ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಹುಡುಗಿ ಬಟ್ಟೆ ಹರಿದು ಕಿರುಕುಳ; ಶಾಕಿಂಗ್ ಸಂಗತಿ ಬಿಚ್ಚಿಟ್ಟ ಗಣೇಶ್ ಕಾರಂತ್!
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಯಾರು ಈ ದುರಂತಕ್ಕೆ ಕಾರಣ ಎನ್ನುವ ಬಗ್ಗೆ ಭಾರೀ ಚರ್ಚೆ ನಡೀತಿದೆ. ಘಟನೆಯಲ್ಲಿ 11 ಜನ ಸಾವನ್ನಪ್ಪಿದ್ದಾರೆ. ಈಗಾಗಲೇ ಸರ್ಕಾರ ಈ ಬಗ್ಗೆ ತನಿಖೆಗೆ ಆದೇಶಿಸಿದೆ. ಇನ್ನು ಘಟನೆ ಸಂಬಂಧ ಆರ್‌ಸಿಬಿ ವಿರುದ್ಧವೂ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಗಳವಾರ ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ 18ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡ ಗೆದ್ದು ಇತಿಹಾಸ ನಿರ್ಮಿಸಿತ್ತು. ಪಂಜಾಬ್ ವಿರುದ್ಧದ ರೋಚಕ ಪಂದ್ಯದಲ್ಲಿ ಪಟಿದಾರ್ ನೇತೃತ್ವದ ಬೆಂಗಳೂರು ತಂಡ ಗೆದ್ದು ಬೀಗಿತ್ತು. ಇದು ಸಹಜವಾಗಿಯೇ ಅಭಿಮಾನಿಗಳ ಸಂಭ್ರಮಕ್ಕೆ ಕಾರಣ ಆಗಿತ್ತು. ಅಹಮದಾಬಾದ್‌ನಿಂದ ತಂಡ ಬೆಂಗಳೂರಿಗೆ ಬಂದು ಅಭಿಮಾನಿಗಳ ಜೊತೆ ಸಂಭ್ರಮಾಚರಣೆಗೆ ವ್ಯವಸ್ಥೆ ನಡೆದಿತ್ತು.

ವಿಧಾನಸೌಧದ ಮುಂಭಾಗ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆಗೆ ಪ್ಲ್ಯಾನ್ ಮಾಡಲಾಗಿತ್ತು. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ಮೂಲಕ ಅಭಿಮಾನಿಗಳು ಒಮ್ಮೆಲೆ ಒಳಗೆ ಮುಂದಾಗಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು. ಈ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಜೀವ ಕಳೆದುಕೊಂಡಿದ್ದಾರೆ. 30ಕ್ಕೂ ಅಧಿಕ ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರ್‌ಸಿನಿ ಅಭಿಮಾನಿಗಳ ಹುಚ್ಚು ಅಭಿಮಾನದ ಬಗ್ಗೆಯೂ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟು ಜನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಕ ವಿಜಯೋತ್ಸವದಲ್ಲಿ ಯಾಕೆ ಭಾಗಿ ಆಗಬೇಕಿತ್ತು? ಸ್ಟೇಡಿಯಂ ಒಳಗೆ ಹೋಗಲು ಯಾಕೆ ಅಷ್ಟು ಆತುರಪಡಬೇಕಿತ್ತು? ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಇನ್ನು ಮರಗಳನ್ನು ಏರಿದವರು, ಕಾಂಪೌಡ್ ಹಾಡಿದವರ ಬಗ್ಗೆಯೂ ಅಸಮಾಧಾನ ವ್ಯಕ್ತವಾಗುತ್ತಿದೆ. ಸಂಭ್ರಮದ ಸಮಯದಲ್ಲಿ ದುರಂತ ಸಂಭವಿಸಿ ಎಲ್ಲರನ್ನೂ ದುಃಖಕ್ಕೆ ದೂಡಿದೆ. ನಿಜಕ್ಕೂ ಅಂತಹ ಹುಚ್ಚಾಟ ಬೇಕಿತ್ತಾ ಎಂದು ಕೆಲವರು ಕೇಳುತ್ತಿದ್ದಾರೆ.
ಇನ್ನು ಲಕ್ಷಾಂತರ ಅಭಿಮಾನಿಗಳು ಜಮಾಯಿಸಿದ್ದ ಸಮಯದಲ್ಲಿ ಕೆಲವರ ಮೊಬೈಲ್ ಫೋನ್‌ಗಳು ಕಳುವಾಗಿದೆ. ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದ ವೇಳೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಇದೆಲ್ಲದರ ನಡುವೆ ಮಹಿಳೆಯರ ಜೊತೆ ಕೆಲವರು ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಗಣೇಶ್ ಕಾರಂತ್ ಹೇಳಿದ್ದಾರೆ. ಕಾಲ್ತುಳಿಯ ಘಟನೆ ಬಗ್ಗೆ ಗಣೇಶ್ ಯೂಟ್ಯೂಬ್ ವೀಡಿಯೋ ಮಾಡಿ ಮಾತನಾಡಿದ್ದಾರೆ.
ತಮ್ಮ ಸ್ನೇಹಿತರ ಸಂಬಂಧಿ ಒಬ್ಬರು ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದಳು. ಆಕೆಯ ಜೊತೆ ಕೆಲವರು ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಗಣೇಶ್ ಹೇಳಿದ್ದಾರೆ. "ಲಕ್ಷಾಂತರ ಜನ ಸೇರುತ್ತಾರೆ ಎಂದು ಗೊತ್ತಿದ್ದು ಯಾಕೆ ಅಷ್ಟು ಜನ ಹೋಗಬೇಕಿತ್ತು. ಕಾಲ್ತುಳಿತ ಮಾತ್ರವಲ್ಲ, ಇನ್ನು ಏನೇನೋ ನಡೆದಿದೆ. ನನ್ನ ಸ್ನೇಹಿತರೊಬ್ಬರು ಕರೆ ಮಾಡಿದ್ದರು. ಅವರ ಸಂಬಂಧಿ ಹುಡುಗಿಯೊಬ್ಬಳು ಕೂಡ ಸಂಭ್ರಮಾಚರಣೆಗೆ ಹೋಗಿ ಸಿಕ್ಕಿ ಹಾಕಿಕೊಂಡಿದ್ದಳಂತೆ. ಆಕೆಯ ಬಟ್ಟೆ ಹರಿದು ಕೆಲವರು ಕಿರುಕುಳ ಕೊಟ್ಟಿದ್ದಾರಂತೆ, ಅವಳು ಅಳುತ್ತಾ ಮನೆಗೆ ವಾಪಸ್ ಬಂದಳಂತೆ. ನಮ್ಮಲ್ಲಿ ಎಂತಹ ಹೊಲಸು ಜನ ಇದ್ದಾರೆ ಎಂದು ಗಣೇಶ್ ಕಾರಂತ್ ಬೇಸರ ವ್ಯಕ್ತಪಡಿಸಿದ್ದಾರೆ.
ಸದ್ಯ ಗಣೇಶ್ ಕಾರಂತ್ ಮಾತನಾಡಿರುವ ವೀಡಿಯೋ ವೈರಲ್ ಆಗುತ್ತಿದೆ. ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಇಂತಹ ಕೆಟ್ಟ ಘಟನೆಗಳು ನಡೀತಾ? ಎಂದು ಕೆಲವರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಏನು ಎಂದು ಕಾಮೆಂಟ್ ಮಾಡಿರುವವರು ಇದ್ದಾರೆ. ಪೊಲೀಸರು ಈ ಬಗ್ಗೆ ಗಮನ ಹರಿಸಬೇಕು ಎಂದು ಕಾಮೆಂಟ್ ಮಾಡಿ ಕೆಲವರು ಮನವಿ ಮಾಡಿದ್ದಾರೆ. ಕರಾವಳಿ ಭಾಗದ ಗಣೇಶ್ ಕಾರಂತ್ ಹಾಗೂ ಪತ್ನಿ ತಮ್ಮ ಫನ್ನಿ ವೀಡಿಯೋಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿದ್ದಾರೆ. ಜೀ-ಕನ್ನಡ ಜೋಡಿ ನಂ.1 ಶೋನಲ್ಲಿ ಸಹ ಭಾಗಿ ಆಗಿದ್ದರು.


Click it and Unblock the Notifications











