ಸುಮ್ಮನಿದ್ದು ಬಿಡಿ ; ಸೋಶಿಯಲ್ ಮೀಡಿಯಾದಲ್ಲಿ ಸಿಲಿಂಡರ್ ಎಸೆದ ಬುದ್ದಿವಂತ - ಗ್ಯಾಸ್ ಗಲಾಟೆ, ಉಪ್ಪಿ ತರಾಟೆ ?
ಉಪೇಂದ್ರ ಕನ್ನಡ ಚಿತ್ರರಂಗದ ಬುದ್ದಿವಂತ . ಕೇವಲ ಕನ್ನಡದಲ್ಲಿ ಮಾತ್ರ ಅಲ್ಲ ಅಕ್ಕ-ಪಕ್ಕದ ರಾಜ್ಯದಲ್ಲಿ ಕೂಡ ಉಪೇಂದ್ರ ಅವರಿಗೆ ಅಭಿಮಾನಿಗಳಿದ್ದಾರೆ. ಉಪೇಂದ್ರ ನಿರ್ದೇಶನದ ಚಿತ್ರಗಳನ್ನು ನೋಡಲು ಕುತೂಹಲದಿಂದ ಕಾಯುತ್ತಿರುತ್ತಾರೆ. ಈ ಕುತೂಹಲ ತಣಿಸುವ ಪ್ರಯತ್ನವನ್ನು ಉಪೇಂದ್ರ ಆಗಾಗ ಮಾಡುತ್ತಿರುತ್ತಾರೆ. ಆದರೆ, ಮೊದಲು ಸಿಕ್ಕಿದ್ದ ಗೆಲುವು ಮಾತ್ರ ಸಿಕ್ತಿಲ್ಲ.
ಈ ಹಿನ್ನೆಲೆ ಹಲವರು ಉಪೇಂದ್ರ ಅವರ ಗತಕಾಲದ ಆ ದಿನಗಳನ್ನು ಮತ್ತೆ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಮತ್ತೊಮ್ಮೆ ಇಡೀ ಭಾರತ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತಹ ಸಿನಿಮಾ ಮಾಡಿ ಎಂಬ ಮನವಿ ಪತ್ರವನ್ನು ಕೂಡ ಸಲ್ಲಿಸುತ್ತಿದ್ದಾರೆ.

ಆದರೆ, ಉಪೇಂದ್ರ ಈಗ ಕೇವಲ ನಾಯಕ ಮಾತ್ರ ಅಲ್ಲ. ನಿರ್ದೇಶಕ ಮಾತ್ರ ಅಲ್ಲ. ಬದಲಿಗೆ ಜನನಾಯಕ. ಬೆಳ್ಳಿತೆರೆಯಲ್ಲಿ ನಾನು-ನೀನು ನಡುವೆ ಕಳೆದು ಹೋದ ಉಪೇಂದ್ರ ರಾಜಕೀಯದ ಪಡಸಾಲೆಯಲ್ಲಿ ಕ್ರಾಂತಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ದೇಶದಲ್ಲಿನ ಸತ್ಪ್ರಜೆಗಳನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ.
ತಮ್ಮ ಈ ಪ್ರಯತ್ನದಲ್ಲಿ ಉಪೇಂದ್ರ ಅವರಿಗೆ ಯಶಸ್ಸು ಸಿಗುತ್ತಾ..? ಪ್ರಜಾಕೀಯ ರಾಜ್ಯದ ಚುಕ್ಕಾಣಿ ಹಿಡಿಯುತ್ತಾ..? ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯ ಉಪೇಂದ್ರ ಸೋಶಿಯಲ್ ಮೀಡಿಯಾದಲ್ಲಿ ಸಿಲಿಂಡರ್ ಎಸೆದಿದ್ದಾರೆ.
ನಿನ್ನೆ (ಮಾರ್ಚ್ 14 ) ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಉಪೇಂದ್ರ ಪ್ರಕಟಣೆ ಹೊರಡಿಸಿದ್ದರು. ಬೆಳಗ್ಗೆ 10 ಗಂಟೆಗೆ ಒಂದು ಲಿಂಕ್ ಪೋಸ್ಟ್ ಮಾಡ್ತೀನಿ. ಇದನ್ನ ಸಾರ್ವಜನಿಕವಾಗಿ ಹಂಚಿಕೊಳ್ಳಬೇಡಿ ಅಂತ ನನಗೆ ಸೂಚನೆ ಇದೆ. ಹಾಗಾಗಿ ಪೋಸ್ಟ್ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಡಿಲೀಟ್ ಮಾಡಿದ್ರೂ ಮಾಡಬಹುದು. ನೀವು ಇದನ್ನು ನೋಡಿದ್ರೆ, ಬೇರೆ ಯಾರ ಹತ್ತಿರವೂ ಹೇಳ್ಬೇಡಿ. ಸದ್ಯಕ್ಕೆ ಇದು ನಮ್ಮ ನಡುವೆ ಮಾತ್ರ ಇರಲಿ. ಲಿಂಕ್ ನೋಡಿ ಸುಮ್ಮನಿದ್ದುಬಿಡು ಎಂದು ಬರೆದುಕೊಂಡಿದ್ದರು.
ಉಪೇಂದ್ರ ಅವರ ಈ ಬರಹವನ್ನು ನೋಡಿ, ಹಲವರು ಏನಿರಬಹುದು ಎಂದು ರಾತ್ರಿಯಿಡೀ ತಲೆ ಕೆಡಿಸಿಕೊಂಡಿದ್ದರು. ಉಪೇಂದ್ರ ತಮ್ಮ ಹೊಸ ನಿರ್ದೇಶನದ ಚಿತ್ರದ ಕುರಿತು ಮಾಹಿತಿಯನ್ನು ಹಂಚಿಕೊಳ್ಳಬಹುದು ಎಂದು ಕೆಲವರು ಅಂದುಕೊಂಡರೆ ಇನ್ನೂ ಕೆಲವರು ಪ್ರಜಾಕೀಯದ ಕುರಿತು ಮಾಹಿತಿಯನ್ನು ನಿರೀಕ್ಷೆ ಮಾಡಿದ್ದರು.

ಎಷ್ಟೇ ಆದರೂ ಉಪೇಂದ್ರ ಬುದ್ದಿವಂತ.ಜನರ ಲೆಕ್ಕಾಚಾರವನ್ನೆಲ್ಲಾ ತಲೆ ಕೆಳಗಾಗಿಸಿದ ಉಪೇಂದ್ರ ಈಗ ಸೋಶಿಯಲ್ ಮೀಡಿಯಾದಲ್ಲಿ ತಾವು ಹೇಳಿದಂತೆ ಫೋಸ್ಟ್ ಹಂಚಿಕೊಂಡಿದ್ದಾರೆ. ಗ್ಯಾಸ್ ಸಿಲಿಂಡರ್ ನ ಫೋಟೊ ಶೇರ್ ಮಾಡಿದ್ದಾರೆ.
ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಸದ್ಯ ಭಾರತದೆಲ್ಲೆಡೆ ಸಿಲಿಂಡರ್ ಗೆ ಹಾಹಾಕಾರ ಇದೆ. ಜನರ ಮಾತುಗಳಿಗೆ-ಭಾವನೆಗಳಿಗೆ-ಬೇಡಿಕೆಗಳಿಗೆ ನಮ್ಮ ದೇಶದಲ್ಲಿ ಮೊದಲಿಂದ ಬೆಲೆ ಇಲ್ಲ. ಉಪೇಂದ್ರ ಅವರ ಪ್ರಕಾರ ಜನಸಾಮಾನ್ಯನೇ ಸಿಎಂ. ಅವರೆ ಹೈಕಮಾಂಡ್.
ಆದರೆ ಈಗ ಹೈಕಮಾಂಡೇ ದಿಕ್ಕು ತೋಚದ ಪರಿಸ್ಥಿತಿಯಲ್ಲಿದೆ. ಹೀಗಾಗಿ ಜನರ ಪರವಾಗಿ ಸಿಲಿಂಡರ್ ಫೋಟೊವನ್ನು ಉಪೇಂದ್ರ ಹಾಕಿದ್ದಾರೆ ಎಂದು ವಾದ ಮಾಡಲು ಶುರು ಮಾಡಿರುವ ಹಲವರು, ಈ ಮೂಲಕ ಉಪೇಂದ್ರ ಸದ್ಯ ಹೇಳಲು ಹೊರಟಿರುವುದಾದರೂ ಏನು..? ಎಂದು ಮತ್ತೆ ತಲೆ ಕೆಡಿಸಿಕೊಂಡಿದ್ದಾರೆ.
ಇನ್ನೂ ಪ್ರಜಾಕೀಯ ಅಂದರೆ ಪಾರದರ್ಶಕತೆಗೆ ಮತ್ತೊಂದು ಹೆಸರು ಎನ್ನುವುದು ಉಪ್ಪಿ ಅಂಬೋಣ. ಹೀಗಾಗಿ ಉಪೇಂದ್ರ ಗ್ಯಾಸ್ ಸಿಲಿಂಡರ್ ವಿತರಣೆಯ ಬಗ್ಗೆ ಅಥವಾ ಕಳ್ಳಸಂತೆಗೆ ಕಡಿವಾಣ ಹಾಕುವ ಬಗ್ಗೆ ಏನಾದರೂ ಯೋಚನೆ ಮಾಡಿರಬಹುದಾ..?'ಪ್ರಜಾಕೀಯದ ಬ್ಲೂಪ್ರಿಂಟ್' ರೆಡಿ ಮಾಡಿರಬಹುದಾ..? ಎಂಬ ಯೋಚನೆಯನ್ನು ಕೂಡ ಹಲವರು ಮಾಡುತ್ತಿದ್ದು ಸವಿಸ್ತಾರವಾಗಿ ನಿಮ್ಮ ಮನದ ಮಾತುಗಳನ್ನು ಹಂಚಿಕೊಳ್ಳಿ ಎಂದು ಉಪೇಂದ್ರ ಅವರಲ್ಲಿ ಸದ್ಯ ಮನವಿಯನ್ನು ಕೂಡ ಮಾಡಿಕೊಳ್ಳುತ್ತಿದ್ದಾರೆ.
ಸಿಲಿಂಡರ್ ಪೂರೈಕೆಗೆ ಕೇಂದ್ರ ಸರಕಾರ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂಬರ್ಥದಲ್ಲಿ ಉಪೇಂದ್ರ ಈ ಫೋಟೊ ಹಾಕಿದ್ದಾರಾ.? ಈ ಮೂಲಕ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರಾ..? ಫೋಟೊ ಹಿಂದಿನ ಉದ್ದೇಶವೇನು..? ಪ್ರಜಾಕೀಯದ ಪರಿಹಾರವೇನು..? ಎನ್ನುವುದನ್ನು ಖುದ್ದು ಉಪೇಂದ್ರ ಅವರೇ ಹೇಳಬೇಕು.


Click it and Unblock the Notifications











