ಈ ವಾರ 8 ಕನ್ನಡ ಚಿತ್ರಗಳು ಬಿಡುಗಡೆ; ಇಂಟ್ರೆಸ್ಟಿಂಗ್ ಯಾವ್ದು ಅಂದ್ರೆ?
ಕನ್ನಡದಲ್ಲಿ ದೊಡ್ಡ ಸಿನಿಮಾಗಳು ಬರ್ತಿಲ್ಲ. ಸಣ್ಣ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಮನಸ್ಸು ಮಾಡ್ತಿಲ್ಲ. ಮತ್ತೆ ಚಿತ್ರಮಂದಿರಗಳನ್ನು ಕೆಲ ದಿನಗಳ ಕಾಲ ಬಂದ್ ಮಾಡುವ ಬಗ್ಗೆ ಚರ್ಚೆ ನಡೀತಿದೆ. ಈ ವಾರ ಒಂದಲ್ಲ ಎರಡಲ್ಲ 8 ಕನ್ನಡ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ.
ಪ್ರತಿ ಶುಕ್ರವಾರ ಹೊಸ ಹೊಸ ಸಿನಿಮಾಗಳು ತೆರೆಗೆ ಬರುತ್ತವೆ. ಹೊಸ ವರ್ಷದಲ್ಲಿ ಕನ್ನಡ ಚಿತ್ರಗಳು ದೊಡ್ಡದಾಗಿ ಸದ್ದು ಮಾಡಲೇ ಇಲ್ಲ. 'ಛೂ ಮಂತರ್' ಸಿನಿಮಾ ಮಾತ್ರ ಪ್ರೇಕ್ಷಕರ ಮನ ಗೆದ್ದಿತ್ತು. ಈ ವಾರ ಕೆಲ ಇಂಟ್ರೆಸ್ಟಿಂಗ್ ಸಿನಿಮಾಗಳು ಬಿಡುಗಡೆ ಆಗುತ್ತಿದೆ. ಅದರ ಲಿಸ್ಟ್ ಮುಂದೆ ಇದೆ ಓದಿ.

1. ವಿಷ್ಣುಪ್ರಿಯ
ಬಹಳ ಹಿಂದೆ ಶುರುವಾಗಿದ್ದ 'ವಿಷ್ಣುಪ್ರಿಯ' ಸಿನಿಮಾ ಅಂತೂ ಇಂತೂ ಈ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಹೀರೊ ಆಗಿ ನಟಿಸಿದ್ದಾರೆ. ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ನಾಯಕಿಯಾಗಿ ಮಿಂಚಿದ್ದಾರೆ. ವಿ. ಕೆ ಪ್ರಕಾಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವಿಷ್ಣು ಹಾಗೂ ಪ್ರಿಯಾ ಎಂಬ ಯುವಕ-ಯುವತಿಯ ಪ್ರೇಮಕಥೆಯಿದು.
2. ಎದ್ದೇಳು ಮಂಜುನಾಥ- 2
ಗುರು ಪ್ರಸಾದ್ ನಿರ್ದೇಶನದಲ್ಲಿ 16 ವರ್ಷಗಳ ಹಿಂದೆ 'ಎದ್ದೇಳು ಮಂಜುನಾಥ' ಸಿನಿಮಾ ಬಂದು ಗೆದ್ದಿತ್ತು. ಅದೇ ಟೈಟಲ್‌ನಲ್ಲಿ ಈ ಬಾರಿ ನಿರ್ದೇಶಕ ಗುರುಪ್ರಸಾದ್ ಲೀಡ್ ರೋಲ್‌ನಲ್ಲಿ ನಟಿಸಿರುವ ಸಿನಿಮಾ ಶುಕ್ರವಾರ ತೆರೆಗೆ ಬರ್ತಿದೆ. ಇದೊಂದು ಕ್ರೈಂ ಕಾಮೆಡಿ ಸಿನಿಮಾ ಆಗಿದ್ದು ರವಿ ದೀಕ್ಷಿತ್ ಎಂಬುವವರು ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ವಿಚಿತ್ರ ಚಿತ್ರ ಎಂದು ಚಿತ್ರತಂಡವೇ ಹೇಳಿಕೊಂಡಿದೆ.

3. ಶ್ಯಾನುಭೋಗರ ಮಗಳು
ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ನಟನೆಯ 'ಶ್ಯಾನುಭೋಗರ ಮಗಳು' ಚಿತ್ರ ಈ ವಾರ ತೆರೆಗೆ ಬರ್ತಿದೆ. ಈ ಹಿಂದೆ 'ಲಾ' ಎಂಬ ಚಿತ್ರದಲ್ಲಿ ಅವರು ನಟಿಸಿದ್ದರು. ಕಾದಂಬರಿ ಆಧರಿತ ಚಿತ್ರಕ್ಕೆ ಕೋಡ್ಲು ರಾಮಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಟಿಪ್ಪು ಸುಲ್ತಾನ್ ಪಾತ್ರದಲ್ಲಿ ಕಿಶೋರ್ ಕಾಣಿಸಿಕೊಂಡಿದ್ದಾರೆ. ಶ್ರೀರಂಗಪಟ್ಟಣ, ಬೆಂಗಳೂರು, ಮೇಲುಕೋಟೆ, ಚನ್ನಪಟ್ಟಣ, ಚಿಕ್ಕಬಳ್ಳಾಪುರದಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.
4. ಭಾವ ತೀರ ಯಾನ
ಮಯೂರ ಅಂಬೇಕಲ್ಲು ಹಾಗೂ ತೇಜಸ್ ಕಿರಣ್ ನಿರ್ದೇಶನದ 'ಭಾವ ತೀರ ಯಾನ' ಚಿತ್ರಕ್ಕೂ ಈ ವಾರ ಬಿಡುಗಡೆ ಭಾಗ್ಯ ಸಿಗುತ್ತಿದೆ. ಹೊಸ ಪ್ರತಿಭೆಗಳು ಸೇರಿ ಮಾಡಿರುವ ಸಿನಿಮಾ ಇದು. 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಜಾಹ್ನವಿ ಪಾತ್ರದಲ್ಲಿ ನಟಿಸಿ ಮನೆಮಾತಾಗಿರುವ ಚಂದನಾ ಅನಂತಕೃಷ್ಣ ಚಿತ್ರದ ತಾರಾಗಣದಲ್ಲಿದ್ದಾರೆ. ನಿರ್ದೇಶಕ ತೇಜಸ್ ಹೀರ ಆಗಿಯೂ ಮಿಂಚಿದ್ದಾರೆ. ರಮೇಶ್ ಭಟ್ ಹಾಗೂ ವೀಣಾ ಚಿತ್ರದ ತಾರಾಗಣದಲ್ಲಿದ್ದಾರೆ.
5. ನಿಮಗೊಂದು ಸಿಹಿಸುದ್ದಿ
ಸಿನಿಮಾಗಳಲ್ಲಿ ಭಿನ್ನ ವಿಭಿನ್ನ ಪ್ರಯೋಗಗಳು ನಡೆಯುತ್ತದೆ. ಪುರುಷ ಗರ್ಭ ಧರಿಸಲು ಸಾಧ್ಯವೇ? ಇದೇ ಕಾನ್ಸೆಪ್ಟ್‌ನಲ್ಲಿ ಮಾಡಿರುವ 'ನಿಮಗೊಂದು ಸಿಹಿಸುದ್ದಿ' ಸಿನಿಮಾ ಈ ವಾರ ಪ್ರೇಕ್ಷಕರ ಮುಂದೆ ಬರಲಿದೆ. ರಘು ಭಟ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಜೊತೆಗೆ ಹೀರೊ ಆಗಿ ನಟಿಸಿದ್ದಾರೆ. ಇತ್ತೀಚೆಗೆ ರಘು ಭಟ್‌ಗೆ ಸೀಮಂತ ಶಾಸ್ತ್ರ ಮಾಡುವ ಮೂಲಕ ಚಿತ್ರದ ಪ್ರಚಾರ ಮಾಡಲಾಗಿತ್ತು.
ಇನ್ನುಳಿದಂತೆ ಹೊಸಬರ 'ಎಲ್ಲೋ ಜೋಗಪ್ಪ ನಿನ್ನರಮನೆ', 'ವಿದ್ಯಾ ಗಣೇಶ', 'ನನಗೂ ಲವ್ವಾಗಿದೆ' ಸಿನಿಮಾಗಳು ಈ ವಾರ ಕನ್ನಡ ಸಿನಿರಸಿಕರನ್ನು ರಂಜಿಸಲು ಬರ್ತಿವೆ. 'ವಿಷ್ಣುಪ್ರಿಯ' ಹಾಗೂ 'ಎದ್ದೇಳು ಮಂಜುನಾಥ-2' ಚಿತ್ರಗಳು ಕೊಂಚಮಟ್ಟಿಗೆ ನಿರೀಕ್ಷೆ ಮೂಡಿಸಿದೆ.


Click it and Unblock the Notifications











