ಗೋಲ್ಡನ್ ಸ್ಟಾರ್ ಗಣೇಶ್ ಗೆ ಹುಟ್ಟುಹಬ್ಬದ ಸಂಭ್ರಮ
ಸ್ಯಾಂಡಲ್ ವುಡ್ ನ ಗೋಲ್ಡನ್ ಸ್ಟಾರ್ ಗಣೇಶ್ ಗೆ ಇಂದು (ಜುಲೈ 2) ಹುಟ್ಟುಹಬ್ಬದ ಸಂಭ್ರಮ. 43ನೇ ವಸಂತಕ್ಕೆ ಕಾಲಿಟ್ಟಿರುವ ನಟ ಗಣೇಶ್ ಈ ಬಾರಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕೊರೊನಾ ಹಿನ್ನಲ್ಲೇ ಅದ್ದೂರಿ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ್ದು, ಅಭಿಮಾನಿಗಳಿಗೆ ತನ್ನ ಹುಟ್ಟುಹಬ್ಬ ಸಂಭ್ರಮಿಸದಂತೆ ಮನವಿ ಮಾಡಿದ್ದಾರೆ.
ಗೋಲ್ಡನ್ ಸ್ಟಾರ್ ಹುಟ್ಟುಹಬ್ಬ ಅದ್ದೂರಿಯಾಗಿ ಆಚರಣೆ ಮಾಡದಿದ್ದರೂ, ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕವೇ ಸಂಭ್ರಮಿಸುತ್ತಿದ್ದಾರೆ. ಗಣೇಶ್ ಫೋಟೋ, ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಹುಟ್ಟುಹಬ್ಬಕ್ಕೆ ಪ್ರೀತಿಯ ವಿಶ್ ಮಾಡಿ ಸಂತಸ ಪಡುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಸಿನಿಮಾರಂಗದ ಗಣ್ಯರು ಸಹ ಗಣೇಶ್ ಗೆ ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ.
ಇನ್ನು ಗಣೇಶ್ ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿಗಳಿಗೆ ಸಾಕಷ್ಟು ಸರ್ಪ್ರೈಸ್ ಗಳು ಕಾದಿವೆ. ಈಗಾಗಲೇ ಗಣೇಶ್ ನಟನೆಯ ಬಹು ನಿರೀಕ್ಷೆಯ 'ಸಖತ್' ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಕೋರ್ಟ್ ವಿಚಾರಣೆ ವೇಳೆಗಿನ ಫೋಟೋ ಇದಾಗಿದೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಗಣೇಶ್ ಪೋಸ್ಟರ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಸಿಂಪಲ್ ಸುನಿ ನಿರ್ದೇಶನದಲ್ಲಿ ಸಖತ್ ಸಿನಿಮಾ ಮೂಡಿಬರುತ್ತಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಿ ಸುನಿ, "ಸಿನಿಮಾ ರೈತರು ಕಾದ ಮಳೆ. ಹೊನ್ನಿನ ನಕ್ಷತ್ರದ ಬೆಳೆ ಚೆಲುವಿನ ಹೂನ ಪಕಳೆ. ಕರ್ನಾಟಕದ ಮಾತಿನ ಕಹಳೆ. ಗಣೇಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಸಖತ್ತಾಗಿರಲಿ ನಿಮ್ಮ ಜೀವನ" ಎಂದು ವಿಶ್ ಮಾಡಿದ್ದಾರೆ.
ಇನ್ನು ಇಂದು ಹುಟ್ಟುಹಬ್ಬದ ವಿಶೇಷವಾಗಿ 'ತ್ರಿಬಲ್ ರೈಡಿಂಗ್' ಮತ್ತು 'ಗಾಳಿಪಟ-2' ಸಿನಿಮಾದ ಟೀಸರ್ ಕೂಡ ರಿಲೀಸ್ ಆಗುತ್ತಿದೆ. ಇಂದು ಬೆಳಗ್ಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಟೀಸರ್ ಬಿಡುಗಡೆಯಾಗುತ್ತಿದೆ.

Recommended Video
ಕಿರುತೆರೆ ಮೂಲಕ ವೃತ್ತಿ ಜೀವನ ಪ್ರಾರಂಭ ಮಾಡಿದ ಗಣೇಶ್ ಬಳಿಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಮುಂಗಾರು ಮಳೆ ಗಣೇಶ್ ಸಿನಿ ಜೀವನದ ಬದುಕನ್ನೇ ಬದಲಾಯಿಸಿದ ಸಿನಿಮಾ. ಈ ಚಿತ್ರದ ಬಳಿಕ ಗಣೇಶ್ ರಾತ್ರೋರಾತ್ರಿ ಸ್ಟಾರ್ ಆಗಿ ಹೊರಹೊಮ್ಮಿದರು. ಬಳಿಕ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿರುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಗಣೇಶ್ ಕೊನೆಯದಾಗಿ 'ಗೀತಾ' ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಸಖತ್, ತ್ರಿಬಲ್ ರೈಡಿಂಗ್ ಮತ್ತು ಗಾಳಿಪಟ-2 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











