ಅಣ್ಣಾವ್ರ ಬಗ್ಗೆ ಮಾತನಾಡಿದ್ರೆ ಆಕಾಶ ನೋಡಿ ಉಗ್ದಂಗೆ; ಆರ್‌ಜಿವಿಗೆ ಗಣೇಶ್ ಟಾಂಗ್
ಪರಭಾಷಿಕರು ಪದೇ ಪದೆ ಕನ್ನಡಿಗರನ್ನು ಕೆಣಕುತ್ತಿದ್ದಾರೆ. ಕನ್ನಡ ಭಾಷೆಯ ಬಗ್ಗೆ ಕಮಲ್ ಹಾಸನ್ ಹೇಳಿಕೆ ವಿವಾದ ಸೃಷ್ಟಿಸಿದ್ದು ಗೊತ್ತೇಯಿದೆ. ಇದೀಗ ಅಣ್ಣಾವ್ರ ಬಗ್ಗೆ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಆಡಿರುವ ಮಾತು ಅಭಿಮಾನಿಗಳನ್ನು ಕೆರಳಿಸಿದೆ. ಇದೇ ವಿಚಾರದ ಬಗ್ಗೆ ಸದ್ಯ ನಟ ಗಣೇಶ್ ಪ್ರತಿಕ್ರಿಯಿಸಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ 'ಪಿನಾಕ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗೆ ಚಿತ್ರದ ಸುದ್ದಿಗೋಷ್ಠಿ ನಡೀತು. ಕಾರ್ಯಕ್ರಮದಲ್ಲಿ ಹಿರಿಯ ನಟ ಶ್ರೀನಿವಾಸ್ ಮೂರ್ತಿ ಸೇರಿದಂತೆ ಇಡೀ ಚಿತ್ರತಂಡ ಭಾಗಿ ಆಗಿತ್ತು. ಈ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಆಯಿತು. ಈ ವೇಳೆ ಆರ್‌ಜಿವಿ ಹೇಳಿಕೆ ಬಗ್ಗೆ ಮಾಧ್ಯಮದವರು ಗಣೇಶ್ ಬಗ್ಗೆ ಪ್ರತಿಕ್ರಿಯಿ ಕೇಳಿದರು. ಅದಕ್ಕೆ ಅವರು ಅಣ್ಣಾವ್ರ ಬಗ್ಗೆ ಯಾರೇ ಮಾತನಾಡಿದರೂ ಅದಕ್ಕೆ ಪ್ರತಿಕ್ರಿಯೆ ನೀಡುವುದು ತಪ್ಪು ಎಂದಿದ್ದಾರೆ.

"ಆರ್‌ಜಿವಿ ಅವರ ಹೇಳಿಕೆಗೆ ನಾವು ಪ್ರತಿಕ್ರಿಯೆ ಕೊಡುವುದು ತಪ್ಪು. ಕನ್ನಡ ಅಂದ್ರೆ ಡಾ. ರಾಜ್‌ಕುಮಾರ್, ಡಾ. ರಾಜ್‌ಕುಮಾರ್ ಅಂದ್ರೆ ಕನ್ನಡ, ಅಣ್ಣಾವ್ರ ಬಗ್ಗೆ ಮಾತನಾಡಿದ್ರೆ ಆಕಾಶ ನೋಡಿ ಉಗ್ದಂಗೆ. ಆರ್‌ಜಿವಿ ಆಗಿರಲಿ ಯಾರೇ ಆಗಿರಲಿ. ಆಕಾಶ ನೋಡಿ ಉಗ್ದ್ರೆ ಏನಾಗುತ್ತೆ, ಅವ್ರ ಮೇಲೆ ಬೀಳುತ್ತೆ. ಹಾಗಾಗಿ ಅದರ ಬಗ್ಗೆ ಮಾತನಾಡಲ್ಲ" ಎಂದು ಗಣೇಶ್ ಹೇಳಿದ್ದಾರೆ.
ಇತ್ತೀಚೆಗೆ ಇಂಡಿಯಾ ಟಿವಿ ಸಂದರ್ಶನದಲ್ಲಿ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಮಾತನಾಡಿದ್ದರು. ಈ ವೇಳೆ ಬಾಲಿವುಡ್ ಹಾಗೂ ಸೌತ್ ಸಿನಿಮಾಗಳ ನಡುವಿನ ವ್ಯತ್ಯಾಸದ ಬಗ್ಗೆ ಅವರು ಪ್ರತಿಕ್ರಿಯಿಸಿದ್ದರು. ಅಮಿತಾಬ್ ಬಚ್ಚನ್ ಸಿನಿಮಾಗಳನ್ನು ನೋಡಿ ದಕ್ಷಿಣದ ನಟರು ಕಾಪಿ ಮಾಡುತ್ತಿದ್ದರು. ಇವತ್ತಿಗೂ ಅದನ್ನೇ ಮಾಡುತ್ತಿದ್ದಾರೆ. ಹಾಗಾಗಿ ಸ್ಟಾರ್‌ಗಳಾಗಿ ಮೆರೆಯುತ್ತಿದ್ದಾರೆ ಎಂದಿದ್ದರು.
"ದಕ್ಷಿಣ ಎಲ್ಲಾ ಭಾಷೆಗಳಲ್ಲಿ ಮೊದಲಿಗೆ ಅಮಿತಾಬ್ ಬಚ್ಚನ್ ಸಿನಿಮಾಗಳನ್ನು ರೀಮೆಕ್ ಮಾಡುತ್ತಿದ್ದರು. ರಜನಿಕಾಂತ್, ಚಿರಂಜೀವಿ, ಎನ್‌ಟಿಆರ್, ರಾಜ್‌ಕುಮಾರ್ ಎಲ್ಲರೂ 70, 80ರ ದಶಕದ ಬಿಗ್‌ಬಿ ಸಿನಿಮಾಗಳನ್ನು ರೀಮೆಕ್ ಮಾಡುತ್ತಿದ್ದರು. 90ರ ದಶಕದ ಬಳಿಕ ಬಾಲಿವುಡ್ ಸಿನಿಮಾ ಶೈಲಿ ಬದಲಾಯಿತು. ಆದರೆ ದಕ್ಷಿಣದ ನಟರು ಮಾತ್ರ ಅಮಿತಾಬ್ ಬಚ್ಚನ್‌ನಿಂದ ಕಾಪಿ ಮಾಡಿದ ಅದೇ ಹಳೆಯ ಮಸಾಲಾ ಸಿನಿಮಾಗಳನ್ನು ಮಾಡುತ್ತಾ ಬಂದರು. ಅದಕ್ಕೆ ಅಲ್ಲಿನ ಸ್ಟಾರ್‌ಗಳು ಮತ್ತಷ್ಟು ಜನಪ್ರಿಯತೆ ಪಡೆದರು. ಅಭಿಮಾನಿಗಳು ಅವರನ್ನು ಆರಾಧಿಸಲು ಆರಂಭಿಸಿದರು. ಇವತ್ತಿಗೂ ಅದು ಮುಂದುವರೆದಿದೆ" ಎಂದಿದ್ದರು.
ಅಮಿತಾಬ್ ಬಚ್ಚನ್ ಚಿತ್ರರಂಗಕ್ಕೆ ಬರುವ ಮುನ್ನ ಡಾ. ರಾಜ್‌ಕುಮಾರ್ ಸ್ಟಾರ್ ಪಟ್ಟಕ್ಕೇರಿದ್ದರು. ಅಣ್ಣಾವ್ರ ಸಿನಿಮಾಗಳು ಬೇರೆ ಭಾಷೆಗೆ ರೀಮೆಕ್ ಆಗಿರುವುದೇ ಹೆಚ್ಚು. ಸ್ವತಃ ಬಿಗ್‌ಬಿ ಕೂಡ 'ಶಂಕರ್ ಗುರು' ಸಿನಿಮಾ ರೀಮೆಕ್ ಮಾಡಿದ್ದರು. ಅಮಿತಾಬ್ ಸಿನಿಮಾ ರೀಮೆಕ್ ಮಾಡಿ ಅಣ್ಣವ್ರು ಸ್ಟಾರ್ ಆದರು ಎನ್ನುವುದೆಲ್ಲ ಸುಳ್ಳು. ಬಾಯಿಗೆ ಬಂದಂತೆ ವರ್ಮಾ ಮಾತನಾಡುತ್ತಿದ್ದಾರೆ. ವಾಸ್ತವಾಂಶ ತಿಳಿದು ಮಾತನಾಡಬೇಕು. ಬಾಯಿಗೆ ಬಂದಂತೆ ಮಾತನಾಡಬಾರದು ಎಂದು ಅಭಿಮಾನಿಗಳು ಅಸಮಾಧಾನ ಹೊರ ಹಾಕುತ್ತಿದ್ದಾರೆ.
50-60ರ ದಶಕಗಳಲ್ಲಿ ಕನ್ನಡ ಹಾಗೂ ತೆಲುಗಿನಲ್ಲಿ ಒಂದೇ ಕಥೆಯನ್ನು ಆಧರಿಸಿ ಸಿನಿಮಾ ನಿರ್ಮಾಣವಾಗುತ್ತಿತ್ತು. ಒಮ್ಮೆಲೆ ಸಿನಿಮಾಗಳನ್ನು ಮಾಡುವ ಪರಿಪಾಠ ಇತ್ತು. ಆಗ ಅಣ್ಣಾವ್ರು ಹಾಗೂ ಎನ್‌ಟಿಆರ್ ಹೀಗೆ ನಟಿಸಿದ್ದು ಇದೆ. ಬಳಿಕ ಅದು ಮುಂದುವರೆಯಲಿಲ್ಲ. ಅದು ಬಿಟ್ಟರೆ ಡಾ. ರಾಜ್‌ಕುಮಾರ್ ಕೆಲ ರೀಮೆಕ್ ಸಿನಿಮಾ ಮಾಡಿದ್ದಾರೆ. ಆದರೆ ಅಮಿತಾಬ್ ಸಿನಿಮಾ ರೀಮೆಕ್ ಮಾಡಿದ್ದಾರೆ ಎನ್ನುವುದೆಲ್ಲಾ ಸುಳ್ಳು.
ಅಣ್ಣಾವ್ರ ಸಿನಿಮಾಗಳು ದೇಶ ವಿದೇಶದ ಭಾಷೆಗಳಿಗೆ ರೀಮೆಕ್ ಆಗಿರುವ ಉದಾಹರಣೆಯಿದೆ. 1986ರಲ್ಲಿ ಬಂಧಿದ್ದ 'ಅನುರಾಗ ಅರಳಿತು' ಸಿನಿಮಾ 7 ಭಾಷೆಗಳಿಗೆ ರೀಮೆಕ್ ಆಗಿ ದಾಖಲೆ ಬರೆದಿತ್ತು. ಸಿಂಹಳ ಹಾಗೂ ಬಾಂಗ್ಲಾದೇಶಿ ಬೆಂಗಾಲಿ ಭಾಷೆಗೆ ರಿಮೇಕ್ ಆಗಿದ್ದು ವಿಶೇಷ. ಈ ಮೂಲಕ 50 ಬಾರಿ ಅಣ್ಣಾವ್ರ ಸಿನಿಮಾಗಳು ರೀಮೆಕ್ ಆಗಿದ್ದ ದಾಖಲೆ ನಿರ್ಮಾಣವಾಗಿತ್ತು.


Click it and Unblock the Notifications











