Upadhyaksha Trailer: ಚಿಕ್ಕಣ್ಣ ಕಾಮಿಡಿ ಕಿಕ್ಕು, ರಾಕಿ ಝಲಕ್ಕು, ರಿಪೀಟ್ ಆಗುತ್ತಾ 'ಅಧ್ಯಕ್ಷ' ಮ್ಯಾಜಿಕ್ಕು?
ತಿಂಗಳಾಂತ್ಯಕ್ಕೆ ಚಿಕ್ಕಣ್ಣ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸೋಕೆ ಬರ್ತಿದ್ದಾರೆ. 'ಉಪಾಧ್ಯಕ್ಷ' ಹೊಸ ವರ್ಷದ ಮೊದಲ ಬಹುನಿರೀಕ್ಷಿತ ಸಿನಿಮಾ. ಅನಿಲ್ ಕುಮಾರ್ ನಿರ್ದೇಶನದ ಈ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಈ ಬಾರಿ ಅಧ್ಯಕ್ಷರನ್ನು ಪಕ್ಕಕ್ಕೆ ನಿಲ್ಲಿಸಿ ಒಬ್ಬೊಂಟಿಯಾಗಿ ಉಪಾಧ್ಯಕ್ಷರು ಪ್ರೇಕ್ಷಕರನ್ನು ರಂಜಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ.
10 ವರ್ಷಗಳ ಹಿಂದೆ ಬಂದಿದ್ದ 'ಅಧ್ಯಕ್ಷ' ಸಿನಿಮಾ ಸೂಪರ್ ಹಿಟ್ ಆಗಿತ್ತು. ತಮಿಳಿನ 'ವರುಥಪಡಾದ ವಾಲಿಬರ್ ಸಂಘಂ' ರೀಮೆಕ್ ಆಗಿದ್ದರೂ ಕನ್ನಡ ಸಿನಿರಸಿಕರನ್ನು ಸಿನಿಮಾ ರಂಜಿಸುವಲ್ಲಿ ಗೆದ್ದಿತ್ತು. ಶರಣ್ ಹಾಗೂ ಚಿಕ್ಕಣ್ಣ ಕಾಮಿಡಿ ಮೋಡಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ಹೊಟ್ಟೆ ಹುಣ್ಣಾಗುವಂತೆ ನಕ್ಕು ಸುಸ್ತಾಗಿದ್ದರಯ. ಇದೀಗ ಹೆಚ್ಚು ಕಡಿಮೆ ದಾಟಿಯಲ್ಲಿ 'ಉಪಾಧ್ಯಕ್ಷ' ಸಿನಿಮಾ ನಿರ್ಮಾಣವಾಗಿದೆ. ಒಂದರ್ಥದಲ್ಲಿ ಇದು ಹಿಂದಿನ ಸಿನಿಮಾ ಸೀಕ್ವೆಲ್ ಎನ್ನಬಹುದು.

'ಗೆಜ್ಜೆಪುರ'ದಲ್ಲೇ 'ಉಪಾಧ್ಯಕ್ಷ'ನ ಕಥೆಯೂ ಮುಂದುವರೆಯುತ್ತದೆ. ಹಿಂದಿನ ಸಿನಿಮಾದಲ್ಲಿ ನಾಯಕಿ ಐಶ್ವರ್ಯ ಸ್ನೇಹಿತೆ ನಾಗರತ್ನನ ಪ್ರೀತಿಸಿ 'ಉಪಾಧ್ಯಕ್ಷ'ರು ಮೋಸ ಹೋಗಿದ್ದರು. ಈ ಬಾರಿ ಗೌಡರ ಮಗಳನ್ನೇ ಲವ್ ಮಾಡಿ ಕರೆದುಕೊಂಡು ಓಡಿಹೋಗುವ ಕಥೆ ಚಿತ್ರದಲ್ಲಿದೆ. 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಖ್ಯಾತಿಯ ನಟಿ ಮಲೈಕಾ ಚಿತ್ರದಲ್ಲಿ ಚಿಕ್ಕಣ್ಣಿಗೆ ಜೋಡಿಯಾಗಿದ್ದಾರೆ.
ಇನ್ನುಳಿದಂತೆ ಶಿವರುದ್ರೆ ಗೌಡನ ಪಾತ್ರದಲ್ಲಿ ಆರ್ಮುಗ ರವಿಶಂಕರ್ ಮತ್ತೆ ಅಬ್ಬರಿಸಿದ್ದಾರೆ. ಸಾಧುಕೋಕಿಲ, ಕರಿಸುಬ್ಬು ಸೇರಿದಂತೆ ದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದೆ. ಇನ್ನು ಶರಣ್ ಕೂಡ 'ಅಧ್ಯಕ್ಷ'ರ ಪಾತ್ರದಲ್ಲಿ ಕೆಲವೊತ್ತು 'ಉಪಾಧ್ಯಕ್ಷ'ರಿಗೆ ಸಾಥ್ ಕೊಟ್ಟಿದ್ದಾರೆ. ಟ್ರೈಲರ್ ಕೊನೆಯಲ್ಲಿ ಚಿಕ್ಕಣ್ಣ 'KGF' ರಾಕಿಭಾಯ್ ಗೆಟಪ್‌ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಇನ್ನುಳಿದಂತೆ ಟ್ರೈಲರ್ ಅಷ್ಟೇನು ಮಜಾ ಕೊಡುವುದಿಲ್ಲ.
'ಉಪಾಧ್ಯಕ್ಷ' ಟ್ರೈಲರ್ ಅಲ್ಲಲ್ಲಿ 'ಅಧ್ಯಕ್ಷ' ಚಿತ್ರವನ್ನೇ ನೆನೆಪಿಸುತ್ತದೆ. ಮತ್ತದೇ ಕಥೆ ಎನ್ನುವುದು ಗೊತ್ತಾಗುತ್ತದೆ. ಇನ್ನು ಕಾಮಿಡಿ ಪಂಚ್‌ಗಳು ಅಷ್ಟಾಗಿ ವರ್ಕ್ ಆಗಿಲ್ಲ ಎನ್ನುವುದು ಕೆಲವರ ವಾದ. ಉಮಾಪತಿ ಶ್ರೀನಿವಾಸ್ ಚಿತ್ರವನ್ನು ನಿರ್ಮಾಣ ಮಾಡಿದ್ದು ಚಿಕ್ಕಣ್ಣ ಮೊದಲ ಬಾರಿಗೆ ಹೀರೊ ಆಗಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

ಅರ್ಜುನ್ ಜನ್ಯಾ ಮ್ಯೂಸಿಕ್, ಶೇಖರ್ ಚಂದ್ರ ಛಾಯಾಗ್ರಹಣ 'ಉಪಾಧ್ಯಕ್ಷ' ಚಿತ್ರಕ್ಕಿದೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ 'ಉಪಾಧ್ಯಕ್ಷ' ಸಿನಿಮಾ ಟ್ರೈಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಇನ್ನು ಬೇಗ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗಿತ್ತು. ಜನವರಿ 26ರಂದು ಗಣರಾಜ್ಯೋತ್ಸವ ಸಂಭ್ರಮದಲ್ಲಿ ತೆರೆಮೇಲೆ 'ಉಪಾಧ್ಯಕ್ಷ'ರ ಕ್ವಾಟ್ಲೆ ಶುರುವಾಗಲಿದೆ.
13 ವರ್ಷಗಳ ಹಿಂದೆ 'ಕಿರಾತಕ' ಚಿತ್ರ ಸಣ್ಣ ಪಾತ್ರದ ಮೂಲಕ ಚಿತ್ರರಂಗಕ್ಕೆ ಬಂದ ಚಿಕ್ಕಣ್ಣ ಬಳಿಕ ಬಹುಬೇಡಿಕೆಯ ಹಾಸ್ಯ ಕಲಾವಿದನಾಗಿ ಗುರ್ತಿಸಿಕೊಂಡರು. ಇದಕ್ಕೂ ಮುನ್ನ ಹಾಸ್ಯ ಕಾರ್ಯಕ್ರಮಗಳಲ್ಲಿ ಕಿರುತೆರೆ ಧಾರಾವಾಹಿಗಳಲ್ಲಿ ತಮ್ಮ ಕಾಮಿಡಿ ಟೈಮಿಂಗ್‌ನಿಂದ ಚಿಕ್ಕಣ್ಣ ಗಮನ ಸೆಳೆಸಿದ್ದರು. ಚಿಕ್ಕಣ್ಣ ಹೀರೊ ಆಗಲು ಸಾಕಷ್ಟು ತಯಾರಿ ನಡೆಸಿದ್ದಾರೆ. ಮುಖ್ಯವಾಗಿ ಡ್ಯಾನ್ಸ್ ಕಲಿತಿರೋದು ಚಿತ್ರದ ಹಾಡುಗಳಲ್ಲಿ ಗೊತ್ತಾಗುತ್ತದೆ.
'ದಿಲ್‌ವಾಲಾ' ಸಿನಿಮಾ ಖ್ಯಾತಿಯ ಅನಿಲ್ ಕುಮಾರ್ 'ಉಪಾಧ್ಯಕ್ಷ' ಕಥೆ ಕಟ್ಟಿಕೊಟ್ಟಿದ್ದಾರೆ. ಈ ಹಿಂದೆ ರಾಕಿಂಗ್ ಸ್ಟಾರ್ ಯಶ್ ನಟನೆಯ 'ಕಿರಾತಕ'- 2 ಚಿತ್ರವನ್ನು ಅನಿಲ್ ಕೈಗೆತ್ತಿಕೊಂಡಿದ್ದರು. 15 ದಿನಗಳ ಚಿತ್ರೀಕರಣದ ಬಳಿಕ ಸಿನಿಮಾ ನಿಂತುಹೋಗಿತ್ತು. ಯಶ್ ಇನ್ನು ಆ ಸಿನಿಮಾ ಮಾಡುವ ಮನಸ್ಸು ಮಾಡಿದ್ದಾರೆ ಎಂದು ಇತ್ತೀಚೆಗೆ ನಿರ್ದೇಶಕರು ಹೇಳಿದ್ದಾರೆ. 'ಉಪಾಧ್ಯಕ್ಷ' ಜೊತೆಗೆ ರಕ್ಷಿತ್ ಶೆಟ್ಟಿ ನಿರ್ಮಾಣದ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಕೂಡ ಜನವರಿ 26ಕ್ಕೆ ತೆರೆಗೆ ಬರಲಿದೆ.


Click it and Unblock the Notifications











