'ಗೆಜ್ಜೆನಾದ' ನಿರ್ದೇಶಕನ ಪುತ್ರ ಅಥರ್ವ ಸ್ಯಾಂಡಲ್‌ವುಡ್‌ಗೆ ಎಂಟ್ರಿ
ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ನಿರ್ದೇಶಕನ ಪುತ್ರ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರೋ ನಿರ್ದೇಶಕ ಬಿ ಎನ್ ವಿಜಯ್ ಕುಮಾರ್ ಅವರ ಪುತ್ರ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ.
ಬಿಎನ್ ವಿಜಯ್ ಕುಮಾರ್ ಅವರನ್ನು 'ಗೆಜ್ಜೆನಾದ' ಸಿನಿಮಾದಿಂದಲೇ ಕನ್ನಡ ಚಿತ್ರರಂಗ ಹಾಗೂ ಸಿನಿಮಾಪ್ರೇಮಿಗಳು ಗುರುತಿಸುತ್ತಾರೆ. 'ಗೆಜ್ಜೆನಾದ', 'ನಂದ ಲವ್ಸ್ ನಂದಿತಾ', 'ಕನ್ನಡದ ಕಂದ', 'ಆಟ' ಅಂತ ಸೂಪರ್‌ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
ಸಿನಿಮಾಗಳ ಜೊತೆಗೆ ಯಶಸ್ವಿ ಧಾರಾವಾಹಿಗಳನ್ನೂ ನೀಡಿರುವ ನಿರ್ದೇಶಕ ಬಿ.ಎನ್ ವಿಜಯ್ ಕುಮಾರ್(ಗೆಜ್ಜೆನಾದ) ಈಗ ನಿರ್ಮಾಪಕರಾಗಿದ್ದಾರೆ. ಇವರೊಂದಿಗೆ ಧರ್ಮೇಂದ್ರ ಎಂ ರಾವ್ ಅವರು ಕೈ ಜೋಡಿಸಿದ್ದು, ಈ ಸಿನಿಮಾದ ಟೈಟಲ್ ಅನ್ನು ಏಪ್ರಿಲ್ 13ರಂದು ರಿವೀಲ್ ಮಾಡಲಾಗುತ್ತಿದೆ.
ಬಿ.ಎನ್ ವಿಜಯ್ ಕುಮಾರ್ ತಮ್ಮ ಪುತ್ರ ಅಥರ್ವ ಅವರನ್ನು ಇದೇ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯ ಮಾಡುತ್ತಿದ್ದಾರೆ. ಇದು ಮಹಾನಗರವೊಂದರಲ್ಲಿ ನಡೆಯುವ ಸ್ಟೋರಿ. ಮೂರು ವಿಭಿನ್ನ ಕಥೆಗಳು ಈ ಸಿನಿಮಾದಲ್ಲಿ ಇರುತ್ತವೆ. ಈಗಾಗಲೇ ಸಿನಿಮಾದ ಚಿತ್ರೀಕರಣವೂ ಮುಗಿದಿದ್ದು, ಬೆಂಗಳೂರಿನಲ್ಲೇ ಬಹುತೇಕ ಶೂಟಿಂಗ್ ನಡೆದಿದೆ.
ಬಿ.ಎನ್.ವಿಜಯ್ ಕುಮಾರ್ ಪುತ್ರ ಅಥರ್ವ್ ಈ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜನಪ್ರಿಯ ಧಾರಾವಾಹಿಗಳಾದ 'ಪುನರ್ ವಿವಾಹ' ಹಾಗೂ 'ಪತ್ತೆಧಾರಿ ಪ್ರತಿಭಾ'ದಲ್ಲಿ ಅಥರ್ವ್ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಈಗ ಇದೇ ಸಿನಿಮಾದ ಮೂಲಕ ಅಥರ್ವ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಅಂದ್ಹಾಗೆ ಈ ಸಿನಿಮಾಗೆ ಕಥೆಯನ್ನು ಅಥರ್ವ್ ಅವರೇ ಬರೆದಿದ್ದಾರೆ. ಇನ್ನು ಅಥರ್ವ್ ಹಾಗೂ ರಾಜೀವ್ ಕಿರಣ್ ವೆನಿಯಲ್ ಚಿತ್ರಕಥೆಯನ್ನು ಬರೆದಿದ್ದಾರೆ. 'ಕನ್ನಡತಿ' ಧಾರಾವಾಹಿ ರೆಮೋಲ, ಸಂಪತ್ ಮೈತ್ರೇಯ, ಬಿ.ಸುರೇಶ್, ರೂಪಾ ರಾಯಪ್ಪ, ಆಶೀಶ್, ಬಿ.ಎಂ.ವೆಂಕಟೇಶ್, ಮೋಹನ್, ಆರ್ ಜೆ ಅನೂಪ ಸೇರಿದಂತೆ ಹಲವರು ಸಿನಿಮಾದಲ್ಲಿ ನಟಿಸಿದ್ದಾರೆ.
ಈಗಾಗಲೇ ಡಾಕ್ಯುಮೆಂಟರಿ, ಜಾಹೀರಾತು ಹಾಗೂ ಕಿರುಚಿತ್ರಗಳನ್ನು ನಿರ್ದೇಶಿಸಿರುವ ರಾಜೀವ್ ಕಿರಣ್ ವೆನಿಯಲ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ರೌಶನ್ ಜಾ ಕ್ಯಾಮರಾ ವರ್ಕ್ ಇದ್ದರೆ, ಇತ್ತ ಪ್ರದೀಪ್ ಗೋಪಾಲ್ ಎಡಿಟಿಂಗ್ ಹಾಗೂ ಸಿದ್ಧಾರ್ಥ್ ಪರಾಶರ್ ಮ್ಯೂಸಿಕ್ ಇದೆ.
ಈ ಸಿನಿಮಾ ಮೂಲಕ ಕಿರುತೆರೆಯಿಂದ ಮತ್ತೊಂದು ಯುವ ನಟ ಆಗಮನವಾಗುತ್ತಿದೆ. ತಂದೆ ಸಿಕ್ಕಂತಹ ಯಶಸ್ಸು ಮಗನಿಗೂ ಸಿಗುತ್ತಾ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ. ಸದ್ಯ ಟೈಟಲ್ ರಿಲೀಸ್ ಆಗಲಿದೆ.


Click it and Unblock the Notifications











