Baanadariyalli Teaser: 'ಬಾನ ದಾರಿಯಲ್ಲಿ' ಒಂದು ಎಮೋಷನಲ್ ಲವ್‌ಸ್ಟೋರಿ
ವ್ಯಾಲಂಟೈನ್ಸ್ ಡೇ ಸ್ಪೆಷಲ್ ಆಗಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಬಾನ ದಾರಿಯಲ್ಲಿ' ಸಿನಿಮಾ ಟೀಸರ್ ರಿಲೀಸ್ ಆಗಿದೆ. ಪ್ರೀತಂ ಗುಬ್ಬಿ ನಿರ್ದೇಶನದ ಈ ರೊಮ್ಯಾಂಟಿಕ್ ಲವ್‌ಸ್ಟೋರಿಯಲ್ಲಿ ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ನಾಯಕಿಯರಾಗಿ ನಟಿಸ್ತಿದ್ದಾರೆ.
ಗಣಿ- ಪ್ರೀತಂ ಕಾಂಬಿನೇಷನ್‌ನಲ್ಲಿ ಈಗಾಗಲೇ 3 ಸಿನಿಮಾಗಳು ಬಂದೋಗಿದೆ. 4ನೇ ಸಿನಿಮಾ 'ಬಾನ ದಾರಿಯಲ್ಲಿ' ಈಗ ಬಿಡುಗಡೆಗೆ ಸಿದ್ಧವಾಗಿದೆ. ಶ್ರೀವಾರೆ ಟಾಕೀಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಪ್ರೀತಂ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಮಾಸ್ತಿ ಡೈಲಾಗ್ಸ್ ಚಿತ್ರಕ್ಕಿದೆ. ಮೊದಲ ನೋಟದಲ್ಲೇ ಸಿನಿಮಾ ಟೀಸರ್ ಸಖತ್ ಕಿಕ್ ಕೊಡ್ತಿದೆ. ಭಾವನಾತ್ಮಕ ಸನ್ನಿವೇಶಗಳನ್ನು ಗಣಿ ನಟನೆ ಮೋಡಿ ಮಾಡಿದೆ.
'ತ್ರಿಬಲ್ ರೈಡಿಂಗ್' ನಂತರ ಗಣಿ ನಟನೆಯ 'ಬಾನ ದಾರಿಯಲ್ಲಿ' ಸಿನಿಮಾ ತೆರೆಗೆ ಬರ್ತಿದೆ. ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಒಂದೇ ಮಾತಲ್ಲಿ ಹೇಳಬೇಕು ಅಂದರೆ ಟೀಸರ್ ಹಿಟ್ ಆಗಿದೆ.

ಪ್ರೀತಿಯ ಕುರಿತಾದ ಕಥೆ
ಟೀಸರ್‌ನಲ್ಲಿ ಇದು ಪ್ರೀತಿಕಥೆ ಅಲ್ಲ, ಪ್ರೀತಿಯ ಕುರಿತಾದ ಕಥೆ ಎಂದು ಚಿತ್ರತಂಡ ಹೇಳಿದೆ. 'ಬಾನ ದಾರಿಯಲ್ಲಿ' ಚಿತ್ರದಲ್ಲಿ ಗಣೇಶ್ ಕ್ರಿಕೆಟರ್ ಪಾತ್ರದಲ್ಲಿ ಮಿಂಚಿದ್ರೆ, ನಾಯಕಿ ರುಕ್ಮಿಣಿ ಸ್ವಿಮ್ಮಿಂಗ್ ಕೋಚ್ ಲೀಲಾ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇವರಿಬ್ಬರ ಪ್ರೀತಿ, ಪಜೀತಿಯ ಕಥೆ ಸಿನಿಮಾದಲ್ಲಿದೆ. ಲವ್ ಸ್ಟೋರಿ ಸಿನಿಮಾಗಳನ್ನು ಮಾಡುವುದರಲ್ಲಿ ಪ್ರೀತಂ ಸಿದ್ಧಹಸ್ತರು. ಈ ಬಾರಿ ಕೂಡ ಒಂದೊಳ್ಳೆ ಪ್ರೇಮಕಥೆಯನ್ನು ಕಟ್ಟಿಕೊಟ್ಟಿರೋದು ಟೀಸರ್‌ನಲ್ಲಿ ಗೊತ್ತಾಗುತ್ತಿದೆ. ಮೇಲ್ನೋಟಕ್ಕೆ ಇದೊಂದು ತ್ರಿಕೋನ ಪ್ರೇಮಕಥೆಯಂತೆ ಕಂಡರೂ ಬಹುತೇಕ ಕಥೆ ಗಣಿ ಹಾಗೂ ರುಕ್ಮಿಣಿ ಪಾತ್ರಗಳ ಸುತ್ತಾ ಸುತ್ತುವಂತೆ ಕಾಣ್ತಿದೆ.

ಕಿಕ್ ಕೊಡೋ ಬಿಜಿಎಂ
'ಬಾನ ದಾರಿಯಲ್ಲಿ' ಚಿತ್ರಕ್ಕೆ ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಟೀಸರ್ ಬಿಜಿಎಂ ಸಖತ್ ಕಿಕ್ ಕೊಡ್ತಿದೆ. ಇನ್ನು ಅದ್ಭುತ ಲೊಕೇಶನ್‌ಗಳಲ್ಲಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಸಿಜಿ ವರ್ಕ್ ಕೂಡ ಸೊಗಸಾಗಿದೆ. ಗಣಿ ಕ್ರಿಕೆಟರ್ ಆಗಿ ಸಖತ್ ಹ್ಯಾಂಡ್ಸಮ್ ಆಗಿ ಕಾಣಿಸ್ತಿದ್ದು, ರುಕ್ಮಿಣಿ, ರೀಷ್ಮಾ ಗ್ಲಾಮರ್ ಟಚ್ ಚಿತ್ರಕ್ಕಿದೆ. ಟೀಸರ್ ಭರವಸೆ ಮೂಡಿಸಿದ್ದು, ಅಭಿಮಾನಿಗಳು ಗಣಿ ಈಸ್ ಬ್ಯಾಕ್ ಎಂದು ಹೇಳುತ್ತಿದ್ದಾರೆ. 'ಗಾಳಿಪಟ- 2' ನಂತರ ಬಂದ 'ತ್ರಿಬಲ್ ರೈಡಿಂಗ್' ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೆ 'ಬಾನ ದಾರಿಯಲ್ಲಿ' ಬಹಳ ನಿರೀಕ್ಷೆ ಹುಟ್ಟಾಕ್ಕಿದೆ.

ಎಮೋಷನಲ್ ಲವ್‌ಸ್ಟೋರಿ
ಪ್ರೀತಿಗೆ ಯಾವುದೇ ಭಾಷೆ ಇಲ್ಲ, ಪ್ರೀತಿಗೆ ಇರೋದು ಹೃದಯದ ಚಿಹ್ನೆ ಮಾತ್ರ ಎಂದು ಗಣಿ ಹೇಳುವ ಡೈಲಾಗ್ ಟೀಸರ್‌ನಲ್ಲಿ ಹೈಲೆಟ್ ಆಗಿದೆ. ಟೀಸರ್ ನೋಡ್ತಿದ್ರೆ, ಇದೊಂದು ಎಮೋಷನಲ್ ಲವ್‌ಸ್ಟೋರಿ ಅನ್ನೋದು ಗೊತ್ತಾಗ್ತಿದೆ. ಇನ್ನು ಎಮೋಷನಲ್ ಸನ್ನಿವೇಶಗಳಲ್ಲಿ ಗಣಿ ಅದ್ಭುತವಾಗಿ ನಟಿಸ್ತಾರೆ. ಟೀಸರ್‌ನಲ್ಲೇ ಅದರ ಝಲಕ್ ನೋಡಬಹುದು. ಇಡೀ ಸಿನಿಮಾ ಇದೇ ರೀತಿ ಪ್ರೇಕ್ಷಕರನ್ನು ಕಾಡುವ ಸುಳಿವು ಸಿಗುತ್ತಿದೆ. ಬೆಂಗಳೂರು, ಚೆನ್ನೈ, ಮಂಗಳೂರು ಹಾಗೂ ಕೀನ್ಯಾದಲ್ಲಿ ಸಿನಿಮಾ ಚಿತ್ರೀಕರಣ ನಡೆಸಿದೆ. ಅಪ್ಪು ಹುಟ್ಟುಹಬ್ಬಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಘೋಷಿಸಲಾಗಿತ್ತು. ಆದರೆ 'ಕಬ್ಜ' ಸಿನಿಮಾ ಕೂಡ ಅದೇ ದಿನ ಬರುತ್ತಿರುವುದರಿಂದ 'ಬಾನ ದಾರಿಯಲ್ಲಿ' ರಿಲೀಸ್ ಡೇಟ್ ಬದಲಾಗುವ ಸಾಧ್ಯತೆಯಿದೆ.


Click it and Unblock the Notifications











