»   » ಬೆಂಗಳೂರಲ್ಲಿ ಕನ್ನಡ ಚಲಚ್ಚಿತ್ರ ಪ್ರಶಸ್ತಿ ಪ್ರದಾನ

ಬೆಂಗಳೂರಲ್ಲಿ ಕನ್ನಡ ಚಲಚ್ಚಿತ್ರ ಪ್ರಶಸ್ತಿ ಪ್ರದಾನ

Posted By: Staff
Subscribe to Filmibeat Kannada

ಬೆಂಗಳೂರು : ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಡಿ.16ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ವಿಷಯವನ್ನು ರಾಜ್ಯ ವಾರ್ತಾ ಸಚಿವ ಶಿವಣ್ಣ ಬುಧವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಅಕ್ಟೋಬರ್‌ ತಿಂಗಳಿನಲ್ಲಿ ನಡೆಯಬೇಕಾಗಿದ್ದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ರದ್ದಾದ ಹಿನ್ನೆಲೆಯಲ್ಲಿ ರಾಜ್ಯ ಚಲಚ್ಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನೂ ಮುಂದೂಡಲಾಗಿತ್ತು. ಈಗ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಿಸೆಂಬರ್‌ನಲ್ಲಿ ನಡೆಸಲು ಸರಕಾರ ನಿರ್ಧರಿಸಿದ್ದು, ಬಹುತೇಕ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಅಂಬೇಡ್ಕರ್‌ ಭವನದಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.

ಬುಧವಾರ ಚಿತ್ರೀಕರಣ ಆರಂಭಗೊಂಡ ನವರಸ ನಾಯಕ ಜಗ್ಗೇಶ್‌ ಅಭಿನಯದ 'ವಂಶಕ್ಬೊಬ್ಬ" ಚಿತ್ರಕ್ಕೆ ಆರಂಭ ಫಲಕ ತೋರಿಸಿದ ತರುವಾಯ ಚಲನಚಿತ್ರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಸದ್ಯಕ್ಕೆ ಅಂಬೇಡ್ಕರ್‌ ಭವನವನ್ನು ಆಯ್ಕೆ ಮಾಡಲಾಗಿದೆ ಎಂದರು. ಬೇರೆ ಸ್ಥಳದ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ ಎಂದರು.

ಚಿತ್ರನಗರಿಗೆಂದು ಮೀಸಲಿಟ್ಟಿರುವ 300 ಎಕರೆ ಭೂಮಿ ಇನ್ನೂ ಹಾಗೇ ಇದೆ. ನಾನು ಈ ಖಾತೆ ವಹಿಸಿಕೊಂಡು ಕೆಲವೇ ದಿನ ಆಗಿದೆ. ಆದಾಗ್ಯೂ ಚಿತ್ರೋದ್ಯಮ ಹಾಗೂ ಕಂಠೀರವ ಸ್ಟುಡಿಯೋ ಪುನರುಜ್ಜೀವನಕ್ಕೆ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದು ಅವರು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಸಗೀರ್‌ ಅಹ್ಮದ್‌ ಕೂಡ ಪಾಲ್ಗೊಂಡಿದ್ದರು.

ಈಗಾಗಲೇ ಕನ್ನಡ ಚಿತ್ರಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು ಮುಸ್ಸಂಜೆ, ಶಾಪ, ಕುರಿಗಳು ಸಾರ್‌ ಕುರಿಗಳು ಅನುಕ್ರಮವಾಗಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದ್ದರೆ, ಮುನ್ನುಡಿ ಸಾಮಾಜಿಕ ಕಳಕಳಿ ಪ್ರಶಸ್ತಿಗೆ ಪಾತ್ರವಾಗಿದೆ. ಮುನ್ನುಡಿ ಚಿತ್ರದ ಅಭಿನಯಕ್ಕೆ ದತ್ತಣ್ಣ ಹಾಗೂ ಶಾಪ ಚಿತ್ರದ ಅಭಿನಯಕ್ಕಾಗಿ ಅನು ಪ್ರಭಾಕರ್‌ ಅನುಕ್ರಮವಾಗಿ ಅತ್ಯುತ್ತಮ ನಟ-ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

English summary
Karnataka state film awards function on 16 December at Bangalore says information minister

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada