'ಕೃಷ್ಣಂ ಪ್ರಣಯ ಸಖಿ' ಶೂಟಿಂಗ್ ಫಿನಿಶ್: ಶೀಘ್ರದಲ್ಲೇ ಗಣೇಶ್ ಸಿನಿಮಾ ರಿಲೀಸ್!
'ಬಾನದಾರಿಯಲಿ' ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಮತ್ತೊಂದು ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಅದುವೇ 'ಕೃಷ್ಣಂ ಪ್ರಣಯ ಸಖಿ'. ಬಹಳ ವರ್ಷಗಳ ಬಳಿಕ ನಿರ್ದೇಶಕ ಶ್ರೀನಿವಾಸರಾಜು ಮತ್ತೆ ಕನ್ನಡ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.
'ಕೃಷ್ಣಂ ಪ್ರಣಯ ಸಖಿ' ಇದು ನಿರ್ದೇಶಕ ಶ್ರೀನಿವಾಸ್ ರಾಜು ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್‌ನ ಮೊದಲ ಸಿನಿಮಾ. 'ಬಾನದಾರಿಯಲಿ' ಶೂಟಿಂಗ್ ವೇಳೆನೇ ಈ ಸಿನಿಮಾ ಅನೌನ್ಸ್ ಆಗಿತ್ತು. ಅಲ್ಲಿಂದ ಸದ್ದಿಲ್ಲದೆ ಸಿನಿಮಾದ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದೆ.

'ದಂಡುಪಾಳ್ಯ'ದಂತಹ ಅಪ್ಪಟ ರಗಡ್ ಸಿನಿಮಾವನ್ನು ನಿರ್ದೇಶಿಸಿದ್ದ ಶ್ರೀನಿವಾಸರಾಜು ಮತ್ತೆ ರೊಮ್ಯಾಂಟಿಕ್ ಸಿನಿಮಾ ಕಡೆ ಮುಖ ಮಾಡಿದ್ದಾರೆ. ಅಂದ್ಹಾಗೆ ಈ ಸಿನಿಮಾ ಅಪ್ಪಟ ಕೌಟುಂಬಿಕ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ. ಆದರೆ, ಸಿನಿಮಾದ ಸ್ಟಿಲ್‌ಗಳನ್ನು ನೋಡುತ್ತಿದ್ದರೆ, ಇದೊಂದು ರೊಮ್ಯಾಂಟಿಕ್ ಸಿನಿಮಾ ಕೂಡ ಹೌದು ಅನ್ನೋದನ್ನು ಗೆಸ್ ಮಾಡಬಹುದು.
ಬೆಂಗಳೂರು, ಇಟಲಿ ಹಾಗೂ ಮಾಲ್ಟಾದಲ್ಲಿ 'ಕೃಷ್ಣಂ ಪ್ರಣಯ ಸಖಿ' ಸಿನಿಮಾದ ಚಿತ್ರೀಕರಣ ನಡೆದಿದೆ. ಸದ್ಯಕ್ಕೀಗ ಈ ಸಿನಿಮಾ ಡಬ್ಬಿಂಗ್ ನಡೆಯುತ್ತಿದ್ದು, ಅದೂ ಕೂಡ ಮುಕ್ತಾಯ ಹಂತ ತಲುಪಿದೆ. ಸದ್ಯದಲ್ಲೇ ಈ ಸಿನಿಮಾ ಯಾವಾಗ ಬಿಡುಗಡೆಯಾಗುತ್ತೆ ಅನ್ನೋದನ್ನು ಚಿತ್ರತಂಡ ಘೋಷಣೆ ಮಾಡಲಿದೆ.
ಗೋಲ್ಡನ್ ಸ್ಟಾರ್ ಇಮೇಜ್‌ಗೆ ತಕ್ಕಂತೆ ಮಾಡಿರೋ ಈ ಸಿನಿಮಾದಲ್ಲಿ ಒಟ್ಟು ಐದು ಹಾಡುಗಳಿವೆ. ಕನ್ನಡದ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಈ ಸಿನಿಮಾಗೆ ಟ್ಯೂನ್‌ಗಳನ್ನು ಹಾಕಿದ್ದಾರೆ. ಹಾಗೇ ವೆಂಕಟ್ ಪ್ರಸಾದ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ 'ಕೃಷ್ಣಂ ಪ್ರಣಯ ಸಖಿ' ಸಿನಿಮಾಗೆ ಎಡಿಟಿಂಗ್ ಮಾಡಿದ್ದಾರೆ.
ಅಪ್ಪಟ ಕೌಟುಂಬಿಕ ಕಥಾಹಂದರ ಹೊಂದಿರುವ ಈ ಸಿನಿಮಾವನ್ನು ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣ ಮಾಡುತ್ತಿದ್ದಾರೆ. ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರವಿದು. ಇನ್ನೊಂದು ವಿಶೇಷ ಅಂದರೆ, 'ಕೃಷ್ಣಂ ಪ್ರಣಯ ಸಖಿ' ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಚಿತ್ರ.
ಗೋಲ್ಡನ್ ಸ್ಟಾರ್ ಗಣೇಶ್‌ಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನಾ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರೇ ಈ ಸಿನಿಮಾದಲ್ಲಿ ನಟಿಸಿದ್ದಾರೆ.


Click it and Unblock the Notifications











