ಥೇಟ್ ಉಪೇಂದ್ರ ರೀತಿ ಕಣ್ಣುಗುಡ್ಡೆ ಅಲುಗಾಡಿಸಿ ಚಮಕ್ ಕೊಟ್ಟ ಗಣೇಶ್; ವಿಡಿಯೋ ವೈರಲ್
ರಿಯಲ್ ಸ್ಟಾರ್ ಉಪೇಂದ್ರ ಅವರ ವಿಭಿನ್ನ ಮ್ಯಾನರಿಸಂ, ಸ್ಟೈಲ್ ಬಗ್ಗೆ ಬಿಡಿಸಿ ಹೇಳುವುದು ಬೇಕಿಲ್ಲ. ಇನ್ನು ಉಪ್ಪಿ ತಮ್ಮ ಕಣ್ಣುಗುಡ್ಡೆಯನ್ನು ಅತ್ತಿತ್ತ ವೇಗವಾಗಿ ಆಡಿಸುವುದನ್ನು ನಾವು ನೋಡಿದ್ದೇವೆ. ಸಾಕಷ್ಟು ಸಿನಿಮಾಗಳಲ್ಲಿ ಇದನ್ನು ಅವರು ಮ್ಯಾನರಿಸಂಗಾಗಿ ಬಳಸಿಕೊಂಡಿದ್ದಾರೆ. ಸಾಕಷ್ಟು ಜನ ಹೀಗೆ ಮಾಡಲು ಟ್ರೈ ಮಾಡಿರುವುದು ಇದೆ. ಆದರೆ ಇದು ಮ್ಯಾನ್ಯುಫ್ಯಾಕ್ಚರ್ ಡಿಫೆಕ್ಟ್, ಯಾರೂ ಕೂಡ ಟ್ರೈ ಮಾಡಬೇಡಿ ಎಂದು ಉಪೇಂದ್ರ ಹೇಳಿದ್ದಾರೆ.
ಅಷ್ಟು ಸುಲಭವಾಗಿ ಎಲ್ಲರೂ ಹೀಗೆ ಕಣ್ಣುಗುಡ್ಡೆ ಅಲುಗಾಡಿಸಲು ಸಾಧ್ಯವಿಲ್ಲ. ಸಾಕಷ್ಟು ಸಂದರ್ಭಗಳಲ್ಲಿ ಉಪ್ಪಿ ಸ್ವತಃ ಈ ಬಗ್ಗೆ ಮಾತನಾಡಿದ್ದಾರೆ. ಆದರೆ ರಿಯಲ್ ಸ್ಟಾರ್ ರೀತಿ ಗೋಲ್ಡನ್ ಸ್ಟಾರ್ ಕಣ್ಣುಗುಡ್ಡೆ ಅಲುಗಾಡಿಸಿ ಅಚ್ಚರಿ ಮೂಡಿಸಿದ್ದಾರೆ. ನಟ ಗಣೇಶ್ ಒಳ್ಳೆ ಮಿಮಿಕ್ರಿ ಆರ್ಟಿಸ್ಟ್ ಎನ್ನುವುದು ಗೊತ್ತೇಯಿದೆ. ಚಿತ್ರರಂಗಕ್ಕೆ ಬರುವ ಮುನ್ನ ಆರ್ಕೆಸ್ಟ್ರಾಗಳಲ್ಲಿ ಡ್ಯಾನ್ಸ್ ಮಾಡುತ್ತಾ, ಮಿಮಿಕ್ರಿ ಮಾಡುವ ಮೂಲಕ ಜರನ್ನು ರಂಜಿಸುತ್ತಿದ್ದರು. ಇವತ್ತಿಗೂ ಅದನ್ನೆಲ್ಲಾ ಗಣಿ ಮರೆತ್ತಿಲ್ಲ. ಇತ್ತೀಚೆಗೆ ಉಪೇಂದ್ರ ಮಗಳ ಹುಟ್ಟುಹಬ್ಬದ ಪಾರ್ಟಿಯಲ್ಲಿ ಗಣೇಶ್ ಭಾಗಿ ಆಗಿದ್ದರು.

ವೇದಿಕೆ ಮೇಲೆ ಉಪೇಂದ್ರ ಎದುರು ಗಣಿ ಕಣ್ಣುಗುಡ್ಡೆ ಅಲುಗಾಡಿಸಿ ಗಮನ ಸೆಳೆದಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗ್ತಿದೆ. ಗಣಿ ಪ್ರಯತ್ನ ನೋಡಿ ರಿಯಲ್ ಸ್ಟಾರ್ ಕೂಡ ಶಾಕ್ ಆಗಿದ್ದಾರೆ. ಇತ್ತೀಚೆಗೆ ಉಪೇಂದ್ರ ಹಾಗೂ ಪ್ರಿಯಾಂಕ ದಂಪತಿ ಮುದ್ದಿನ ಮಗಳು ಐಶ್ವರ್ಯ 21ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆ ಪಾರ್ಟಿಯಲ್ಲಿ ಚಿತ್ರರಂಗದ ತಾರೆಯರು, ಉಪ್ಪಿ ಆಪ್ತರು ಭಾಗಿ ಆಗಿದ್ದರು.
ಮೊದಲಿನಿಂದಲೂ ಗಣೇಶ್ ಹಾಗೂ ಉಪೇಂದ್ರ ಕುಟುಂಬಗಳ ನಡುವೆ ಆತ್ಮೀಯ ಒಡನಾಟವಿದೆ. ಇಬ್ಬರ ಮನೆಗಳಲ್ಲಿ ನಡೆಯುವ ಪಾರ್ಟಿಗಳು ಒಟ್ಟಿಗೆ ಭಾಗವಹಿಸುತ್ತಾರೆ. ಇನ್ನು ಉಪ್ಪಿ ಮಗಳು ಐಶ್ವರ್ಯ ಹುಟ್ಟುಹಬ್ಬ ಆಚರಣೆ ಬಹಳ ಕಲರ್‌ಫುಲ್ ಆಗಿತ್ತು. ಬಣ್ಣ ಬಣ್ಣದ ಲೈಟ್ಸ್, ಬಲೂನ್, ಕೇಕ್ ಎಲ್ಲವೂ ಇತ್ತು. ಪಾರ್ಟಿಯಲ್ಲಿ ಡಿಜೆ ಹಾಕಿ ಎಲ್ಲರೂ ಭರ್ಜರಿ ಸ್ಟೆಪ್ಸ್ ಹಾಕಿ ಕುಣಿದು ಕುಪ್ಪಳಿಸಿದ್ದಾರೆ.
'ಉಪ್ಪಿಗಿಂತ ರುಚಿ ಬೇರೆಯಿಲ್ಲ' ಹಾಡಿಗೆ ಗಣೇಶ್ ಡ್ಯಾನ್ಸ್ ಮಾಡಿದ್ದಾರೆ. ಥೇಟ್ ಉಪೇಂದ್ರ ರೀತಿ ಕಣ್ಣುಗುಡ್ಡೆ ಅಲುಗಾಡಿಸಿ ಮೋಡಿ ಮಾಡಿದ್ದಾರೆ. ಆಗ ಪಕ್ಕದಲ್ಲೇ ಉಪೇಂದ್ರ ಕೂಡ ಇದ್ದರು. ಅಂದಹಾಗೆ ನಿಸ್ಟಾಗ್ಮಸ್ ಎಂಬ ಕಣ್ಣಿನ ಸಮಸ್ಯೆ ಇರುವವರಿಗೆ ಕಣ್ಣುಗುಡ್ಡೆ ಹೀಗೆ ಅಲುಗಾಡುತ್ತದೆ. ಉಪೇಂದ್ರ ಇದನ್ನು ಆಗಾಗ್ಗೆ ಸಿನಿಮಾಗಳಲ್ಲಿ ಬಳಸಿಕೊಳ್ಳುತ್ತಾರೆ. ಕೊಂಚ ಅಭ್ಯಾಸ ಮಾಡಿದ್ರೆ ಹೀಗೆ ಕಣ್ಣು ಅಲುಗಾಡಿಸಬಹುದು. ಅದೇ ರೀತಿ ಗಣೇಶ್ ಅಭ್ಯಾಸ ಮಾಡಿ ಹೀಗೆ ಉಪೇಂದ್ರ ಮುಂದೆಯೇ ಅವರ ಸಿಗ್ನೇಚರ್ ಸ್ಟೈಲ್ ಮಾಡಿ ತೋರಿಸಿದ್ದಾರೆ.
ಗಣೇಶ್ ಹಾಗೂ ಉಪೇಂದ್ರ ತಮ್ಮದೇ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. '45' ಸಿನಿಮಾ ಮೂಲಕ ಉಪೇಂದ್ರ ಕೊನೆಯದಾಗಿ ಪ್ರೇಕ್ಷಕರ ಮುಂದೆ ಬಂದಿದ್ದರು. ಅದಕ್ಕೂ ಮುನ್ನ 'ಯುಐ' ಸಿನಿಮಾ ನಿರ್ದೇಶಿಸಿ ನಟಿಸಿದ್ದರು. ಶೀಘ್ರದಲ್ಳೇ 'ಭಾರ್ಗವ' ಎಂಬ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಇನ್ನು 'ಕೃಷ್ಣಂಪ್ರಣಯ ಸಖಿ' ಸಿನಿಮಾ ಬಳಿಕ ಗಣೇಶ್ ನಟಿಸಿದ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. 'ಪಿನಾಕ', 'ಯುವರ್ಸ್ ಸಿನ್ಸಿಯರ್ಲಿ ರಾಮ್', 'ತಮ್ಮ ಸುಖಾಗಮನ ಬಯಸುವ' ಹಾಗೂ 'ಬೃಂದಾ ವಿಹಾರಿ' ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಉಪೇಂದ್ರ ಮಕ್ಕಳು ಕೂಡ ಸಿನಿಮಾರಂಗದತ್ತ ಮುಖ ಮಾಡಿದ್ದಾರೆ. ಪ್ರಿಯಾಂಕಾ ಉಪೇಂದ್ರ ಕೂಡ ಸಿನಿಮಾಗಳಲ್ಲಿ ನಟಿಸುತ್ತಿರುತ್ತಾರೆ. 'ದೇವಕಿ' ಎಂಬ ಚಿತ್ರದಲ್ಲಿ ಮಗಳು ಐಶ್ವರ್ಯ ಬಾಲನಟಿಯಾಗಿ ಬಣ್ಣ ಹಚ್ಚಿದ್ದಳು. ಇನ್ನು ಮಗ ಆಯುಷ್ ನಟನೆಯ ಚೊಚ್ಚಲ ಸಿನಿಮಾ ಚಿತ್ರೀಕರಣ ನಡೀತಿದೆ.


Click it and Unblock the Notifications