಧಿಕ ಸಿನಿಮಾ ಮಾಡಿದವರು.
ಆಗಿನ್ನೂ ಪುನೀತ್ ಅಂತ ಹೆಸರು ಬದಲಿಸರಲಿಲ್ಲ. ಮಾ.ಲೋಹಿತ್ ಅಂತಲೇ ಆಗ ಫೇಮಸ್. 1982ರಲ್ಲಿ ತೆರೆಗೆ ಬಂದ ಚಲಿಸುವ ಮೋಡಗಳು ಸಿನಿಮಾದ ಕಾಣದಂತೆ ಮಾಯವಾದನೋ ಎಷ್ಟು ಫೇಮಸ್ ಆಗಿತ್ತಂದ್ರೆ, ಅಣ್ಣಾವ್ರನ್ನ ನೋಡೋಕೆ ಬರ್ತಿದ್ದ ಅಭಿಮಾನಿಗಳು ಲೋಹಿತ್ ಬಳಿಯೂ ಆಟೋಗ್ರಾಫ್ ಪಡೀತಿದ್ರಂತೆ.

ಡಾ.ರಾಜ್ ಮಗನಾಗಿ, ದೊಡ್ಮನೆ ಕಿರಿಮಗನಾಗಿ ಜನಿಸಿದ ಅಪ್ಪು ನೋಡ್ ನೋಡ್ತಾ ಅಪ್ಪನ ಸಿನಿಮಾಗಳಲ್ಲಿ ನಟಿಸ್ತಾ ಫೇಮಸ್ ಆಗಿಬಿಟಿಟ್ದಿದ್ದರು. ಭಕ್ತ ಪ್ರಲ್ಹಾದ ಸಿನಿಮಾದಲ್ಲಿ ಹಾವುಗಳನ್ನ ಕೊರಳಲ್ಲಿ ಹಾಕಿಕೊಂಡು ವಿಷ್ಣುವನ್ನ ಭಜಿಸೋ ಲೋಹಿತ್ ನ ಕಂಡು ಆಗಿನ ಮಕ್ಕಳು ಬೆಕ್ಕಸ ಬೆರಗಾಗ್ತಿದ್ರು,.
ಆ ವಯಸ್ಸಿಗೇನೆ ಹಾಡು , ಕುಣಿತ, ಫೈಟೂ ಮಾಡ್ತಿದ್ದು ಚೋಟುದ್ದದ ಲೋಹಿತ್, ಎಲ್ಲಾ ಪುಟಾಣಿಗಳ ಪಾಲಿಗೂ ನೆಚ್ಚಿನ ನಟನಾಗಿದ್ದರು. ಅಣ್ಣಾವ್ರ ಮಗ ಅವರಂತೆಯೇ ಎಷ್ಟು ಚೂಟಿ, ಈ ವಯಸ್ಸಿಗೇನೇ ಎಷ್ಟು ಪ್ರತಿಭಾನ್ವಿತ ಅಂತ ಜನ ಮೆಚ್ಚುಗೆಯ ಮಾತುಗಳನ್ನಾಡ್ತಿದ್ರು. ಮಕ್ಕಳು ತಾವೂ ಲೋಹಿತ್ ನಂತೆ ಕುಣಿದು, ಹಾಡುವ ಕನಸು ಕಾಣ್ತಿದ್ರು.

ಬಾಲನಟನಾಗಿ ಹಲವು ಉತ್ತಮ ಚಿತ್ರಗಳನ್ನ ಮಾಡಿದ ಪುನೀತ್ ಬೆಟ್ಟದ ಹೂ ಸಿನಿಮಾ ನಟನೆಗೆ ರಾಷ್ಟ್ರಪ್ರಶಸ್ತಿಯನ್ನೂ ಪಡೆದುಬಿಟ್ರು. ಆಗಂತೂ ಎಲ್ಲರೂ ಲೋಹಿತ್ ನ ಕೊಂಡಾಡುವವರೇ. ಅಷ್ಟು ವರ್ಷಗಳಲ್ಲಿ ಡಾ.ರಾಜ್ ಕುಮಾರ್ ಗೂ ರಾಷ್ಟ್ರಪ್ರಶಸ್ತಿ ಬಂದಿರಲಿಲ್ಲ. ತಂದೆಯೂ ಸಾಧಿಸದೇ ಇದ್ದಿದ್ದನ್ನ ಈ ಬಾಲನಟನಾಗಿ ಸಾಧಿಸಿ ತೋರಿಸಿದ್ದರು ಅಪ್ಪು.
ಇನ್ನೂ ಅಂದು ಬಾಲನಟನಾಗಿ ಅಂದಿನ ಮಕ್ಕಳ ಪಾಲಿಗೆ ಪ್ರಿಯವಾಗಿದ್ದವರು ಅಚ್ಚರಿ ಅನ್ನುವಂತೆ ನಾಯಕನಾದ ಮೇಲೂ ಮಕ್ಕಳ ಪಾಲಿನ ಮೆಚ್ಚಿನ ತಾರೆಯಾದ್ರು. ಅಂದಿನ ಮಕ್ಕಳ ಪಾಲಿಗೆ ಲೋಹಿತ್ ಎಷ್ಟು ಇಷ್ಟಾನೋ ಇಂದಿನ ಮಕ್ಕಳ ಪಾಲಿಗೆ ಪುನೀತ್ ಕೂಡ ಅಷ್ಟೇ ಇಷ್ಟ.

ಇದಕ್ಕೆ ಕೈಗನ್ನಡಿ ಎಂಬಂತೆ ಅಪ್ಪು ಲೀಲಾಜಾಲವಾಗಿ ತೆರೆ ಮೇಲೆ ಡ್ಯಾನ್ಸಿಂಗ್ ಸ್ಟೆಪ್ ಹಾಕ್ತಿದ್ರೆ ಮಕ್ಕಳು ಹುಚ್ಚೆದ್ದು ಕುಣೀತಾ ಇದ್ರು. ತಾವೂ ಕೂಡ. ಪುನೀತ್ ಸ್ಟೈಲ್ ನಲ್ಲಿ ಮುದ್ದು ಮುದ್ದು ಹೆಜ್ಜೆ ಇಟ್ಟು ಕುಣೀತಾ ಇದ್ದ ಪುಟಾಣಿಗಳ ನೂರಾರು ವಿಡಿಯೋಗಳು ಹಿಂದೆ ವೈರಲ್ ಕೂಡ ಆಗಿವೆ
ಇನ್ನೂ ಅಪ್ಪು ಎಲ್ಲೇ ಹೋದ್ರೂ ಪುಟಾಣಿ ಫ್ಯಾನ್ಸ್ ಗಳ ದಂಡು ಅವರ ಹಿಂದೆ ಇರ್ತಾನೇ ಇತ್ತು. ಅಪ್ಪು ಜೊತೆಗೆ ಫೊಟೋ ತೆಗೆಸಿಕೊಳ್ಳೋದಕ್ಕೆ ದೊಡ್ಡ ಚಿಣ್ಣರ ಪಡೆಯೇ ಅವರ ಹಿಂದೆ ಬೀಳ್ತಾ ಇತ್ತು. ಪುನೀತ್ ರಾಜ್ ಕುಮಾರ್ , ಮನೆಯ ಬಳಿಯೂ ಹಲವರು ತಮ್ಮ ಮಕ್ಕಳನ್ನ ಕರೆ ತರೋರು. ಅಪ್ಪುನ ತೋರಿಸು ಅಂತ ಹಟ ಮಾಡೋ ಮಕ್ಕಳನ್ನ ಹೊತ್ತು ಬರ್ತಿದ್ದ ಪಾಲಕರಿಗೆ ಪ್ರೀತಿಯಿಂದಲೇ ಎದುರಾಗ್ತಿದ್ರು ಪುನೀತ್..

ಹಾಡುವ - ಕುಣಿಯುವ - ಡೈಲಾಗ್ ಹೊಡೆಯೋ ಪುಟಾಣಿ ಫ್ಯಾನ್ಸ್ ನ ಮಾತನಾಡಿಸಿ, ಮುತ್ತು ಕೊಟ್ಟು, ಏನೋ ಒಂದು ಗಿಫ್ಟ್ ಕೊಟ್ಟು ಕಳಿಸ್ತಾ ಇದ್ರು ಪವರ್ ಸ್ಟಾರ್. ಕಿರುತೆರೆ ಶೋ ನಲ್ಲಿ - ಚಿತ್ರೀಕರಣದ ಸೆಟ್ ನಲ್ಲಿ ಎದುರಾಗೋ ಮಕ್ಕಳಿಗೆಲ್ಲಾ ಅಪ್ಪು ಪ್ರೀತಿ ಸಿಕ್ತಾ ಇತ್ತು.
ತನನ್ನ ಅಷ್ಟು ಪ್ರೀತಿಸೋ ಮಕ್ಕಳ ಬಗ್ಗೆ ಪುನೀತ್ ಗೂ ಅಷ್ಟೇ ಪ್ರೀತಿ ಇತ್ತು. ಬರೀ ತೋರಿಕೆ ಪ್ರೀತಿ ಅಷ್ಟೇ ಅಲ್ಲ, ಮಕ್ಕಳ ಬಗೆಗಿನ ಕಾಳಜಿ ಇಂದಲೇ ಪುನೀತ್, ಮೈತ್ರಿ ಅನ್ನೋ ಸಾಮಾಜಿಕ ಕಳಕಳಿಯ ಸಿನಿಮಾವನ್ನ ಕೂಡ ಮಾಡಿದ್ರು. ಈ ಸಿನಿಮಾದಲ್ಲಿ ಯಾರದೋ ಪ್ರೇರಣೆಯಿಂದ ಹಾದಿ ತಪ್ಪಿ, ಬಾಲ ಅಪರಾಧಿಯಾದ ಮಕ್ಕಳನ್ನ ಸರಿದಾರಿಗೆ ತರುವ ಸಂದೇಶವನ್ನ ನೀಡಿದ್ರು.

ಒಟ್ಟಾರೆ ಆ ಕಾಲದ ಮಕ್ಕಳಿಗೆ ಲೋಹಿತ್ ಅಂದ್ರೆ ಭಾಗ್ಯವಂತ ಸಿನಿಮಾದ ಕೃಷ್ಣ ನೆನಪಾಗ್ತಾನೆ. ಕಾಣದಂತೆ ಮಾಯವಾದನು ಅಂತ ಕುಣಿದ ಹುಡುಗ ನೆನಪಾಗ್ತಾನೆ. ಬೆಟ್ಟದ ಹೂವಿನ ರಾಮು ನೆನಪಾಗ್ತಾನೆ. ಅಂದಿನ ಮಕ್ಕಳ ಬಾಲ್ಯದ ಒಡನಾಡಿಯಾಗಿದ್ದವರು ಅಪ್ಪು.


Click it and Unblock the Notifications











