'ಯುವ', 'ಭೀಮ' ಹಿಂದಿಕ್ಕಿದ 'ಕೃಷ್ಣ'; ಸಖಿ ಜೊತೆ ದ್ವಾಪರ ದಾಟಿ ಭರ್ಜರಿ ಸವಾರಿ
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಈ ಮ್ಯೂಸಿಕಲ್ ರೊಮ್ಯಾಂಟಿಕ್ ಲವ್‌ಸ್ಟೋರಿ ಪ್ರೇಕ್ಷಕರ ಮನಗೆದ್ದಿದೆ. 10ನೇ ವಾರ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಶೀಘ್ರದಲ್ಲೇ 75 ದಿನ ಪೂರೈಸಲಿದೆ.
ಇತ್ತೀಚಿನ ವರ್ಷಗಳಲ್ಲಿ ಗಣೇಶ್ ಕರಿಯರ್‌ನಲ್ಲೇ 'ಕೃಷ್ಣಂ ಪ್ರಣಯ ಸಖಿ' ದೊಡ್ಡ ಹಿಟ್ ಎನ್ನಬಹುದು. ರೊಮ್ಯಾಂಟಿಕ್ ಕಥೆಗೆ ಕಾಮಿಡಿಯನ್ನು ಸೇರಿಸಿ ಶ್ರೀನಿವಾಸ್ ರಾಜು ಗೆಲುವಿನ ನಗೆ ಬೀರಿದ್ದಾರೆ. ಯಾವುದೇ ನಿರೀಕ್ಷೆ ಇಲ್ಲದೇ ಬಂದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಆಗಸ್ಟ್ 15ಕ್ಕೆ ತೆರೆಗೆ ಬಂದಿದ್ದ ಸಿನಿಮಾ ಇನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರೆಸಿದೆ.

ಇತ್ತೀಚಿನ ದಿನಗಳಲ್ಲಿ ಸಿನಿಮಾಗಳು ಒಂದು ವಾರ ಯಶಸ್ವಿಯಾಗಿ ಪ್ರದರ್ಶನ ಕಾಣುವುದೇ ದೊಡ್ಡ ವಿಷಯ ಎನ್ನುವಂತಾಗಿದೆ. ಇನ್ನು 50 ದಿನ 100 ದಿನ ಎನ್ನುವುದೆಲ್ಲಾ ದೂರದ ಮಾತೇ ಸರಿ. ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿದ 'ಭೀಮ' ಸಿನಿಮಾ ಕೂಡ ತಿಂಗಳಿಗೂ ಮುನ್ನ ಓಟಿಟಿಗೆ ಬಂದುಬಿಟ್ಟಿತ್ತು. ಆದರೆ 'ಕೃಷ್ಣಂ ಪ್ರಣಯ ಸಖಿ' ಇನ್ನು ಚಿತ್ರಮಂದಿರಗಳಲ್ಲೇ ಪ್ರೇಕ್ಷಕರನ್ನು ರಂಜಿಸುತ್ತಿದೆ. 65 ದಿನಗಳ ಬಳಿಕವೂ ಶೋಗಳ ಸಂಸ್ಥೆ ಹೆಚ್ಚಿಸಿಕೊಂಡಿದೆ. ಪ್ರೇಕ್ಷಕರಿಗೆ ಸಿನಿಮಾ ಮೇಲಿನ ಪ್ರೀತಿ ಎಂಥದ್ದು ಎಂದು ಇದರಲ್ಲೇ ಗೊತ್ತಾಗುತ್ತಿದೆ.
'ಕೃಷ್ಣಂ ಪ್ರಣಯ ಸಖಿ' ಚಿತ್ರದ ಸಕ್ಸಸ್‌ನಲ್ಲಿ 'ದ್ವಾಪರ ದ್ವಾಪರ' ಸಾಂಗ್ ಪಾಲು ದೊಡ್ಡದ್ದಿದೆ. ಇನ್ನು ಒಂದು ಸದಭಿರುಚಿ ಚಿತ್ರವನ್ನು ಕಟ್ಟಿಕೊಟ್ಟು ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಕ್ಕೆ ಬರುವಂತೆ ಮಾಡಿದ್ದು ಗೆಲುವಿಗೆ ಪೂರಕವಾಗಿತ್ತು. ಕಥೆಯಲ್ಲಿ ಹೊಸತನ ಇಲ್ಲದಿದ್ದರೂ ನಿರೂಪಣೆಯಲ್ಲಿ ಚಿತ್ರ ಗೆದ್ದಿದೆ. ಗಣೇಶ್ ನಟನೆ ಅದಕ್ಕೆ ಸಾಥ್ ನೀಡಿದೆ. ಅರ್ಜುನ್ ಜನ್ಯಾ ಸಂಗೀತದ ಒಗ್ಗರಣೆಯೂ ಸೇರಿ ಸಿನಿಮಾ ಪ್ರೇಕ್ಷಕರಿಗೆ ರುಚಿಸಿದೆ.

ಈ ವರ್ಷ ಕನ್ನಡದಲ್ಲಿ 180ಕ್ಕೂ ಅಧಿಕ ಚಿತ್ರಗಳು ತೆರೆಗೆ ಬಂದಿವೆ. ಅದರಲ್ಲಿ ಬಹುತೇಕ ಸಿನಿಮಾಗಳು ಸೋಲುಂಡಿವೆ. ಬೆರಳೆಣಿಕೆಯಷ್ಟು ಸಿನಿಮಾಗಳು ಗೆಲುವಿನ ದಡ ಸೇರಿದ್ದವು. ಮಾರ್ಚ್ ಕೊನೆ ವಾರ ಬಂದಿದ್ದ 'ಯುವ' ಸಿನಿಮಾ ಕೊಂಚ ಸದ್ದು ಮಾಡಿತ್ತು. ಆದರೆ ತೆರೆಗೆ ಬಂದ 21 ದಿನಕ್ಕೆ ಸಿನಿಮಾ ಓಟಿಟಿಗೆ ಬಂದಿತ್ತು. ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಟ್ಟ ಬಳಿಕವೂ 70 ದಿನಗಳವರೆಗೆ ಕೆಲ ಚಿತ್ರಮಂದಿರಗಳಲ್ಲಿ ಯುವ ರಾಜ್‌ಕುಮಾರ್ ಆರ್ಭಟ ನಡೆದಿತ್ತು.
3 ವಾರಕ್ಕೆ 26 ಕೋಟಿ ರೂ. ಕೊಳ್ಳೆ ಹೊಡೆದ 'ಭೀಮ' ಸಿನಿಮಾ ಕೂಡ ಓಟಿಟಿಗೆ ಬಹಳ ಬೇಗ ಬಂದಿತ್ತು. ಆನಂತರ ಕೂಡ ಚಿತ್ರಮಂದಿರಗಳಲ್ಲಿ 70 ದಿನ ಪೂರೈಸಿತ್ತು. ಇದೀಗ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ 69ನೇ ದಿನಕ್ಕೆ ಕಾಲಿಟ್ಟಿದೆ. ಮೈಸೂರು, ಬೆಂಗಳೂರಿನ ಆಯ್ದ ಚಿತ್ರಮಂದಿರಗಳಲ್ಲಿ ಸಿನಿಮಾ ಈ ವಾರವೂ ಪ್ರದರ್ಶನ ಕಾಣುತ್ತಿದೆ. ದೀಪಾವಳಿ ಸಂಭ್ರಮದಲ್ಲಿ ಸಿನಿಮಾ ಓಟಿಟಿಗೆ ಬಂದರೂ ಅಚ್ಚರಿ ಪಡಬೇಕಿಲ್ಲ.
ಅಮೇಜಾನ್ ಪ್ರೈಂ ಸಂಸ್ಥೆ ಈಗಾಗಲೇ 'ಕೃಷ್ಣಂ ಪ್ರಣಯ ಸಖಿ' ಚಿತ್ರದ ಡಿಜಿಟಲ್ ರೈಟ್ಸ್ ಕೊಂಡುಕೊಂಡಿರುವುದಾಗಿ ಹೇಳಲಾಗ್ತಿದೆ. ಸಾಕಷ್ಟು ಜನ ಓಟಿಟಿಯಲ್ಲಿ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಅಕ್ಟೋಬರ್ 31 ರಂದು ಸಿನಿಮಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡುವ ನಿರೀಕ್ಷೆಯಿದೆ.
'ಕೃಷ್ಣಂ ಪ್ರಣಯ ಸಖಿ' ಚಿತ್ರದಲ್ಲಿ ಗಣೇಶ್ ಜೊತೆ ಮಾಳವಿಕಾ ನಾಯರ್, ಶರಣ್ಯ ಶೆಟ್ಟಿ ನಾಯಕಿಯರಾಗಿ ಮಿಂಚಿದ್ದಾರೆ. ಸಾಧು ಕೋಕಿಲ, ರಂಗಾಯಣ ರಘು ಕಾಮಿಡಿ ಕಿಕ್ ಚಿತ್ರದಲ್ಲಿದೆ. ಇನ್ನುಳಿದಂತೆ ಶಶಿಕುಮಾರ್, ಶ್ರುತಿ, ಅಶೋಕ್, ರಾಮಕೃಷ್ಣ, ಶ್ರೀನಿವಾಸ್ ಮೂರ್ತಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸಿನಿಮಾ ಬಾಕ್ಸಾಫೀಸ್‌ನಲ್ಲಿ 25 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ.


Click it and Unblock the Notifications











