Ghost: ಘೋಸ್ಟ್ ಬಿಡುಗಡೆ ದಿನಾಂಕ ಪ್ರಕಟ; ಮತ್ತೊಮ್ಮೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಬ್ಬರಿಸಲು ಶಿವಣ್ಣ ಸಜ್ಜು
ಶ್ರೀನಿ ನಿರ್ದೇಶನದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ಘೋಸ್ಟ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಕನ್ನಡ ಮಾತ್ರವಲ್ಲದೇ ಪರಭಾಷೆಯ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದು ಚಿತ್ರದಲ್ಲಿ ಶಿವಣ್ಣನ ಲುಕ್ ಕುತೂಹಲ ಕೆರಳಿಸಿದೆ. ಟೈಟಲ್‌ನಿಂದಲೇ ಸಿನಿಮಾ ಭಾರೀ ನಿರೀಕ್ಷೆ ಹುಟ್ಟು ಹಾಕಿರುವ ಘೋಸ್ಟ್ ಚಿತ್ರತಂಡ ಬಿಗ್ ಡ್ಯಾಡಿ ಟೀಸರ್ ಬಿಡುಗಡೆ ಮಾಡುವ ಮೂಲಕ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿತ್ತು.
ಇನ್ನು ನಿರ್ದೇಶಕ ಶ್ರೀನಿ ಘೋಸ್ಟ್ ಸಿನಿಮಾವನ್ನು ದಸರಾ ಪ್ರಯುಕ್ತ ಬಿಡುಗಡೆ ಮಾಡಲಿದ್ದೇವೆ ಎಂಬುದನ್ನು ಘೋಷಿಸಿದ್ದರು. ಆದರೆ ಯಾವ ದಿನಾಂಕದಂದು ಚಿತ್ರ ತೆರೆಗೆ ಬರಲಿದೆ ಎಂಬುದನ್ನು ಮಾತ್ರ ಬಿಟ್ಟುಕೊಟ್ಟಿರಲಿಲ್ಲ. ಆದರೆ ಈಗ ಮೂಲಗಳು ತಿಳಿಸಿರುವ ಮಾಹಿತಿಯ ಪ್ರಕಾರ ಘೋಸ್ಟ್ ಚಿತ್ರ ಅಕ್ಟೋಬರ್ 19ಕ್ಕೆ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

ಪ್ಯಾನ್ ಇಂಡಿಯಾ ಸಿನಿಮಾ?
ಸದ್ಯ ಈಗ ಎಲ್ಲೆಲ್ಲೂ ಪ್ಯಾನ್ ಇಂಡಿಯಾ ಟ್ರೆಂಡ್ ನಡೀತಿದೆ. ಈಗಾಗಲೇ ಶಿವಣ್ಣನ ಸಿನಿಮಾಗಳು ಬೇರೆ ಭಾಷೆಗೆ ಡಬ್ ಆಗಿ ರಿಲೀಸ್ ಆಗಿರುವ ಉದಾಹರಣೆ ಇದೆ. ಆದರೆ ಏಕಕಾಲಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿಲ್ಲ. 'ಘೋಸ್ಟ್' ಯೂನಿವರ್ಸಲ್ ಸಬ್ಜೆಕ್ಟ್ ಆಗಿರುವುದರಿಂದ ಬೇರೆ ಭಾಷೆಗಳಿಗೂ ಡಬ್ ಮಾಡಿ ರಿಲೀಸ್ ಮಾಡಲಿದ್ದಾರೆ. ಬಿಗ್ ಡ್ಯಾಡಿ ಟೀಸರ್ ಅನ್ನು ಕನ್ನಡ ಮಾತ್ರವಲ್ಲದೇ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿಯೂ ಬಿಡುಗಡೆ ಮಾಡಿದ್ದ ಚಿತ್ರತಂಡ ಘೋಸ್ಟ್ ಪ್ಯಾನ್ ಇಂಡಿಯಾ ಸಿನಿಮಾ ಎಂಬುದನ್ನು ತಿಳಿಸಿತ್ತು.
ಜೈಲರ್ ಖ್ಯಾತಿ; ಘೋಸ್ಟ್ ಚಿತ್ರಕ್ಕೆ ಬೇಡಿಕೆ
ಸದ್ಯ ಜೈಲರ್ ಬಿಡುಗಡೆಯಾಗಿ ದಾಖಲೆ ಮೇಲೆ ದಾಖಲೆ ಬರೆದು ಅಬ್ಬರಿಸುತ್ತಿದ್ದು, ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ವೀಟ್‌ಗಳು ಹಾಗೂ ಪೋಸ್ಟ್‌ಗಳು ಹರಿದು ಬರುತ್ತಿದ್ದು, ಇದೇ ಮೊದಲ ಬಾರಿಗೆ ರಜನಿಕಾಂತ್ ನಟನೆಯ ಚಿತ್ರವೊಂದರಲ್ಲಿ ರಜನಿಗಿಂತಲೂ ಬೇರೊಬ್ಬ ಕಲಾವಿದನನ್ನು ತಮಿಳು ಸಿನಿ ರಸಿಕರು ಹೆಚ್ಚಾಗಿ ಹೊಗಳಿ ಬರೆದುಕೊಳ್ಳುತ್ತಿರುವುದನ್ನು ನಾವು ಕಾಣಬಹುದಾಗಿದೆ. ಹೌದು, ಜೈಲರ್ ಚಿತ್ರದಲ್ಲಿ ಕನ್ನಡದ ಸೂಪರ್ ಸ್ಟಾರ್ ಶಿವರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಮಂಡ್ಯ ಮೂಲದ ಗ್ಯಾಂಗ್‌ಸ್ಟರ್ ನರಸಿಂಹ ಎಂಬ ಪಾತ್ರವನ್ನು ನಿರ್ವಹಿಸಿರುವ ಶಿವಣ್ಣ ಕಾಣಿಸಿಕೊಳ್ಳುವ ಮೂರ್ನಾಲ್ಕು ದೃಶ್ಯಗಳ ಮೂಲಕವೇ ತಮಿಳು ಸಿನಿ ರಸಿಕರು ತಮ್ಮ ನಟನೆ ಕಂಡು ಹುಚ್ಚೆದ್ದು ಕೂಗುವ ಹಾಗೆ ಮಾಡಿದ್ದಾರೆ. ಹೌದು, ಶಿವಣ್ಣನ ನಟನೆ ಕಂಡ ತಮಿಳು ಸಿನಿ ರಸಿಕರು ಅಕ್ಷರಷಃ ಮನ ಸೋತಿದ್ದಾರೆ. ಕಾಣಿಸಿಕೊಳ್ಳುವುದು ಕೆಲ ದೃಶ್ಯಗಳಲ್ಲಿಯೇ ಆದರೂ ಶಿವರಾಜ್‌ಕುಮಾರ್ ನಟನೆ ಮಾತ್ರ ಚಿಂದಿ ಎಂದು ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿ ರಸಿಕರು ಕೊಂಡಾಡುತ್ತಿದ್ದಾರೆ.
ರಜನಿಕಾಂತ್ ಸಿನಿಮಾದಲ್ಲಿ ನಟಿಸಿ ರಜನಿಗಿಂತಲೂ ಹೆಚ್ಚಿನ ಪ್ರಶಂಸೆಯನ್ನು ಮತ್ತೊಬ್ಬ ಕಲಾವಿದ ಗಿಟ್ಟಿಸಿಕೊಳ್ಳುತ್ತಿರುವುದು, ಅದರೂ ಸಹ ಕೇವಲ ಅತಿಥಿ ಪಾತ್ರದ ಮೂಲಕ ಪಡೆದುಕೊಳ್ಳುತ್ತಿರುವುದು ಇದೇ ಮೊದಲು ಎಂದೇ ಹೇಳಬಹುದು. ಇಷ್ಟರ ಮಟ್ಟಕ್ಕೆ ಶಿವರಾಜ್‌ಕುಮಾರ್ ಅಬ್ಬರಿಸುತ್ತಿದ್ದು, ತಮಿಳು ಸಿನಿ ರಸಿಕರು ಇನ್ನು ಮುಂದಿನ ಶಿವರಾಜ್‌ಕುಮಾರ್ ನಟನೆಯ ಸಿನಿಮಾಗಳನ್ನು ತಮಿಳಿಗೂ ಸಹ ಡಬ್ ಮಾಡಿ ಬಿಡುಗಡೆ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಶಿವಣ್ಣ ನಟನೆಯ ಕನ್ನಡ ಸಿನಿಮಾಗಳನ್ನು ಓಟಿಟಿಯಲ್ಲಿ ನೋಡಿ ಹಾಡಿ ಹೊಗಳಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಾರೆ.
ಹೀಗಾಗಿ ಘೋಸ್ಟ್ ತಮಿಳಿನಲ್ಲಿಯೂ ಬಿಡುಗಡೆಯಾಗುವುದರಿಂದ ಈ ಎಲ್ಲಾ ಅಂಶಗಳು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಲಿದ್ದು, ತಮಿಳಿನಲ್ಲಿ ಚಿತ್ರ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುವುದು ಪಕ್ಕಾ ಎನ್ನಬಹುದು.


Click it and Unblock the Notifications











