ದುನಿಯಾ ವಿಜಯ್ ಕಾಂಬಿನೇಷನ್ ಚಿತ್ರಕ್ಕೆ ಗಣೇಶ್ ಗ್ರೀನ್ ಸಿಗ್ನಲ್
ದುನಿಯಾ ವಿಜಯ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಹೆಚ್ಚು ಕಮ್ಮಿ ಒಟ್ಟೊಟ್ಟಿಗೆ ಚಿತ್ರರಂಗಕ್ಕೆ ಬಂದವರು. 'ಮುಂಗಾರುಮಳೆ' ಚಿತ್ರದಿಂದ ಗಣಿ ದೊಡ್ಡ ಸಕ್ಸಸ್ ಕಂಡರೆ 2 ತಿಂಗಳ ಅಂತರದಲ್ಲಿ 'ದುನಿಯಾ' ಸಿನಿಮಾ ಮಾಡಿ ವಿಜಯ್ ಗೆದ್ದಿದ್ದರು. ಇದೀಗ ಇಬ್ಬರ ಹೊಸ ಸಿನಿಮಾಗಳು ಒಂದು ವಾರದ ಅಂತರದಲ್ಲಿ ತೆರೆಗೆ ಬರ್ತಿದೆ.
ಶ್ರೀನಿವಾಸ್ ಪ್ರಭು ನಿರ್ದೇಶನದಲ್ಲಿ ಗಣೇಶ್ ನಟನೆಯ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ. ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ 'ಭೀಮ' ಸಿನಿಮಾ ಒಂದು ವಾರ ಮುಂದೆ ರಿಲೀಸ್ ಆಗಲಿದೆ. ವಿಜಿ-ಗಣಿ ಇಬ್ಬರೂ ಮೊದಲಿನಿಂದಲೂ ಆತ್ಮೀಯ ಸ್ನೇಹಿತರು. ಇಬ್ಬರೂ ಸಣ್ಣಪುಟ್ಟ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಬಂದವರು. ಸಾಕಷ್ಟು ಸಂಕಷ್ಟ ಎದುರಿಸಿ ಬಳಿಕ ಹೀರೊ ಆಗಿ ಗೆದ್ದವರು.

ಇದೀಗ ಸ್ನೇಹಿತರ ಸಿನಿಮಾಗಳು ಹೆಚ್ಚು ಕಮ್ಮಿ ಒಟ್ಟೊಟ್ಟಿಗೆ ತೆರೆಗೆ ಬರ್ತಿದೆ. ಇದನ್ನು ಕೆಲವರು ಬಾಕ್ಸಾಫೀಸ್ ಕ್ಲ್ಯಾಶ್ ಎಂದು ಬಣ್ಣಿಸುತ್ತಿದ್ದಾರೆ. ಆದರೆ ನಮ್ಮಿಬ್ಬರ ನಡುವೆ ಯಾವುದೇ ಕ್ಲ್ಯಾಶ್ ಇಲ್ಲ, ಪೈಪೋಟಿ ಇಲ್ಲ. ಯಾಕೆಂದರೆ ನಾವಿಬ್ಬರು ಸ್ನೇಹಿತರು ಎಂದು ಒಟ್ಟಿಗೆ ಮಾತನಾಡಿ ಎರಡೂ ಸಿನಿಮಾಗಳ ಪ್ರಚಾರ ಮಾಡುತ್ತಿದ್ದಾರೆ. ವಿಶೇಚ ಸಂದರ್ಶನದಲ್ಲಿ ಇಬ್ಬರೂ ಒಟ್ಟಿಗೆ ಮಾತನಾಡಿದ್ದಾರೆ.
'ಭೀಮ ಮೀಟ್ಸ್ ಕೃಷ್ಣಂ ಪ್ರಣಯಸಖಿ' ಹೆಸರಿನಲ್ಲಿ ಈ ಸ್ಪೆಷಲ್ ಚಿಟ್‌ಚಾಟ್ ಸೆರೆ ಹಿಡಿಯಲಾಗಿದೆ. ಇಬ್ಬರೂ ಮೈದಾನವೊಂದರಲ್ಲಿ ವಾಕ್ ಮಾಡುತ್ತಾ ತಮ್ಮ ತಮ್ಮ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಇಬ್ಬರ ಸ್ನೇಹ, ಆರಂಭದ ದಿನಗಳ ಬಗ್ಗೆ ಹರಟಿದ್ದಾರೆ. ಕೊನೆಗೆ ನಾವಿಬ್ಬರು ಒಟ್ಟಿಗೆ ಸಿನಿಮಾ ಮಾಡಬೇಕು, ನನ್ನ ನಿರ್ದೇಶನದಲ್ಲಿ ನೀನು ನಟಿಸಬೇಕು ಎಂದು ವಿಜಿ ಕೇಳಿದ್ದು ಕೂಡಲೇ ಗಣಿ ಓಕೆ ಎಂದಿದ್ದಾರೆ.
ಒಂದು ಒಳ್ಳೆಯ ಸಬ್ಜೆಕ್ಟ್ ಮಾಡೋಣ. ನಾವಿಬ್ಬರು ಒಟ್ಟಿಗೆ ಸಿನಿಮಾ ಮಾಡಿದರೆ ಅದು ಸದಾ ನೆನಪಿನಲ್ಲಿ ಉಳಿಯಬೇಕು ಎಂದು ವಿಜಯ್ ಹೇಳಿದ್ದಾರೆ. 'ಮುಂಗಾರು ಮಳೆ' ಹಾಗೂ 'ದುನಿಯಾ' ಸಿನಿಮಾಗಳು ಗೆದ್ದಾಗ ಅದು ಬಹಳ ದಿನ ನಮ್ಮಿಬ್ಬರಿಗೂ ಗೊತ್ತೇ ಇರಲಿಲ್ಲ. ಐದಾರು ವರ್ಷಗಳ ಬಳಿಕವೇ ನಾವಿಬ್ಬರೂ ಹೀರೊ ಆಗಿದ್ದೀವಿ ಎಂದು ಗೊತ್ತಾಗಿದ್ದು ಎಂದು ದುನಿಯಾ ವಿಜಯ್ ಹೇಳಿದ್ದಾರೆ.

ವಿಜಿ ಪರಿಶ್ರಮದ ಬಗ್ಗೆ ಗಣೇಶ್ ನೆನಪಿಸಿಕೊಂಡಿದ್ದಾರೆ. ಆಗ ಪಾರ್ಕ್‌ನಲ್ಲಿ ವಿಜಿ ಏನೇನೋ ಕಸರತ್ತು ಮಾಡ್ತಿದ್ದ. ಅದನ್ನ ನೋಡಿ ನಾನು ಯಾಕೆ ಎಂದರೆ ಒಂದು ಸಿನಿಮಾ ಸಿಕ್ಕಿದೆ. ಎರಡು ದಿನ ಚಿತ್ರೀಕರಣ ಎಂದು ಹೇಳುತ್ತಿದ್ದ. ಆ ಸಣ್ಣ ಪಾತ್ರಕ್ಕೆ ವಿಜಿ ಹೋಂ ವರ್ಕ್ ನೋಡಿ ನನಗೆ ಅಚ್ಚರಿ ಆಗುತ್ತಿತ್ತು ಎಂದು ಗಣೇಶ್ ನೆನಪಿಸಿಕೊಂಡಿದ್ದಾರೆ. ವಿಜಯ್ ಯಾರ್ ಜೊತೆ ಜಗಳ ಮಾಡಿಕೊಂಡಿದ್ದಾನೋ ಗೊತ್ತಿಲ್ಲ, ನಾವಿಬ್ಬರು ಮಾತ್ರ ಎಂದೂ ಜಗಳವಾಡಿಲ್ಲ ಎಂದಿದ್ದಾರೆ.
ರಾತ್ರಿ 12 ಗಂಟೆಗೆ ಯಾರಾದರೂ ಫೋನ್ ಮಾಡಿ ಕರೆದರೆ ಹಿಂದು ಮುಂದು ಯೋಚಿಸದೇ ಹೋಗುವವನು ನಾನು, ಅದೇ ರೀತಿ ಅವನು ಕರೆದರೆ ನಾನು ಎದ್ದು ಹೋಗುತ್ತೇನೆ ಅಂತಹ ಸ್ನೇಹ ನಮ್ಮಿಬ್ಬರದು ಎಂದು ಗಣೇಶ್ ಹೇಳಿದ್ದಾರೆ. ವಿಜಯ್ 'ಸಲಗ' ಸಿನಿಮಾ ಮಾಡಿದಾಗ ನನಗೆ ಬಹಳ ನಿರೀಕ್ಷೆ ಇತ್ತು. ಸಿನಿಮಾ ನೋಡಿ ನಿಜಕ್ಕೂ ಖುಷಿ ಆಗಿತ್ತು ಎಂದು ಗಣೇಶ್ ಹೇಳಿದ್ದಾರೆ.
ಊಟ ಮಾಡದೇ ಇದ್ದಾಗ ಹಸಿವಾದರೂ ವಿಜಿ ಮಾರ್ಕೆಟ್‌ನಲ್ಲಿ ಸೈಲೆಂಟ್ ಆಗಿ ಕ್ಯಾರೆಟ್, ಬೀಟ್‌ರೋಟ್ ಎತ್ತಿಕೊಂಡುಬಿಡುತ್ತಿದ್ದ. ನನ್ನ ರೂಂಗೆ ಹೋಗಿ ಅದನ್ನೇ ತಿನ್ನುತ್ತಿದ್ದೆವು. ಅದೇ ನಮ್ಮ ರಾತ್ರಿ ಊಟ ಆಗಿರುತ್ತಿತ್ತು. 'ಭೀಮ' ಲುಕ್ ನೋಡಿದರೆ 20 ವರ್ಷಗಳ ಹಿಂದಿನ ವಿಜಿ ನೆನಪಾಗುತ್ತಾನೆ. ಅದೇ ಲುಕ್‌ನಲ್ಲಿ ಆಗ ವಿಜಿ ಬೈಕ್ ಏರಿ ಬರ್ತಿದ್ದ. ಕೂದಲಿಗೆ ಜೆಲ್ ಹಾಕಿಕೊಂಡು ಬರ್ತಿದ್ದ ಸ್ಟೈಲ್ ನೋಡಿ ಸೇಮ್ ಶಾರುಖ್ ಖಾನ್ ತರ ಇದ್ದೀಯಾ ಎನ್ನುತ್ತಿದ್ದೆ ಎಂದು ಗಣೇಶ್ ಆ ದಿನಗಳಿಗೆ ಜಾರಿದ್ದಾರೆ.


Click it and Unblock the Notifications











