»   » ಗಣೇಶ್ ರೋಮಿಯೋಗೆ 'ಈಗ' ನೊಣದ ಭಾರೀ ಕಾಟ!

ಗಣೇಶ್ ರೋಮಿಯೋಗೆ 'ಈಗ' ನೊಣದ ಭಾರೀ ಕಾಟ!

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅದೃಷ್ಟ ಯಾಕೋ ನೆಟ್ಟಗಿದ್ದಂಗಿಲ್ಲ. ರೋಮಿಯೋ ಚಿತ್ರ ಚೆನ್ನಾಗಿದ್ದರೂ ಅದಕ್ಕೆ ನೊಣದ ಕಾಟ ಜಾಸ್ತಿಯಾಗಿದೆ. ಮೊದಲ ಶೋದಲ್ಲೇ ಪ್ರೇಕ್ಷಕರನ್ನು ಸೆಳೆದು ಚಿತ್ರ ಚೆನ್ನಾಗಿದೆಯೆಂಬ ಸುದ್ದಿ ಹರಡಿದರೂ ಗಣೇಶ್ ಚಿತ್ರ ರೋಮಿಯೋಗೆ ಅಂದುಕೊಂಡಷ್ಟು ಜನರು ಬರುತ್ತಿಲ್ಲ. ನೋಡಿದವರೆಲ್ಲಾ ಚಿತ್ರ ಚೆನ್ನಾಗಿದೆಯಂದರೂ ಗಳಿಕೆ ಆರಕ್ಕೇರುತ್ತಿಲ್ಲ, ಮೂರಕ್ಕಿಳಿಯುತ್ತಿಲ್ಲ.

ರೋಮಿಯೋ ಚಿತ್ರ ಚೆನ್ನಾಗಿದೆಯೆಂಬ ವಿಮರ್ಶಕರ ಬರಹಗಳೂ ಕೂಡ ಜನರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬರುತ್ತಿಲ್ಲ. ಅದಕ್ಕೆ ನೇರ ಕಾರಣ, ಕನ್ನಡದ ಕಿಚ್ಚ ಸುದೀಪ್ ಅಭಿನಯದ ತೆಲುಗು ಚಿತ್ರ 'ಈಗ' ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಕರ್ನಾಟಕದಲ್ಲೇ ಬರೋಬ್ಬರಿ 228 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಈಗ, ಎಲ್ಲಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಜಗತ್ತಿನಾದ್ಯಂತ 1200 ಚಿತ್ರಮಂದಿರಗಳಲ್ಲಿ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿರುವ ಎಸ್ ರಾಜಮೌಳಿ ನಿರ್ದೇಶನದ ಈಗ ಚಿತ್ರ, ಜಗತ್ತಿನಾದ್ಯಂತ ಭಾರೀ ಸದ್ದು-ಸುದ್ದಿ ಮಾಡುತ್ತಿದೆ. ಸುದೀಪ್ ನಟನೆ ಈ ಚಿತ್ರದಲ್ಲಿ ಎಲ್ಲರ ಮುಕ್ತ ಪ್ರಶಂಸೆಗೆ ಕಾರಣವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದೀಪ್ ಮಿಂಚುತ್ತಿದ್ದಾರೆ.

ಈಗ ಚಿತ್ರದ ಹವಾ ಅದೆಷ್ಟು ಜೋರಾಗಿದೆಯೆಂದರೆ ತೆಲುಗು ಚಿತ್ರರಂಗದ ಹಿಂದಿನ ಎಲ್ಲಾ ದಾಖಲೆಗಳೂ ಧೂಳೀಪಟವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಅಮೆರಿಕಾದಲ್ಲಂತೂ ಬಾಲಿವುಡ್ ಚಿತ್ರ 'ಬೋಲ್ ಬಚ್ಚನ್' ಗಳಿಕೆಯನ್ನೂ ಈಗ ಹಿಂದಿಕ್ಕಿದೆ. ಅಲ್ಲಿ ಇನ್ನೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಭಾರತದಲ್ಲಿ ಕೂಡ ಮುಂದೆ ಇನ್ನೂ ಹೆಚ್ಚು ಚಿತ್ರಮಂದಿರಗಳು ಈ ಚಿತ್ರದ ಪಾಲಾಗುವುದು ಖಾತ್ರಿಯಾಗಿದೆ.

ಪರಿಸ್ಥಿತಿ ಹೀಗಿರುವಾಗ, ಹಿಂದಿಯ ಬೋಲ್ ಬಚ್ಚನ್ ಸೇರಿದಂತೆ ಇದೇ ವೇಳೆ ಬಿಡುಗಡೆಯಾಗಿರುವ ಎಲ್ಲಾ ಚಿತ್ರಗಳಿಗೂ ಈಗ ಚಿತ್ರದ ನೇರ ಹೊಡೆತ ಬಿದ್ದಿದೆ. ಕನ್ನಡದ ರೋಮಿಯೋ ಈಗ ಚಿತ್ರದ ಹೊಡೆತದಿಂದ ತತ್ತರಿಸುವಂತಾಗಿದೆ. ಜನರೆಲ್ಲಾ ಇದೇ ವೇಳೆ ರೋಮಿಯೋ ಬಿಡುಗಡೆ ಮಾಡಿರುವುದನ್ನು 'ರಾಂಗ್ ರಿಲೀಸ್' ಎನ್ನುತ್ತಿದ್ದಾರೆ.

ಯಾಕೇ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಮತ್ತೊಮ್ಮೆ ಕಿಚ್ಚ ಸುದೀಪ್ ಅಡ್ಡಬಂದಿದ್ದಾರೆ. ಆ ಬಾರಿ ಗಣೇಶ್ ಶೈಲೂ ಚಿತ್ರದ ಯಶಸ್ಸಿಗೆ 'ವಿಷ್ಣುವರ್ಧನ' ರೂಪದಲ್ಲಿ ಹೊಡೆತ ಕೊಟ್ಟಿದ್ದ ಸುದೀಪ್ ಈ ಬಾರಿ ನೊಣ (ಈಗ)ದ ರೂಪದಲ್ಲಿ ರೋಮಿಯೋ ಯಶಸ್ಸಿಗೆ ಕಲ್ಲು ಹಾಕಿದ್ದಾರೆ. ಹಾಗೆಂದು ಈ ವಿಷಯಕ್ಕೆ ಸುದೀಪ್ ಅವರನ್ನು ದೂರುವಂತಿಲ್ಲ. ರೋಮಿಯೋಗಿಂತ ದೊಡ್ಡ ಬಜೆಟ್, ದೊಡ್ಡ ಬ್ಯಾನರ್, ಖ್ಯಾತ ನಿರ್ದೇಶಕರು, ಹಲವು ಭಾಷೆಗಳಲ್ಲಿ ಬಂದಿರುವ ಅತ್ಯುತ್ತಮ ಸಿನಿಮಾ ಅವರದು.

ಹೀಗಿರುವಾಗ ಸುದೀಪ್ ಮಿಂಚುತ್ತಿರುವುದು ಸಹಜವೇ. ಗಣೇಶ್ ಚಿತ್ರ ಅದೆಷ್ಟೇ ಚೆನ್ನಾಗಿದ್ದರೂ ಈಗ ಚಿತ್ರದ ಯಶಸ್ಸಿನ ಮುಂದೆ ತಲೆಬಾಗಲೇಬೇಕು. ಹೀಗಾಗಿ ಮತ್ತೆ ಗೋಲ್ಡನ್ ಸ್ಟಾರ್ ಅವರಿಗೆ ರೋಮಿಯೋ ಚಿತ್ರ ಮತ್ತೆ ಬ್ರೇಕ್ ನೀಡಲಿದೆಯೆಂಬ ನಿರೀಕ್ಷೆ ನಿಜವಾಗುವುದು ಕಷ್ಟ ಎಂಬಂತಾಗಿದೆ. ಆದರೂ ರೋಮಿಯೋ ಫ್ಲಾಪ್ ಆಗಲ್ಲ ಎಂಬುದು ಸದ್ಯಕ್ಕೆ ಗಾಂಧಿನಗರದ ಸುತ್ತ ಸುತ್ತುತ್ತಿರುವ ಸುದ್ದಿ. (ಒನ್ ಇಂಡಿಯಾ ಕನ್ನಡ)

English summary
There is fight between Golden Star Ganesh movie Romeo and Kichcha Sudeep movie Eega in Sandalwood Box Office. Both are released same day on 06 July 2012. But, SS Rajamouli directed and Sudeep acted movie gave a big stroke to Ganesh movie Romeo in Box Office. 
 
Please Wait while comments are loading...