ಗಮನ ಸೆಳೆಯುತ್ತಿದೆ 'ಗಿಲ್ಕಿ' ಟ್ರೇಲರ್: ಸಿನಿಮಾ ಬಿಡುಗಡೆ ಯಾವಾಗ?
ಕನ್ನಡದಲ್ಲಿ ಇತ್ತೀಚಿಗೆ ತುಸು ಹೆಚ್ಚಾಗಿಯೇ ಕಂಟೆಂಟ್ ಆಧರಿತ ಸಿನಿಮಾಗಳ ಬಗ್ಗೆ ಗಮನವಹಿಸಲಾಗುತ್ತಿದೆ. ಆದರೆ ಈ ಕಂಟೆಂಟ್ ಆಧರಿತ ಸಿನಿಮಾಗಳು ಹೊಸಬರಿಂದ ಸ್ಟಾರ್ ಎನಿಸಿಕೊಳ್ಳದವರಿಂದಷ್ಟೆ ಬರುತ್ತಿವೆಯೇ ಹೊರತು ಸ್ಟಾರ್ ನಟರು ಇನ್ನೂ 'ಮಾಸ್ ಮೂವಿ' ಸೂತ್ರದಿಂದ ಹೊರಗೆ ಬಂದಿಲ್ಲ.
ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿರುವ ಕನ್ನಡದ 'ಗಿಲ್ಕಿ' ಸಿನಿಮಾದ ಟ್ರೇಲರ್ ಸಾಕಷ್ಟು ಸದ್ದು ಮಾಡುತ್ತಿದೆ. ನೋಡಲು ಸುಂದರವಾಗಿಯೂ ಭಿನ್ನವಾಗಿಯೂ ಟ್ರೇಲರ್ ಕಾಣುತ್ತಿದ್ದು, ನಟರ ನಟನೆಯೂ ಗಮನ ಸೆಳೆಯುತ್ತಿದೆ. ಜೊತೆಗೆ ಒಂದು ಭಿನ್ನ ಕತೆ ಹೊಂದಿರುವ ಭರವಸೆಯನ್ನು ಸಿನಿಮಾ ಮೂಡಿಸುತ್ತಿದೆ.
ಶಿಲುಬೆಗೆ ನೇತು ಬಿದ್ದ ಏಸು, ಪಂಜರದಲ್ಲಿ ಬಂಧಿಯಾಗಿರುವ ಕೋಳಿ, ಬೆಂಕಿಗೆ ಕಾಯುತ್ತಾ ಜೋತುಬಿದ್ದಿರುವ ಮೀನುಗಳು, ಕೋಣೆಯೊಳಗೆ ನಿಂತ ಕತ್ತೆ ಹೀಗೆ ಹಲವು ಮಾಂಟಾಜ್ ಮಾದರಿಯ ದೃಶ್ಯಗಳ ಮೂಲಕ ತೆರೆದುಕೊಳ್ಳುವ 'ಗಿಲ್ಕಿ' ಸಿನಿಮಾದ ಟ್ರೇಲರ್ ಆ ನಂತರ ಸಿನಿಮಾದ ಪಾತ್ರಗಳ ಪರಿಚಯದ ಕಡೆಗೆ ಹೊರಳುತ್ತದೆ.
'ಗಿಲ್ಕಿ' ಸಿನಿಮಾ ಅದೇ ಹೆಸರಿನ ಒಬ್ಬ ಬುದ್ಧಿಮಾಂಧ್ಯ ಹಾಗೂ ಅಂಗವಿಕಲೆಯ ನಡುವಿನ ಪ್ರೇಮ ಅಥವಾ ಜೀವನದ ಕತೆ ಎಂಬುದು ಟ್ರೇಲರ್‌ನಿಂದ ತಿಳಿದು ಬರುತ್ತಿದೆ. ಇವರಿಬ್ಬರ ಕತೆಯನ್ನು ಮುಖ್ಯಧಾತುವಾಗಿಟ್ಟುಕೊಂಡು ಬದುಕಿನ, ಮನುಷ್ಯನ ವಿವಿಧ ವ್ಯಕ್ತಿತ್ವಗಳ, ಮುಖಗಳ ಅನಾವರಣ ಮಾಡುವ ಯತ್ನವನ್ನು ನಿರ್ದೇಶಕರು ಮಾಡಿದಂತೆ ಟ್ರೇಲರ್‌ನಿಂದ ಗೋಚರವಾಗುತ್ತಿದೆ. ಹಾಗಾಗಿಯೇ ಟ್ರೇಲರ್‌ನಲ್ಲಿ ಮಹಿಳೆ ಗೋಡೆಯೆಡೆಗೆ ತಿರುಗಿ ಸೀರೆ ಕಳಚುವ ದೃಶ್ಯವಿದೆ. ಅದೇ ಟ್ರೇಲರ್‌ನಲ್ಲಿ ವ್ಯಕ್ತಿಯೊಬ್ಬ 'ಬುದ್ಧಿ ಇಲ್ಲದವ ದಡ್ಡನಲ್ಲ, ಸಂಪಾದನೆ ಇಲ್ಲದವ ದಡ್ಡ' ಎಂದ ನಂತರದ ದೃಶ್ಯವಾಗಿ ಮಹಿಳೆ ಪುರುಷನೊಬ್ಬನಿಗಾಗಿ ಸೀರೆ ಬಿಚ್ಚುವ ದೃಶ್ಯ ಬರುತ್ತಿದೆ ಇದು ಹಲವು ಅರ್ಥಗಳನ್ನು ಸೂಚಿಸುತ್ತದೆ. ಇಂಥಹಾ ಗಮನ ಸೆಳೆವ ಅಂಶಗಳು ಟ್ರೇಲರ್‌ನಲ್ಲಿ ಸಾಕಷ್ಟಿವೆ.

ಟ್ರೇಲರ್ ಬಹಳ ಸುಂದರವಾಗಿದೆ
ಟ್ರೇಲರ್‌ನಲ್ಲಿನ ದೃಶ್ಯಗಳು ಬಹಳ ಸುಂದರವಾಗಿದೆ, ಸಮುದ್ರ ತೀರ, ನದಿಯ ಹಿನ್ನೀರು, ಝುಳು-ಝುಳು ಹರಿವ ನೀರು, ನಿಸರ್ಗ, ತೆಪ್ಪದಲ್ಲಿ ಕೂತು ನಗುವ ನಾಯಕಿ ಹೀಗೆ ಎಲ್ಲವೂ ಸುಂದರವಾಗಿದೆ. ಹಿನ್ನೆಲೆ ಸಂಗೀತವೂ ಮಧುರವಾಗಿದೆ. ಟ್ರೇಲರ್ ಅಂತೂ ಸಿನಿಮಾದ ಬಗ್ಗೆ ನಿರೀಕ್ಷೆಗಳನ್ನು ದುಪ್ಪಟ್ಟುಗೊಳಿಸಿದೆ.

ಮೂವರು ಭಿನ್ನ ವ್ಯಕ್ತಿಗಳ ಕುರಿತಾದ ಕತೆ
'ಗಿಲ್ಕಿ' ಸಿನಿಮಾವನ್ನು ವೈ.ಕೆ ನಿರ್ದೇಶನ ಮಾಡಿದ್ದಾರೆ. ಸಮಾಜದಿಂದ ವಿಮುಖರಾದ ವ್ಯಕ್ತಿಗಳ ಕುರಿತಾದ ಕತೆಯನ್ನು ಸಿನಿಮಾ ಹೊಂದಿದೆ. ನಾಯಕ ಗಿಲ್ಕಿ, ನಾಯಕಿ ನ್ಯಾನ್ಸಿ ಹಾಗೂ ಷೇಕ್ಸ್‌ಫಿಯರ್ ಈ ಸಿನಿಮಾದ ಮೂರು ಮುಖ್ಯ ಪಾತ್ರಗಳು. ನಾಯಕ ಅರೆ ಬುದ್ಧಿಮಾಂದ್ಯನಾದರೆ, ನಾಯಕಿ ಖಾಯಿಲೆಗೆ ತುತ್ತಾಗಿ ಕೈ-ಕಾಲು ಸ್ವಾಧೀನ ಕಳೆದುಕೊಂಡಾಕೆ. ಈ ಮೂವರನ್ನು ಸಮಾಜ ಹೇಗೆ ನಡೆಸಿಕೊಳ್ಳುತ್ತದೆ, ಸಮಾಜವನ್ನೂ ಈ ಮೂವರು ನೋಡುವ ರೀತಿ ಇದೇ ಸಿನಿಮಾದ ಕತೆ.

'ಕೆಜಿಎಫ್'ನಲ್ಲಿ ನಟಿಸಿದ್ದ ತಾರಕ್ ಪೊನ್ನಪ್ಪ
'ಕೆಜಿಎಫ್' ಸಿನಿಮಾದಲ್ಲಿ ದಯಾ ಪಾತ್ರದಲ್ಲಿ ನಟಿಸಿರುವ ತಾರಕ್ ಪೊನ್ನಪ್ಪ ಈ ಸಿನಿಮಾದಲ್ಲಿ ನಾಯಕ ಗಿಲ್ಕಿಯ ಪಾತ್ರದಲ್ಲಿ ನಟಿಸಿದ್ದಾರೆ. ಟ್ರೇಲರ್‌ನಲ್ಲಿ ಅವರ ನಟನೆ ಗಮನ ಸೆಳೆಯುತ್ತಿದೆ. ''ನಾನೂ ಸಿನಿಮಾದ ನಿರ್ದೇಶಕ ವೈ.ಕೆ 'ಅಮೃತ್ ಅಪಾರ್ಟ್‌ಮೆಂಟ್ಸ್' ಸಿನಿಮಾದ ಸಮಯದಿಂದಲೂ ಗೆಳೆಯರು ಒಳ್ಳೆಯ ಕತೆ ಇದ್ದರೆ ಹೇಳಿ ಎಂದಿದ್ದೆ. ಅಂತೆಯೇ ಕತೆ ಹೇಳಿದ ಕೂಡಲೇ ನನಗೆ ಇಷ್ಟವಾಯಿತು. ಇತರ ಕೆಲವರ ಸಹಕಾರ ಪಡೆದು ಸಿನಿಮಾ ಮಾಡಿದೆವು ಈಗ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ'' ಎಂದಿದ್ದಾರೆ.

ಚೈತ್ರಾ ಆಚಾರ್ ನಾಯಕಿ
ಸಿನಿಮಾದಲ್ಲಿ ನಾಯಕಿ ನ್ಯಾನ್ಸಿಯಾಗಿ ಚೈತ್ರಾ ಆಚಾರ್ ನಟಿಸಿದ್ದಾರೆ. ಸುಂದರವಾಗಿ ಕಾಣುತ್ತಿರುವ ಅವರ ನಟನೆಯೂ ಅದ್ಭುತವಾಗಿದೆ. ''ನಿರ್ದೇಶಕರು ಕತೆ ಹೇಳುವುದಾಗಿ ಹೇಳಿದಾಗ ನಾನು ಮೊದಲಿಗೆ ಹಿಂಜರಿದೆ ಆದರೆ ಬಳಿಕ ಒಪ್ಪಿಕೊಂಡೆ. ಅವರು ಕತೆ ಹೇಳಬೇಕಾದರೆಯೇ ನಾನು ಪಾತ್ರದಲ್ಲಿ ಮುಳುಗಿ ಹೋದೆ, ಈ ಪಾತ್ರವನ್ನು ನಾನೇ ಮಾಡಬೇಕೆಂದು ನಿರ್ಧಾರ ಮಾಡಿದೆ. ಟ್ರೇಲರ್ ಹಾಡುಗಳನ್ನು ನೋಡಿದವರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಖುಷಿಯಾಗುತ್ತಿದೆ'' ಎಂದಿದ್ದಾರೆ ಚೈತ್ರಾ. 'ಗಿಲ್ಕಿ' ಸಿನಿಮಾ ಫೆಬ್ರವರಿ 18 ಕ್ಕೆ ತೆರೆಗೆ ಬರಲಿದೆ.


Click it and Unblock the Notifications











