Soundarya Jayamala Wedding ; ರುಷಬ್ ಜೊತೆ ಸಪ್ತಪದಿ ತುಳಿದ ಸೌಂದರ್ಯ, ಶುಭಹಾರೈಸಿದ ಯಶ್-ಕಿಚ್ಚ..!
ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಮಾಲಾ ಅವರ ಮಗಳು ಸೌಂದರ್ಯ ಅವರ ಮದುವೆ ಅದ್ಧೂರಿಯಾಗಿ ನೆರವೇರಿದೆ. ಬೆಂಗಳೂರಿನ ಗಾಯಿತ್ರಿ ವಿಹಾರದಲ್ಲಿ ನಡೆದ ಈ ಮದುವೆ ಸಮಾರಂಭಕ್ಕೆ ಕನ್ನಡ ಚಿತ್ರರಂಗ ಸಾಕ್ಷಿಯಾಗಿದೆ. ಕೇವಲ ಚಿತ್ರರಂಗದವರು ಮಾತ್ರವಲ್ಲ ರಾಜಕೀಯದ ಗಣ್ಯರು ಕೂಡ ಈ ಮದುವೆಯಲ್ಲಿ ಪಾಲ್ಗೊಂಡು ಸೌಂದರ್ಯ ಮತ್ತು ರುಷಬ್ ಅವರಿಗೆ ಶುಭಾಶಯವನ್ನು ಕೋರಿದರು.
ಇನ್ನು, ಸದ್ಯ ಸಿಸಿಎಲ್‌ನ ಗುಂಗಿನಲ್ಲಿರುವ ಕಿಚ್ಚ ಸುದೀಪ್ ತಮ್ಮ ಕೊನೆಯ ಕ್ಷಣದ ಅಭ್ಯಾಸದ ನಡುವೆ ಮದುವೆ ಸಮಾರಂಭಕ್ಕೆ ತಮ್ಮ ತಂದೆ ಸಂಜೀವ್ ಸರೋವರ್ ಅವರ ಜೊತೆ ಮದುವೆಯ ಕಾರ್ಯಕ್ರಮಕ್ಕೆ ಬಂದಿದ್ದರೆ ಟಾಕ್ಸಿಕ್ ಚಿತ್ರಕ್ಕೆ ಹಗಲಿರುಳು ಬೆವರು ಸುರಿಸುತ್ತಿರುವ ಯಶ್ ಚಿತ್ರದ ಚಿತ್ರೀಕರಣದಿಂದ ಬಿಡುವು ಮಾಡಿಕೊಂಡು ಪತ್ನಿ ರಾಧಿಕಾ ಅವರ ಜೊತೆ ಬಂದು ನವ ಜೋಡಿಗೆ ಶುಭ ಹಾರೈಸಿದರು.

ಸುದೀಪ್ ಮತ್ತು ಯಶ್ ಅವರನ್ನು ಹೊರತು ಪಡಿಸಿದರೆ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಪತ್ನಿ ಶಿಲ್ಪಾ ಜೊತೆ ಬಂದಿದ್ದರು. ರಿಯಲ್ ಸ್ಟಾರ್ ಉಪೇಂದ್ರ, ಹಿರಿಯ ನಟರಾದ ಅನಂತ್ ನಾಗ್, ಶ್ರೀನಾಥ್, ಹೊನ್ನವಳ್ಳಿ ಕೃಷ್ಣ, ಜೈ ಜಗದೀಶ್, ಸುಂದರ್ ರಾಜ್, ಹಿರಿಯ ನಟಿಯರಾದ ಸುಮಿತ್ರಾ, ಸುಧಾರಾಣಿ, ಅಂಬಿಕಾ, ಗಾಯತ್ರಿ ಅನಂತ್‌ನಾಗ್, ಹೇಮಾ ಚೌಧರಿ, ಉಮಾಶ್ರೀ, ಅಂಜಲಿ, ಗಿರಿಜಾ ಲೋಕೇಶ್, ನಟಿಯರಾದ ಸಂಯುಕ್ತಾ ಹೊರನಾಡು, ಮೇಘನಾ ರಾಜ್, ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಎಂ.ಎಸ್.ಉಮೇಶ್, ಹಿರಿಯ ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು, ಎಸ್, ನಾರಾಯಣ್, ಹೀಗೆ ಅನೇಕರು ಸೌಂದರ್ಯ ಜಯಮಾಲಾ ಅವರ ಸಂಭ್ರಮದಲ್ಲಿ ಇಂದು ಭಾಗಿಯಾದರು. ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ನವ ಜೋಡಿಗೆ ಶುಭ ಹಾರೈಸಿದರು. ರಾಜಕೀಯ ಕ್ಷೇತ್ರದಿಂದ ತಮ್ಮ ಪತ್ನಿ ಉಷಾ ಜೊತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಂದಿದ್ದರು. ಪ್ರಿಯಾಂಕ್ ಖರ್ಗೆ, ಸಿ.ಪಿ.ಯೋಗೇಶ್ವರ್ ಸೇರಿ ಮುಂತಾದವರು ಆಗಮಿಸಿದ್ದರು.
ಅಂದ್ಹಾಗೇ ಸೌಂದರ್ಯ ಅವರ ಕೈ ಹಿಡಿದಿರುವ ರುಷಬ್ ಪೊಲೀಸ್ ಮಹಾ ನಿರ್ದೇಶಕ ಕೆ.ರಾಮಚಂದ್ರ ರಾವ್ ಮತ್ತು ರೋಹಿಣಿ ಅವರ ಮಗ. ಇನ್ನು ಸೌಂದರ್ಯ ಮತ್ತು ರುಷಬ್ ಅವರದ್ದು ಲವ್ ಮ್ಯಾರೇಜಾ, ಅರೆಂಜ್ ಮ್ಯಾರೇಜಾ, ಲವ್ ಕಂ ಅರೆಂಜ್ ಮ್ಯಾರೇಜಾ ? ಈ ಪ್ರಶ್ನೆಗೆ ಉತ್ತರ ಸೌಂದರ್ಯ ಅವರೇ ಕೊಡಬೇಕು. ಇನ್ನು, ರುಷಬ್ ಅವರ ವೃತ್ತಿಯ ಕುರಿತು ಕೂಡ ಹೆಚ್ಚಿನ ಮಾಹಿತಿ ಇಲ್ಲ.
ಇನ್ನುಳಿದಂತೆ ಸೌಂದರ್ಯ ತಾಯಿಯಂತೆ ಚಿತ್ರರಂಗದಲ್ಲಿ ಮಿಂಚುವ ಕನಸನ್ನು ಕಂಡಿದ್ದರು. ಉಪೇಂದ್ರ ಅಭಿನಯದ ಗಾಡ್ ಫಾದರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ್ದ ಸೌಂದರ್ಯ ಮಿಸ್ಟರ್ ಪ್ರೇಮಿಕುಡು ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೂ ಎಂಟ್ರಿ ನೀಡಿದ್ದರು. ಆದರೆ, ಮೊದಲ ಈ ಎರಡು ಚಿತ್ರಗಳು ಸೋತವು. ಆ ನಂತರ ಸೌಂದರ್ಯ ಅಭಿನಯದ ಪಾರು ವೈಫ್ ಆಫ್ ದೇವದಾಸ್ ಮತ್ತು ಸಿಂಹಾದ್ರಿ ಕೂಡ ಸದ್ದು ಮಾಡಲಿಲ್ಲ. ಇಲ್ಲಿಂದಾಚೆ ನಾಯಕಿಯಾಗುವ ಕನಸನ್ನು ಮರೆತ ಸೌಂದರ್ಯ ನಟನೆಯಿಂದ ದೂರ ಉಳಿದರು. ಸದ್ಯ ಸೌಂದರ್ಯ ರುಷಬ್ ಜೊತೆ ಹೊಸ ಬದುಕಿಗೆ ಮುನ್ನುಡಿಯನ್ನು ಬರೆದಿದ್ದಾರೆ. ಈ ನವ ಜೋಡಿಗೆ ನಿಮ್ಮದೊಂದು ಶುಭ ಹಾರೈಕೆ ಇರಲಿ.


Click it and Unblock the Notifications











