ಕೊಟ್ಟ ಮಾತು ತಪ್ಪಿದ ಗೋಲ್ಡನ್ ಸ್ಟಾರ್ ಗಣೇಶ್
ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯ ಇಲ್ಲ. ಈ ಕಾರಣಕ್ಕಾಗಿಯೇ ಕನ್ನಡದ ವರನಟ ಡಾ.ರಾಜ್ ಕುಮಾರ್ ಅಭಿಮಾನಿಗಳಲ್ಲಿ ದೇವರನ್ನ ಕಂಡರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಸೆಲೆಬ್ರಿಟಿ ಪಟ್ಟವನ್ನ ಕಟ್ಟಿದರು. ಧ್ರುವಾ ಸರ್ಜಾ ತಮ್ಮ ಅಭಿಮಾನಿಗಳನ್ನ ವಿಐಪಿ ಎಂದು ಕರೆದರು. ಕನ್ನಡದ ಹಲವು ತಾರೆಯರು ಅಭಿಮಾನಿಗಳ ಅಭಿಮಾನಕ್ಕೆ ಶರಣು ಶರಣೆಂದರು..ಪ್ರೀತಿಯಿಂದ ತಲೆ ಬಾಗಿದರು.
ಇಂಥಾ ಅಭಿಮಾನಿಗಳ ಅಭಿಮಾನದ ಪ್ರದರ್ಶನಕ್ಕೆ ಹಬ್ಬ-ಹರಿದಿನ ಬೇಕಿಲ್ಲ. ಬೇಕಿರುವುದು ಕೇವಲ ಒಂದು ದಿನವಷ್ಟೇ. ಆ ದಿನಕ್ಕೆ ಅಭಿಮಾನಿಗಳು ಅಭಿಮಾನದಿಂದ ಇಟ್ಟಿರುವ ಹೆಸರು ಹುಟ್ಟಿದ ಹಬ್ಬ.

ಆದರೆ ಈಗೀಗ ಆ ಹುಟ್ಟಿದ ಹಬ್ಬದ ಸಂಭ್ರಮಾಚರಣೆ ಕೂಡ ಕಳೆಗುಂದುತ್ತಿದೆ. ಕಾರಣ ವ್ಯೆಯಕ್ತಿಕವಾದರೂ, ಈ ವ್ಯೆಯಕ್ತಿಕ ಕಾರಣ.. ಅಭಿಮಾನದ ಪರೀಕ್ಷೆಯನ್ನಂತೂ ಮಾಡುತ್ತಿದೆ. ಇದಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟಿದ ಹಬ್ಬದ ಸಂಭ್ರಮ-ಸಡಗರ ಮತ್ತೊಂದು ಉದಾಹರಣೆ.
ಹೌದು, ಜುಲೈ 2ಕ್ಕೆ ಗಣೇಶ್ 48ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನೆಲೆ.. ಬರ್ತ್‌ಡೇ ನೆಪದಲ್ಲಿ ಒಂದು ಇಡೀ ದಿನ ಗಣಪನ ದರ್ಶನ ಪಡೆಯಬಹುದು ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಸಂಭ್ರಮದಿಂದ.. ಅದ್ಧೂರಿಯಾಗಿ.. ಎಲ್ಲರೂ ಜೊತೆಯಾಗಿ ಆಚರಿಸಬೇಕೆಂದುಕೊಂಡಿದ್ದರು.
ಆದರೆ.. ಈ ಸಂಭ್ರಮಕ್ಕೆ ಖುದ್ದು ಸಾಕ್ಷಾತ್ ಗೋಲ್ಡನ್ ಸ್ಟಾರ್ ಗಣೇಶ್ ಅವರೇ ಬ್ರೇಕ್ ಹಾಕಿದ್ದಾರೆ. ನಾನು ಮನೆಯಲ್ಲಿರಲ್ಲ ಎಂಬ ಸಂದೇಶವನ್ನು ರವಾನೆ ಮಾಡಿದ್ದಾರೆ.
ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಗಣೇಶ್ ''ಆತ್ಮೀಯ ಅಭಿಮಾನಿ ಸ್ನೇಹಿತರೆ, ಜುಲೈ 2 ನಾನು ಹುಟ್ಟಿದ ದಿನ. ಸಹಜವಾಗಿ ನನಗದು ನಿಮ್ಮ ಪ್ರೀತಿ ಹಾಗೂ ಅಭಿಮಾನವನ್ನು ಅತ್ಯಂತ ಸಮೀಪದಿಂದ ಕಣ್ಣುಂಬಿಕೊಂಡು ಸಂಭ್ರಮಿಸುವ ದಿನ. ಆದರೆ ಈ ಬಾರಿ ನಾನು 'ಪಿನಾಕ' ಹಾಗೂ 'ಯುವರ್ ಸಿನ್ಸಿಯರ್ಲಿ' ಚಿತ್ರದ ಹೊರಾಂಗಣ ಚಿತ್ರೀಕರಣಗಳಲ್ಲಿ ಭಾಗವಹಿಸಬೇಕಿದೆ, ಹೀಗಾಗಿ, ಜುಲೈ2 ರಂದು ನಾನು ನಿಮ್ಮೆಲ್ಲರನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ನಿಮ್ಮನ್ನು ರಂಜಿಸುವುದಕ್ಕಿಂತ ದೊಡ್ಡ ಹಬ್ಬ ನನಗೆ ಮತ್ತೊಂದಿಲ್ಲ. ಆದ ಕಾರಣ ಯಾರೂ ಮನೆಯ ಬಳಿ ಬರದೆ, ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ತಾವುಗಳು ಇದ್ದಲ್ಲಿದಂಲೇ ನನಗೆ ಆಶಿಸಿ ಆಶೀರ್ವದಿಸಬೇಕೆಂದು ಈ ಮೂಲಕ ವಿನಂತಿಸುತ್ತೇನೆ'' ಎಂದು ಹೇಳಿದ್ದಾರೆ.
ಸಹಜವಾಗಿ ಗಣೇಶ್ ಬರೆದುಕೊಂಡ ಈ ಸಾಲುಗಳಿಂದ ಗೋಲ್ಡನ್ ಗ್ಯಾಂಗ್‌ಗೆ ಬೇಸರವಾಗಿದೆ. ಯಾಕೆಂದರೆ.. ಗಣೇಶ್ ತಮ್ಮ ಅಭಿಮಾನಿಗಳಿಗೆ ತಮ್ಮ ಹುಟ್ಟುಹಬ್ಬದಂದು ಕಳೆದ ವರ್ಷ ದರ್ಶನ ನೀಡಿರಲಿಲ್ಲ.
ಕಳೆದ ವರ್ಷ ಕೂಡ ''ನನ್ನ ಆತ್ಮೀಯ ಅಭಿಮಾನಿಗಳೇ, ಜುಲೈ 2ರಂದು ನಾನು ನನ್ನ ಬೆಂಗಳೂರು ನಿವಾಸದಲ್ಲಿ ಲಭ್ಯನಿಲ್ಲ. ಅದೇಕೋ ತಮ್ಮೊಂದಿಗೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೆಂಬ ನನ್ನ ಹಂಬಲ ಈ ಬಾರಿಯೂ ಕೈಗೂಡುತ್ತಿಲ್ಲ .ಹೀಗಾಗಿ ನನ್ನ ಪ್ರೀತಿಯ ಅಭಿಮಾನಿಗಳು ಮನೆಯ ಬಳಿ ಬಾರದೇ ತಾವು ಇದ್ದಲ್ಲಿಂದಲೇ ನನ್ನನ್ನು ಹರಸಿ, ಆಶೀರ್ವದಿಸಿ'' ಎಂದು ಮನವಿಯನ್ನು ಗಣೇಶ್ ಮಾಡಿಕೊಂಡಿದ್ದರು. ''ಮುಂದಿನ ವರ್ಷ ಖಂಡಿತ ಒಟ್ಟಿಗೇ ಹುಟ್ಟುಹಬ್ಬ ಆಚರಿಸೋಣ'' ಎಂದು ತಮ್ಮ ಅಭಿಮಾನಿಗಳಿಗೆ ಮಾತು ನೀಡಿದ್ದರು. ಆದರೆ ಈಗ ಗಣೇಶ್ ಕೊಟ್ಟ ಮಾತನ್ನು ತಪ್ಪಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ನಿರಾಸೆಗೊಳಿಸಿದ್ದಾರೆ.
ಅಂದ್ಹಾಗೇ ಕೊರೊನಾ ನಂತರದ ದಿನಗಳಲ್ಲಿ ಕನ್ನಡದ ಅನೇಕ ಸ್ಟಾರ್‌ಗಳು ಬರ್ತ್‌ಡೇ ಸಂಭ್ರಮದಿಂದ ದೂರವಾಗುತ್ತಿದ್ದಾರೆ. ವರ್ಷಾನುವರ್ಷ ಈ ಸಂಭ್ರಮಾಚರಣೆಗೆ ಒಂದಿಲ್ಲೊಂದು ಕಾರಣಗಳಿಂದ ಬ್ರೇಕ್ ಹಾಕುತ್ತಿದ್ದಾರೆ. ಹೀಗಾಗಿ ಅಭಿಮಾನದ ಜಾತ್ರೆಗೆ ಕೈಗನ್ನಡಿಯಂತೆ ಇದ್ದ ಹುಟ್ಟುಹಬ್ಬದ ಸಂಪ್ರದಾಯ ಕನ್ನಡ ಚಿತ್ರರಂಗದಿಂದ ಮರೆಯಾಗುತ್ತಿದೆ ಎನ್ನುವ ಅನುಮಾನ ಸದ್ಯ ಅನೇಕರನ್ನು ಕಾಡುತ್ತಿದೆ. ಕನ್ನಡದ ಸ್ಟಾರ್‌ಗಳು ಕೂಡ ಬಾಲಿವುಡ್ ಸ್ಟಾರ್‌ಗಳಂತೆ ಅಭಿಮಾನಿಗಳ ಪಾಲಿಗೆ ಮರಿಚೀಕೆಯಾಗುತ್ತಿದ್ದಾರಾ ಎನ್ನುವ ಪ್ರಶ್ನೆ ಕೂಡ ಹಲವರನ್ನು ಕಾಡುತ್ತಿದೆ.


Click it and Unblock the Notifications











