ಘೋಸ್ಟ್ 'ಬಿಗ್ ಡ್ಯಾಡಿ' ವಿಡಿಯೊ ಬಿಡುಗಡೆ ಕಾರ್ಯಕ್ರಮದ ದಿನಾಂಕ ಪ್ರಕಟ; ಎಲ್ಲಿ, ಯಾವಾಗ?
ಕಳೆದ ವರ್ಷ ವೇದ ಚಿತ್ರದ ಮೂಲಕ ಕಮ್‌ಬ್ಯಾಕ್ ಮಾಡಿರುವ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸದ್ಯ ಘೋಸ್ಟ್ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ.
ಟೋಪಿವಾಲ, ಶ್ರೀನಿವಾಸ ಕಲ್ಯಾಣ, ಬೀರ್‌ಬಲ್ ಹಾಗೂ ಓಲ್ಡ್ ಮಾಂಕ್ ರೀತಿಯ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಶ್ರೀನಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಸಂದೇಶ್ ನಾಗರಾಜ್ ಬಂಡವಾಳ ಹೂಡಿದ್ದಾರೆ.

ಇನ್ನು ಘೋಸ್ಟ್ ಚಿತ್ರ ತನ್ನ ತಾರಾಗಣ, ವಿಶಿಷ್ಟ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಹಾಗೂ ಶಿವ ರಾಜ್‌ಕುಮಾರ್ ವಿಭಿನ್ನ ಲುಕ್‌ನಿಂದಾಗಿ ಈಗಾಗಲೇ ಸಿಕ್ಕಾಪಟ್ಟೆ ಸುದ್ದಿ ಮಾಡಿದ್ದು, ಶಿವಣ್ಣನ ಅಭಿಮಾನಿಗಳು ಹಾಗೂ ಸಿನಿ ರಸಿಕರು ಘೋಸ್ಟ್ ಯಾವಾಗ ತೆರೆಗೆ ಬರಲಿದೆ ಎಂದು ಎದುರು ನೋಡುತ್ತಿದ್ದಾರೆ.
ಹೀಗೆ ಕಾತರರಾಗಿ ಕಾಯುತ್ತಿರುವ ಶಿವಣ್ಣನ ಅಭಿಮಾನಿಗಳಿಗೆ ಘೋಸ್ಟ್ ಚಿತ್ರತಂಡ ಇಂದು ( ಜುಲೈ 3 ) ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದು, ಶಿವ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ವಿಡಿಯೊವೊಂದನ್ನು ಬಿಡುಗಡೆ ಮಾಡಲಿದ್ದೇವೆ ಎಂಬ ಮಾಹಿತಿಯನ್ನು ಹಂಚಿಕೊಂಡಿದೆ.
ಹೌದು, ಇದೇ ತಿಂಗಳ 12ರಂದು ಸೆಂಚುರಿ ಸ್ಟಾರ್ ಹುಟ್ಟುಹಬ್ಬವಿದೆ. ಈ ದಿನದಂದು ಶಿವರಾಜ್‌ಕುಮಾರ್ 62ನೇ ವಸಂತಕ್ಕೆ ಕಾಲಿಡಲಿದ್ದು, ಈ ವಿಶೇಷ ದಿನದಂದು ಘೋಸ್ಟ್ ಚಿತ್ರತಂಡ ಬಿಗ್ ಡ್ಯಾಡಿಯನ್ನು ರಿವೀಲ್ ಮಾಡಲಿದೆ. ಈ ಘೋಸ್ಟ್ ಬಿಗ್ ಡ್ಯಾಡಿ ವಿಡಿಯೊ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ ಬಿಡುಗಡೆಗೊಳಿಸಲು ಚಿತ್ರತಂಡ ತೀರ್ಮಾನಿಸಿದೆ.
ಈ ಕುರಿತು ಇಂದು ಚಿತ್ರದ ನಿರ್ದೇಶಕ ಶ್ರೀನಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. "ಲೆಜೆಂಡರಿ ನಟ ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದು ಬೆಳಗ್ಗೆ 11.15ಕ್ಕೆ ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ನಮ್ಮ ಚಿತ್ರದ ಥ್ರಿಲ್ಲಿಂಗ್ ಬಿಗ್ ಡ್ಯಾಡಿ ವಿಡಿಯೊವನ್ನು ಬಿಡುಗಡೆಯಾಗಲಿದೆ. ಈ ವಿಡಿಯೊವನ್ನು ಸ್ವತಃ ಶಿವ ರಾಜ್‌ಕುಮಾರ್ ಅವರೇ ಅನಾವರಣಗೊಳಿಸಲಿದ್ದು, ಈ ಮಹಾ ಕಾರ್ಯಕ್ರಮಕ್ಕೆ ಎಲ್ಲಾ ಅಭಿಮಾನಿಗಳು ಬರಬೇಕು ಎಂದು ಆಹ್ವಾನಿಸುತ್ತಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ.
'ಘೋಸ್ಟ್' ಚಿತ್ರಕ್ಕೆ ನಿರ್ದೇಶಕ ಶ್ರೀನಿ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ಜವಾಬ್ದಾರಿಯನ್ನು ಮಾಸ್ತಿ ಹಾಗೂ ಪ್ರಸನ್ನ ವಹಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ಅದ್ಧೂರಿಯಾಗಿ ನಿರ್ಮಾಣ ಆಗುತ್ತಿದೆ. ಭಾರೀ ವೆಚ್ಚದಲ್ಲಿ ಬಹಳ ರೋಚಕವಾಗಿ ಸಿನಿಮಾ ಸೆರೆಹಿಡಿಯಲಾಗಿದೆ.
ಅಂದಹಾಗೆ 'ಘೋಸ್ಟ್' ಚಿತ್ರದಲ್ಲಿ ನಾಯಕಿ ಇಲ್ಲ. ಇದು 48 ಗಂಟೆಗಳಲ್ಲಿ ನಡೆಯುವ ಕಥೆ. ಇಲ್ಲಿ ನಾಯಕಿ, ಡ್ಯುಯೆಟ್ ಯಾವುದಕ್ಕೂ ಜಾಗವಿಲ್ಲ. ಶಿವರಾಜಕುಮಾರ್, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಬಣ್ಣ ಹಚ್ಚಿ ನಟಿಸಿದ್ದಾರೆ. ಮಲಯಾಳಂ ನಟ ಜಯರಾಮ್ ಪೊಲೀಸ್ ಆಫೀಸರ್ ರೋಲ್‌ನಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟ ಅನುಪಮ್ ಕೇರ್ ಕೂಡ ತಾರಾಗಣದಲ್ಲಿದ್ದಾರೆ.


Click it and Unblock the Notifications











