"ನೀವು ಗನ್ ಅಲ್ಲಿ ಹೆದರಿಸಿರೋ ಜನಕ್ಕಿಂತ ಜಾಸ್ತಿ ಜನರನ್ನು ನಾನು ಕಣ್ಣಲ್ಲಿ ಹೆದರಿಸಿದ್ದೇನೆ"; ಶಿವಣ್ಣನ ಘೋಸ್ಟ್ ಟೀಸರ್ ಚಿಂದಿ
ಇಂದು ( ಜುಲೈ 12 ) ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬ. ಶಿವಣ್ಣ 61 ವರ್ಷಗಳನ್ನು ಪೂರೈಸಿದ್ದು, ಅಭಿಮಾನಿಗಳು ಮಧ್ಯ ರಾತ್ರಿಯಿಂದಲೇ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಈ ವಿಶೇಷ ದಿನದಂದು ವಿವಿಧ ನಿರ್ಮಾಪಕರು ಹಾಗೂ ನಿರ್ದೇಶಕರು ತಾವು ಶಿವರಾಜ್‌ಕುಮಾರ್ ಜತೆ ಚಿತ್ರ ಮಾಡುತ್ತಿರುವ ವಿಷಯವನ್ನು ಹುಟ್ಟುಹಬ್ಬದ ಶುಭಕೋರುವ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ತಿಳಿಸುತ್ತಿದ್ದಾರೆ.
ಅದರಲ್ಲಿಯೂ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ಧಗೊಂಡಿರುವ ಶಿವರಾಜ್‌ಕುಮಾರ್ ನಟನೆಯ ಮುಂದಿನ ಚಿತ್ರ ಘೋಸ್ಟ್ ಚಿತ್ರತಂಡ ವಿಶೇಷ ವಿಡಿಯೋ ಟೀಸರ್ ಒಂದನ್ನು ಬಿಡುಗಡೆ ಮಾಡುವ ಮೂಲಕ ಶಿವರಾಜ್‌ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದೆ.

ಹೌದು, ಇಂದು ಬೆಳಗ್ಗೆ 11.45ಕ್ಕೆ ಟಿ ಸಿರೀಸ್ ಕನ್ನಡ ಯುಟ್ಯೂಬ್ ಚಾನೆಲ್‌ನಲ್ಲಿ ಘೋಸ್ಟ್ ಚಿತ್ರದ ಬಿಗ್ ಡ್ಯಾಡಿ ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ. ಈ ಹಿಂದಿನಿಂದಲೂ ಶಿವಣ್ಣನ ಹುಟ್ಟುಹಬ್ಬಕ್ಕೆ ಬಿಗ್ ಡ್ಯಾಡಿಯನ್ನು ರಿವೀಲ್ ಮಾಡುತ್ತೇವೆ ಎಂದು ಹೇಳಿದ್ದ ನಿರ್ದೇಶಕ ಶ್ರೀನಿ ಶಿವಣ್ಣನ ಮಾಸ್ ಅವತಾರವನ್ನು ಬಿಚ್ಚಿಟ್ಟಿದ್ದಾರೆ.
ಜನರಹಿತ ಪ್ರದೇಶವೊಂದರ ಮೇಲೆ ವೈರಿಗಳ ಗುಂಪೊಂದು ಗನ್‌ಗಳನ್ನು ಹಿಡಿದು ಅಟ್ಯಾಕ್ ಮಾಡುವ ದೃಶ್ಯದ ಮೂಲಕ ಈ ಟೀಸರ್ ಆರಂಭಗೊಂಡಿದ್ದು, ಆ ವೈರಿಗಳಿಗೆ ವ್ಯಕ್ತಿಯೋರ್ವ ಮನೆಯೊಳಗೆ ಬಿಗ್ ಡ್ಯಾಡಿ ಒಬ್ಬನೇ ಇದ್ದಾನೆ, ಅವನು ನನಗೆ ಜೀವಂತವಾಗಿ ಬೇಕು ಎಂದು ಹೇಳಿ ಕಳುಹಿಸುತ್ತಾನೆ. ಇದಕ್ಕುತ್ತರಿಸುವ ಆ ವೈರಿಗಳ ಗುಂಪು ಹತ್ತು ನಿಮಿಷಗಳಲ್ಲಿ ಕೆಲಸ ಮಾಡಿ ಮುಗಿಸುತ್ತೇವೆ ಎಂದು ಹೇಳುತ್ತಾರೆ. ಕಳೆದ ಬಾರಿ ಐದು ನಿಮಿಷಗಳಲ್ಲಿ ಕೆಲಸ ಮುಗಿಯುತ್ತೆ ಎಂದು ಹೇಳಿ ಹೋದವರು ಮತ್ತೆ ಬರಲೇ ಇಲ್ಲ ಎಂದು ಆ ವ್ಯಕ್ತಿ ಗುಂಪನ್ನು ಕರೆ ಮೂಲಕ ಎಚ್ಚರಿಸುತ್ತಾನೆ.
ಹೀಗೆ ವೈರಿಗಳು ಕಳುಹಿಸಿದ ಗುಂಪೊಂದು ತನ್ನನ್ನು ಹುಡುಕಿಕೊಂಡು ಬರುತ್ತಿದ್ದರೆ ಬಿಗ್ ಡ್ಯಾಡಿ ಶಿವಣ್ಣ ಮಾತ್ರ ಖುರ್ಚಿಯೊಂದರ ಮೇಲೆ ಮದ್ಯ ಸೇವಿಸುತ್ತಾ ಕುಳಿತಿರುತ್ತಾರೆ. ಹಾಗೆಯೇ ಪಾನಿಪೂರಿಗೆ ಪಾನಿ ಬದಲು ಮದ್ಯವನ್ನೇ ಹಾಕಿಕೊಂಡು ತಿನ್ನುವ ಶಿವಣ್ಣನ ಸೀನ್ ಸಿನಿ ರಸಿಕರಿಗೆ ಕಿಕ್ ನೀಡಿದೆ.
ಬಳಿಕ ಮದ್ಯ ಸೇವಿಸುತ್ತಾ, ಸಿಗರೇಟ್ ಸೇದುತ್ತಾ ಖುರ್ಚಿ ಮೇಲೆ ಕುಳಿತಿರುವ ಶಿವಣ್ಣನ ಕಡೆ ಗನ್ ಗುರಿಯಿಟ್ಟು ಬರುವ ಖಳರ ಗುಂಪು ಶಿವಣ್ಣನಿಗೆ ಕದಲಬೇಡ, ಕದಲಿದರೆ ಶೂಟ್ ಮಾಡುತ್ತೇವೆ ಎಂದು ವಾರ್ನ್ ಮಾಡುತ್ತಾರೆ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಬಿಗ್ ಡ್ಯಾಡಿ ಅದೇ ಮದ್ಯವನ್ನು ಬಳಸಿ ಅಲ್ಲಿಯೇ ಇದ್ದ ಪ್ಯಾಂಜರ್‌ಗೆ ಬೆಂಕಿ ಹಚ್ಚಿ ವಿರೋಧಿ ಗುಂಪನ್ನು ಎದುರಿಸುತ್ತಾರೆ.
ಬಳಿಕ ಮತ್ತೊಮ್ಮೆ ಸಿಗರೇಟ್ ಹಚ್ಚಿಕೊಳ್ಳುವ ಶಿವಣ್ಣ "ನೀವು ಗನ್ ಅಲ್ಲಿ ಎಷ್ಟು ಜನರನ್ನು ಎದುರಿಸಿದ್ದೀರೋ ಅದಕ್ಕಿಂತ ಜಾಸ್ತಿ ಜನರನ್ನು ನಾನು ಕಣ್ಣಲ್ಲಿ ಎದುರಿಸಿದ್ದೇನೆ. ಅವರು ನನ್ನನ್ನು ಓಜಿ ಎಂದು ಕೆರಯುತ್ತಿದ್ದರು. ಒರಿಜಿನಲ್ ಗ್ಯಾಂಗ್‌ಸ್ಟರ್.." ಎಂದು ಖಡಕ್ ಡೈಲಾಗ್ ಹೇಳಿ ಗುಂಪು ಕಟ್ಟಿಕೊಂಡು ಬಂದಿದ್ದವರಿಗೆ ಭರ್ಜರಿ ಟಾಂಗ್ ನೀಡಿದ್ದಾರೆ.
ಹೀಗೆ ಖಡಕ್ ಟೀಸರ್ ಕಟ್ ಮಾಡುವ ಮೂಲಕ ಶಿವ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ಅನ್ನು ಘೋಸ್ಟ್ ತಂಡ ನೀಡಿದ್ದು ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚುಗೊಂಡಿದೆ. ಇನ್ನು ಟೀಸರ್‌ನ ಅಂತಿಮ ಭಾಗದಲ್ಲಿ ಚಿತ್ರ ದಸರಾಗೆ ಬಿಡುಗಡೆಯಾಗಲಿದೆ ಎಂಬುದನ್ನೂ ಸಹ ಘೋಸ್ಟ್ ಚಿತ್ರತಂಡ ಬಿಚ್ಚಿಟ್ಟಿದೆ.


Click it and Unblock the Notifications











