ಫೆ.15ಕ್ಕೆ ಗಿರೀಶ್ ಕಾಸರವಳ್ಳಿ 'ಕೂರ್ಮಾವತಾರ' ತೆರೆಗೆ
ಆನಂದರಾಯರು ಒಬ್ಬ ನಿಸ್ಪೃಹ ಸರಳಜೀವಿ. ಇನ್ನೇನು ರಿಟೈರ್ ಆಗಲಿರುವ ಸರ್ಕಾರಿ ನೌಕರ. ಮಗ, ಸೊಸೆ ಮತ್ತು ಮೊಮ್ಮಗನ ಜೊತೆ ಮಧ್ಯಮ ವರ್ಗದ ಜೀವನ ನಡೆಸುತ್ತಿರುತ್ತಾರೆ. ಯಾರೊಂದಿಗೂ ಬೆರೆಯದ, ತನ್ನ ಪಾಡಿಗೆ ತಾನಿರುವ ಅವರ ಜೀವನಕ್ರಮ ಅಲ್ಲೋಲ ಕಲ್ಲೋಲವಾಗುವುದು ಟಿವಿ ಸೀರಿಯಲ್ ಒಂದರಲ್ಲಿ ಗಾಂಧೀಜಿಯವರ ಪಾತ್ರ ಮಾಡಲು ಆಹ್ವಾನ ಬಂದಾಗ.
ಮಗ, ಸೊಸೆಯ ಒತ್ತಾಯಕ್ಕೆ ಮಣಿದು ನಟಿಸಲು ಒಪ್ಪಿಕೊಂಡ ರಾಯರಿಗೆ ಅದು ತಮ್ಮ ಜೀವನವನ್ನು ಮರು ವ್ಯಾಖ್ಯಾನಿಸಲು ಹಾದಿ ಮಾಡಿಕೊಡುತ್ತದೆ. ಗಾಂಧೀಜಿಯಾದ ರಾಯರ ಜನಪ್ರಿಯತೆ ಮಗ ಮತ್ತು ಸೊಸೆಗೆ ಉಪಭೋಗ ಜೀವನಕ್ರಮಕ್ಕೆ ಹೊಸ ಹಾದಿ ತೋರಿಸಿಕೊಡುವುದೆಂಬುದು ವಿಪರ್ಯಾಸ.

ಬದುಕಿಗೊಂದು ಅರ್ಥ ಸಿಗುತ್ತಿರುವ ಹೊತ್ತಿನಲ್ಲೇ ರಾಯರ ಜೀವನ ಪಥದಲ್ಲಿ ಹೊಸ ಅಡಚಣೆಗಳು ಎದುರಾಗುತ್ತವೆ. ಮಗ ಮೃತ್ಯುಂಜಯನ ಹಣದ ವಹಿವಾಟು ಬಿಗಡಾಯಿಸುತ್ತದೆ. ಅನ್ಯಾಯದ ಮಾರ್ಗ ಹಿಡಿದ ಆತ ಅರೆಸ್ಟ್ ಆಗುತ್ತಾನೆ. ರಾಯರು ಇಕ್ಬಾಲನ ಆಸೆಯಂತೆ ಸೀರಿಯಲ್ ನಲ್ಲಿ ಅವನಿಗೆ ಪಾತ್ರವೊಂದನ್ನು ಕೊಡಿಸುತ್ತಾರಾದರೂ ಅದು ಅನಿರೀಕ್ಷಿತವಾದ ಮತೀಯ ಛಾಯೆ ಪಡೆಯುತ್ತದೆ.
ರಾಯರ ಮತ್ತು ಸುಶೀಲಾರ ಸಖ್ಯಕ್ಕೆ ರೆಕ್ಕೆ ಪುಕ್ಕ ಕಟ್ಟಿ ಕತೆ ಹರಡಿಸಲಾಗುತ್ತದೆ. ರಾಯರು ನಟರಾಗಿ ಜನಪ್ರಿಯರಾಗುತ್ತಾ ಹೋದಂತೆ, ಅವರ ವೈಯಕ್ತಿಕ ಬದುಕು ಅಯೋಮಯವಾಗುತ್ತಾ ಹೋಗುತ್ತದೆ.
ಕನ್ನಡದ ಖ್ಯಾತ ಲೇಖಕ ಕುಂ.ವೀರಭದ್ರಪ್ಪ ಅವರ ಕಥೆ ಆಧರಿಸಿದ ಈ ಚಿತ್ರ 'ಕೂರ್ಮಾವತಾರ'. ಸಮುದ್ರ ಮಂಥನ ನೆಡೆಯುತ್ತಿರುವಾಗ ಮುಳುಗಲಾರಂಭಿಸಿದ ಜಗತ್ತನ್ನು ಎತ್ತಿ ಹಿಡಿಯಲು ವಿಷ್ಣು 'ಕೂರ್ಮಾವತಾರ' ತಾಳುತ್ತಾನೆ.
ಪ್ರಸ್ತುತ ಸಂದರ್ಭದಲ್ಲಿ ಗಾಂಧೀವಾದಕ್ಕೆ ಆ ಶಕ್ತಿ ಇದೆಯೇ ಎಂದು ಸೂಚಿಸುತ್ತಲೇ, ಅದರಿಂದ ಹುಟ್ಟಿಕೊಳ್ಳಬಹುದಾದ ಎಲ್ಲಾ ವಿಪರ್ಯಾಸಗಳತ್ತ ಚಿತ್ರ ವಿಮರ್ಶಾತ್ಮಕ ನೋಟ ಬೀರುತ್ತದೆ. ಈ ವಾರ (ಫೆ.15) 'ಕೂರ್ಮಾವತಾರ' ರಾಜ್ಯದಾದ್ಯಂತ ತೆರೆಕಾಣುತ್ತಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











