'ಮದಕರಿ ನಾಯಕ' ಚಿತ್ರದುರ್ಗದಲ್ಲಿ ಮುಹೂರ್ತ, ಬೆಂಗಳೂರಿನಲ್ಲಿ ಅಧಿಕೃತ ಲಾಂಚ್ ಕಾರ್ಯಕ್ರಮ
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ 'ಗಂಡುಗಲಿ ಮದಕರಿ ನಾಯಕ' ಚಿತ್ರಕ್ಕೆ ಇಂದು ಮುಹೂರ್ತ ನೆರವೇರಲಿದೆ. ಚಿತ್ರದುರ್ಗದಲ್ಲಿ ಇಂದು ಮದಕರಿ ನಾಯಕ ಚಿತ್ರಕ್ಕೆ ಚಾಲನೆ ಸಿಗಲಿದೆ. ವಿಶೇಷ ಅಂದರೆ ಇಂದು ಚಿತ್ರಕ್ಕೆ ದುರ್ಗದಲ್ಲಿ ಮುಹೂರ್ತ ನೆಡೆದರೆ, ಅಧಿಕೃತವಾಗಿ ಬೆಂಗಳೂರಿನಲ್ಲಿ ಚಿತ್ರ ಲಾಂಚ್ ಮಾಡಲು ಪ್ಲಾನ್ ಮಾಡಿದೆ ಚಿತ್ರತಂಡ.
ಡಿಸೆಂಬರ್ 6ಕ್ಕೆ ಬೆಂಗಳೂರಿನಲ್ಲಿ 'ಗಂಡುಗಲಿ ಮದಕರಿ ನಾಯಕ' ಚಿತ್ರವನ್ನು ಅಧಿಕೃತವಾಗಿ ಲಾಂಚ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡುವ ಸಾಧ್ಯತೆ ಇದೆ. ಈಗಾಗಲೆ ಚಿತ್ರದುರ್ಗದಲ್ಲಿ ಮದಕರಿ ನಾಯಕ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಇಡೀ ಚಿತ್ರತಂಡ ಅಂದರೆ ನಾಯಕ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಅನೇಕರು ಚಿತ್ರದುರ್ಗದಲ್ಲಿ ಹಾಜರಿದ್ದಾರೆ.
ಬರಹಗಾರ ಬಿ ಎಲ್ ವೇಣು ಅವರ ಕೃತಿಯನ್ನು ಆಧಾರಿತವಾಗಿ ಗಂಡುಗಲಿ ಮದಕರಿ ನಾಯಕ ಸಿನಿಮಾ ಮೂಡಿ ಬರಲಿದೆ. ಬಹುನಿರೀಕ್ಷೆಯ ಚಿತ್ರದ ಚಿತ್ರೀಕರಣ ಮುಂಬೈ, ಹೈದರಾಬಾದ್, ರಾಜಸ್ಥಾನಗಳಲ್ಲಿ ನಡೆಸಲು ಚಿತ್ರತಂಡ ಪ್ಲಾನ್ ಮಾಡಿದೆ. ದರ್ಶನ್ ಅಭಿನಯದ ಎರಡನೆ ಐತಿಹಾಸಿಕ ಚಿತ್ರ ಇದಾಗಿದೆ. ಈ ಮೊದಲು ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ದರ್ಶನ್ ನಾಯಕನಾಗಿ ಮಿಂಚಿದ್ದರು.

ಬಿಗ್ ಬಜೆಟ್ ನಲ್ಲಿ ಅದ್ದೂರಿಯಾಗಿ ತಯಾರಾಗುತ್ತಿರುವ 'ಗಂಡುಗಲಿ ಮದಕರಿ ನಾಯಕ' ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲು ನಿರ್ಮಿಸಲಿದೆ ಎನ್ನುವುದು ಚಿತ್ರತಂಡದ ನಂಬಿಕೆ. ಚಿತ್ರಕ್ಕೆ ನಾದಬ್ರಹ್ಮ ಹಂಸಲೇಖ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿವೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಭಾರಿ ನಿರೀಕ್ಷೆ ಮೂಡಿಸಿರುವ 'ಗಂಡುಗಲಿ ಮದಕರಿ ನಾಯಕ'ನ ಆಳ್ವಿಕೆ ಹೇಗಿರಲಿದೆ ಎನ್ನುವುದನ್ನು ನೋಡಬೇಕಾದರೆ ಇನ್ನು ಒಂದಿಷ್ಟು ದಿನ ಕಾಯಲೆ ಬೇಕು.


Click it and Unblock the Notifications











