ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಪುತ್ರ ನಟ ದುಷ್ಯಂತ್ ಮದುವೆ ಫಿಕ್ಸ್; ಇಲ್ಲಿದೆ ಎಂಗೇಜ್‌ಮೆಂಟ್ ಫೋಟೊಗಳು
ಕನ್ನಡ ಚಿತ್ರರಂಗದಲ್ಲಿ ವರ್ಷದ ಆರಂಭದಲ್ಲೇ ಶುಭ ಸಮಾರಂಭಗಳು ಆರಂಭವಾಗುತ್ತಿವೆ. 'ಗತವೈಭವ' ಚಿತ್ರದಲ್ಲಿ ನಟಿಸಿದ್ದ ದುಷ್ಯಂತ್ ಮದುವೆ ನಿಶ್ಚಯವಾಗಿದೆ. ಹಿರಿಯ ರಾಜಕಾರಣಿ ಮುದ್ದಹನುಮೇಗೌಡ ಪುತ್ರಿ ರಚನಾ ಜೊತೆ ಫೆಬ್ರವರಿ 26ರಂದು ಮದುವೆ ನಡೆಯಲಿದೆ. ಬಹಳ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮ ನಡೆಯಲಿದ್ದು ಸಿನಿಮಾ ತಾರೆಯರು, ರಾಜಕೀಯ ಮುಖಂಡರು ಈ ಶುಭ ಸಮಾರಂಭಕ್ಕೆ ಸಾಕ್ಷಿ ಆಗಲಿದ್ದಾರೆ.
ದುಷ್ಯಂತ್ ಹಾಗೂ ಆಶಿಕಾ ರಂಗನಾಥ್ ನಟನೆಯ 'ಗತ ವೈಭವ' ಸಿನಿಮಾ ನವೆಂಬರ್ 14ರಂದು ತೆರೆಗೆ ಬಂದಿತ್ತು. ಸಿಂಪಲ್ ಸುನಿ ನಿರ್ದೇಶನದ ಸಿನಿಮಾ ಪ್ರೇಕ್ಷಕರ ಮನ ಗೆದ್ದಿತ್ತು. ಇತ್ತೀಚೆಗೆ ಓಟಿಟಿಗೆ ಬಂದು ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನ ದುಷ್ಯಂತ್ ಮದುವೆ ನಿಶ್ಚತವಾಗಿತ್ತು. ಇದೀಗ ಫೋಟೊ ಸಮೇತ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

"ಕುಮಾರಿ ರಚನಾ ಮುದ್ದಹನುಮೇಗೌಡ ಅವರೊಂದಿಗಿನ ನನ್ನ ವಿವಾಹ ಕಾರ್ಯಕ್ರಮವು 26 ಫೆಬ್ರವರಿ ಗುರುವಾರ ಮಧ್ಯಾಹ್ನ 'ಚಾಮರ ವಜ್ರ'ದಲ್ಲಿ (ಬೆಂಗಳೂರು ಅರಮನೆ ಮೈದಾನ) ನಡೆಯಲಿದ್ದು, ಮಾರ್ಚ್ 1ರ ಭಾನುವಾರ ಬೀಗರ ಊಟ ಆರತಕ್ಷತೆಯು ಬೆಂಗಳೂರಿನ ಮುಖ್ಯ ಅರಮನೆಯಲ್ಲಿ ನಡೆಯಲಿದೆ. ನಿಮ್ಮ ಹಾರೈಕೆ, ಆಶೀರ್ವಾದ ಇರಲಿ" ಎಂದು ದುಷ್ಯಂತ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಫಿಲ್ಮಿಬೀಟ್ ಜೊತೆ ಈ ಬಗ್ಗೆ ದುಷ್ಯಂತ್ ಮಾತನಾಡಿದ್ದಾರೆ.
ಕೆಲ ದಿನಗಳ ಹಿಂದೆ ಎಂಗೇಜ್‌ಮೆಂಟ್ ನಡೀತು. ನಿನ್ನೆ(ಫೆಬ್ರವರಿ 14) ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದೇನೆ ಎಂದು ದುಷ್ಯಂತ್ ಹೇಳಿದ್ದಾರೆ. "ಲವ್ ಮ್ಯಾರೇಜ್ ಅಲ್ಲ, ಅರೇಂಜ್ಡ್ ಮ್ಯಾರೇಜ್. ಮೊದಲಿನಿಂದ ಗೊತ್ತಿರುವ ಫ್ಯಾಮಿಲಿ. ನನಗೂ ಇಷ್ಟ ಇತ್ತು. ಸಿನಿಮಾ ಬಿಡುಗಡೆಗೂ ಮುನ್ನ ಮದುವೆ ಫಿಕ್ಸ್ ಆಗಿತ್ತು. ಫೆಬ್ರವರಿ 26ಕ್ಕೆ ಮದುವೆ" ಎಂದು ತಿಳಿಸಿದ್ದಾರೆ.
'ಗತವೈಭವ' ಚಿತ್ರಕ್ಕೆ ಓಟಿಟಿಯಲ್ಲಿ ಒಳ್ಳೆ ರೆಸ್ಪಾನ್ಸ್ ಸಿಗುತ್ತಿರುವ ಬಗ್ಗೆ ದುಷ್ಯಂತ್ ಮಾತನಾಡಿದ್ದಾರೆ. "ಓಟಿಟಿಯಲ್ಲಿ ಕನ್ನಡ ಚಿತ್ರಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಗುವುದು ಕಷ್ಟ. ಅಂತಾದ್ರಲ್ಲಿ ನಮ್ಮ ಚಿತ್ರ 2 ವಾರ ನಂಬರ್ 7ರಲ್ಲಿ ಟ್ರೆಂಡಿಂಗ್‌ನಲ್ಲಿತ್ತು. ದಿನದಿಂದ ದಿನಕ್ಕೆ ಓಟಿಟಿಯಲ್ಲಿ ಕ್ರೇಜ್ ಕಮ್ಮಿ ಆಗುತ್ತದೆ. ಆದರೆ ನಮ್ಮ ಚಿತ್ರಕ್ಕೆ ಕ್ರೇಜ್ ಜಾಸ್ತಿ ಆಗ್ತಿದೆ. ಈಗ 3ನೇ ಸ್ಥಾನಕ್ಕೆ ಏರಿದೆ. ಅದ್ಭುತ ರೆಸ್ಪಾನ್ಸ್ ಸಿಕ್ತಿದೆ" ಎಂದಿದ್ದಾರೆ.
'ಗತವೈಭವ' ಚಿತ್ರವನ್ನು ಪೈರಸಿ ಮಾಡಿಬಿಟ್ಟಿದ್ದಾರೆ. ಚಿತ್ರಮಂದಿರಕ್ಕಿಂತ ಹೆಚ್ಚು ಜನ ಓಟಿಟಿಯಲ್ಲಿ ನೋಡಿದ್ದಾರೆ. ಅದಕ್ಕಿಂತ ಹೆಚ್ಚು ಮಂದಿ ಪೈರಸಿ ಕಾಪಿ ನೋಡಿದ್ದಾರೆ ಎಂದು ದುಷ್ಯಂತ್ ಬೇಸರ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಸಿನಿಮಾ ನಮಗೆ ಗೆಲುವು ತಂದುಕೊಟ್ಟಿದೆ. ನನಗೆ ಸಾಕಷ್ಟು ಅವಕಾಶಗಳು ಸಿಗುತ್ತಿದೆ. ಕಥೆಗಳನ್ನು ಕೇಳ್ತಿದ್ದೀನಿ. ಆದಷ್ಟು ಬೇಗ ಮತ್ತೊಂದು ಸಿನಿಮಾ ಶುರುವಾಗುತ್ತದೆ ಎಂದಿದ್ದಾರೆ.
ಈ ಸಿನಿಮಾ ಓಟಿಟಿಗೆ ಬರೋಕು ಮುನ್ನ 30 ಸಿನಿಮಾಗಳಲ್ಲಿ ನಟಿಸೋ ಆಫರ್ ಬಂದಿತ್ತು. ಸದ್ಯ ಕಥೆ ಕೇಳುವಷ್ಟು ಪುರುಸೊತ್ತು ಎಲ್ಲದಂತಾಗಿದೆ ಎಂದು ದುಷ್ಯಂತ್ ಹೇಳಿದ್ದಾರೆ. ಮದುವೆಗೆ ಚಿತ್ರರಂಗದ ತಾರೆಯರು, ರಾಜಕೀಯ ಮುಖಂಡರನ್ನು ಆಹ್ವಾನಿಸುತ್ತಿದ್ದೇವೆ. ಸಿಎಂ ಸಿದ್ಧರಾಮಯ್ಯ ಅವರಿಗೆ ಆಮಂತ್ರಣ ಕೊಟ್ಟಿದ್ದೇವೆ. ಶಿವಣ್ಣ, ಶ್ರೀಮುರಳಿ ಸರ್, ಗಣೇಶ್ ಸರ್ ಹೀಗೆ ಎಲ್ಲರನ್ನು ಭೇಟಿ ಮಾಡಿ ಮದುವೆಗೆ ಆಹ್ವಾನಿಸುತ್ತಿದ್ದೇವೆ ಎಂದು ದುಷ್ಯಂತ್ ಮಾಹಿತಿ ನೀಡಿದ್ದಾರೆ.
'ಗತವೈಭವ' ಸಿನಿಮಾ ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲಿ ಕೂಡ ಬಿಡುಗಡೆ ಆಗಿತ್ತು. 4 ಬೇರೆ ಬೇರೆ ಅವತಾರಗಳಲ್ಲಿ ದುಷ್ಯಂತ್ ನಟಿಸಿ ಗಮನ ಸೆಳೆದಿದ್ದರು. ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ವಿಫಲವಾಗಿತ್ತು. ಆದರೆ ತಂಡದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.


Click it and Unblock the Notifications











