ಗಣೇಶ್ ರೌದ್ರಾವತಾರ ನೋಡಿದ್ರಾ? 'ಪಿನಾಕ' ಅಂದ್ರೆ ಏನು? ಟೀಸರ್ ಓಕೆ, ಆದ್ರೆ..
'ಕೃಷ್ಣಂ ಪ್ರಣಯಸಖಿ' ಚಿತ್ರ ಮಾಡಿ ಗಣೇಶ್ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಕಳೆದ ವರ್ಷ ಬಾಕ್ಸಾಫೀಸ್ ಶೇಕ್ ಮಾಡಿದ ಏಕೈಕ ರೊಮ್ಯಾಂಟಿಕ್ ಸಿನಿಮಾ ಅದು. ಇದೀಗ ಹೊಸ ವರ್ಷದಲ್ಲಿ ಹೊಸ ಚಿತ್ರವನ್ನು ಗೋಲ್ಡನ್ ಸ್ಟಾರ್ ಘೋಷಣೆ ಮಾಡಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಸಿನಿಮಾ ಆ ಸಿನಿಮಾ ಬರಲಿದೆ.
ತೆಲುಗಿನ ಪೀಪಲ್ ಮೀಡಿಯಾಂ ಫ್ಯಾಕ್ಟರಿ ಸಂಸ್ಥೆ ಗಣೇಶ್ ಮುಂದಿನ ಚಿತ್ರಕ್ಕೆ ಹಣ ಹೂಡಲಿದೆ. ಧನಂಜಯ್ ಎಂಬುವವರು ಆಕ್ಷನ್ ಕಟ್ ಹೇಳಲಿದ್ದಾರೆ. ಟೈಟಲ್ ಸಮೇತ ಚಿತ್ರದ ಟೀಸರ್ ರಿಲೀಸ್ ಆಗಿದೆ. 'ಪಿನಾಕ' ಎಂಬ ಟೈಟಲ್ ಫಿಕ್ಸ್ ಆಗಿದೆ. ಒಮ್ಮೆ ಮಂತ್ರದಂಡ, ಮತ್ತೊಮ್ಮೆ ತ್ರಿಶೂಲ ಹಿಡಿದು ಗೋಲ್ಡನ್ ಸ್ಟಾರ್ ಅಬ್ಬರಿಸಿದ್ದಾರೆ. ರುದ್ರನಾಗಿ ಕ್ಷುದ್ರ ಶಕ್ತಿಗೆ ಸವಾಲು ಹಾಕಿದ್ದಾರೆ.

ಟಿ.ಜಿ. ವಿಶ್ವ ಪ್ರಸಾದ್ ಹಾಗೂ ಟಿ.ಜಿ. ಕೃತಿ ಪ್ರಸಾದ್ ಎಂಬುವವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹರಿ ವೇದಾತಂ ಛಾಯಾಗ್ರಹಣ 'ಪಿನಾಕ' ಚಿತ್ರಕ್ಕಿದೆ. ಟೈಟಲ್‌ನಿಂದಲೇ ಸಿನಿಮಾ ಕುತೂಹಲ ಮೂಡಿಸಿದೆ. ಇದೊಂದು ಫ್ಯಾಂಟಸಿ ಆಕ್ಷನ್ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ. ಮೊದಲ ನೋಟದಲ್ಲೇ 'ಪಿನಾಕ' ಟೀಸರ್ ಗಮನ ಸೆಳೆಯುವಂತಿದೆ. ಆದರೂ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕೊರಿಯೋಗ್ರಫರ್ ಆಗಿದ್ದ ಧನುಕುಮಾರ್ ಈ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ. ಫೆಬ್ರವರಿಯಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಸಿನಿಮಾ ಚಿತ್ರೀಕರಣ ನಡೆಯಲಿದೆ. ಬೇರೆ ಭಾಷೆಗಳಿಗೂ ಡಬ್ ಆಗುವ ನಿರೀಕ್ಷೆಯಿದೆ. ಇನ್ನು ಸೆಟ್‌ಗಳನ್ನು ನಿರ್ಮಿಸಿ ಬಹುತೇಕ ಚಿತ್ರೀಕರಣ ಮಾಡುವ ಪ್ರಯತ್ನ ನಡೀತಿದೆ.
ಅಂದಹಾಗೆ ಇದು ಗಣೇಶ್ ನಟನೆಯ 49ನೇ ಸಿನಿಮಾ. ಬಹುತೇಕ ರೊಮ್ಯಾಂಟಿಕ್ ಸಿನಿಮಾಗಳಲ್ಲೇ ನಟಿಸಿರುವ ಗಣಿ ಮೊದಲ ಬಾರಿಗೆ ಇಂತಾದೊಂದು ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಗಣೇಶ್ ಖಡಕ್ ವಾಯ್ಸ್ ಹಿನ್ನೆಲೆಯಲ್ಲಿ 'ಪಿನಾಕ' ಟೀಸರ್ ಶುರುವಾಗುತ್ತದೆ. ಇದು ಕಟ್ಟುಕಥೆಯಲ್ಲ, ಜನರಿಗಾಗಿ ಬದುಕಿದ ಧೀರನ ದಂತಕಥೆ, ಕ್ಷುದ್ರಶಕ್ತಿಯ ಎದುರು ರುದ್ರಶಕ್ತಿಯ ಎನ್ನುವ ಡೈಲಾಗ್ ಗಮನ ಸೆಳೆಯುವಂತಿದೆ.
ಉದ್ದನೆಯ ಕೂದಲು, ಕುರುಚಲು ಗಡ್ಡ ಬಿಟ್ಟು ಖಡಕ್ ಲುಕ್‌ನಲ್ಲಿ ಗಣಿ ದರ್ಶನ ಕೊಟ್ಟಿದ್ದಾರೆ. ಆದರೆ ಈವರೆಗೆ ಗಣೇಶ್ ಅವರನ್ನು ಈ ರೀತಿ ನೋಡದೇ ಇರುವವರಿಗೆ ವಿಭಿನ್ನ ಅನ್ನಿಸುತ್ತಿದೆ. ಗಣಿ ಕೂಡ ಖಡಕ್ ಪಾತ್ರ ಮಾಡಬಲ್ಲರು ಎನ್ನುವುದು ಇದರಿಂದ ಗೊತ್ತಾಗುತ್ತದೆ.
'ಪಿನಾಕ' ಎಂದರೆ ಸಂಸ್ಕೃತದಲ್ಲಿ ತ್ರಿಶೂಲ, ಶಿವನ ಬಿಲ್ಲು ಎನ್ನುವ ಅರ್ಥ ಇದೆ. ರುದ್ರ, ಪಿನಾಕ ಎನ್ನುವ ಪದಗಳು ಚಿತ್ರದ ಬಗ್ಗೆ ಕುತೂಹಲ ಮೂಡಿಸುತ್ತಿದೆ. ಟೀಸರ್ ಕೊನೆಗೆ ಶಿವನಂತೆ ಗಣಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಚಿತ್ರದ ಕಥೆ ಏನು? ಎನ್ನುವ ಚರ್ಚೆ ಶುರುವಾಗಿದೆ. ಟೀಸರ್ ಚೆನ್ನಾಗಿದೆ. ಗಣಿ ಜಬರ್ದಸ್ತ್ ಪಾತ್ರದಲ್ಲಿ ಮಿಂಚಿದ್ದಾರೆ. ಆದರೆ ಸಾಕಷ್ಟು ಕಡೆಗಳಲ್ಲಿ AI ಬಳಸಿ ಟೀಸರ್ ಕಟ್ಟಿಕೊಟ್ಟಿರುವುದು ಕೆಲವರಿಗೆ ಬೇಸರ ತಂದಿದೆ.
ಈಗ ಪ್ಯಾನ್ ಇಂಡಿಯಾ ಟ್ರೆಂಡ್ ನಡೀತಿದೆ. ಅದಕ್ಕೆ ತಕ್ಕಂತೆ ಮೇಕಿಂಗ್ ಇರಬೇಕು. ಸುಖಾಸುಮ್ಮನೆ ಏನೇನೋ ಪ್ರಯೋಗ ಮಾಡಬೇಡಿ. ಟೀಸರ್‌ಗೆ AI ಓಕೆ, ಚಿತ್ರವನ್ನು ದೊಡ್ಡದಾಗಿ ಮಾಡಿ. ತಡವಾದರೂ ಸರಿ ಚೆನ್ನಾಗಿ ಸಿನಿಮಾ ಮಾಡಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಈಗಾಗಲೇ ಗಣೇಶ್ ನಟನೆಯ ' Your's sincerely ರಾಮ್' ಚಿತ್ರದ ಚಿತ್ರೀಕರಣ ನಡೀತಿದೆ. ಚಿತ್ರದಲ್ಲಿ ಗಣಿ ಜೊತೆ ರಮೇಶ್ ಅರವಿಂದ್ ಕೂಡ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಬಳಿಕ 'ಪಿನಾಕ' ತೆರೆಗೆ ಬರುವ ನಿರೀಕ್ಷೆಯಿದೆ. 'ಕೃಷ್ಣಂ ಪ್ರಣಯಸಖಿ' ಬಳಿಕ ಮತ್ತೊಂದು ಹಿಟ್ ಮೇಲೆ ಗಣಿ ಕಟ್ಟಿಟ್ಟಿದ್ದಾರೆ.


Click it and Unblock the Notifications











