Shiva Rajkumar : ಘೋಸ್ಟ್, ಸಾಗಾ ಆಫ್ ಅಶ್ವತ್ಥಾಮ, ರಣಗಲ್; ಶಿವಣ್ಣನ 126 - 130 ಚಿತ್ರಗಳ ಸ್ಟ್ರಾಂಗ್ ಲೈನ್ಅಪ್ ಇದು!
ಸೆಂಚುರಿ ಸ್ಟಾರ್, ಸ್ಯಾಂಡಲ್‌ವುಡ್ ಕಿಂಗ್ ಶಿವ ರಾಜ್‌ಕುಮಾರ್ ನಟನೆಯ ಇತ್ತೀಚೆಗಿನ ಚಿತ್ರಗಳಾವುವೂ ಸಹ ಹೇಳಿಕೊಳ್ಳುವಂತಹ ದೊಡ್ಡ ಮಟ್ಟದ ಗೆಲುವನ್ನು ಸಾಧಿಸಿರಲಿಲ್ಲ. ಮಫ್ತಿ ಹಾಗೂ ಟಗರು ಚಿತ್ರಗಳ ಮೂಲಕ ಸ್ಟ್ರಾಂಗ್ ಆಗಿ ಕಮ್ ಬ್ಯಾಕ್ ಮಾಡಿದ್ದ ಶಿವ ರಾಜ್‌ಕುಮಾರ್ ನಟನೆಯ ನಂತರದ ಚಿತ್ರಗಳು ಈ ಚಿತ್ರಗಳು ಸಾಧಿಸಿದ್ದ ರೀತಿಯ ಗೆಲುವನ್ನು ಕಂಡಿರಲಿಲ್ಲ.
ಪ್ರೇಮ್ ನಿರ್ದೇಶನದಲ್ಲಿ ಮೂಡಿಬಂದ ಶಿವ ರಾಜ್‌ಕುಮಾರ್ ಹಾಗೂ ದಿ ವಿಲನ್ ಚಿತ್ರವನ್ನು ಸಿನಿ ರಸಿಕರು ಮೆಚ್ಚಿಕೊಳ್ಳಲಿಲ್ಲ. ಬಹಳ ವರ್ಷಗಳ ಬಳಿಕ ರಿಮೇಕ್ ಸಿನಿಮಾಗಾಗಿ ಬಣ್ಣ ಹಚ್ಚಿದ ಶಿವ ರಾಜ್‌ಕುಮಾರ್ ಕವಚ ಮೂಲಕ ತಮ್ಮ ನಟನೆಗೆ ಮೆಚ್ಚುಗೆ ಪಡೆದುಕೊಂಡರಾದರೂ ಚಿತ್ರ ಅಷ್ಟೇನೂ ಸದ್ದು ಮಾಡಲಿಲ್ಲ. ಇನ್ನು ರುಸ್ತುಂ, ಆಯುಷ್ಮಾನ್ ಭವ ಹಾಗೂ ದ್ರೋಣ ಚಿತ್ರಗಳೂ ಸಹ ದೊಡ್ಡ ಮಟ್ಟದಲ್ಲಿ ಗೆಲುವು ಕಾಣಲಿಲ್ಲ. ನಿರೀಕ್ಷೆ ಹುಟ್ಟಿಸಿದ್ದ ಭಜರಂಗಿ 2 ಸಿನಿಮಾ ತನ್ನ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿತ್ತು. ಬಳಿಕ ಬಿಡುಗಡೆಯಾದ ಮತ್ತೊಂದು ರಿಮೇಕ್ ಚಿತ್ರ ಬೈರಾಗಿ ಸಹ ಗೆಲ್ಲಲಿಲ್ಲ.
ಹೀಗೆ ಮಫ್ತಿ ಹಾಗೂ ಟಗರು ಚಿತ್ರಗಳು ಕೊಟ್ಟಂತಹ ಗೆಲುವನ್ನು ನಂತರ ಬಿಡುಗಡೆಗೊಂಡ ಈ ಯಾವ ಚಿತ್ರಗಳೂ ಸಹ ಶಿವ ರಾಜ್‌ಕುಮಾರ್‌ಗೆ ತಂದು ಕೊಡಲಿಲ್ಲ. ಆದರೆ ಕಳೆದ ವರ್ಷದ ಅಂತಿಮ ತಿಂಗಳು ಬಿಡುಗಡೆಗೊಂಡ ವೇದ ಚಿತ್ರ ಶಿವ ರಾಜ್‌ಕುಮಾರ್ ಕಮ್ ಬ್ಯಾಕ್ ಮಾಡುವಂತೆ ಮಾಡಿತು. ತಮ್ಮದೇ ಹೋಮ್ ಬ್ಯಾನರ್‌ನಲ್ಲಿ ಮೊದಲ ಬಾರಿಗೆ ಚಿತ್ರ ನಿರ್ಮಿಸಿದ್ದ ಶಿವ ರಾಜ್‌ಕುಮಾರ್ ಗೆದ್ದು ಬೀಗಿದರು. ಐವತ್ತು ದಿನಗಳ ಪ್ರದರ್ಶನವನ್ನು ಕಂಡ ಈ ಚಿತ್ರ ಸದ್ಯ ಓಟಿಟಿಯಲ್ಲೂ ಸಹ ಮೆಚ್ಚುಗೆಗೆ ಪಾತ್ರವಾಗಿದ್ದು, ಹಿಟ್ ಲಿಸ್ಟ್ ಸೇರಿಕೊಂಡಿದೆ. ಹೀಗೆ ವೇದ ಮೂಲಕ ಕಮ್ ಬ್ಯಾಕ್ ಮಾಡಿರುವ ಶಿವ ರಾಜ್‌ಕುಮಾರ್ ಅವರ ಮುಂದಿನ ಐದು ಚಿತ್ರಗಳು ಸದ್ಯ ಸಿನಿ ರಸಿಕರಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿವೆ. ವಿಭಿನ್ನ ಟೈಟಲ್, ಕುತೂಹಲ ಕೆರಳಿಸುವಂತಹ ನಿರ್ದೇಶಕರು ಹಾಗೂ ಸ್ಟಾರ್ ಕಾಸ್ಟ್ ನಿರೀಕ್ಷೆ ಹುಟ್ಟಿಕೊಳ್ಳುವಂತೆ ಮಾಡಿವೆ. ಇನ್ನು ಶಿವ ರಾಜ್‌ಕುಮಾರ್ ಅವರ ಮುಂದಿನ ಐದು ಚಿತ್ರಗಳ ಕಡೆ ಗಮನ ಹರಿಸಿದ ಸಿನಿ ರಸಿಕರು ಕ್ರೇಜಿ ಲೈನ್ ಅಪ್ ಗುರೂ ಎನ್ನುತ್ತಿದ್ದಾರೆ.

126 - 130 ಚಿತ್ರಗಳ ಲೈನ್ ಅಪ್ ಹೀಗಿದೆ
ವೇದ ಶಿವ ರಾಜ್‌ಕುಮಾರ್ ನಟನೆಯ 125ನೇ ಚಿತ್ರವಾಗಿದ್ದು, ಇದಾದ ಬಳಿಕ 130ನೇ ಸಿನಿಮಾವರೆಗೆ ಯಾವ ಯಾವ ಚಿತ್ರಗಳಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಿದ್ದು, ಮುಂದಿನ ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ..
126ನೇ ಚಿತ್ರ ಘೋಸ್ಟ್
127ನೇ ಚಿತ್ರ ಕರಟಕ ದಮನಕ
128ನೇ ಚಿತ್ರ ಫಾರ್ಟಿ ಫೈವ್ ( 45 )
129ನೇ ಚಿತ್ರ ಸಾಗಾ ಆಫ್ ಅಶ್ವತ್ಥಾಮ
130ನೇ ಚಿತ್ರ ಭೈರತಿ ರಣಗಲ್

ಇಂಟರೆಸ್ಟಿಂಗ್ ಎನಿಸಿದೆ ನಿರ್ದೇಶಕರು ಹಾಗೂ ಸ್ಟಾರ್ ಕಾಸ್ಟ್
ಇನ್ನು ಶಿವ ರಾಜ್‌ಕುಮಾರ್ ನಟಿಸುತ್ತಿರುವ ಘೋಸ್ಟ್ ಚಿತ್ರಕ್ಕೆ ಬೀರ್‌ಬಲ್ ಹಾಗೂ ಓಲ್ಡ್ ಮಾಂಕ್ ಖ್ಯಾತಿಯ ಶ್ರೀನಿ ನಿರ್ದೇಶನವಿದ್ದು, ಈಗಾಗಲೇ ಚಿತ್ರ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಶ್ರೀನಿ ಯುವ ಟ್ಯಾಲೆಂಟೆಡ್ ಡೈರೆಕ್ಟರ್ ಆಗಿದ್ದು, ಈಗಿನ ಸಿನಿ ರಸಿಕರಿಗೆ ತಕ್ಕಂತೆ ಚಿತ್ರವನ್ನು ತೆರೆ ಮೇಲೆ ತರಲಿದ್ದು, ಶಿವ ರಾಜ್‌ಕುಮಾರ್ ಅವರನ್ನು ಹಿಂದೆಂದೂ ಕಂಡಿರದ ಹಾಗೆ ತೋರಿಸುವುದು ಪಕ್ಕಾ. ಬಳಿಕ ಕರಟಕ ದಮನಕ ಚಿತ್ರಕ್ಕೆ ಯೋಗರಾಜ್ ಭಟ್ ನಿರ್ದೇಶನವಿದ್ದು, ಈ ಚಿತ್ರದಲ್ಲಿ ಶಿವಣ್ಣ ಜತೆ ಪ್ರಭುದೇವ ನಟಿಸುತ್ತಿರುವುದು ಹೈಲೈಟ್. ಇನ್ನು 45 ಚಿತ್ರದ ಮೂಲಕ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ ಹಾಗೂ ಟೈಟಲ್ ಮೂಲಕ ಕುತೂಹಲ ಕೆರಳಿಸಿರುವ ಈ ಚಿತ್ರದಲ್ಲಿ ಶಿವ ರಾಜ್‌ಕುಮಾರ್ ಜತೆ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟಿಸಲಿದ್ದು, ಜನ್ಯಾ ಯಾವ ರೀತಿಯ ಮೋಡಿ ಮಾಡ್ತಾರೆ ಕಾದು ನೋಡಬೇಕಿದೆ. ಈ ಹಿಂದೆ ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ಸಚಿನ್ ಬಿ ರವಿ ಸಾಗಾ ಆಫ್ ಅಶ್ವತ್ಥಾಮ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರದ ಶೀರ್ಷಿಕೆಯೇ ಕಿಕ್ ಕೊಡ್ತಿದೆ. ಇನ್ನು ಇತ್ತೀಚೆಗಷ್ಟೆ ಘೋಷಣೆಯಾದ ಭೈರತಿ ರಣಗಲ್ ಪ್ರತಿಯೊಬ್ಬ ಸಿನಿ ರಸಿಕನೂ ಸಹ ಕಾಯುತ್ತಿದ್ದ ಚಿತ್ರವಾಗಿದೆ.

ತಮಿಳಿನಲ್ಲಿ ಗೆಸ್ಟ್ ರೋಲ್
ಇವುಗಳ ಜತೆಗೆ ಶಿವ ರಾಜ್‌ಕುಮಾರ್ ರಜನಿಕಾಂತ್ ನಟನೆಯ ಜೈಲರ್ ಚಿತ್ರದಲ್ಲಿ ಹಾಗೂ ಧನುಷ್ ನಟನೆಯ ಕ್ಯಾಪ್ಟನ್ ಮಿಲ್ಲರ್ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರಗಳ ಮೂಲಕ ಶಿವ ರಾಜ್‌ಕುಮಾರ್ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ.


Click it and Unblock the Notifications











