ಗೊಲ್ಡನ್ ಸ್ಟಾರ್ ಗಣೇಶ್ 'ಆಟೋರಾಜ'ಮುಹೂರ್ತ ಫಿಕ್ಸ್

ಗಣೇಶ್ ನಟನೆಯ ರೋಮಿಯೋ ಚಿತ್ರ ಈಗ ತೀರಾ ಯಶಸ್ವಿ ಎನ್ನುವಂತಿಲ್ಲದಿದ್ದರೂ ತಕ್ಕಮಟ್ಟಿಗೆ ಓಡುತ್ತಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಗಣೇಶ್ ಅವರಿಗೆ, ರೋಮಿಯೋ ಚಿತ್ರ ಗೆಲುವಿನ ನಗೆ ವಾಪಸ್ ಕೊಟ್ಟಿದೆ. ಸಕ್ಕರೆ ಚಿತ್ರೀಕರಣದಲ್ಲಿರುವ ಗಣೇಶ್ ಗೆ ವೃತ್ತಿಜೀವನದಲ್ಲಿ ಕೂಡ ಸಕ್ಕರೆ ದೊರೆತಿದೆ. ಇನ್ನು ಆಟೋ ರಾಜನಾಗಿ ಮೆರೆಯುವುದಷ್ಟೇ ಬಾಕಿ.
ಈ ಮೊದಲು 'ಕಳ್ಳ ಮಳ್ಳ ಸುಳ್ಳ' ಚಿತ್ರವನ್ನು ನಿರ್ದೇಶಿಸಿ ಯಶಸ್ವಿಯಾಗಿಸಿದ್ದ ನಿರ್ದೇಶಕ ಉದಯ ಪ್ರಕಾಶ್, ಈ ಆಟೋ ರಾಜ ಚಿತ್ರದ ನಿರ್ದೇಶಕರು. ಎಂಡಿ ವಿಶ್ವ ಹಾಗೂ ಗಿರೀಶ್, ಈ ಚಿತ್ರದ ನಿರ್ಮಾಪಕರು. ಆಟೋ ರಾಜನ ಜೋಡಿಯಾಗಿ ಈ ಮೊದಲು ಗಣೇಶ್ ನಟಿಸಿದ್ದ 'ಶೈಲೂ' ನಾಯಕಿ ಭಾಮಾ ಆಯ್ಕೆಯಾಗಿದ್ದಾರೆ. ಇನ್ನು ಮಿಕ್ ನಟ-ನಟಿಯರು ಹಾಗೂ ತಂತ್ರಜ್ಞರ ಆಯ್ಕೆ ಬಹುತೇಕ ಮುಗಿದಿದೆ.
ಆಗಸ್ಟ್ 9, 2012 ರಂದು ಲಾಂಚ್ ಆಗಲಿರುವ ಈ ಹೊಸ ಆಟೋ ರಾಜ ಚಿತ್ರಕ್ಕೂ, ಈ ಮೊದಲು ಶಂಕರ್ ನಾಗ್-ಗಾಯತ್ರಿ ಜೋಡಿಯಲ್ಲಿ ಬಂದಿದ್ದ ಚಿತ್ರ ಆಟೋ ರಾಜಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ನಿರ್ದೇಶಕ ಉದಯ ಪ್ರಕಾಶ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಹೋಲಿಕೆಗೆ ಯಾವುದೇ ಆಸ್ಪದವಿಲ್ಲ. ಜೊತೆಗೆ ಹೊಸ ಆಟೋ ರಾಜ ಹೇಗಿರಬಹುದು ಎಂಬ ಕುತೂಹಲ ಸಹವಾಗಿ ಎಲ್ಲರಲ್ಲಿ ಮೂಡಿದೆ.
ಗಣೇಶ್ ಅವರ ಆಟೋ ರಾಜ ಚಿತ್ರಕ್ಕಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ರೋಮಿಯೋ ಚಿತ್ರದ ಮೂಲಕ ಕಳೆದು ಹೋಗಿದ್ದ ತಮ್ಮ ಇಮೇಜನ್ನು ಮತ್ತೆ ಗಳಿಸಿಕೊಂಡಿರುವ ಗಣೇಶ್, ಸಕ್ಕರೆ ಹಾಗೂ ಆಟೋರಾಜನ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಅದರಲ್ಲೂ ಈಗಾಗಲೇ ಬಂದಿರುವ ಚಿತ್ರದ 'ಕ್ಯಾಚಿ'ಯಾಗಿರುವ ಹೆಸರಿಟ್ಟುಕೊಂಡು ಬರುತ್ತಿರುವ 'ಆಟೋರಾಜ' ಚಿತ್ರಕ್ಕಾಗಿ ಗಣೇಶ್ ಅಭಿಮಾನಿಗಳು ಕಾಯುತ್ತಿದ್ದಾರೆ.


Click it and Unblock the Notifications











