ಏಪ್ರಿಲ್ 21.. ನನ್ನ ಜೀವನದಲ್ಲಿ ಮರೆಯಾಗದ ದಿನ; ಗೋಲ್ಡನ್ ಸ್ಟಾರ್ ಗಣೇಶ್ ಪುಳಕ
ಮಳೆ ಹುಡುಗ ಗಣೇಶ್ ಕ್ರೇಜ್ ಮೊದಲಿನಂತೆ ಇಲ್ಲ. ಆದರೂ ಗಣಿ ನಟಿಸಿದ 'ಕೃಷ್ಣಪ್ರಣಯ ಸಖಿ' ಸಿನಿಮಾ ಸೂಪರ್ ಹಿಟ್ ಆಗಿ ಗಮನ ಸೆಳೆದಿತ್ತು. ಆದರೆ 2 ವರ್ಷಗಳಿಂದ ಗೋಲ್ಡನ್ ಸ್ಟಾರ್ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಎರಡ್ಮೂರು ಸಿನಿಮಾಗಳ ಚಿತ್ರೀಕರಣ ನಡೀತಿದೆ. ಇದೆಲ್ಲದರ ನಡುವೆ ಚಿತ್ರರಂಗದಲ್ಲಿ ಹೀರೊ ಆಗಿ 20 ವರ್ಷ ಪೂರೈಸಿದನ್ನು ಗಣಿ ಮೆಲುಕು ಹಾಕಿದ್ದಾರೆ.
2006ರಲ್ಲಿ ಗಣೇಶ್ ಹೀರೊ ಆಗಿ ನಟಿಸಿದ ಮೊದಲ ಸಿನಿಮಾ 'ಚೆಲ್ಲಾಟ' ಬಿಡುಗಡೆ ಆಗಿತ್ತು. ಎಂ. ಡಿ ಶ್ರೀಧರ್ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಒಂದು ಹಂತಕ್ಕೆ ಹಿಟ್ ಆಗಿತ್ತು. ಅದೇ ವರ್ಷದ ಕೊನೆಗೆ ಬಂದ 'ಮುಂಗಾರು ಮಳೆ' ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿತ್ತು. ನೋಡ ನೋಡುತ್ತಲೇ ಗಣಿ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟರಾಗಿಬಿಟ್ಟರು. ಮರುವರ್ಷ ಬಂದಿದ್ದ 'ಚೆಲುವಿನ ಚಿತ್ತಾರ' ಸಿನಿಮಾ ಗೋಲ್ಡನ್ ಸ್ಟಾರ್ ಪಟ್ಟ ತಂದು ಕೊಟ್ಟಿತ್ತು.

ಹುಟ್ಟೂರಿನಲ್ಲಿ ಆರ್ಕೆಸ್ಟ್ರಾಗಳಲ್ಲಿ ಡ್ಯಾನ್ಸ್, ಮಿಮಿಕ್ರಿ ಮಾಡ್ತಾ ಚಿತ್ರರಂಗಕ್ಕೆ ಬರುವ ಕನಸು ಕಂಡ ಗಣಿ ಆರಂಭದಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದರು. ಕಿರುತೆರೆ ಕಾರ್ಯಕ್ರಮಗಳಲ್ಲಿ ಮೋಡಿ ಮಾಡಿದ್ದರು. ಉದಯ ಟಿವಿಯಲ್ಲಿ ಪ್ರಸಾರವಾಗ್ತಿದ್ದ 'ಕಾಮಿಡಿ ಟೈಂ' ಶೋ ನಿರೂಪಕರಾಗಿ ಗಣೇಶ್ ಮನೆ ಮಾತಾಗಿದ್ದರು. 'ನಮಸ್ಕಾರ ನಮಸ್ಕಾರ ನಮಸ್ಕಾರ' ಎನ್ನುತ್ತ ಫೋನ್ ಮಾಡಿ ಕಾಗೆ ಹಾರಿಸಿ ಚಮಕ್ ಕೊಡುತ್ತಿದ್ದರು. ಅದೇ ಕ್ರೇಜ್ ನೋಡಿ 'ಚೆಲ್ಲಾಟ' ಚಿತ್ರಕ್ಕೆ ಹೀರೊ ಆಗಿ ಆಯ್ಕೆ ಮಾಡಲಾಗಿತ್ತು.
ಮೊದಲ ಸಿನಿಮಾ ಗೆದ್ದ ಬಳಿಕ ಗಣೇಶ್ ಹಿಂತಿರುಗಿ ನೋಡಲೇ ಇಲ್ಲ. ಕಳೆದ 2 ದಶಕಗಳಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ರೊಮ್ಯಾಂಟಿಕ್ ಹೀರೊ ಆಗಿಯೇ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದ್ದಾರೆ. ಇವತ್ತಿಗೂ ಬಹುಬೇಡಿಕೆಯ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಸದ್ಯ ತಮ್ಮ ಸಿನಿ ಜೀವನವನ್ನು ಗಣೇಶ್ ಮೆಲುಕು ಹಾಕಿದ್ದಾರೆ.
"ಇಂದು ನನ್ನ ಜೀವನದಲ್ಲಿ ಒಂದು ವಿಶೇಷ ಮೈಲಿಗಲ್ಲು - ಸಿನಿಮಾದಲ್ಲಿ 20 ಸುಂದರ ವರ್ಷಗಳು" ಎಂದು ಗಣೇಶ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. "ಏಪ್ರಿಲ್ 21... 'ಚೆಲ್ಲಾಟ' ಸಿನಿಮಾ ಬಿಡುಗಡೆಯಾದ ದಿನ.. ನನ್ನ ಕನಸಿಗೆ ರೆಕ್ಕೆಗಳು ಬಂದ ದಿನ.. ಗೋಲ್ಡನ್ ಸ್ಟಾರ್ ಪಟ್ಟ, ಈ ಪ್ರಯಾಣ ನಿಮ್ಮಿಂದ ನಡೆದ ಪವಾಡ" ಎಂದು ಬರೆದುಕೊಂಡಿದ್ದಾರೆ.
ನನ್ನ ಅದ್ಭುತ ಅಭಿಮಾನಿಗಳಿಗೆ..ನನ್ನ ಪ್ರೀತಿಯ ಪ್ರೇಕ್ಷಕರಿಗೆ.. ಚಲನಚಿತ್ರೋದ್ಯಮಕ್ಕೆ.. ಮಾಧ್ಯಮಕ್ಕೆ ಧನ್ಯವಾದಗಳು. ನಿಮ್ಮ ಪ್ರತಿ ಶಿಳ್ಳೆ, ಪ್ರತಿ ಹರ್ಷೋದ್ಗಾರ, ಪ್ರತಿ ಕಣ್ಣೀರು... ನಾನು ಅದನ್ನು ಅನುಭವಿಸುತ್ತೇನೆ, ಹೆಮ್ಮೆಯಿಂದ ಹೊತ್ತು ಸಾಗಿದ್ದೇನೆ.. ದಯವಿಟ್ಟು ಕೇಳಿ... ಇದು ಕೇವಲ ಆರಂಭ.. ಮತ್ತಷ್ಟು ಗಟ್ಟಿಯಾಗಿ, ಉತ್ಸಾಹದಿಂದ ನಿಮ್ಮನ್ನು ರಂಜಿಸುವ ಭರವಸೆ ನೀಡುತ್ತೇನೆ.. ಈ ಪ್ರಯಾಣ ನನ್ನದು ಮಾತ್ರವಲ್ಲ, ಇದು ನಿಮ್ಮೆಲ್ಲರಿಗೂ ಸೇರಿದ್ದು. ಎಲ್ಲರಿಗೂ ಧನ್ಯವಾದ" ಎಂದು ಗಣೇಶ್ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ನಟನಾಗಿ ಮಾತ್ರವಲ್ಲದೇ ನಿರ್ದೇಶಕ, ನಿರ್ಮಾಪಕನಾಗಿ ಕೂಡ ಗಣೇಶ್ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ಸದ್ಯ 'ಯುವರ್ಸ್ ಸಿನ್ಸಿಯರ್ಲಿ ರಾಮ್', 'ಪಿನಾಕ', 'ಡಿಜಂಗೋ ಕೃಷ್ಣಮೂರ್ತಿ', 'ಬೃಂದಾ ವಿಹಾರ' ಹಾಗೂ 'ತಮ್ಮ ಸುಖಾಗಮನ ಬಯಸುವ' ಹೀಗೆ ಒಂದಷ್ಟು ಸಿನಿಮಾಗಳಲ್ಲಿ ಗಣೇಶ್ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾಗಳು ಒಂದೊಂದಾಗಿ ತೆರೆಗೆ ಬರಲಿದೆ. ಆದರೆ ಎರಡು ವರ್ಷಗಳಿಂದ ಗೋಲ್ಡನ್ ಸ್ಟಾರ್ ತೆರೆಮೇಲೆ ಬರಲಿಲ್ಲ ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ.


Click it and Unblock the Notifications