4 ವರ್ಷಗಳ ಬಳಿಕ ಶಿವ ಸಂಭ್ರಮ: ಶುಭಾಶಯಗಳ ಮಹಾಪೂರ.. ಮಧ್ಯರಾತ್ರಿಯಿಂದಲೇ ಮುಗಿಲು ಮುಟ್ಟಿದ ಸಡಗರ
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ 61ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು, ಆಪ್ತರು, ಸ್ನೇಹಿತರು ನೆಚ್ಚಿನ ನಟನಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. 4 ವರ್ಷಗಳ ಬಳಿಕ ಶಿವಣ್ಣ ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಅಭಿಮಾನಿಗಳು ಹಲವು ದಿನಗಳಿಂದ ಸಿದ್ಧತೆ ನಡೆಸಿದ್ದರು. ಮಧ್ಯರಾತ್ರಿಯಿಂದಲೇ ಶ್ರೀಮುತ್ತು ನಿವಾಸದಲ್ಲಿ ದೊಡ್ಮನೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ನಟಸಾರ್ವಭೌಮ ಡಾ. ರಾಜ್‌ಕುಮಾರ್ ಹಿರಿಮಗ ಶಿವರಾಜ್‌ಕುಮಾರ್ ತಂದೆಯ ಹಾದಿಯಲ್ಲೇ ಚಿತ್ರರಂಗಕ್ಕೆ ಬಂದು ಸಿನಿರಸಿಕರ ಮನಗೆದ್ದರು. ತಮ್ಮದೇ ವಿಭಿನ್ನ ಅಭಿನಯ, ಡ್ಯಾನ್ಸ್‌ನಿಂದ ಅಭಿಮಾನಿ ಬಳಗ ಸೃಷ್ಟಿಸಿಕೊಂಡರು. ಅಣ್ಣಾವ್ರ ಪ್ರಭಾವಳಿಯಿಂದ ಹೊರಬಂದು ಅದ್ಭುತ ಪಾತ್ರಗಳ ಮೂಲಕ ಸಿನಿಮಾಗಳನ್ನು ಗೆಲ್ಲಿಸುತ್ತಿದ್ದಾರೆ. ಕಳೆದ 30 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಂಬರ್ ವನ್ ನಟನಾಗಿ ಮೆರೆಯುತ್ತಿದ್ದಾರೆ. ಎಷ್ಟೋ ಜನ ಹೀರೋಗಳು ಬಂದ್ರು, ಹೋದ್ರು ಶಿವಣ್ಣನ ಖದರ್ ಮಾತ್ರ ಕಮ್ಮಿ ಆಗಿಲ್ಲ. ಸೋತಾಗಲೆಲ್ಲಾ ಮತ್ತೆ ಫೀನಿಕ್ಸ್ ರೀತಿ ಎದ್ದು ಬಂದಿದ್ದಾರೆ.

ಅಣ್ಣಾವ್ರ ರೀತಿಯಲ್ಲೇ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿ ಶಿವರಾಜ್‌ಕುಮಾರ್ ಮೋಡಿ ಮಾಡಿದ್ದಾರೆ. 125ಕ್ಕೂ ಅಧಿಕ ಸಿನಿಮಾಗಳಲ್ಲಿ ಶಿವಣ್ಣ ನಟಿಸಿದ್ದು ಅದರಲ್ಲಿ ಸಾಕಷ್ಟು ಸಿನಿಮಾಗಳು ಹಿಟ್ ಆಗಿದೆ. ಕೆಲ ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಲಿಸ್ಟ್ ಸೇರಿವೆ. ತಮ್ಮ ಲವಲವಿಕೆಯ ಅಭಿನಯದಿಂದ ಇವತ್ತಿನ ಯುವ ನಟರಿಗೂ ಹ್ಯಾಟ್ರಿಕ್ ಹೀರೊ ಟಫ್ ಕಾಂಪಿಟೇಷನ್ ಕೊಡುತ್ತಿದ್ದಾರೆ. ಅದೇ ರೀತಿ ಅಜಾತ ಶತ್ರು ಎನಿಸಿಕೊಂಡಿರುವ ಅಭಿಮಾನಿಗಳ ಪ್ರೀತಿಯ ಮುತ್ತಣ್ಣ ಚಿತ್ರರಂಗದಲ್ಲಿ ಎಲ್ಲರೊಟ್ಟಿಗೂ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದಾರೆ.

ಈ ವರ್ಷ ಹುಟ್ಟುಹಬ್ಬ ವಿಶೇಷ
ಶಿವಣ್ಣ ಕಳೆದ ವರ್ಷ 60ನೇ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಕೊಳ್ಳಬೇಕಿತ್ತು. ಆದರೆ ಅಪ್ಪು ಅಗಲಿಕೆಯ ನೋವಿನ ಹಿನ್ನೆಲೆಯಲ್ಲಿ ಕಳೆದ ವರ್ಷ ಹುಟ್ಟುಹಬ್ಬ ಆಚರಣೆ ಬೇಡ ಎಂದಿದ್ದರು. ಅದಕ್ಕೂ ಹಿಂದಿನ ವರ್ಷಗಳಲ್ಲಿ ಕೋವಿಡ್ ಅಭಿಮಾನಿಗಳ ಸಂಭ್ರಮಕ್ಕೆ ಕೊಳ್ಳಿ ಇಟ್ಟಿತ್ತು. ಈ ಬಾರಿ ಬಹಳ ಜೋರಾಗಿ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಮಧ್ಯರಾತ್ರಿಯೇ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಮೊದಲು ಮನೆ ಒಳಗೆ ಕುಟುಂಬ ಸದಸ್ಯರ ಜೊತೆ ಕೇಕ್ ಕತ್ತರಿಸಿದ ಶಿವಣ್ಣ ಬಳಿಕ ಹೊರ ಬಂದು ಅಭಿಮಾನಿಗಳು ಜೊತೆ ಸಂಭ್ರಮಾಚರಣೆಯಲ್ಲಿ ಭಾಗಿ ಆದರು. ಅಭಿಮಾನಿಗಳು ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಜೈಕಾರ ಹಾಕಿ ಖುಷಿಪಟ್ಟರು. ಕೆಲವೆಡೆ ರಕ್ತದಾನ, ಅನ್ನದಾನದಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಅಭಿಮಾನಿಗಳು ಹಮ್ಮಿಕೊಳ್ಳುತ್ತಿದ್ದಾರೆ. ಬರ್ತ್ ಡೇ ಕಾಮನ್ ಡಿಪಿ ವೈರಲ್ ಆಗ್ತಿದೆ.
ಅಭಿಮಾನಿಗಳಿಗೆ ಬಗೆ ಬಗೆ ಉಡುಗೊರೆ
ಇನ್ನು ಶಿವಣ್ಣ ಹುಟ್ಟುಹಬ್ಬ ವಿಶೇಷವಾಗಿ 'ಘೋಸ್ಟ್' ಸಿನಿಮಾ ಟೀಸರ್ ರಿಲೀಸ್ ಆಗುತ್ತಿದೆ. ಕೆಜಿ ರಸ್ತೆಯ ಸಂತೋಸ್ ಚಿತ್ರಮಂದಿರದಲ್ಲಿ 11.45ಕ್ಕೆ ಟೀಸರ್ ಪ್ರದರ್ಶನ ಮಾಡಲಾಗುತ್ತಿದೆ. ಕೆ. ಎಸ್ ರವಿಕುಮಾರ್ ನಿರ್ದೇಶದನಲ್ಲಿ ಶಿವಣ್ಣ- ಗಣೇಶ್ ನಟನೆಯ ಸಿನಿಮಾ ಘೋಷಣೆ ಆಗಿದೆ. ಸೂರಪ್ಪ ಬಾಬು ಈ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಸಂಜೆ 5 ಗಂಟೆಗೆ ಸೆಂಚುರಿ ಸ್ಟಾರ್ ಹಾಗೂ ಪ್ರಭುದೇವ ನಟನೆಯ ಹೊಸ ಸಿನಿಮಾ ಟೈಟಲ್ ರಿವೀಲ್ ಆಗಲಿದೆ. ರಾಕ್‌ಲೈನ್ ಬ್ಯಾನರ್‌ನಲ್ಲಿ ಯೋಗರಾಜ್ ಭಟ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ತಮಿಳಿನ 'ಕ್ಯಾಪ್ಟನ್ ಮಿಲ್ಲರ್' ಹಾಗೂ 'ಜೈಲರ್' ಸಿನಿಮಾಗಳಿಂದ ಸ್ಪೆಷಲ್ ಪೋಸ್ಟರ್ ರಿಲೀಸ್ ಆಗಲಿದೆ.
ಸ್ಯಾಂಡಲ್‌ವುಡ್ ಕಿಂಗ್ ಶಿವಣ್ಣ
1986ರಲ್ಲಿ ಬಿಡುಗಡೆಯಾದ 'ಆನಂದ್' ಸಿನಿಮಾ ಮೂಲಕ ಶಿವಣ್ಣ ಚಿತ್ರರಂಗಕ್ಕೆ ಹೀರೊ ಆಗಿ ಎಂಟ್ರಿ ಕೊಟ್ಟರು. ಮೊದಲ 3 ಸಿನಿಮಾಗಳು ಹಿಟ್ ಆಗಿ ಹ್ಯಾಟ್ರಿಕ್ ಹೀರೊ ಬಿರುದು ಸಿಕ್ತು. ನಂತರ 'ಓಂ', 'ಎಕೆ-47', 'ಜನುಮದ ಜೋಡಿ', 'ಮಫ್ತಿ', 'ಟಗರು' ಸೇರಿದಂತೆ ಹಲವು ಸೆನ್ಸೇಷನಲ್ ಸಿನಿಮಾಗಳಲ್ಲಿ ಶಿವಣ್ಣ ನಟಿಸಿದ್ದಾರೆ. ನಟರಾಗಿ ಮಾತ್ರವಲ್ಲದೇ ಗಾಯಕರಾಗಿಯೂ ಸಕ್ಸಸ್ ಕಂಡಿದ್ದಾರೆ. ಇತ್ತೀಚೆಗೆ ತಮ್ಮದೇ ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.
ಪರಭಾಷೆಗಳಲ್ಲಿ ಶಿವಣ್ಣ ನಟನೆ
ಇತ್ತೀಚಿನ ದಿನಗಳಲ್ಲಿ ಶಿವರಾಜ್‌ಕುಮಾರ್ ಪರಭಾಷಾ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಈ ಹಿಂದೆ ತೆಲುಗಿನ 'ಗೌತಮಿಪುತ್ರ ಶಾತಕರ್ಣಿ' ಚಿತ್ರದ ಹಾಡೊಂದರಲ್ಲಿ ಶಿವಣ್ಣ ಹೆಜ್ಜೆ ಹಾಕಿದ್ದರು. ಸದ್ಯ ರಜನಿಕಾಂತ್ ನಟನೆಯ 'ಜೈಲರ್', ಧನುಷ್ ನಟನೆಯ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾಗಳಲ್ಲಿ ಶಿವಣ್ಣ ನಟಿಸಿದ್ದಾರೆ. ಒಳ್ಳೆ ಪಾತ್ರಗಳು ಸಿಕ್ಕರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸೋಕೆ ಸದಾ ಸಿದ್ಧ ಎಂದಿದ್ದಾರೆ. ಬಾಲಕೃಷ್ಣ ಜೊತೆ ಮಲ್ಟಿಸ್ಟಾರರ್ ಸಿನಿಮಾ ಮಾಡುವುದಾಗಿಯೂ ಹೇಳಿದ್ದಾರೆ.


Click it and Unblock the Notifications











