ಶಿವಣ್ಣ, ಪವನ್ ಕಲ್ಯಾಣ್ ಸೇರಿ ಹಲವು ಸ್ಟಾರ್‌ಗಳಿಂದ ಬಿಡುಗಡೆ ಆಗಲಿದೆ 'ಗಮನಂ' ಟ್ರೇಲರ್!
ಟ್ರೇಲರ್ ಬಿಡುಗಡೆ ಎಂಬುದು ಸಿನಿಮಾ ಸಂಬಂಧಿತ ಅತ್ಯಂತ ಪ್ರಮುಖ ಪ್ರಕ್ರಿಯಾಗಿ ಮಾರ್ಪಟ್ಟು ಬಹು ಕಾಲವಾಯಿತು.
ದಕ್ಷಿಣ ಭಾರತ ಬಹುತೇಕ ಸಿನಿಮಾಗಳು 'ಪ್ಯಾನ್ ಇಂಡಿಯಾ' ಸಿನಿಮಾಗಳಾಗಿ ಮಾರ್ಪಡುತ್ತಿರುವ ಈ ಸಂದರ್ಭದಲ್ಲಿ ಟ್ರೇಲರ್ ಬಿಡುಗಡೆ ಇತರೆ ಭಾಷೆಗಳಲ್ಲಿ ಪ್ರಚಾರದ ಪ್ರಮುಖ ಭಾಗವಾಗಿದೆ.
ಒಂದು ಭಾಷೆಯ ನಟರುಗಳು, ನಿರ್ಮಾಪಕರು, ನೆರೆಯ ರಾಜ್ಯದ ಸ್ಟಾರ್ ನಟರುಗಳಿಂದ ಆಯಾ ಭಾಷೆಯ ಟ್ರೇಲರ್ ಬಿಡುಗಡೆ ಮಾಡಿಸುವುದು ವಾಡಿಕೆಯಾಗಿ ಪರಿಣಮಿಸಿದೆ. ಈಗ ನಟ ಶಿವರಾಜ್ ಕುಮಾರ್ ನೆರೆಯ ಆಂಧ್ರದ ಪ್ರಮುಖ ತೆಲುಗು ಸಿನಿಮಾವೊಂದರ ಕನ್ನಡ ಟ್ರೇಲರ್ ಅನ್ನು ಬಿಡುಗಡೆ ಮಾಡಲಿದ್ದಾರೆ. ಪವನ್ ಕಲ್ಯಾಣ್ ಸೇರಿ ಹಲವು ಸ್ಟಾರ್ ನಟರು ಏಕಕಾಲಕ್ಕೆ ವಿವಿಧ ಭಾಷೆಗಳಲ್ಲಿ ಟ್ರೇಲರ್ ಅನ್ನು ಬಿಡುಗಡೆ ಮಾಡಲಿದ್ದಾರೆ.

ಟ್ರೇಲರ್ ಬಿಡುಗಡೆ ಮಾಡಲಿರುವ ಶಿವರಾಜ್ ಕುಮಾರ್
ತೆಲುಗಿನ ಮಹಿಳಾ ಪ್ರಧಾನ ಸಿನಿಮಾ 'ಗಮನಂ' ಸಿಸಿನಿಮಾದ ಕನ್ನಡ ಟ್ರೇಲರ್ ಅನ್ನು ಶಿವರಾಜ್ ಕುಮಾರ್ ಅವರು ನವೆಂಬರ್ 11 ರಂದು ಬೆಳಿಗ್ಗೆ 9:09 ಕ್ಕೆ ಬಿಡುಗಡೆ ಮಾಡಲಿದ್ದಾರೆ. 'ಗಮನಂ' ಸಿನಿಮಾ ಕನ್ನಡದಲ್ಲಿಯೂ ಬಿಡುಗಡೆ ಆಗಲಿದೆ.

ತೆಲುಗಿನಲ್ಲಿ ಪವನ್ ಕಲ್ಯಾಣ್ ರಿಂದ ಟ್ರೇಲರ್ ಲಾಂಚ್
ತೆಲುಗಿನಲ್ಲಿ ಇದೇ ಸಿನಿಮಾದ ಟ್ರೇಲರ್ ಅನ್ನು ಪವನ್ ಕಲ್ಯಾಣ್, ಹಿಂದಿಯಲ್ಲಿ ಸೋನು ಸೂದ್, ತಮಿಳಿನಲ್ಲಿ ಜಯಂ ರವಿ, ಮಲಯಾಳಂ ನಲ್ಲಿ ಫಹಾದ್ ಫಾಸಿಲ್ ಅವರು ಗಮನಂ ಸಿನಿಮಾದ ಟ್ರೇಲರ್ ಅನ್ನು ಅದೇ ನವೆಂಬರ್ 11 ರಂದು ಬೆಳಿಗ್ಗೆ ಬಿಡುಗಡೆ ಮಾಡಲಿದ್ದಾರೆ.

ಶ್ರಿಯಾ, ನಿತ್ಯಾ ಮೆನನ್, ಪ್ರಿಯಾಂಕಾ ಜವಾಲ್ಕರ್ ನಟನೆ
ಗಮನಂ ಸಿನಿಮಾ ಹಲವು ಕಾರಣಕ್ಕೆ ಗಮನ ಸೆಳೆದಿದೆ. ಸಿನಿಮಾವು ಮಹಿಳಾ ಪ್ರಧಾನ ಸಿನಿಮಾ ಆಗಿದ್ದು, ಶ್ರಿಯಾ ಶಿರಿನ್, ನಿತ್ಯಾ ಮೆನನ್, ಪ್ರಿಯಾಂಕಾ ಜವಾಲ್ಕರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಭಿನ್ನ ಕ್ಷೇತ್ರಗಳ, ಸ್ಥರದ ಮಹಿಳೆಯರ ಕತೆಯನ್ನು ಸಿನಿಮಾ ಹೊಂದಿದೆ.
Recommended Video

ಸುಜನಾ ರಾವ್ ನಿರ್ದೇಶನ
'ಗಮನಂ' ಸಿನಿಮಾವನ್ನು ಸುಜನಾ ರಾವ್ ನಿರ್ದೇಶಿಸಿದ್ದಾರೆ. ಸಿನಿಮಾಕ್ಕೆ ನಾಲ್ಕು ಮಂದಿ ವಿವಿಧ ತಂತ್ರಜ್ಞರು ಬಂಡವಾಳ ಹೂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್ ಒಂದು ಬಿಡುಗಡೆ ಆಗಿದೆ.


Click it and Unblock the Notifications











