ಹೊಸ ಚಿತ್ರ-ಹೊಸ ನಿರ್ದೇಶಕರನ್ನ ಖಚಿತ ಪಡಿಸಿದ ಗೋಲ್ಡನ್ ಸ್ಟಾರ್
ಗೋಲ್ಡನ್ ಸ್ಟಾರ್ ಗಣೇಶ್ 'ಚಮಕ್' ಚಿತ್ರದ ಸೂಪರ್ ಸಕ್ಸಸ್ ನಂತರ 'ಆರೆಂಜ್' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದರ ನಡುವೆ ಈಗ ಮತ್ತೊಂದು ಹೊಸ ಚಿತ್ರವನ್ನ ಒಪ್ಪಿಕೊಂಡಿದ್ದಾರೆ.
'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮತ್ತು 'ರಾಜಕುಮಾರ' ನಂತರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಜೊತೆ ಕೆಲಸ ಮಾಡುತ್ತಿದ್ದ ಸಹ ನಿರ್ದೇಶಕ ವಿಜಯ್ ನಾಗೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್ ಮುಂದಿನ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ ಎಂಬುದನ್ನ ನಾವೇ ಹೇಳಿದ್ವಿ.
ಇದೀಗ, ಈ ವಿಷ್ಯವನ್ನ ಸ್ವತಃ ಗಣೇಶ್ ಅವರೇ ಖಚಿತಪಡಿಸಿದ್ದಾರೆ. ಈ ಚಿತ್ರ ಹೇಗೆ ಓಕೆ ಆಯ್ತು ಎನ್ನುವುದರ ಬಗ್ಗೆ ಟ್ವೀಟ್ ಮಾಡಿರುವ ಗಣೇಶ್ ಸಿನಿಮಾದ ಬಗ್ಗೆ ಸಣ್ಣದೊಂದು ಸುಳಿವು ನೀಡಿದ್ದಾರೆ.
''ಸಂತೋಷ್ ಆನಂದ್ ರಾಮ್ ಅವರನ್ನ ಮೊದಲ ಸಲ ಭೇಟಿಯಾದಗ ಅವರ ಕೋ-ಡೈರೆಕ್ಟರ್ ಹಾಗೂ ಸಹ ಬರಹಗಾರ ವಿಜಯ್ ನಾಗೇಂದ್ರ ಅವರು ನನಗೊಂದು ಕಥೆ ಮಾಡ್ತಾ ಇದ್ದಾರೆ ಅಂತ ತಿಳಿಯಿತು''.

''ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮತ್ತು 'ರಾಜಕುಮಾರ' ಚಿತ್ರಗಳಿಗೆ ಕೆಲಸ ಮಾಡಿರೋ ವಿಜಯ್ ಅವರ ಕಥೆ ಕೇಳಲು ಖುಷಿಯಿಂದ ಒಪ್ಪಿದೆ. ವಿಜಯ್ ನಾಗೇಂದ್ರ ಬಂದು ಕಥೆ ಹೇಳಿದ್ರು. ನಿಮ್ಮ ಗಣೇಶ್ ನ ನೀವು ಯಾವ ತರ ನೋಡಬೇಕು ಅಂತ ಬಯಸಿದ್ದಿರೋ ಅದೇ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಈ ಚಿತ್ರವನ್ನ ನಿರ್ಮಾಣ ಮಾಡುತ್ತಿರುವ ಹೆಚ್.ಎಲ್.ಎನ್ ರಾಜ್ ಅವರಿಗೂ, ನನ್ನ ತಂಡದವರಿಗೂ ಹಾಗೂ ವಿಜಯ್ ನಾಗೇಂದ್ರ ಅವರಿಗೂ ಆಲ್ ದಿ ಬೆಸ್ಟ್'' ಎಂದು ಸಂತಸ ಹಂಚಿಕೊಂಡಿದ್ದಾರೆ.
ಇನ್ನು ಸಿನಿಮಾದ ಕೆಲಸ ಆರಂಭಿಸಿರುವ ಚಿತ್ರತಂಡ ಸಿನಿಮಾ ಟೈಟಲ್ ಮತ್ತು ಇನ್ನುಳಿದ ಮಾಹಿತಿಗಳನ್ನ ಜುಲೈ ತಿಂಗಳಿನಲ್ಲಿ ನೀಡಲಿದೆ ಎಂದು ಸ್ವತಃ ಗೋಲ್ಡನ್ ಸ್ಟಾರ್ ತಿಳಿಸಿದ್ದಾರೆ.
ಇದಕ್ಕೂ ಮುಂಚೆ ನಿರ್ದೇಶಕ ಸಂತೋಷ್ ಆನಂದ್ ರಾಮ್, ತಮ್ಮ ಸ್ನೇಹಿತ ಮತ್ತು ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ವಿಜಯ್ ನಾಗೇಂದ್ರ ಅವರ ಹೊಸ ಚಿತ್ರದ ಬಗ್ಗೆ ಫೇಸ್ ಬುಕ್ ನಲ್ಲಿ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ದರು.


Click it and Unblock the Notifications











