ದರ್ಶನ್ 'ಕಾಟೇರ' ಎದುರು ತೊಡೆ ತಟ್ಟಿದ ಶಿವಣ್ಣನ 'ಘೋಸ್ಟ್'; ಎರಡೂ ಚಿತ್ರಗಳು ಒಟ್ಟಿಗೆ ರಿಲೀಸ್!
2022ರಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿ ಭಾರತ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ್ದ ಕನ್ನಡ ಚಿತ್ರರಂಗ ಈ ವರ್ಷದ ಮೊದಲಾರ್ಧದಲ್ಲಿ ಸೈಲೆಂಟ್ ಆಗಿಬಿಟ್ಟಿದೆ. ಹೌದು, 2023ರ ಮೊದಲ ಆರು ತಿಂಗಳುಗಳಲ್ಲಿ ಬಿಡುಗಡೆಗೊಂಡ ಕನ್ನಡದ ಯಾವ ಚಿತ್ರಗಳೂ ಸಹ ಐವತ್ತು ಕೋಟಿ ಕಲೆಕ್ಷನ್ ಮುಟ್ಟುವ ಸಾಹಸವನ್ನು ಮಾಡಿಲ್ಲ.
ಇನ್ನು ಈ ಮೊದಲ ಆರು ತಿಂಗಳುಗಳಲ್ಲಿ ಕನ್ನಡದ ಸ್ಟಾರ್ ನಟರ ಚಿತ್ರಗಳು ಹೆಚ್ಚೇನೂ ಬಿಡುಗಡೆಯಾಗದೇ ಇರುವುದು ಸ್ಯಾಂಡಲ್‌ವುಡ್ ಹಿನ್ನಡೆ ಅನುಭವಿಸಲು ಕಾರಣ ಎಂದು ಹೇಳಬಹುದಾಗಿದ್ದು, ವರ್ಷದ ದ್ವಿತೀಯಾರ್ಧದಲ್ಲಿ ಸಾಲು ಸಾಲು ಬಹು ನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗುವ ಕಾರಣ ಚಂದನವನ ಕಮ್‌ಬ್ಯಾಕ್ ಮಾಡುವ ಸಾಧ್ಯತೆಗಳು ಹೆಚ್ಚಿವೆ.

ಹೌದು, ಸ್ಯಾಂಡಲ್‌ವುಡ್ ಕಿಂಗ್ ಶಿವರಾಜ್‌ಕುಮಾರ್ ನಟನೆಯ ಘೋಸ್ಟ್, ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ, ದರ್ಶನ್ ನಟನೆಯ ಕಾಟೇರ, ಯುವ ರಾಜ್‌ಕುಮಾರ್ ನಟನೆಯ ಯುವ, ರಾಜ್ ಬಿ ಶೆಟ್ಟಿ ನಟನೆಯ ಟೋಬಿ, ಉಪೇಂದ್ರ ಯುಐ ಸೇರಿದಂತೆ ಹಲವಾರು ದೊಡ್ಡ ದೊಡ್ಡ ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾಗಳು 2023ರ ದ್ವಿತೀಯಾರ್ಧದಲ್ಲಿ ಬಿಡುಗಡೆಗೊಳ್ಳಲಿವೆ.
ಇನ್ನು ಈ ಚಿತ್ರಗಳ ಪೈಕಿ ಇದೀಗ ಶಿವಣ್ಣ ನಟನೆಯ ಘೋಸ್ಟ್ ಹಾಗೂ ದರ್ಶನ್ ನಟನೆಯ ಕಾಟೇರ ಚಿತ್ರಗಳು ಒಟ್ಟಿಗೆ ಚಿತ್ರಮಂದಿರಗಳ ಅಂಗಳಕ್ಕೆ ಬರುವ ಸಾಧ್ಯತೆಗಳು ಹೆಚ್ಚಿವೆ. ಹೌದು, ಕಳೆದ ಕೆಲ ದಿನಗಳ ಹಿಂದಷ್ಟೇ ಕಾಟೇರ ಚಿತ್ರವನ್ನು ದಸರಾ ಹಬ್ಬಕ್ಕೆ ಬಿಡುಗಡೆ ಮಾಡುವ ಸಿದ್ಧತೆಗಳು ಭರದಿಂದ ಸಾಗುತ್ತಿವೆ ಎಂಬುದನ್ನು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ತಿಳಿಸಿದ್ದರು.
ಇದೀಗ ಇಂದು ಬಿಡುಗಡೆಯಾಗಿರುವ ಘೋಸ್ಟ್ ಚಿತ್ರದ ಬಿಗ್ ಡ್ಯಾಡಿ ಟೀಸರ್ ವಿಡಿಯೊದ ಕೊನೆಯಲ್ಲಿ ಘೋಸ್ಟ್ ಚಿತ್ರ ದಸರಾ ಹಬ್ಬಕ್ಕೆ ನಿಮ್ಮ ಮುಂದೆ ಬರಲಿದೆ ಎಂಬುದನ್ನು ತಿಳಿಸಲಾಗಿದೆ. ಹೀಗಾಗಿ ಘೋಸ್ಟ್ ಹಾಗೂ ಕಾಟೇರ ಚಿತ್ರಗಳು ಈ ಬಾರಿಯ ದಸರಾ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿದ್ದು, ಎರಡು ಚಿತ್ರಗಳ ನಡುವೆ ಬಾಕ್ಸ್ ಆಫೀಸ್ ಸಮರ ನಡೆಯುವುದು ಪಕ್ಕಾ.
ಹೀಗೆ ಎರಡೂ ಚಿತ್ರಗಳು ಒಟ್ಟಿಗೆ ಬಿಡುಗಡೆಯಾಗುವುದು ಬಹುತೇಕ ಪಕ್ಕಾ ಆಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಎರಡು ಚಿತ್ರಗಳ ಮುಖಾಮುಖಿಯಲ್ಲಿ ಯಾವ ಚಿತ್ರ ಗೆಲ್ಲಬಹುದು ಎಂಬ ಚರ್ಚೆಗಳು ಶುರುವಾಗಿವೆ.
ಮೊದಲಿಗಗೆ ಈ ವರ್ಷದ ಕೊನೆಗೆ ಅಥವಾ ಮುಂದಿನ ವರ್ಷ 'ಕಾಟೇರ' ಸಿನಿಮಾ ರಿಲೀಸ್ ಆಗುತ್ತದೆ ಎನ್ನುವ ಅಂದಾಜಿತ್ತು. ಆದರೆ ಅಚ್ಚರಿ ಎನ್ನುವಂತೆ ದಸರಾ ಸಂಭ್ರಮದಲ್ಲೇ ಸಿನಿಮಾ ತೆರೆಗೆ ತರಲು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮನಸ್ಸು ಮಾಡಿದ್ದಾರೆ. ಈಗಾಗಲೇ ಚಿತ್ರತಂಡಕ್ಕೂ ಸೂಚನೆ ನೀಡಿದ್ದು ನಾಡಹಬ್ಬದ ವೇಳೆಗೆ ಸಿನಿಮಾ ಸಿದ್ಧಪಡಿಸುವಂತೆ ಹೇಳಿದ್ದಾರೆ. ಈ ಬಗ್ಗೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ 'ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಗೆ ಮಾಹಿತಿ ನೀಡಿದ್ದರು.


Click it and Unblock the Notifications











