ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ವಸತಿ ಶಾಲೆ ನಿರ್ಮಿಸುವಾಸೆ: ಜನಾರ್ದನ ರೆಡ್ಡಿ
ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಬಳ್ಳಾರಿಯಲ್ಲಿ ಉಚಿತ ವಸತಿ ಶಾಲೆ ನಿರ್ಮಾಣ ಮಾಡುವ ಆಸೆ ಇದೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಬಳ್ಳಾರಿಯ ರುಕ್ಮಿಣಮ್ಮ ಚಂಗಾರೆಡ್ಡಿ ಸ್ಮಾರಕ ವೃದ್ಧಾಶ್ರಮದಲ್ಲಿ ಆಯೋಜಿಸಿದ್ದ ಅಪ್ಪು ಪುಣ್ಯ ಸ್ಮರಣೆಯಲ್ಲಿ ಭಾಗವಹಿಸಿದ ಜನಾರ್ದನ ರೆಡ್ಡಿ ''ಪುನೀತ್ ರಾಜ್‌ಕುಮಾರ್‌ಗೆ ಇಂಥಹಾ ಕಾರ್ಯಕ್ರಮ ಮಾಡುವ ದಿನ ಬರುತ್ತೆ ಎಂದು ಎಣಿಸಿರಲಿಲ್ಲ. ಅಪ್ಪು ಅವರ ಸಮಾಜ ಸೇವೆ ಬಹಳ ದೊಡ್ಡದು, ಪಾಕಿಸ್ತಾನದಲ್ಲೂ ಅಪ್ಪು ಅಭಿಮಾನಿಗಳಿದ್ದಾರೆ'' ಎಂದರು.
''ಪುನೀತ್ ರಾಜ್‌ಕುಮಾರ್ ರಾಜ್ಯ ಕಂಡಿರುವ ಅತ್ಯಂತ ದೊಡ್ಡ ಕಲಾವಿದ. ಅವರು ಮಾಡಿದ ಸಾಮಾಜಿಕ ಸೇವೆ ಅನನ್ಯ. ಡಾ ರಾಜ್ ಕುಮಾರ್ ಅವರ ಚಿತ್ರಗಳಿಂದ ನಾವೆಲ್ಲಾ ಸಂಸ್ಕಾರ ಪಡೆದಿದ್ದೇವೆ. ತಂದೆಯಂತೆ ಪುನೀತ್ ರಾಜ್ ಕುಮಾರ್ ಅವರು ಕೂಡ ಒಳ್ಳೆಯ ಚಿತ್ರಗಳನ್ನೇ ನೀಡಿದ್ದಾರೆ. ತಂದೆಗೆ ಪ್ರತಿರೂಪವಾಗಿರುವ ಪುನೀತ್ ರಾಜ್ ಕುಮಾರ್ ಅವರಿಗೆ ಹಂಪಿ ಉತ್ಸವಕ್ಕೆ ಆಹ್ವಾನ ಮಾಡಲಾಗಿತ್ತು. ಅವರ ಸೌಜನ್ಯದ ನಡೆ ಇಡೀ ಸಮಾಜಕ್ಕೆ ಮಾದರಿ'' ಎಂದರು.

ನನ್ನ ಜನಗಳ ಜೊತೆ ಬದುಕುವಂತಾದರೆ ಸಾಕು: ರೆಡ್ಡಿ
ನಾನು ದೇವರಲ್ಲಿ ಬೇಡಿಕೊಳ್ಳುವುದು ಒಂದೇ ನನಗೆ ಯಾವುದೇ ರಾಜಕೀಯ ಪದವಿ, ಯಾವುದೂ ಬೇಡ. ಬಳ್ಳಾರಿಯಲ್ಲಿ ನನ್ನ ಜನರ ಜತೆ ಜೀವಿಸಲು ಅವಕಾಶ ಸಿಕ್ಕರೆ ಸಾಕು. ದೇವರು ಅವಕಾಶ ಮಾಡಿಕೊಟ್ಟರೆ ಇನ್ನಷ್ಟು ಸಮಾಜ ಸೇವೆ ಮಾಡುವೆ, ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಪ್ರಗತಿಗೆ ದುಡಿಯಬೇಕೆಂಬ ಹಂಬಲ ಇದೆ ಎಂದರು. ಸುಪ್ರೀಂ ಆದೇಶವಿಲ್ಲದೆ ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ನೀಡುವಂತಿಲ್ಲ. ಪ್ರಸ್ತುತ ಎಂಟು ವಾರಗಳ ಕಾಲ ಅವಕಾಶವನ್ನಷ್ಟೆ ಸುಪ್ರೀಂಕೋರ್ಟ್ ರೆಡ್ಡಿಗೆ ನೀಡಿದೆ. ಎಂಟು ವಾರದ ನಂತರ ಬಳ್ಳಾರಿ ಬಿಟ್ಟು ಹೊರಡಬೇಕಿದೆ ರೆಡ್ಡಿ.

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ
ಎಂಟು ವಾರಗಳ ಕಾಲ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ಇರಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಬಳ್ಳಾರಿಯಲ್ಲಿ ವಾಸಿಸುತ್ತಿರುವ ಜನಾರ್ದನ ರೆಡ್ಡಿ ಈವರೆಗೆ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇಂದು ಪತ್ನಿ ಜೊತೆ ಪುನಿತ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಸಕ ಸೋಮಶೇಖರ ರೆಡ್ಡಿ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಗೀತ ನಮನ ಹಮ್ಮಿಕೊಂಡಿರುವ ರೇಣುಕಾಚಾರ್ಯ
ಶಾಸಕ ರೇಣುಕಾಚಾರ್ಯ ಇಂದು ಹೊನ್ನಾಳಿಯಲ್ಲಿ ಪುನೀತ್ ಸ್ಮರಣಾರ್ಥ ಗೀತ ನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಇಂದು ಸಂಜೆ ಸಂಗೀತ ನಮನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣನ್ ಹಾಗೂ ತಂಡ ಹಾಡು ಹಾಡಲಿದೆ. ಜೊತೆಗೆ ಅಜಯ್ ವಾರಿಯರ್ ಸೇರಿದಂತೆ ಇನ್ನೂ ಕೆಲವು ಗಾಯಕರು ಹಾಡು ಹಾಡಲಿದ್ದಾರೆ. ಪುನೀತ್ ಅವರ ಬಾಲ್ಯದ ಗೆಳೆಯ ಹೊನ್ನವಳ್ಳಿ ಕೃಷ್ಣ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶ್ರದ್ಧಾಂಜಲಿ ಹಾಗೂ ಸಂಗೀತ ನಮನ ಕಾರ್ಯಕ್ರಮ ಅಷ್ಟೇ ಅಲ್ಲ. ಇದೇ ವೇದಿಕೆ ಮೇಲೆ ನೇತ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವು ಹೊನ್ನಾಳಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆಯಲಿದೆ. ಶಾಸಕ ರೇಣುಕಾಚಾರ್ಯ ಅವರೇ ಮುಂದೆ ನಿಂತು ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಸಿನಿಮಾ ಕ್ಷೇತ್ರದ ಗಣ್ಯರ ಜೊತೆಗೆ ಕೆಲವು ಸ್ಥಳೀಯ ರಾಜಕಾರಣಿಗಳು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ನೇತ್ರದಾನ ಮಾಡುವುದಾಗಿ ಘೋಷಿಸಿದ ರೇಣುಕಾಚಾರ್ಯ
ಕೆಲವು ದಿನಗಳ ಹಿಂದೆ ಅಪ್ಪು ಸಮಾಧಿಗೆ ಭೇಟಿ ನೀಡಿದ್ದ ರೇಣುಕಾಚಾರ್ಯ, ''ಪುನೀತ್ ಅವರನ್ನು ಆದರ್ಶವಾಗಿ ಪಡೆದು ನಾನು ಮತ್ತು ಕುಟುಂಬ ಸದಸ್ಯರು ನೇತ್ರದಾನ ಮಾಡಲಿದ್ದೇವೆ'' ಎಂದು ಹೇಳಿದ್ದರು. ಮುಂದುವರೆದು, ''ಅಪ್ಪು ಅವರ ಅಕಾಲಿಕ ಮರಣ ಕುಟುಂಬಕ್ಕೆ, ಕನ್ನಡ ನಾಡಿನ ಜನರಿಗೆ, ಅವರ ಅಭಿಮಾನಿಗಳಿಗೆ ದುಃಖ ತಂದಿದೆ. ಪುನೀತ್ ರಾಜ್‌ಕುಮಾರ್ ಅವರ ಸಮಾಜ ಸೇವೆಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಸರ್ಕಾರಿ ಶಾಲೆಗಳು, ಗೋಶಾಲೆಗಳು, ಆಶ್ರಮ, ಬಡವರ ವಿದ್ಯಾಭ್ಯಾಸಕ್ಕೆ ಹಣ ನೀಡಿವ ಮೂಲಕ ಸೇವೆಗಳನ್ನು ಮಾಡಿದ್ದಾರೆ. ಅಪ್ಪು ಮುಂದೆ ನಾವು ಏನೂ ಅಲ್ಲ. ಪುನೀತ್ ಸಹಾಯ ಮಾಡುತ್ತಿದ್ದ ಮೈಸೂರಿನ ಶಕ್ತಿಧಾಮಕ್ಕೆ ತಾನೂ ಕೈಲಾದ ಸಹಾಯ ಮಾಡುತ್ತೇನೆ'' ಎಂದು ಭರವಸೆ ನೀಡಿದ್ದರು.


Click it and Unblock the Notifications











