Ganesh Chaturthi 2023: ಸ್ಯಾಂಡಲ್‌ವುಡ್ ತಾರೆಯರ ಮನೆ ಮನಗಳಲ್ಲಿ ಗಣೇಶ ಹಬ್ಬದ ಸಂಭ್ರಮ
ದೇಶದೆಲ್ಲೆಡೆ ಜನ ಸಡಗರ ಸಂಭ್ರಮದಿಂದ ಗೌರಿ-ಗಣೇಶ ಹಬ್ಬ ಆಚರಿಸುತ್ತಿದ್ದಾರೆ. ವಿನಾಯಕ ಮಂಡಳಿಯಿಂದ ಬೀದಿ ಬೀದಿಯಲ್ಲಿ ಪೆಂಡಾಲ್ ಹಾಕಿ ವಿಘ್ನ ನಿವಾರಕನ ಆರಾಧನೆ ನಡೀತಿದೆ. ಕರ್ನಾಟಕದಲ್ಲಿ ಈ ಬಾರಿ ಹಬ್ಬದ ಸಂಭ್ರಮ ತುಸು ಜೋರಾಗಿದೆ. ಇನ್ನು ಸ್ಯಾಂಡಲ್‌ವುಡ್ ತಾರೆಯರು ಲಂಬೋದರನ ಪೂಜಿಸಿ ಆತನ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಕನ್ನಡ ಸಿನಿಮಾ ತಾರೆಯರು ಎಲ್ಲಾ ಹಬ್ಬಗಳನ್ನು ಬಹಳ ಜೋರಾಗಿಯೇ ಆಚರಿಸುತ್ತಾರೆ. ಇನ್ನು ಅಗ್ರಪೂಜೆಗೆ ಅಧಿಪತಿಯಾದ ಗಣೇಶನನ್ನು ಕೂಡ ಈ ಬಾರಿ ಮನೆಗಳಲ್ಲಿ ಪ್ರತಿಷ್ಠಾಪಿಸಿ ಖುಷಿಪಡುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಗಣೇಶ ಅಂದಾಕ್ಷಣ ನಮಗೆ ಸ್ಯಾಂಡಲ್‌ವುಡ್‌ನಲ್ಲಿ ನೆನಪಾಗುವುದು ರಿಯಲ್ ಸ್ಟಾರ್ ಉಪೇಂದ್ರ.

ಉಪ್ಪಿ ನಿರ್ದೇಶಿಸಿ ನಟಿಸಿದ ಮೊದಲ ಚಿತ್ರದಲ್ಲೇ ಗಣೇಶನನ್ನು ಕೋಪದಿಂದ ಬಾವಿಗೆ ಬಿಸಾಕುವ ಸನ್ನಿವೇಶ ಇತ್ತು. ಆದರೆ ನಿಜ ಜೀವನದಲ್ಲಿ ಉಪೇಂದ್ರ ಗಜಮುಖನ ದೊಡ್ಡ ಭಕ್ತರು. ಪ್ರತಿವರ್ಷ ರಿಯಲ್ ಸ್ಟಾರ್ ಮನೆಯಲ್ಲಿ ಗಣೇಶ್ ಹಬ್ಬದ ಸಡಗರ ಜೋರಾಗಿರುತ್ತದೆ. ಈ ಬಾರಿ ಗಣೇಶ ಹಬ್ಬದ ದಿನವೇ ತಮ್ಮ ಹುಟ್ಟುಹಬ್ಬವನ್ನು ಕೂಡ ಉಪೇಂದ್ರ ಆಚರಿಸಿಕೊಳ್ಳುತ್ತಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿ ಉಪ್ಪಿ ಬಹಳ ವರ್ಷಗಳ ಬಳಿಕ ನಿರ್ದೇಶಿಸಿ ನಟಿಸುತ್ತಿರುವ 'UI' ಸಿನಿಮಾ ಟೀಸರ್ ರಿಲೀಸ್ ಆಗುತ್ತಿದೆ. ನಗರದ ಊರ್ವಶಿ ಚಿತ್ರಮಂದಿರದಲ್ಲಿ ಟೀಸರ್ ರಿಲೀಸ್ ಆಗ್ತಿದೆ. ಬಹಳ ಅದ್ಧೂರಿಯಾಗಿ ಈ ಟೀಸರ್ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿದೆ.
ನಟಿ ಪ್ರಣೀತಾ ಮನೆಯಲ್ಲಿ ಗಣೇಶ ಹಬ್ಬದ ಕಳೆಕಟ್ಟಿದೆ. ಖುದ್ದು ಆಕೆ ತೋರಣ ಕಟ್ಟಿ, ರಂಗೋಲಿ ಬಿಡಿಸಿ, ಮೋದಕ ಸಿದ್ಧಪಡಿಸಿ ಅಂಗಡಿಗೆ ಹೋಗಿ ಗಣೇಶ ಮೂರ್ತಿ ತಂದು ಮನೆಯಲ್ಲಿ ಪ್ರತಿಷ್ಠಾಪಿಸಿ ಪತಿ ಹಾಗೂ ಫ್ಯಾಮಿಲಿ ಜೊತೆ ಹಬ್ಬ ಆಚರಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ನಟಿ ರಾಧಿಕಾ ಪಂಡಿತ್ ಕೂಡ ಎಲ್ಲರಿಗೂ ಗೌರಿ- ಗಣೇಶ ಹಬ್ಬದ ಶುಭಾಶಯ ಕೋರಿದ್ದಾರೆ. ಪುಟಾಣಿ ಗಣೇಶ ಮೂರ್ತಿಗಳನ್ನು ಹಿಡಿದ ಐರಾ, ಯಥರ್ವ್ ಜೊತೆ ಫೋಟೊ ಕ್ಲಿಕ್ಕಿಸಿ ಶೇರ್ ಮಾಡಿದ್ದಾರೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಯಶ್ ಬಾಸ್ ಎಲ್ಲಿ? ಯಶ್19 ಅಪ್‌ಡೇಟ್ ಕೊಡಿಸಿ ಎಂದು ಕಾಮೆಂಟ್ ಬಾಕ್ಸ್‌ನಲ್ಲಿ ಮನವಿ ಮಾಡಿದ್ದಾರೆ.
ನಟ ಅನಿರುದ್ದ್ ಜತ್ಕರ್ ಮನೆಯಲ್ಲಿ ಗೌರಿ ಗಣೇಶ ಹಬ್ಬದ ಸಡಗರ ಮನೆ ಮಾಡಿತ್ತು. ಪತ್ನಿ ಕೀರ್ತಿ ಜೊತೆ ಹಬ್ಬ ಆಚರಿಸಿದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇಂದು(ಸೆಪ್ಟೆಂಬರ್ 18) ಸ್ಯಾಂಡಲ್‌ವುಡ್‌ನಲ್ಲಿ ಬರೀ ಉಪೇಂದ್ರ ಹುಟ್ಟುಹಬ್ಬ ಮಾತ್ರವಲ್ಲ. ಸಾಹಸ ಸಿಂಹ ವಿಷ್ಣುವರ್ಧನ್, ನಟಿ ಶ್ರುತಿ ಹುಟ್ಟುಹಬ್ಬ ಕೂಡ. ದಾದಾಗೆ ಅನಿರುದ್ಧ್ ಹುಟ್ಟುಹಬ್ಬದ ಶುಭಾಶಯ ಕೂಡ ಕೋರಿದ್ದಾರೆ.
ಇನ್ನು ಹಿರಿಯ ನಟಿ ತಾರಾ ಅನುರಾಧ ತಮ್ಮ ಜೆಪಿ ನಗರದ ನಿವಾಸದಲ್ಲಿ ಪತಿ ವೇಣು ಹಾಗೂ ಪುತ್ರನ ಜೊತೆ ಗಣೇಶನ ಆರಾಧಿಸಿದ್ದಾರೆ. ನಟಿ ಶರ್ಮಿಳಾ ಮಾಂಡ್ರೆ ಗಣೇಶ ಮೂರ್ತಿ ಅಂಗಡಿಯಲ್ಲಿ ಕ್ಲಿಕ್ಕಿಸಿದ ಫೋಟೊ ಶೇರ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಗಾಯಕ ವಿಜಯ ಪ್ರಕಾಶ್, ನಟ ನೆನಪಿರಲಿ ಪ್ರೇಮ್ ಹೀಗೆ ಚಂದನವನದ ತಾರೆಯರ ಮನೆಮನಗಳಲ್ಲಿ ಗಣೇಶ ಹಬ್ಬದ ಸಡಗರ ಮನೆ ಮಾಡಿದೆ.


Click it and Unblock the Notifications











