ಸುದೀಪ್ 'ಬಿಲ್ಲ ರಂಗ ಬಾಷ' ಸೆಟ್‌ನಲ್ಲಿ ಬುಜ್ಜಿ ಕಾರ್; ಫೋಟೊ ವೈರಲ್
ಕಿಚ್ಚ ಸುದೀಪ್ ನಟನೆಯ 'ಬಿಲ್ಲ ರಂಗ ಬಾಷ' ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿದೆ. ಬಹಳ ಬೇಗ ಸಿನಿಮಾ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ. ಸದ್ಯ ಸಿನಿಮಾ ಸೆಟ್‌ನಿಂದ ಫೋಟೊವೊಂದು ಲೀಕ್ ಆಗಿ ವೈರಲ್ ಆಗುತ್ತಿದೆ.
ಅನುಪ್ ಭಂಡಾರಿ ಬಹಳ ರೋಚಕವಾಗಿ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಪ್ರೈಂ ಶೋ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಮೇಕಿಂಗ್ ಹಂತದಲ್ಲೇ ಸಿನಿಮಾ ಬಹಳ ಸದ್ದು ಮಾಡ್ತಿದೆ. 'ಮ್ಯಾಕ್ಸ್' ಸಕ್ಸಸ್ ಬಳಿಕ ಬರ್ತಿರೋ ಸಿನಿಮಾ ಆಗಿರುವುದರಿಂದ ಪ್ರೇಕ್ಷಕರ ನಿರೀಕ್ಷೆ ಕೂಡ ಹೆಚ್ಚಿದೆ.

ಕಿಚ್ಚನನ್ನು ಚಿತ್ರದಲ್ಲಿ ಬಹಳ ವಿಭಿನ್ನ ಗೆಟಪ್‌ಗಳಲ್ಲಿ ತೋರಿಸುವ ಪ್ರಯತ್ನ ನಡೀತಿದೆ. ಸುದೀಪ್ - ಅನೂಪ್ ಜೋಡಿಯಿಂದ 'ವಿಕ್ರಾಂತ್ ರೋಣ'ಕ್ಕಿಂತ ಅದ್ಭುತ ಸಿನಿಮಾ ನಿರೀಕ್ಷಿಸಲಾಗುತ್ತಿದೆ. ಚಿತ್ರದಲ್ಲಿ 200 ವರ್ಷಗಳ ಭವಿಷ್ಯದ ಕಥೆಯನ್ನು ಹೇಳುತ್ತಿದ್ದಾರೆ. ಅದಕ್ಕಾಗಿ ಹೊ ಪ್ರಪಂಚವನ್ನೇ ಸೃಷ್ಟಿಸಲಾಗುತ್ತಿದೆ. 2 ಶತಮಾನಗಳ ಬಳಿಕ ಪ್ರಪಂಚ ಹೇಗಿರುತ್ತದೆ? ಜನ ಹೇಗಿರುತ್ತಾರೆ? ತಂತ್ರಜ್ಞಾನ ಹೇಗೆ ಬೆಳೆದಿರುತ್ತದೆ? ಎನ್ನುವುದನ್ನೆಲ್ಲಾ ಕಲ್ಪಿಸಿಕೊಂಡು ಅನೂಪ್ ಸಿನಿಮಾ ಮಾಡುತ್ತಿದ್ದಾರೆ.
ಸದ್ಯ ವೈರಲ್ ಆಗಿರುವು ಫೋಟೊದಲ್ಲಿ ಒಂದಷ್ಟು ಕಾರ್‌ಗಳನ್ನು ನೋಡಬಹುದು. ಈ ಹಿಂದೆ 'ಕಲ್ಕಿ 2898 AD' ಚಿತ್ರದಲ್ಲಿ ಬುಜ್ಜಿ ಎನ್ನುವ ವಿಶಿಷ್ಟ ಕಾರ್ ಅನ್ನು ತೋರಿಸಿದ್ದರು. ಅಂಥದ್ದೇ ವಾಹನಗಳನ್ನು 'ಬಿಲ್ಲ ರಂಗ ಬಾಷ' ಚಿತ್ರದಲ್ಲೂ ನೋಡಬಹುದು. ಒಟ್ಟಾರೆ ಕಥೆ ನಡೆಯುವ ಲೋಕವೇ ನೋಡುಗರಿಗೆ ಅದ್ಭುತ ಅನುಭವ ನೀಡುವಂತಿದೆ. ಪ್ರಭಾಸ್ ನಟನೆಯ 'ಕಲ್ಕಿ 2898 AD' ಚಿತ್ರದಲ್ಲಿ ಕೂಡ 800 ವರ್ಷಗಳ ಭವಿಷ್ಯದ ಕಥೆ ಹೇಳಲಾಗಿತ್ತು. ಆಗ ಪ್ರಪಂಚ ಹೇಗಿರಬಹುದು ಎಂದು ಊಹಿಸಿಕೊಂಡು ಅದಕ್ಕೆ ತಕ್ಕಂತೆ ಸೆಟ್ ಹಾಕಿ, ಗ್ರಾಫಿಕ್ಸ್ ಮಾಡಿ ತೋರಿಸಲಾಗಿತ್ತು.

ಬಹಳ ಹಿಂದೆ ಘೋಷಣೆಯಾಗಿದ್ದ 'ಬಿಲ್ಲ ರಂಗ ಬಾಷ' ಸಿನಿಮಾ ಚಿತ್ರೀಕರಣ ಇತ್ತೀಚೆಗೆ ಶುರುವಾಗಿತ್ತು. ಸುದೀಪ್ ಬಿಟ್ರೆ ಬೇರೆ ಯಾರೆಲ್ಲಾ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಚಿತ್ರಕ್ಕೆ ಯಾರು ನಾಯಕಿ ಆಗಬಹುದು ಎನ್ನುವ ಬಗ್ಗೆಯೂ ಸ್ಪಷ್ಟನೆ ಇಲ್ಲ. ಕ್ಯಾಚಿ ಟೈಟಲ್ ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದೆ. ಇನ್ನು ಸುದೀಪ್ ಪಾತ್ರ ಏನು? ಲುಕ್ ಹೇಗಿರುತ್ತೆ? ಎಂದು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಈ ಬಾರಿ ಸುದೀಪ್ ಹುಟ್ಟುಹಬ್ಬಕ್ಕೆ 'ಬಿಲ್ಲ ರಂಗ ಬಾಷ' ಟೀಸರ್ ಬಿಡುಗಡೆ ಆಗುವ ಸಾಧ್ಯತೆಯಿದೆ. ಈ ಸಿನಿಮಾ ಜೊತೆ ಜೊತೆಗೆ 'ಮ್ಯಾಕ್ಸ್'-2 ಸಿನಿಮಾ ಕೂಡ ಮಾಡುವ ಬಗ್ಗೆ ಚರ್ಚೆ ನಡೀತಿದೆ. ಕಳೆದ ವರ್ಷ ಕೊನೆಗೆ ಬಂದಿದ್ದ 'ಮ್ಯಾಕ್ಸ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಕೋಟಿ ಕೋಟಿ ಕೊಳ್ಳೆ ಹೊಡೆದಿತ್ತು. ಪ್ರೇಕ್ಷಕರನ್ನು ರಂಜಿಸಿತ್ತು. ಇಂತಹ ಸಿನಿಮಾಗಳನ್ನು ಆಗಾಗ್ಗೆ ಮಾಡಿ ಎಂದು ಅಭಿಮಾನಿಗಳು ಕೇಳುತ್ತಿರುತ್ತಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕಿಚ್ಚ ಮೂರು ತಿಂಗಳಿಗೆ ಒಂದು ಸಿನಿಮಾ ಮಾಡಲು ಸಾಧ್ಯವಿಲ್ಲ. ನಾನೇನು ಫ್ಯಾಕ್ಟರಿ ಅಲ್ಲ. ಸಿನಿಮಾಗಳು ಚೆನ್ನಾಗಿ ಓಡ್ತಿಲ್ಲ. ಒಳ್ಳೆ ಕಥೆಗಳು ಸಿಕ್ಕಾಗ ಮಾತ್ರ ಮಾಡಬಹುದು. ನಮಗೆ ಚೆನ್ನಾಗಿದೆ ಅನ್ನಿಸಿದ ಸಿನಿಮಾ ಮಾಡಬಹುದು. 2023 ಜುಲೈನಲ್ಲಿ 'ಮ್ಯಾಕ್ಸ್' ಸಿನಿಮಾ ಆರಂಭಿಸಿದ್ದೆವು. ಅದೇ ವರ್ಷ ಸಿನಿಮಾ ಬಿಡುಗಡೆಗೆ ಪ್ರಯತ್ನಿಸಿದ್ದೆವು. ಚೆನ್ನೈನಲ್ಲಿ ಪ್ರವಾಹ ಬಂದು ಚಿತ್ರೀಕರಣಕ್ಕೆ ಸಮಸ್ಯೆ ಆಯಿತು. ಸಿನಿಮಾ ನಮ್ಮ ಕೈಯಲ್ಲಿ ಇರಲ್ಲ. 'ಬಿಲ್ಲ ರಂಗ ಬಾಷ' ಜೊತೆ ಜೊತೆಗೆ ಬೇರೆ ಸಿನಿಮಾ ಮಾಡುವ ಆಲೋಚನೆ ಇದೆ" ಎಂದಿದ್ದಾರೆ.


Click it and Unblock the Notifications











