ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಈಗ ದಾರಿ ಸಲೀಸು
ಕೊನೆಗೂ ಕೋಟ್ಯಾಂತರ ಅಭಿಮಾನಿಗಳ ಕನಸು ಈಡೇರುವ ಕಾಲ ಹತ್ತಿರ ಬಂದಿದೆ. ಸಾಹಸಸಿಂಹನ ಭಕ್ತರು ಸಂಭ್ರಮ ಪಡುವ ಸಮಯ ಸನೀಹವಾಗುತ್ತಿದೆ. ವಿಷ್ಣುವರ್ಧನ್ ಕುಟುಂಬ ಕಾತರದಿಂದ ಕಾಯುತ್ತಿರುವ ಘಳಿಗೆ ಸಮೀಪದಲ್ಲಿದೆ.
ಹೌದು, ಕಳೆದ ಆರು ವರ್ಷಗಳಿಂದ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಕಂಟಕ ನಿವಾರಣೆಯಾಗುವ ಹಾದಿಯಲ್ಲಿದೆ. ಅಭಿನಯ ಭಾರ್ಗವನ ಸ್ಮಾರಕ ನಿರ್ಮಾಣಕ್ಕೆ ಬೇಕಾಗಿರುವ 2 ಎಕರೆ ಜಾಗ ಬಿಟ್ಟುಕೊಡುವುದಕ್ಕೆ ಹಾಸ್ಯ ಬ್ರಹ್ಮ ಬಾಲಕೃಷ್ಣ ಪುತ್ರಿ ಗೀತಾಬಾಲಿ ಒಪ್ಪಿಗೆ ಸೂಚಿಸಿದ್ದಾರೆ. [ಡಾ.ವಿಷ್ಣು ಸ್ಮಾರಕಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳು]

ಅಭಿಮಾನ್ ಸ್ಟುಡಿಯೋದ ಆಸ್ತಿ ವಿಚಾರಕ್ಕೆ ಸಂಬಂಧ ಪಟ್ಟಂತೆ ಗೀತಾಬಾಲಿ ಕೋರ್ಟ್ ನಲ್ಲಿ ದಾವೆ ಹೂಡಿದ್ದರು. ತಮಗೆ ಗೊತ್ತಿಲ್ಲದೇ ಸ್ಟುಡಿಯೋದಲ್ಲಿನ 10 ಎಕರೆ ಜಾಗ ಮಾರಾಟವಾಗಿದ್ದರಿಂದ ಕೋರ್ಟ್ ನಿಂದ ಇನ್ಜಂಕ್ಷನ್ ಆರ್ಡರ್ ತಂದಿದ್ದರು. 10 ಎಕರೆ ಜಾಗ ಪೈಕಿ ಡಾ.ವಿಷ್ಣು ಸ್ಮಾರಕಕ್ಕೆ ಮೀಸಲಾಗಿರುವ 2 ಎಕರೆ ಕೂಡ ಸೇರಿದ್ದರಿಂದ ಸ್ಮಾರಕ ನಿರ್ಮಾಣಕ್ಕೆ ಅಡ್ಡಿಯಾಗಿತ್ತು.
ಕುಟುಂಬದಲ್ಲಿ ಆಸ್ತಿ ವಿವಾದ ಇನ್ನೂ ತಣ್ಣಗಾಗದ ಕಾರಣ, ತಮ್ಮ ಕೌಟುಂಬಿಕ ವಿಚಾರದಿಂದ ಡಾ.ವಿಷ್ಣು ಸ್ಮಾರಕಕ್ಕೆ ಅಡ್ಡಿಯಾಗಬಾರದು ಅಂತ ಹೈಕೋರ್ಟ್ ವಕೀಲರ ಸಲಹೆ ಮೇರೆಗೆ 2 ಎಕರೆ ಜಾಗವನ್ನ ಬಿಟ್ಟುಕೊಡಲು ದಿವಂಗತ ಬಾಲಕೃಷ್ಣ ಪುತ್ರಿ ಗೀತಾಬಾಲಿ ನಿರ್ಧರಿಸಿದ್ದಾರೆ. [ನವೆಂಬರ್ 6ರಂದು ವಿಷ್ಣು ಸ್ಮಾರಕಕ್ಕೆ ಶಂಕುಸ್ಥಾಪನೆ]

''ನನಗೆ ವಿಷ್ಣು ಸರ್ ಬಗ್ಗೆ ಅಪಾರ ಅಭಿಮಾನ ಇದೆ. ಮೊದಲಿನಿಂದಲೂ 2 ಎಕರೆ ಜಾಗವನ್ನ ಬಿಟ್ಟುಕೊಡುತ್ತೇನೆ ಅಂತ ಹೇಳುತ್ತಲೇ ಬಂದಿದ್ದೇನೆ. ಆದ್ರೆ, ಕೋರ್ಟ್ ಡೆಪಾಸಿಟ್ ಮಾಡುವುದಕ್ಕೆ ನನ್ನ ಸಹೋದರ ಒಪ್ಪಿಕೊಳ್ಳುತ್ತಿರಲಿಲ್ಲ. 10 ಎಕರೆ ಜಾಗಕ್ಕೂ ಇನ್ಜಂಕ್ಷನ್ ಆರ್ಡರ್ ಇದ್ದ ಕಾರಣ ಯಾವ ಕೆಲಸ ಕೂಡ ಆಗಿರಲಿಲ್ಲ.''
''ಕೇಸ್ ವಾಪಸ್ ತೆಗೆದುಕೊಂಡರೆ ನಮ್ಮ ತಂದೆಯ ಆಸೆಗೆ ತಣ್ಣೀರೆರಚಿದ ಹಾಗಾಗುತ್ತೆ. ಈಗ ಹೈಕೋರ್ಟ್ ವಕೀಲರು ಸಜೆಸ್ಟ್ ಮಾಡಿದಂತೆ ಕೋರ್ಟ್ ನಲ್ಲಿ ಕೇಸ್ ಹಾಗೇ ಇರಲಿದೆ. 2 ಎಕರೆ ಜಾಗ ಮಾತ್ರ ಬಿಟ್ಟುಕೊಡುವುದಕ್ಕೆ ನಾನು ಒಪ್ಪಿಕೊಂಡಿದ್ದೇನೆ. ಹೀಗಾಗಿ ಕೇಸ್ ನಡೆದರೂ, ಸ್ಮಾರಕ ನಿರ್ಮಾಣಕ್ಕೆ ತೊಂದರೆ ಆಗುವುದಿಲ್ಲ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ಗೀತಾಬಾಲಿ ಹೇಳಿದರು. [ಅಭಿಮಾನಿಗಳಿಂದ 'ಅಭಿಮಾನ'ದಲ್ಲೇ ಭದ್ರವಾದ ವಿಷ್ಣು ನೆಲೆ!]
ಜೂನ್-ಜುಲೈ ಹೊತ್ತಿಗೆ ಈ ಬಗ್ಗೆ ಕೋರ್ಟ್ ನಲ್ಲಿ ಗೀತಾಬಾಲಿ ಮನವಿ ಸಲ್ಲಿಸಲಿದ್ದಾರೆ. ಅಲ್ಲಿಗೆ, ಇಲ್ಲಿಯವರೆಗೂ ಕಬ್ಬಿಣದ ಕಡಲೆ ಆಗಿದ್ದ ವಿಷ್ಣು ಸ್ಮಾರಕ ನಿರ್ಮಾಣ ಕಾರ್ಯ ಇನ್ಮುಂದೆ ಸರಾಗ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











