»   » ಎಂ.ಎಫ್‌. ಹುಸೇನರ ಗಜಗಾಮಿನಿ !

ಎಂ.ಎಫ್‌. ಹುಸೇನರ ಗಜಗಾಮಿನಿ !

Posted By: Staff
Subscribe to Filmibeat Kannada

ನವದೆಹಲಿ : ಕಾಳಿದಾಸನ ಶಾಕುಂತಲ, ಲಿಯಾನಾರ್ಡೊ ಡ ವಿಂಚಿಯ ಮೊನಲಿಸ, ಭೋಲಾರ ಸಂಗೀತಾ, ಶಾರುಖ್‌ರ ಮೋನಿಕಾ ಎಲ್ಲಾ ಎಲ್ಲದರ ಎರಕ ಇಲ್ಲಿನ ಮಾಧುರಿ. ಪ್ರಸಿದ್ಧ ಕುಂಚಕಾರ ಎಂ.ಎಫ್‌. ಹುಸೇನರ ಹೊಸ ಕೂಸು ಗಜಗಾಮಿನಿಯನ್ನು ಬಣ್ಣಿಸಲು ಇಷ್ಟು ಸಾಕು.

ಇದುವರೆಗೆ ನಾವೆಲ್ಲಾ ಕಂಡಿದ್ದದ್ದು ಹುಸೇನರ ಕುಂಚದಲ್ಲರಳಿದ ಕಲ್ಪನೆಯನ್ನು ಮಾತ್ರ. ಆ ಪ್ರತಿಭೆಯೀಗ ಗಜಗಾಮಿನಿಯ ರೂಪದಲ್ಲಿ ಬೆಳ್ಳಿತೆರೆಯ ಮೇಲೆ ಸಾಕಾರಗೊಂಡಿದೆ. ಚಳಿಗಾಳಿಯಲ್ಲಿ ಮಿಂದ ದೆಹಲಿ ಗುರುವಾರ ರೋಮಾಂಚನದ ಗುಂಗಿನಲ್ಲಿತ್ತು . ಗಜಗಾಮಿನಿಯ ಪ್ರೀಮಿಯರ್‌ ಶೋನಲ್ಲಿ ಭಾಗಿಯಾದ ಅತಿಥಿಗಳು ಹೊರಹೋದದ್ದು ಮಾಧುರಿಯ ಮಾದಕ ಚೆಲುವಿನ ಮೆಲುಕಿನೊಂದಿಗೆ. ಸಚಿವರು, ಹಿರಿಯ ಅಧಿಕಾರಿಗಳು ಗಜಗಾಮಿನಿಯ ಕಾಕ್‌ಟೈಲ್‌ ಪಾರ್ಟಿಯ ರಂಗು ಹೆಚ್ಚಿಸಿದ್ದರು.

ಸಿನಿಮಾದ ಜೀವಾಳ ಮಾಧುರಿ ದೀಕ್ಷಿತ್‌ ಪರದೆ ಮೇಲೆ ಮೊದಲು ಪ್ರತ್ಯಕ್ಷವಾಗುವುದು ಸಿನಿಮಾ ಶುರುವಾದ ಅರ್ಧ ಗಂಟೆ ನಂತರ, ಕನಿಷ್ಠ ಉಡುಗೆಯಲ್ಲಿ . ಬಹುಶಃ ಸಮ್ಮೋಹನಾಸ್ತ್ರ ಬೀರುವ ನಾಯಕಿಯನ್ನು ನಿರ್ದೇಶಕರು ಮೊದಲ ಬಾರಿಗೆ ಇಂಥದ್ದೇ ಗಳಿಗೆಯಲ್ಲಿ , ಯಾವುದೋ ಶೂಟಿಂಗ್‌ನಲ್ಲಿ ಕಂಡಿರಬೇಕು. ಅವರು ಆ ಗಳಿಗೆಯನ್ನು ಎಂದೂ ಮರೆಯಲಿಕ್ಕಿಲ್ಲ .

ಕಾರ್ಯಕ್ರಮ ಎಷ್ಟೇ ರಂಗಾಗಿದ್ದರೂ, ಹುಸೇನರ ಕನಸಿನ ಹುಡುಗಿ ಮಾಧುರಿ ದೀಕ್ಷಿತ್‌ರ ಗೈರು ಹಾಜರಿಯ ಕೊರತೆ ಅಲ್ಲಿ ಎದ್ದು ಕಾಣುತ್ತಿತ್ತು . ಮಾಧುರಿ ಜೊತೆಗೆ ಉಳಿದ ದೊಡ್ಡ ಹೆಸರುಗಳಾದ ಶಾರುಖ್‌ ಖಾನ್‌, ನಾಸಿರುದ್ದೀನ್‌ ಷಾ ಹಾಗೂ ಶಬಾನ ಅಜ್ಮಿ ಅವರೂ ಮಾಯವಾಗಿದ್ದುದರಿಂದ ಪಾರ್ಟಿಯ ಗ್ಲಾಮರ್‌ ಏಕಮುಖವಾಗಿತ್ತು .

ಸಿನಿಮಾ ರಂಗನ್ನು ಪಾರ್ಟಿ ಮಿಸ್‌ ಮಾಡಿಕೊಂಡಿದ್ದರೂ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರದರ್ಶನವನ್ನು ಏರ್ಪಡಿಸಿದ್ದರಿಂದ ಬಿಳಿ ಕಾಲರಿನ ಗಣ್ಯರಿಗೇನೂ ಅಲ್ಲಿ ಕೊರತೆಯಿರಲಿಲ್ಲ . ಮೀಡಿಯಾ ಮುಖ್ಯರಾದ ರೊಮೇಶ್‌ ಶರ್ಮ, ಉಮಾ ಗಜಪತಿ ರಾಜು, ಪ್ರಸಿದ್ಧ ಫೋಟೋಗ್ರಾಪರ್‌ ರಘು ರಾಯ್‌, ವಾಸ್ತುಶಿಲ್ಪಿ ಹಾಗೂ ಚಿತ್ರಕಾರ ಗುಜ್ರಾಲ್‌ ಮುಂತಾದವರು ಪ್ರದರ್ಶನ ವೀಕ್ಷಿಸಿದವರ ಸಾಲಿನಲ್ಲಿದ್ದರು.

ಇಡೀ ವಿಶ್ವವೇ ಒಂದು ಕುಟುಂಬ - ಇದು ಗಜಗಾಮಿನಿಯ ತಿರುಳು

ಅದೆಲ್ಲಾ ಇರಲಿ. ಪ್ರದರ್ಶನಕ್ಕೆ ಸಚಿವಾಲಯ ಗಜಗಾಮಿನಿಯನ್ನೇ ಆರಿಸಿದ್ದು ಏಕೆ. ಸಂದೇಹವನ್ನು ನಿವಾರಿಸಲೋ ಎಂಬಂತೆ ವಿದೇಶಾಂಗ ವ್ಯವಹಾರಗಳ ರಾಜ್ಯಸಚಿವ ಅಜಿತ್‌ ಪಾಂಜಾ ಸ್ಪಷ್ಟನೆ ನೀಡಿದರು. ವಸುದೈವ ಕುಂಟುಂಬಕಂ ಎನ್ನುವ ಸಾರ್ವತ್ರಿಕ ಸಂದೇಶವನ್ನು ಚಿತ್ರ ನೀಡುತ್ತದೆ. ಇಲ್ಲಿನ ತಿರುಳು ಸ್ತ್ರೀತ್ವ ಪ್ರಾದೇಶಿಕತೆಯನ್ನು ಮೀರಿದ್ದು. ಅದನ್ನು ಮನಗಂಡೇ ನಾವು ಪ್ರದರ್ಶನ ಏರ್ಪಡಿಸಿದೆವು ಎಂದು ಪಾಂಜಾ ಹೇಳಿದರು.

ಪ್ರದರ್ಶನಕ್ಕೂ ಮುನ್ನ ವಿದೇಶಾಂಗ ವ್ಯವಹಾರಗಳ ಸಚಿವ ಜಸ್ವಂತ್‌ ಸಿಂಗ್‌ ಚಿತ್ರ ನಿರ್ದೇಶಕ ಹಾಗೂ ಕುಂಚ ಪ್ರಪಂಚದಿಂದ ಸಿನಿಮಾರಂಗಕ್ಕೆ ಕಾಲಿಟ್ಟ ಹುಸೇನರನ್ನು ಅಭಿನಂದಿಸಿದರು. ಇಬ್ಬರೂ ರಾಜ್ಯಸಭೆಯಲ್ಲಿ ಸಹೋದ್ಯೋಗಿಗಳು. ತಮ್ಮ ಹೊಸ ಸೃಷ್ಟಿಯ ಬಗ್ಗೆ ಹುಸೇನರು ತುಸು ಹೆಮ್ಮೆಯಿಂದಲೇ ಹೇಳಿಕೊಂಡರು. ಇದು ಕೇವಲ ಕಲಾತ್ಮಕ ಚಿತ್ರ ಮಾತ್ರವಲ್ಲ . ಬಾಲಿವುಡ್‌ನ ಎಲ್ಲಾ ಚಮಕ್‌ಗಳೂ ಇಲ್ಲಿವೆ ಎಂದು ಬಾಕ್ಸ್‌ ಆಫೀಸನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿದ ಅವರು, ಸಾಮಾನ್ಯನತ್ತ ಕಲೆಯನ್ನು ಒಯ್ಯುವ ಪ್ರಯತ್ನ ಎಂದು ಗಜಗಾಮಿನಿಯನ್ನು ಬಣ್ಣಿಸಿಕೊಂಡರು.

ನಾನು ಕಂಡ ಹೆಣ್ಣಿನ ಮೂರು ಮುಖಗಳು ಚಿತ್ರದಲ್ಲಿವೆ. ಭಾರತೀಯ ಹೆಣ್ಣಿನ ಎಲ್ಲಾ ಮುಖಗಳನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದೇನೆ. ರಾಧಾಳಿಂದ ಮೀರಾವರೆಗಿನ ಎಲ್ಲಾ ಹೆಣ್ಣುಗಳನ್ನು ಮಾಧುರಿಯ ದೇಹ ಭಾವದಲ್ಲಿ ಸಮೀಕರಿಸಲು ಯತ್ನಿಸಿದ್ದೇನೆ ಎಂದು ಹುಸೇನರು ಹೇಳಿಕೊಂಡರು. ಅವರ ಪ್ರಕಾರ, ಸಂಗೀತ ಅಥವಾ ಕುಂಚ ಪ್ರಪಂಚಕ್ಕಿಂತ ಹೆಚ್ಚು ಪರಿಪೂರ್ಣವಾದ ಮಾಧ್ಯಮ ಸಿನಿಮಾ. ಅದರಲ್ಲಿ ಎಲ್ಲವೂ ಇದೆ. ಸಂವಹನಕ್ಕೆ ಅತ್ತ್ಯುತ್ತಮ ಮಾಧ್ಯಮ.

ಗಜಗಾಮಿನಿಯನ್ನು ತಲೆಯಲ್ಲಿ ತುಂಬಿಕೊಂಡ ಹುಸೇನರು ಮಾಧುರಿಯ ಬೆನ್ನು ಬಿದ್ದ ಕತೆ, ಅವರನ್ನು ಹುಚ್ಚರೆಂದು ಕೆಲವರು ಆಡಿಕೊಂಡದ್ದು ಈಗ ಹಳೆಯ ಕತೆ. ಗಜಗಾಮಿನಿಯೀಗ ಎಲ್ಲರೆದುರು ಅನಾವರಣಕ್ಕೆ ಸಿದ್ಧಳಾಗಿದ್ದಾಳೆ. ಹುಸೇನರ ಹುಚ್ಚುತನದ ಅರ್ಥಪೂರ್ಣತೆಯನ್ನು ಜನತೆ ನಿರ್ಣಯಿಸುವುದಷ್ಟೇ ಬಾಕಿಯುಳಿದಿದೆ.

English summary
Madhuri was the centre of attraction at gajagamini premiere

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada