ಒಳ್ಳೆ ಸಿನಿಮಾ ಮಾಡೋದು ಬಿಟ್ಟು ಬಿರುದು ಬಾವಲಿಗಳ ಹಿಂದೆ ಬಿದ್ದ ಕನ್ನಡ ಸ್ಟಾರ್ಸ್!
ಕನ್ನಡ ಚಿತ್ರರಂಗ ಸೊರಗುತ್ತಿದೆ. ಪ್ಯಾನ್ ಇಂಡಿಯಾ ಹುಚ್ಚಿಗೆ ಬಿದ್ದು ಕನ್ನಡಕ್ಕೆ ಸಿನಿಮಾ ಮಾಡುವವರ ಸಂಖ್ಯೆ ಕಮ್ಮಿ ಆಗ್ತಿದೆ. ಸ್ಟಾರ್ಸ್ ಈ ಬಗ್ಗೆ ತಲೆ ಕೆಡಿಸಿಕೊಳ್ತಿಲ್ಲ. ಹೊಡೆದ್ರೆ ಬೆಟ್ಟನೇ ಹೊಡಿತ್ತೀವಿ ಅಂತಿದ್ದಾರೆ. ವರ್ಷಕ್ಕೊಂದು ಸಿನಿಮಾ ಕೊಡೋಕು ತಿಣುಕಾಡುತ್ತಿದ್ದಾರೆ. ಇದೆಲ್ಲದರ ನಡುವೆ ಈಗ ಬಿರುದು ಬಾವಲಿಗಳ ಶೋಕಿ ಶುರುವಾಗಿದೆ. ಒಂದು ಹಿಟ್ ಕೊಡೋಕೆ ಸಾಧ್ಯವಾಗಿದ್ರು ದೊಡ್ಡದಾಗಿ ಬಿರುದು ಹಿಡ್ಕೊಂಡು ಓಡಾಡುತ್ತಿದ್ದಾರೆ.
ಒಬ್ರು ಅಭಿನಯ ಚತುರ, ಮತ್ತೊಬ್ಬರು ಸ್ಯಾಂಡಲ್‌ವುಡ್ ಶೋಕ್ದಾರ್, ಇನ್ನೊಬ್ರು ನ್ಯಾಚುಲರ್ ಸ್ಟಾರ್, ಈಗ ಕರುನಾಡ ಸುಲ್ತಾನ ಕೂಡ ಈ ಪಟ್ಟಿಗೆ ಸೇರಿಕೊಂಡುಬಿಟ್ಟಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ದಿಢೀರನೆ ತಮ್ಮ ಬಿರುದು ಬದಲಿಸಿಬಿಟ್ಟಿದ್ದಾರೆ. 'ಪಿನಾಕ' ಚಿತ್ರತಂಡ ಗೋಲ್ಡನ್ ಮೆಗಾಸ್ಟಾರ್ ಎಂದು ಕರೆದಿದೆ. ಅದನ್ನು ಗಣಿ ಕೂಡ ಒಪ್ಪಿಕೊಂಡಿದ್ದಾರೆ. ಅರೇ ಗೋಲ್ಡನ್ ಸ್ಟಾರ್ ತುಂಬಾ ಚೆನ್ನಾಗಿತ್ತು ಅಲ್ವಾ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಮೊದಲೆಲ್ಲಾ ಅಭಿಮಾನಿಗಳು ನೆಚ್ಚಿನ ನಟರಿಗೆ ಬಿರುದು ಕೊಟ್ಟು ಸನ್ಮಾನ ಮಾಡುತ್ತಿದ್ದರು. ಹಿಟ್ ಸಿನಿಮಾ ಕೊಟ್ಟ ಬಳಿಕ ಮುಂದಿನ ಚಿತ್ರ ಮಾಡುವಾಗ ಆ ತಂಡ ಹೊಸ ಬಿರುದು ಕೊಡುವುದು ಇದೆ. ಕೆಲವೊಮ್ಮೆ ಪತ್ರಕರ್ತರು ಕೊಟ್ಟ ಬಿರುದನ್ನು ಒಪ್ಪಿಕೊಂಡ ಕಲಾವಿದರಿದ್ದಾರೆ. ಆದರೆ ಈಗ ಸುಖಾ ಸುಮ್ಮನೆ ಬಿರುದುಗಳನ್ನು ಇಟ್ಟುಕೊಂಡು ಶೋಕಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ತಮಗೆ ತಾವೇ ಬಾಸು, ಸುಲ್ತಾನ್ ಆಗಿಬಿಟ್ಟಿದ್ದಾರೆ. ಚಿತ್ರರಂಗಕ್ಕೆ ಬಾಸ್ ಆದ್ರು ಪರವಾಗಿಲ್ಲ, ಕರುನಾಡಿಗೆ ಸುಲ್ತಾನ್ ಎಂದು ಹಿಗ್ಗುವವರ ಬಗ್ಗೆ ಏನ್ ಹೇಳೋಣ.
ಲೂಸ್ ಮಾದ ಯೋಗಿ ಹೀರೊ ಆಗಿ ಹಿಟ್ ಸಿನಿಮಾ ಕೊಟ್ಟು ಯಾವುದೋ ಕಾಲ ಆಯ್ತು. ಈಗ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 'ಅಣ್ಣ ಫ್ರಂ ಮೆಕ್ಸಿಕೊ' ಚಿತ್ರತಂಡ ಅವರಿಗೆ 'ಕರುನಾಡ ಸುಲ್ತಾನ' ಎಂಬ ಬಿರುದು ಕೊಟ್ಟು ಹುಟ್ಟುಹಬ್ಬದ ಶುಭಾಶಯ ಕೋರಿ ಪೋಸ್ಟರ್ ರಿಲೀಸ್ ಮಾಡಿದೆ. ಈ ಹಿಂದೆ ಯೋಗಿ ನಟನೆಯ 'ಕಿಂಗ್' ಸಿನಿಮಾ ಪೋಸ್ಟರ್‌ನಲ್ಲೇ ಈ ಬಿರುದು ಇತ್ತು. ಅಲ್ಲ ಕೊನೆ ಪಕ್ಷ ಚಿತ್ರತಂಡ ಪ್ರೀತಿಯಿಂದ ಕೊಟ್ಟಾಗ ಅದನ್ನು ಒಪ್ಪಿಕೊಳ್ಳುವುದಕ್ಕೆ ಮನಸ್ಸು ಹೇಗೆ ಬರುತ್ತೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಒಳ್ಳೆ ಕಂಟೆಂಟ್ ಇರುವ ಸಿನಿಮಾ ಮಾಡುವುದು ಬಿಟ್ಟು ಈ ಬಿರುದು ಬಾವಲಿಗಳ ಶೋಕಿ ಯಾಕೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಹಾಸ್ಯನಟ ಚಿಕ್ಕಣ್ಣನಿಗೆ ನ್ಯಾಚುಲರ್ ಸ್ಟಾರ್ ಎಂದು 'ಲಕ್ಷ್ಮಿಪುತ್ರ' ಚಿತ್ರತಂಡ ಕರೆದಿದೆ. ಧನ್ವೀರ್ ಚಿತ್ರರಂಗಕ್ಕೆ ಬಂದ ಆರಂಭದಿಂದಲೂ 'ಸ್ಯಾಂಡಲ್‌ವುಡ್ ಶೋಕ್ದಾರ್' ಎನ್ನುವ ಬಿರುದು ಹೊತ್ತುಕೊಂಡು ಸುತ್ತಾಡುತ್ತಿದ್ದಾರೆ. ಆದರೆ ಈವರೆಗೆ ಒಂದು ಹಿಟ್ ಸಿನಿಮಾ ಕೊಟ್ಟಿಲ್ಲ. 'ಅಯೋಗ್ಯ'-2 ಚಿತ್ರತಂಡ ನಟಿ ರಚಿತಾ ರಾಮ್ ಅವರಿಗೆ 'ಸ್ಯಾಂಡಲ್‌ವುಡ್ ಲೇಡಿ ಸೂಪರ್ ಸ್ಟಾರ್' ಎನ್ನುವ ವಿಶೇಷ ಬಿರುದು ನೀಡಿತ್ತು. ಆಗ ಕೂಡ ಕೆಲವರು ಬೇಸರ ವ್ಯಕ್ತಪಡಿಸಿದ್ದರು.
ಒಳ್ಳೆ ಸಿನಿಮಾಗಳು ಮಾಡಿದ್ರೆ ಬಿರುದುಗಳು ತಾನಾಗಿಯೇ ಸಿಗುತ್ತದೆ. ಅಭಿಮಾನಿಗಳು, ಚಿತ್ರತಂಡದವರು ಕೊಡ್ತಾರೆ ಎಂದು ಎಲ್ಲವನ್ನು ಒಪ್ಪಿಕೊಳ್ಳುವುದು ಸರಿಯಲ್ಲ. ಕೊನೆಪಕ್ಷ ಆ ಬಿರುದಿಗೆ ತಾನು ಅರ್ಹನೇ ಎನ್ನುವುದನ್ನಾದರೂ ಯೋಚಿಸಬೇಕು. ಇಲ್ಲದಿದ್ದರೆ ಹೀಗೆ ನಗೆಪಾಟಲಿಗೆ ಈಡಾಗುವುದರಲ್ಲಿ ಎರಡು ಮಾತಿಲ್ಲ. ಇದೆಲ್ಲಕ್ಕಿಂತ ವಿಪರ್ಯಾಸ ಅಂದ್ರೆ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ತಮ್ಮನ್ನು ತಾವು 'R Boss ರಕ್ಷಕ್ ಬುಲೆಟ್' ಎಂದು ಕರೆದುಕೊಳ್ಳುವುದು.
ಕಮಲ್ ಹಾಸನ್, ಅಜಿತ್, ನಯನತಾರಾ ರೀತಿಯ ಸ್ಟಾರ್ ಕಲಾವಿದರೇ ನಮಗೆ ಯಾವುದೇ ಬಿರುದು ಬೇಡ. ಅಭಿಮಾನಿಗಳು, ಮಾಧ್ಯಮದವರು ನಮ್ಮ ಹೆಸರು ಹಿಡಿದು ಕರೆದರೆ ಸಾಕು ಎಂದು ಬಹಿರಂಗವಾಗಿ ಮನವಿ ಮಾಡಿದ್ದಾರೆ. ಆದರೆ ನಮ್ಮಲ್ಲಿ ನಿನ್ನೆ ಮೊನ್ನೆ ಬಂದವರೆಲ್ಲಾ ಬಿರುದು ಹಿಡ್ಕೊಂಡು ಸುತ್ತಾಡುತ್ತಿರುವುದು ಬೇಸರದ ಸಂಗತಿಯೇ ಸರಿ.


Click it and Unblock the Notifications